ADVERTISEMENT

ಸಂಪಾದಕೀಯ | ಸಾರ್ವಭೌಮತ್ವಕ್ಕೆ ಸುಂಕದ ಪರೀಕ್ಷೆ: ದೇಶದ ಹಿತಾಸಕ್ತಿಯಲ್ಲಿ ರಾಜಿ ಬೇಡ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 23:30 IST
Last Updated 29 ಆಗಸ್ಟ್ 2025, 23:30 IST
ಸಂಪಾದಕೀಯ
ಸಂಪಾದಕೀಯ   

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಡಿಸಿರುವ ಆದೇಶವು ಜಾರಿಗೆ ಬಂದಿರುವುದರಿಂದ ಭಾರತವು ಈಗ ಕಠಿಣ ಸನ್ನಿವೇಶವನ್ನು ಎದುರಿಸಬೇಕಿದೆ. ಸುಂಕದ ವಿಷಯದಲ್ಲಿ ಅಮೆರಿಕವು ತುಂಬಾ ಆಕ್ರಮಣಕಾರಿ ನಿಲುವನ್ನು ತಾಳಿದೆ. ಉಕ್ರೇನ್‌ನಲ್ಲಿ ನಡೆದಿರುವ ಸಂಘರ್ಷವನ್ನು ‘ಮೋದಿ ಅವರ ಯುದ್ಧ’ ಎಂದೇ ವ್ಯಾಖ್ಯಾನಿಸಿರುವ ಅಮೆರಿಕ, ‘ಶಾಂತಿಯ ಮಾರ್ಗವು ನವದೆಹಲಿಯ ಮೂಲಕವೇ ಹಾದು ಹೋಗುತ್ತದೆ’ ಎಂದೂ ಹೇಳಿದ್ದು, ತನ್ನ ಇಬ್ಬಂದಿತನವನ್ನು ಪ್ರದರ್ಶಿಸಿದೆ. ‘ಭಾರತದ ವರ್ತನೆಯಿಂದ ಅಮೆರಿಕದಲ್ಲಿ ಪ್ರತಿಯೊಬ್ಬರೂ ಹಾನಿ ಅನುಭವಿಸುತ್ತಿದ್ದಾರೆ’ ಎಂದು ಕೂಡ ಆ ದೇಶ ಹೇಳಿದೆ. ರಷ್ಯಾದಿಂದ ರಫ್ತು ಆಗುತ್ತಿರುವ ತೈಲದಲ್ಲಿ ಚೀನಾದ ಖರೀದಿ ಪ್ರಮಾಣವು ಶೇ 47ರಷ್ಟಿದ್ದರೆ, ಭಾರತದ ಖರೀದಿ ಪ್ರಮಾಣವು ಶೇ 37ರಷ್ಟಿದೆ. ಯುರೋಪ್‌ ಒಕ್ಕೂಟ, ಟರ್ಕಿ ಮತ್ತು ಜಪಾನ್‌ ಸಹ ರಷ್ಯಾದಿಂದ ದೊಡ್ಡ ಪ್ರಮಾಣದ ತೈಲ ಮತ್ತು ಅನಿಲ ಉತ್ಪನ್ನಗಳನ್ನು ಖರೀದಿಸುತ್ತಿವೆ. ಆದರೆ, ಸುಂಕದ ವಿಷಯದಲ್ಲಿ ಭಾರತವನ್ನು ಮಾತ್ರ ಗುರಿಯಾಗಿಸಲಾಗಿದೆ. ವಿವೇಚನಾರಹಿತ ನೀತಿಗೆ ತರ್ಕ ಅಥವಾ ನ್ಯಾಯ ಯಾವುದೂ ಮುಖ್ಯವಾಗುವುದಿಲ್ಲ. ಭಾರತವು ಈಗ ಹೆಚ್ಚುವರಿ ಸುಂಕದ ಪರಿಣಾಮವನ್ನು ಹೇಗೆ ಎದುರಿಸಬೇಕು ಎಂಬುದರತ್ತ ಗಮನ ಕೇಂದ್ರೀಕರಿಸಬೇಕಿದೆ.

