ADVERTISEMENT

ಸಂಪಾದಕೀಯ | ಎಚ್‌–1ಬಿ ವೀಸಾ: ದುಬಾರಿ ಶುಲ್ಕ; ಭಾರತದ ಹಿತಾಸಕ್ತಿಗೆ ಪೆಟ್ಟು

ಸಂಪಾದಕೀಯ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
   
ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಬಯಸುವ ಭಾರತದ ಯುವಜನರ ಸುಂದರಸ್ವಪ್ನಗಳ ಮೇಲೆ ಟ್ರಂಪ್‌ ದಾಳಿ ನಡೆಸಿದ್ದಾರೆ. ಸ್ನೇಹದ ಹೆಸರಿನಲ್ಲಿ ಭಾರತದ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರುತ್ತಿದೆ.

ಎಚ್‌–1ಬಿ ವೀಸಾ ಪಡೆದು ಅಮೆರಿಕ ಪ್ರವೇಶಿಸುವ ಪ್ರತಿ ಉದ್ಯೋಗಿಯ ಪರವಾಗಿ ಆತನ ಕಂಪನಿಯು 1 ಲಕ್ಷ ಅಮೆರಿಕನ್ ಡಾಲರ್ (ಅಂದಾಜು ₹88 ಲಕ್ಷ) ಪಾವತಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಆದೇಶ, ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳುವ ಭಾರತೀಯ ಯುವಜನರ ಕನಸನ್ನು ಗಾಸಿಗೊಳಿಸುವಂತಹದ್ದು. ಈಗಾಗಲೇ ಈ ವೀಸಾ ಹೊಂದಿರುವವರಿಗೆ ಇಷ್ಟು ದೊಡ್ಡ ಮೊತ್ತ ಪಾವತಿಯ ಹೊರೆ ಇರುವುದಿಲ್ಲ. ಹೊಸದಾಗಿ ಎಚ್‌–1ಬಿ ವೀಸಾ ಬಯಸುವವರು ಒಂದು ಬಾರಿ ಮಾತ್ರ ಈ ಮೊತ್ತ ಪಾವತಿಸಬೇಕು. ಹೀಗಿದ್ದರೂ, ಅಮೆರಿಕದ ಅಧ್ಯಕ್ಷರ ಈ ನಡೆಯು ಅಮೆರಿಕ ಪ್ರವೇಶಿಸಲು ಬಯಸುವ ಭಾರತದ ಉದ್ಯೋಗಿಗಳನ್ನು ಹಿಂದಕ್ಕೆ ಕಳುಹಿಸುವ ಉದ್ದೇಶವನ್ನು ಹೇಳುತ್ತಿದೆ. ಹೊಸದಾಗಿ ಅಮೆರಿಕ ಪ್ರವೇಶಿಸಲು ಬಯಸುವವರಿಗೆ ಅಡೆತಡೆಗಳನ್ನು ಹೆಚ್ಚಿಸುವ ಇನ್ನಷ್ಟು ಕ್ರಮಗಳು ಜಾರಿಗೆ ಬರಬಹುದು, ವಲಸಿಗರು ಅಮೆರಿಕ ತೊರೆಯುವಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂಬುದನ್ನು ಈ ಕ್ರಮವು ಮುಂದಾಗಿ ಹೇಳುತ್ತಿದೆ. ಈ ಕ್ರಮದಿಂದಾಗಿ,  ಅಮೆರಿಕದ ಹಾಗೂ ಭಾರತದ ಮುಂಚೂಣಿ ತಂತ್ರಜ್ಞಾನ ಕಂಪನಿಗಳಿಗೆ ಪ್ರತಿಭಾವಂತರು ಲಭ್ಯವಾಗುವುದು ಕಡಿಮೆ ಆಗಬಹುದು. ಅಮೆರಿಕವು ಕೈಗೊಳ್ಳುತ್ತಿರುವ ರಕ್ಷಣಾತ್ಮಕ ಕ್ರಮಗಳು ಅಲ್ಲಿನ ಅನ್ವೇಷಣೆಯ ಪರಿಸರವನ್ನು ಹಾಳುಗೆಡವಬಹುದು, ತಂತ್ರಜ್ಞಾನ ಕ್ಷೇತ್ರದಲ್ಲಿನ ಪಾಲುದಾರಿಕೆಗಾಗಿ ಭಾರತವು ಚೀನಾ ಕಡೆ ಹೆಚ್ಚು ವಾಲಬಹುದು.

