ADVERTISEMENT

ಸಂಪಾದಕೀಯ: ವೆನೆಜುವೆಲಾ ಮೇಲಿನ ದಾಳಿ– ಅಮೆರಿಕದ ನಾಚಿಕೆಗೇಡು ಕೃತ್ಯ

us attacks venezuela ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ ಭಯೋತ್ಪಾದಕ ಚಟುವಟಿಕೆ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿರುವ ದಾಳಿ, ಆ ದೇಶದ ಸಂವಿಧಾನದ ಉಲ್ಲಂಘನೆಯೂ ಹೌದು.

ಸಂಪಾದಕೀಯ
Published 5 ಜನವರಿ 2026, 23:35 IST
Last Updated 5 ಜನವರಿ 2026, 23:35 IST
<div class="paragraphs"><p>ಸಂಪಾದಕೀಯ: ವೆನೆಜುವೆಲಾ ಮೇಲಿನ ದಾಳಿ– ಅಮೆರಿಕದ ನಾಚಿಕೆಗೇಡು ಕೃತ್ಯ</p></div>

ಸಂಪಾದಕೀಯ: ವೆನೆಜುವೆಲಾ ಮೇಲಿನ ದಾಳಿ– ಅಮೆರಿಕದ ನಾಚಿಕೆಗೇಡು ಕೃತ್ಯ

   

ದಕ್ಷಿಣ ಅಮೆರಿಕದ ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ನಡೆಸಿರುವ ಅಮೆರಿಕ, ಅಲ್ಲಿನ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ ಅವರನ್ನು ಬಂಧಿಸಿದೆ. ಅಮೆರಿಕದ ಈ ಕೃತ್ಯವು ಅಂತರರಾಷ್ಟ್ರೀಯ ಕಾನೂನುಗಳು ಹಾಗೂ ಅಮೆರಿಕದ ಸಂವಿಧಾನದ ಉಲ್ಲಂಘನೆ. ಇದು, ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವದಿಂದ ಕಾಣುವ ವಿಶ್ವಸಂಸ್ಥೆಯ ಸನ್ನದಿನ ಎರಡನೆಯ ವಿಧಿಯ ಉಲ್ಲಂಘನೆಯೂ ಹೌದು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 200 ವರ್ಷಗಳಷ್ಟು ಹಳೆಯದಾದ ‘ಮನ್ರೊ ತತ್ತ್ವ’ವನ್ನು ಪುನಃ ಆಶ್ರಯಿಸಿರುವುದು ಅಸಂಬದ್ಧ ನಡೆ; ಈ ತತ್ತ್ವವು ಕಾನೂನು ಅಲ್ಲ, ಅದಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯೂ ಇಲ್ಲ. ಇದು ಕಳೆದುಹೋದ ಕಾಲಘಟ್ಟದ ವಿಕೃತ ವಿದೇಶಾಂಗ ನೀತಿ. ಇದು ಯುರೋಪಿನ ವಸಾಹತುಶಾಹಿ ಶಕ್ತಿಗಳನ್ನು ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳಿಂದ ದೂರ ಇರಿಸುವ, ಅಲ್ಲಿಂದ ದೂರ ಇರುವುದಕ್ಕೆ ಪ್ರತಿಯಾಗಿ ಅಮೆರಿಕವು ಯುರೋಪಿನಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂಬುದನ್ನು ಹೇಳುವ ಒಪ್ಪಂದ. ಮಾದಕವಸ್ತು ಕಳ್ಳಸಾಗಣೆ ಹಾಗೂ ಭಯೋತ್ಪಾದಕ ಕೃತ್ಯಗಳ ಆಧಾರರಹಿತ ಆರೋಪ ಹೊರಿಸಿ ಮಡೂರೊ ಅವರನ್ನು ಅಪಹರಿಸಿದ ಕೃತ್ಯವು, ಅಮೆರಿಕದ ಕಾನೂನಿನ ವ್ಯಾಪ್ತಿಯಲ್ಲಿ ನಡೆದ ಬಂಧನ ಎಂದು ತೋರಿಸುವ ಪ್ರಯತ್ನವಾಗಿದೆ.

