ADVERTISEMENT

ಸಂಪಾದಕೀಯ| ನಗರ ಸ್ಥಳೀಯ ಸಂಸ್ಥೆ ಫಲಿತಾಂಶ: ಕಾಂಗ್ರೆಸ್‌ಗೆ ಖುಷಿ, ಬಿಜೆಪಿಗೆ ಬಿಸಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 19:30 IST
Last Updated 30 ಡಿಸೆಂಬರ್ 2021, 19:30 IST
.
.   

ರಾಜ್ಯದ ಐದು ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳ ಒಟ್ಟು 1,184 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ನವೋತ್ಸಾಹ ಕಂಡುಬಂದಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ವಾರ್ಡ್‌ಗಳನ್ನು ಗೆಲ್ಲಲು ಆಡಳಿತಾರೂಢ ಬಿಜೆಪಿ ಶತಪ್ರಯತ್ನ ನಡೆಸಿದರೂ ಹಿನ್ನಡೆಯನ್ನು ಅನುಭವಿಸಿರುವುದು ಎದ್ದು ಕಾಣುತ್ತಿದೆ. ಒಟ್ಟು ವಾರ್ಡ್‌ಗಳಲ್ಲಿ 501 ವಾರ್ಡ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಬಿಜೆಪಿಯು 433 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಜೆಡಿಎಸ್ ನಿರಾಶಾದಾಯಕ ಎನ್ನಬಹುದಾದ ಫಲಿತಾಂಶ ಪಡೆದಿದ್ದು, 45 ವಾರ್ಡ್‌ಗಳಿಗಷ್ಟೇ ಸೀಮಿತಗೊಂಡಿದೆ. ಆಶ್ಚರ್ಯಕರ ಎನ್ನುವಂತೆ ಪಕ್ಷೇತರರು ಒಟ್ಟು 195 ವಾರ್ಡ್‌ಗಳಲ್ಲಿ ಜಯ ಸಾಧಿಸಿರುವುದು ಮತದಾರರಿಗೆ ರಾಜಕೀಯ ಪಕ್ಷಗಳ ಬಗ್ಗೆ ಉಂಟಾಗಿರುವ ಜುಗುಪ್ಸೆಯನ್ನು ತೋರಿಸುವಂತಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಬಿಜೆಪಿ ಮೇಲುಗೈ ಸಾಧಿಸುವ ಪ್ರವೃತ್ತಿ ಕೆಲವು ವರ್ಷಗಳಿಂದ ನಡೆದುಬಂದಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದರೆ ಬಿಜೆಪಿಗೆ ಚಿಂತೆ ಹೆಚ್ಚಿಸಿರುವ ವಿದ್ಯಮಾನವಿದು ಎನ್ನಬಹುದು. ಅದೂ ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಳುವ ಪಕ್ಷಕ್ಕೆ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಆಡಳಿತದ ಬಗ್ಗೆ ಮತದಾರರಲ್ಲಿ ಆಕ್ರೋಶ ಅಥವಾ ಬೇಸರ ಇದ್ದಾಗ ಮಾತ್ರ ವಿರೋಧ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳು ಲಭಿಸುತ್ತವೆ. ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉಂಟಾಗಿರುವ ಭ್ರಮನಿರಸನವೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಈ ದಿಕ್ಕಿನಲ್ಲಿ ರಾಜಕೀಯ ವಿಶ್ಲೇಷಕರ ಚರ್ಚೆ ಶುರುವಾಗಿರುವುದಂತೂ ನಿಜ.

