ADVERTISEMENT

ಸಂಪಾದಕೀಯ | ಜಾಮೀನಿನ ನಿರಂತರ ನಿರಾಕರಣೆ: ನ್ಯಾಯದಾನದ ತತ್ತ್ವಕ್ಕೆ ವಿರುದ್ಧ

ಸಂಪಾದಕೀಯ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
   

ವಿದ್ಯಾರ್ಥಿ ಕಾರ್ಯಕರ್ತ ಉಮರ್‌ ಖಾಲಿದ್‌ ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ದೆಹಲಿ ಹೈಕೋರ್ಟ್‌ ಜಾಮೀನು ನಿರಾಕರಣೆ ಮಾಡಿರುವುದು ನ್ಯಾಯದಾನದ ವಿಚಾರವಾಗಿ, ಕಾನೂನಿನ ಪ್ರಕ್ರಿಯೆಗಳ ಪಾಲನೆಯ ವಿಚಾರವಾಗಿ, ವೈಯಕ್ತಿಕ ಸ್ವಾತಂತ್ರ್ಯದ ಮಿತಿಗಳು ಹಾಗೂ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರಗಳು ಹೊಂದಿರುವ ಬದ್ಧತೆಯ ವಿಚಾರವಾಗಿ ಹಲವು ಕಹಿ ಪ್ರಶ್ನೆಗಳನ್ನು ಮೂಡಿಸುವಂತಿದೆ. ಈ ಒಂಬತ್ತು ಮಂದಿಯು 2020ರ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಆರೋಪಿಗಳಾಗಿದ್ದಾರೆ. ಜಾಮೀನು ನಿರಾಕರಣೆಯ ಕ್ರಮವು ಆರೋಪಿ ಸ್ಥಾನದಲ್ಲಿ ಇರುವ ಪ್ರಜೆಗಳನ್ನು ನಿರಾಸೆಗೆ ನೂಕಿದೆ. ಪ್ರಭುತ್ವವು ತನ್ನ ಬಲವನ್ನು ಅತಿಯಾಗಿ ಬಳಕೆ ಮಾಡಿ, ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಬೆದರಿಕೆ ಒಡ್ಡಿದಾಗಲೂ ತಾನು ಪ್ರಭುತ್ವದ ಜೊತೆ ಇರುವೆ ಎಂಬ ಸೂಚನೆಯನ್ನು ಈ ಕ್ರಮದ ಮೂಲಕ ಕೋರ್ಟ್‌ ನೀಡಿರುವಂತಿದೆ. ಉಮರ್‌ ಖಾಲಿದ್‌ ಅವರು ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ, ಅವರ ವಿರುದ್ಧ ವಿಚಾರಣೆಯು ಶುರುವಾಗುವ ಲಕ್ಷಣ ಕೂಡ ಕಾಣುತ್ತಿಲ್ಲ. ಕೆಳಹಂತದ ನ್ಯಾಯಾಲಯವು ಉಮರ್‌ ಅವರ ಜಾಮೀನು ಅರ್ಜಿಯನ್ನು ಮೂರು ಬಾರಿ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ ಕೂಡ ಅವರ ಅರ್ಜಿಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕಿದೆ.