ADVERTISEMENT

ಈಗ ಅಮೆರಿಕದಲ್ಲಿ ಮಡೂರೊ ಅವರನ್ನು ವಿಚಾರಣೆಗೆ ಒಳಪಡಿಸುವ ಪ್ರಹಸನ ನಡೆಯಬಹುದು. ಈ ವಿದ್ಯಮಾನದ ವಿಚಾರವಾಗಿ ಟ್ರಂಪ್ ಅವರು ಆಡಿರುವ ಮಾತುಗಳನ್ನು ಅವರ ಬೆಂಬಲಿಗರು ಹಾಗೂ ಯುರೋಪಿನ ಕೆಲವು ಮೈತ್ರಿ ದೇಶಗಳು ಮಾತ್ರ ನಂಬಬಹುದು.

ಟ್ರಂಪ್‌ ಅವರು ವೆನೆಜುವೆಲಾದಲ್ಲಿ ನಡೆಸಿರುವುದು ಭಯೋತ್ಪಾದಕ ದಾಳಿ. ಅಮೆರಿಕದ ಹಿತಾಸಕ್ತಿಗಳು ಈ ದಾಳಿಗೆ ಕಾರಣ. ಅಮೆರಿಕವು ಈಚೆಗೆ ಬಿಡುಗಡೆ ಮಾಡಿರುವ ಭದ್ರತೆಗೆ ಸಂಬಂಧಿಸಿದ ಕಾರ್ಯತಂತ್ರಕ್ಕೆ ಅನುಗುಣವಾಗಿ ಈ ದಾಳಿ ನಡೆದಿದೆ. ದಕ್ಷಿಣ ಮತ್ತು ಉತ್ತರ ಅಮೆರಿಕ ಖಂಡದಲ್ಲಿ ಚೀನಾ ಹಾಗೂ
ರಷ್ಯಾದ ಇರುವಿಕೆಗೆ ಅಡ್ಡಿ ಉಂಟುಮಾಡುವ ಗುರಿಯನ್ನು ಇದು ಹೊಂದಿದೆ. ವೆನೆಜುವೆಲಾದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಹೊಸ ಸರ್ಕಾರವು ಅಲ್ಲಿನ ತೈಲ, ಖನಿಜ ಮತ್ತು ಚಿನ್ನದ ನಿಕ್ಷೇಪವನ್ನು ಮುಕ್ತವಾಗಿಸಲಿ ಎಂಬ ಬಯಕೆಯೂ ಇಲ್ಲಿದೆ.

ವಿಶ್ವದ ವ್ಯವಸ್ಥೆಯು ಈಗಾಗಲೇ ಅಸ್ಥಿರಗೊಂಡಿದೆ. ಹೀಗಿರುವಾಗ ಯಾವ ನಾಚಿಕೆಯೂ ಇಲ್ಲದೆ ಅಮೆರಿಕ ನಡೆಸಿರುವ ಈ ಕೃತ್ಯವು ಜಗತ್ತನ್ನು ಇನ್ನಷ್ಟು ಅಸ್ಥಿರಗೊಳಿಸುವ ಭೀತಿ ಉಂಟುಮಾಡಿದೆ. ಮಹತ್ವದ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಕೊಲಂಬಿಯಾ, ಕ್ಯೂಬಾ, ಗ್ರೀನ್‌ಲ್ಯಾಂಡ್‌ ಮತ್ತು ಇರಾನ್‌ ಮೇಲೆಯೂ ಇದೇ ಬಗೆಯಲ್ಲಿ ದಾಳಿ ನಡೆಯಬಹುದು ಎಂಬ ಸೂಚನೆಯನ್ನು ಟ್ರಂಪ್‌ ನೀಡಿದ್ದಾರೆ. ಇಂತಹ ದಾಳಿಯ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಲಿಬಿಯಾದಲ್ಲಿ ಅಮೆರಿಕ ಎಡವಟ್ಟುಗಳನ್ನು ಸೃಷ್ಟಿಸಿದ್ದನ್ನು, ಇರಾಕ್‌ನಲ್ಲಿ ವರ್ಷಗಳ ಕಾಲ ಕಾಲೂರಿ ನಿಂತರೂ ಆರೋಪಿಸಿದ್ದ ಯಾವುದನ್ನೂ ಸಾಬೀತು ಮಾಡಲು ಆಗದಿದ್ದುದನ್ನು, ಆಫ್ಗಾನಿಸ್ತಾನದಲ್ಲಿ 20 ವರ್ಷ ಇದ್ದು ಸ್ವಯಂಕೃತ ಸಮಸ್ಯೆಗಳನ್ನು ನಿಭಾಯಿಸಲಾಗದೆ ವಾಪಸ್ಸಾಗಿದ್ದನ್ನು ಜಗತ್ತು ಕಂಡಿದೆ. ವಿದೇಶಾಂಗ ನೀತಿ ಹಾಗೂ ಮಿಲಿಟರಿ ಕಾರ್ಯಾಚರಣೆಗಳ ಈ ಅನುಭವಗಳು ಅಮೆರಿಕಕ್ಕೆ ಒಳ್ಳೆಯ ಪಾಠವನ್ನು ಕಲಿಸಿಲ್ಲ ಎಂಬುದು ಕೂಡ ಸ್ಪಷ್ಟ.