ಏಷ್ಯಾದ ರಾಷ್ಟ್ರಗಳ ಪೈಕಿ ಭಾರತೀಯ ಸರಕುಗಳಿಗೆ ಮಾತ್ರ ಅಮೆರಿಕದಿಂದ ಅತ್ಯಧಿಕ ಪ್ರಮಾಣದ ಸುಂಕ ವಿಧಿಸಲಾಗಿದೆ. ಆ ದೇಶಕ್ಕೆ ರಫ್ತಾಗುವ ಶೇ 55ರಷ್ಟು ಭಾರತೀಯ ಸರಕುಗಳು ಈ ಹೆಚ್ಚುವರಿ ಸುಂಕದ ಬಿಸಿ ಅನುಭವಿಸಲಿವೆ. ಲಾಗಾಯ್ತಿನಿಂದಲೂ ಭಾರತದ ಸರಕುಗಳಿಗೆ ಅಮೆರಿಕ ಬಹುದೊಡ್ಡ ಮಾರುಕಟ್ಟೆಯಾಗಿದೆ. ಎಲೆಕ್ಟ್ರಾನಿಕ್ಸ್‌ ಮತ್ತು ಔಷಧೀಯ ಉತ್ಪನ್ನಗಳನ್ನು ಸದ್ಯ ಹೆಚ್ಚುವರಿ ಸುಂಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಜವಳಿ, ವಜ್ರ, ಆಭರಣ ಮತ್ತು ಚರ್ಮದ ಉತ್ಪನ್ನಗಳ ಕೈಗಾರಿಕೆಗಳು ‘ಟ್ರಂಪ್‌ ಸುಂಕ’ದಿಂದ ಹೆಚ್ಚು ಬಾಧಿತವಾಗಿವೆ. ಜಾಗತಿಕ ವಹಿವಾಟು ಸಂಶೋಧನಾ ವರದಿಗಳ ಪ್ರಕಾರ, ಭಾರತವು ಅಮೆರಿಕಕ್ಕೆ ವಾರ್ಷಿಕವಾಗಿ ರಫ್ತು ಮಾಡುವ ₹7.62 ಲಕ್ಷ ಕೋಟಿ ಮೊತ್ತದ ಸರಕುಗಳಲ್ಲಿ ಮೂರನೇ ಎರಡರಷ್ಟು ಪ್ರಮಾಣದ ಸರಕುಗಳು (ಅಂದಾಜು ಮೌಲ್ಯ ₹5.30 ಲಕ್ಷ ಕೋಟಿ) ಹೆಚ್ಚುವರಿ ಸುಂಕದ ಪರಿಧಿಗೆ ಬರುತ್ತವೆ. ವಿಯೆಟ್ನಾಂ ಮತ್ತು ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಕಡಿಮೆ ಸುಂಕ ವಿಧಿಸುವ ಕಾರಣ ಅಧಿಕ ಸುಂಕದ ಭಾರ ಹೊತ್ತ ಭಾರತದ ಜವಳಿ ಉತ್ಪನ್ನಗಳು ಪೈಪೋಟಿ ಎದುರಿಸಲಾಗದೆ ಅಮೆರಿಕ ಮಾರುಕಟ್ಟೆಯಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ಇದೆ. ರಫ್ತು ಇಳಿಕೆಯಾದರೆ ಸಹಜವಾಗಿಯೇ ಉತ್ಪಾದನೆಯೂ ಕುಂಠಿತಗೊಳ್ಳಲಿದೆ. ಇದು, ಉದ್ಯೋಗ ನಷ್ಟಕ್ಕೆ ದಾರಿ ತೆರೆಯುತ್ತದೆ. ತಿರುಪೂರ್‌, ಸೂರತ್‌ನ ಹಲವು ಘಟಕಗಳು ಈಗಾಗಲೇ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. 

ಪ್ರಸ್ತುತ ಸನ್ನಿವೇಶವನ್ನು ದೇಶ ದೃಢನಿಶ್ಚಯದಿಂದ ಎದುರಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರೈತರು ಮತ್ತು ಸಣ್ಣ ಕೈಗಾರಿಕೆಗಳ ಹಿತರಕ್ಷಣೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಎದುರಾಗಿರುವ ಸವಾಲುಗಳನ್ನು ಸ್ವಾವಲಂಬನೆ ಮೂಲಕ ಮೆಟ್ಟಿ ನಿಲ್ಲಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಭಾರತವು ತಕ್ಷಣಕ್ಕೆ ಮಾಡಬೇಕಾದ ಕೆಲಸವೆಂದರೆ ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಳ್ಳುವುದು ಮತ್ತು ಸದ್ಯದ ಮಾರುಕಟ್ಟೆಗಳ ವಹಿವಾಟನ್ನು ವಿಸ್ತರಿಸುವುದು. ಆದರೆ, ಈ ಕಾರ್ಯವೇನೂ ಸುಲಭದ್ದಲ್ಲ. ಅಮೆರಿಕದೊಂದಿಗೆ ₹3.96 ಲಕ್ಷ ಕೋಟಿಯಷ್ಟು ಮಿಗತೆ ವಹಿವಾಟು ಹೊಂದಿರುವ ಭಾರತ, ರಷ್ಯಾದೊಂದಿಗೆ ₹5.2 ಲಕ್ಷ ಕೋಟಿಯಷ್ಟು ಮತ್ತು ಚೀನಾದೊಂದಿಗೆ ₹8.8 ಲಕ್ಷ ಕೋಟಿಯಷ್ಟು ಕೊರತೆ ವಹಿವಾಟು ಹೊಂದಿದೆ. ಅಂದರೆ ಈ ಎರಡು ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು, ರಫ್ತು ವಹಿವಾಟು ಕಡಿಮೆ ಇದೆ. ಇಲ್ಲಿ ವ್ಯಾಪಾರ ವೃದ್ಧಿಗೆ ವಿಪುಲ ಅವಕಾಶಗಳಿವೆ. ಹೆಚ್ಚುವರಿ ಸುಂಕದ ಏಟನ್ನು ತಿಂದು ನೆಲ ಕಚ್ಚಿರುವ ಸಣ್ಣ ಉದ್ಯಮಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವುದು ಕೂಡ ಅಗತ್ಯವಾಗಿದೆ. ದೇಶವು ಸುಂಕ-ಪ್ರೇರಿತ ಅನಿಶ್ಚಿತತೆಯ ಕಾಲಘಟ್ಟವನ್ನು ಪ್ರವೇಶಿಸಿದೆ. ಯಾವುದೇ ಬೆದರಿಕೆ ಅಥವಾ ಬಲವಂತಕ್ಕೆ ಮಣಿದು ದೇಶದ ಹಿತಾಸಕ್ತಿಯಲ್ಲಿ ರಾಜಿ ಆಗುವುದಿಲ್ಲ ಎಂಬ ವಿಷಯದಲ್ಲಿ ತನ್ನ ಬದ್ಧತೆ ಪ್ರದರ್ಶಿಸುವುದು ತುಂಬಾ ಮುಖ್ಯವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.