ಆರೋಪಿಗಳಿಗೆ ಜಾಮೀನು ನಿರಾಕರಿಸಿರುವುದಕ್ಕೆ ಕಾರಣ ಏನು ಎಂಬುದಕ್ಕೆ ಕೋರ್ಟ್‌ ತೃಪ್ತಿಕರ ವಿವರಣೆ ನೀಡಿಲ್ಲ. ಜಾಮೀನು ನಿರಾಕರಣೆಯು ನ್ಯಾಯದ ಮೂಲತತ್ತ್ವವಾದ ‘ಅಪರಾಧಿ ಎಂದು ಸಾಬೀತಾಗುವವರೆಗೂ ಆರೋಪಿಯು ಅಮಾಯಕ ಎಂದೇ ಪರಿಗಣಿತನಾಗಿರುತ್ತಾನೆ’ ಎಂಬುದಕ್ಕೆ ಅನುಗುಣವಾಗಿ ಇಲ್ಲ. ಜಾಮೀನು ನೀಡಬೇಕಿರುವುದು ಸಹಜ, ಜಾಮೀನು ನಿರಾಕರಣೆಯು ಅಪವಾದ ಎಂಬ ಒಪ್ಪಿತ ನಿಯಮಕ್ಕೂ ಇದು ಅನುಗುಣವಾಗಿಲ್ಲ. ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಆರೋಪಗಳ ಪೂರ್ಣ ವಿವರಗಳ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯ ಇರಲಿಲ್ಲವಾದರೂ, ಕೋರ್ಟ್‌ ಆ ಕೆಲಸ ಮಾಡಿದೆ. ಈ ಮೂಲಕ ಅದು ಪ್ರಾಸಿಕ್ಯೂಷನ್‌ ನೀಡಿರುವ ಬಿಡಿ ಬಿಡಿ ಸಾಕ್ಷ್ಯಗಳಿಗೆ ಹೆಚ್ಚಿನ ಮಾನ್ಯತೆ ನೀಡಿದಂತಿದೆ. ವಾಟ್ಸ್‌ಆ್ಯಪ್‌ ಮೂಲಕ ನಡೆಸಿದ ಚಾಟ್‌ಗಳನ್ನು, ರಕ್ಷಣೆ ಇರುವ ಹಾಗೂ ಅನಾಮಿಕ ಸಾಕ್ಷಿಗಳು ನೀಡಿರುವ ಹೇಳಿಕೆಗಳನ್ನು ಆಧಾರವಾಗಿ ಪರಿಗಣಿಸಲಾಗಿದೆ. ಆರೋಪಿಗಳು ‘ದೆಹಲಿಯು ಹೊತ್ತಿ ಉರಿಯುವಂತೆ’ ಮಾಡಲು ಸಂಚು ರೂಪಿಸಿದ್ದರು ಎಂದು ಈ ಸಾಕ್ಷಿಗಳು ಹೇಳಿವೆ. ಸರ್ಕಾರವು ಮುಸ್ಲಿಂ ವಿರೋಧಿಯಾಗಿದೆ, ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಗಳ ಪೈಕಿ ಒಬ್ಬರು ಹೇಳಿದ್ದುದೇ ಅವರನ್ನು ಆರೋಪಿಯನ್ನಾಗಿಸಲು ಕಾರಣವಾಗಿದೆ. ಇನ್ನೊಬ್ಬ ಆರೋಪಿಯು, ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ಮಹಿಳೆಯರನ್ನು ಒಂದುಗೂಡಿಸಬೇಕು ಎಂದು ಕರೆ ನೀಡಿದ್ದುದು ಪಿತೂರಿಯ ಭಾಗ ಎಂದು ಪರಿಗಣಿತವಾಗಿದೆ. ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಪ್ರಾಸಿಕ್ಯೂಷನ್‌, ದೇಶದ ವಿರುದ್ಧ ಎಸಗುವ ಕೃತ್ಯ ಎಂಬುದಾಗಿ ಪರಿಗಣಿಸಿರುವಂತಿದೆ. ಈ ವಾದವನ್ನು ಕೋರ್ಟ್‌ ಕೂಡ ಒಪ್ಪಿಕೊಂಡಿರುವಂತೆ ಕಾಣುತ್ತಿದೆ.

ಯುಎಪಿಎ ಕಾನೂನು ಸರ್ಕಾರಗಳ ಬಳಿ ಇರುವ ಬಲವಾದ ಅಸ್ತ್ರ. ಅದರಲ್ಲೂ, ಸರ್ಕಾರಗಳಿಗೆ ಸರಿಕಾಣದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಸರ್ಕಾರದ ಟೀಕಾಕಾರರನ್ನು ಗುರಿಯಾಗಿಸಿಕೊಂಡು ಈ ಅಸ್ತ್ರವನ್ನು ಬಳಸಲಾಗುತ್ತದೆ. ಕಾನೂನಿನ ಆಚೆಗೂ ನ್ಯಾಯವನ್ನು ಗುರುತಿಸುವ ಹೊಣೆಯು ನ್ಯಾಯಾಲಯಗಳ ಮೇಲೆ ಇರುತ್ತದೆ. ಈ ಪ್ರಕರಣದಲ್ಲಿ ಈ ಕೆಲಸವನ್ನು ಕೋರ್ಟ್‌ ಮಾಡಿಲ್ಲ. ಆರೋಪಿಗಳ ಕೃತ್ಯವು ದೇಶದ ವಿರುದ್ಧದ ಪಿತೂರಿಯಾಗಿತ್ತು ಎಂದು ಪ್ರಾಸಿಕ್ಯೂಷನ್‌ ನೀಡಿದ ವ್ಯಾಖ್ಯಾನವನ್ನು ಆಧರಿಸಿ ಕೋರ್ಟ್‌ ನಿರ್ಣಯ ನೀಡಿರುವಂತಿದೆ. ಅವಸರದ ವಿಚಾರಣೆಯು ಆರೋಪಿಗಳ ಹಿತಾಸಕ್ತಿಗೆ ವಿರುದ್ಧ ಎಂಬುದನ್ನು ಒಪ್ಪಿಕೊಂಡಿರುವ ಕೋರ್ಟ್‌, ವಿಚಾರಣೆ ಇಲ್ಲದೆಯೇ ವ್ಯಕ್ತಿಗಳನ್ನು ಜೈಲಿನಲ್ಲಿ ವರ್ಷಗಳವರೆಗೆ ಇರಿಸಿಕೊಳ್ಳುವುದು ಅನ್ಯಾಯ ಎಂಬುದನ್ನು ಒಪ್ಪಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.