ಮಡೂರೊ ಅವರು ಇದ್ದ ಸ್ಥಳದ ಮೇಲೆ ಬಾಂಬ್‌ ದಾಳಿ ನಡೆಸಿ, ಅವರನ್ನು ಅಪಹರಿಸಿದ ಕೃತ್ಯವು, ಮಡೂರೊ ಅವರ ಸರ್ವಾಧಿಕಾರಿ ಧೋರಣೆಗಳನ್ನು ಒಪ್ಪದವರೂ ಅಮೆರಿಕದ ವಿರುದ್ಧ ನಿಲ್ಲಲು ಕಾರಣವಾಗಬಹುದು. ಆಕ್ರಮಣಕಾರಿ ವಿದೇಶಿ ಶಕ್ತಿಗಳನ್ನು ಜನರು ಒಪ್ಪುವುದಿಲ್ಲ ಎಂಬುದನ್ನು ಮರೆಯಬಾರದು. ಅಮೆರಿಕದ ಕೃತ್ಯದ ವಿರುದ್ಧವಾಗಿ ನಿಲ್ಲುವ ಜನರ ಪ್ರತಿಭಟನೆಗೆ ನೆರವಾಗಲು ಆ ದೇಶದಲ್ಲಿ ಹಲವು ಸಶಸ್ತ್ರ ಗುಂಪುಗಳಿವೆ ಎನ್ನಲಾಗಿದೆ. ವಿಶ್ವದ ಇತರ ರಾಷ್ಟ್ರಗಳು ಅಮೆರಿಕದ ಕೃತ್ಯಕ್ಕೆ ಯಾವ ಬಗೆಯಲ್ಲಿ ಪ್ರತಿಕ್ರಿಯೆ ನೀಡುತ್ತವೆ ಎಂಬುದು ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ರಷ್ಯಾ, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಜಿ20 ಗುಂಪಿನ ಹಲವು ದೇಶಗಳು ಅಮೆರಿಕದ ಕ್ರಮವನ್ನು ಸ್ಪಷ್ಟವಾಗಿ ಖಂಡಿಸಿವೆ. 2026ರ ಬ್ರಿಕ್ಸ್‌ ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಜಿ20 ಗುಂಪಿನಲ್ಲಿ ತನಗೆ ನಾಯಕನ ಸ್ಥಾನ ಇದೆ ಎಂದೂ ಭಾರತ ಹೇಳಿಕೊಂಡಿದೆ. ಭಾರತವು ಅಮೆರಿಕದ ಹದ್ದುಮೀರಿದ ವರ್ತನೆಗಳ ವಿಚಾರದಲ್ಲಿ ಜಾಗರೂಕವಾಗಿ ಪ್ರತಿಕ್ರಿಯೆ ನೀಡುತ್ತ ಬಂದಿದೆ. ಆದರೆ, ಈಗಿನ ಸಂದರ್ಭದಲ್ಲಿ ಭಾರತವು ಸರಿಯಾದ ಬಗೆಯಲ್ಲಿ ಪ್ರತಿಕ್ರಿಯೆ ನೀಡುವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ನಿರೀಕ್ಷೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.