ಇನ್ನೇನು ಒಂದೂಕಾಲು ವರ್ಷದಲ್ಲಿ ವಿಧಾನಸಭಾ ಚುನಾವಣೆಯೂ ಬರಲಿದೆ. ಈ ವರ್ಷದ ಕೊನೆಯಲ್ಲಿ ಬಂದಿರುವ ಈ ಫಲಿತಾಂಶವು ಆಳುವ ಪಕ್ಷ ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕೆಂಬ ಸೂಚನೆ ನೀಡಿದೆ. ಪಕ್ಷದಲ್ಲಿನ ಆಂತರಿಕ ಬೇಗುದಿಯು ಚುನಾವಣೆಯ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಮುಖ್ಯಮಂತ್ರಿ ಬದಲಾವಣೆ ಕುರಿತ ವದಂತಿಕೆಲವು ವಾರಗಳಿಂದ ತೇಲಾಡುತ್ತಿದೆ. ಈಚೆಗೆ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವರಿಷ್ಠರು ಈ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮಾತ್ರವಲ್ಲ, ಪಕ್ಷದೊಳಗೇ ಇಂತಹ ವದಂತಿಯನ್ನು ಹುಟ್ಟುಹಾಕುತ್ತಿರುವ ನಾಯಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರ ಇರುವ ಹಾವೇರಿ ಜಿಲ್ಲೆ ವ್ಯಾಪ್ತಿಯ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಈಚೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಸರಿಸಮವಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈ ಫಲಿತಾಂಶಗಳನ್ನು ಅವಲೋಕಿಸಿದರೆ ಬಿಜೆಪಿಗೆ ಮುಂದಿನ ದಿನಗಳು ರಾಜಕೀಯವಾಗಿ ಹೆಚ್ಚು ಕಠಿಣವಾಗಿರುವ ಸಂಭವವೇ ಕಾಣಿಸುತ್ತಿದೆ. ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ, ಉತ್ತಮ ಆಡಳಿತದ ಮೂಲಕ ಜನರ ಆಶೀರ್ವಾದ ಪಡೆಯಲು ಅವಕಾಶವಿತ್ತು. ಆದರೆ ಪಕ್ಷದಲ್ಲಿನ ಒಳಜಗಳ, ಮುಖ್ಯಮಂತ್ರಿ ಬದಲಾವಣೆ, ಕೊರೊನಾ ಸಂಕಟವನ್ನು ಎದುರಿಸುವಲ್ಲಿ ಉಂಟಾದ ವೈಫಲ್ಯ, ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳ ಮುಂತಾಗಿ ಹಲವು ವಿಷಯಗಳು ಬಿಜೆಪಿ ರಾಜಕೀಯ ಹಾದಿಯನ್ನು ದುರ್ಗಮಗೊಳಿಸುತ್ತಿವೆ. ಜೊತೆಗೆ ಧರ್ಮ, ಜಾತಿ ಮುಂತಾಗಿ ಭಾವನಾತ್ಮಕ ವಿಷಯಗಳೇ ಸದಾಕಾಲ ಚುನಾವಣೆಯನ್ನು ಗೆಲ್ಲುವ ತಂತ್ರಗಳಾಗುವುದಿಲ್ಲ ಎನ್ನುವುದನ್ನೂ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.

ಕಾಂಗ್ರೆಸ್‌ನಿಂದ ಸೆಳೆದು ತಂದ ನಾಯಕರಲ್ಲಿ ಕೆಲವರು ಬಿಜೆಪಿಗೆ ಹೆಚ್ಚು ಮತ ಗಳಿಸಿಕೊಡುವಲ್ಲಿ ವಿಫಲರಾಗಿರುವುದು ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ. ಇಬ್ಬರು ಸಚಿವರೂ ಸೇರಿ ವಿಧಾನಸಭೆಯ 13 ಸದಸ್ಯರನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 16 ಸ್ಥಳೀಯ ಸಂಸ್ಥೆಗಳ ಪೈಕಿ ಬಿಜೆಪಿಗೆ ಐದರಲ್ಲಿ ಮಾತ್ರ ಬಹುಮತ ಪಡೆಯಲು ಸಾಧ್ಯವಾಗಿದೆ. ಬಳ್ಳಾರಿಯ ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ, ಎರಡರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ, ಹಾವೇರಿ, ವಿಜಯನಗರ, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಕಡೆ ಅಧಿಕಾರ ಹಿಡಿಯಲು ಅವಕಾಶ ದೊರೆತಿರುವುದು ಆ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿದೆ. ‘ಐದು ನಗರಸಭೆಗಳ ಪೈಕಿ ಮೂರರಲ್ಲಿ ನಾವು ಅಧಿಕಾರಸೂತ್ರ ಹಿಡಿಯಲಿದ್ದೇವೆ’ ಎಂದು ಬಿಜೆಪಿ ನಾಯಕರು ಹೆಮ್ಮೆಪಡಬಹುದಾದರೂ ಶೇಕಡಾವಾರು ಮತ ಗಳಿಕೆಯಲ್ಲಿ ಪಕ್ಷಕ್ಕೆ ಉಂಟಾಗಿರುವ ಹಿನ್ನಡೆಯನ್ನು ಲಘುವಾಗಿ ಪರಿಗಣಿಸಲು ಆಗುವುದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.