ಟ್ರಂಪ್ ಅವರ ಈ ಕ್ರಮವನ್ನು ಅಮೆರಿಕದ ನ್ಯಾಯಾಲಯಗಳು ಅಸಿಂಧುಗೊಳಿಸಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆ ರೀತಿ ಆದರೂ, ಟ್ರಂಪ್ ಅವರು ಭಾರತದ ಕಂಪನಿಗಳು ಹಾಗೂ ನೌಕರರನ್ನು ಅತಿಯಾಗಿ ಗುರಿಯಾಗಿಸಿಕೊಂಡು, ವರಮಾನ ಸಂಗ್ರಹಿಸುವ ತಮ್ಮ ಉದ್ದೇಶದ ಈಡೇರಿಕೆಗಾಗಿ ಇತರ ಮಾರ್ಗ ಅನುಸರಿಸಬಹುದು. ಆ ಮೂಲಕ ಅವರು ವಲಸೆಯನ್ನು ನಿರುತ್ಸಾಹಗೊಳಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬಹುದು. ಯಾವ ನಿಯಂತ್ರಣವೂ ಇಲ್ಲದೆ ವರ್ತಿಸುವುದು, ಊಹೆಗಳಿಗೆ ನಿಲುಕದಂತೆ ತೀರ್ಮಾನ
ಗಳನ್ನು ತೆಗೆದುಕೊಳ್ಳುವುದು ಅಮೆರಿಕವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಕೆಲವು ಕ್ರಮಗಳಲ್ಲಿ ಸೇರಿದೆ.


ಈ ರೀತಿ ಮಾಡುವುದರಿಂದ, ಏನಾಗುತ್ತಿದೆ ಎಂಬುದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವ ಮೊದಲೇ ಅಮೆರಿಕದ ಗುರಿಗಳು ಈಡೇರಿರುತ್ತವೆ. ಈಗಿನ ಸಂದರ್ಭದಲ್ಲಿ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸ್ನೇಹಿತ’ ಎಂದು ಸಂಬೋಧಿಸುತ್ತಿದ್ದಾರೆ. ಆದರೆ ಟ್ರಂಪ್ ಅವರ ನಿಕಟವರ್ತಿಗಳು, ‘ಅಮೆರಿಕವು ತನ್ನ ಸ್ನೇಹಿತರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತದೆ’ ಎನ್ನುತ್ತಾರೆ. ಇದರ ಅರ್ಥ, ಅಮೆರಿಕವು ತನ್ನ ಸ್ನೇಹಿತರ ಮೇಲೆ ಬಹಳ ಒತ್ತಡವನ್ನು ತರುತ್ತಿದೆ. ಈ ನಡುವೆ ಟ್ರಂಪ್ ಅವರ ನೀತಿಗಳ ಜೊತೆ ಗುರುತಿಸಿಕೊಂಡಿರುವ ಅಮೆರಿಕದ ಕೆಲವು ಮಾಧ್ಯಮಗಳು ಅಲ್ಲಿ ವಲಸಿಗ ವಿರೋಧಿ ಭಾವನೆಗಳನ್ನು ಬೆಳೆಸುತ್ತಿವೆ, ಅವರ ಬಗ್ಗೆ ಸಾರ್ವಜನಿಕರಲ್ಲಿ ದ್ವೇಷ ಮೂಡುವಂತೆ ಮಾಡುತ್ತಿವೆ. ಭಾರತದ ಕೆಲವು ಸಮುದಾಯಗಳು ತಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಸ್ಮಿತೆಯನ್ನು ಅಮೆರಿಕದಲ್ಲಿ ಬಹಿರಂಗವಾಗಿ ತೋರಿಸಿಕೊಳ್ಳುವುದು ಅಲ್ಲಿನ ಸಮಾಜದಲ್ಲಿ ಸಮಂಜಸವಾಗಿ ಕಾಣುತ್ತಿಲ್ಲ. ವಲಸಿಗರು ತಾವು ಇರುವ ನಾಡಿನ ಸಮುದಾಯದ ಜೊತೆ ಬೆರೆಯುವುದು ಹಾಗೂ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ.

ADVERTISEMENT

ಟ್ರಂಪ್ ನೇತೃತ್ವದ ಆಡಳಿತವು ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ಬರುವಂತೆ ಮತ್ತೆ ಮತ್ತೆ ನಡೆದುಕೊಳ್ಳುತ್ತಿರುವುದಕ್ಕೆ ಭಾರತ ಪ್ರತಿರೋಧ ತೋರಬೇಕಿದೆ. ಭಾರತದ ಜೊತೆ ಸಂಬಂಧ ಚೆನ್ನಾಗಿದೆ ಎಂದು ಹೇಳುತ್ತಲೇ ಅಮೆರಿಕವು, ಭಾರತದ ಹಿತಾಸಕ್ತಿಗಳಿಗೆ ಪೆಟ್ಟು ಕೊಡುವ ಕೆಲಸವನ್ನೂ ಮಾಡಿದೆ. ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ, ಅಕ್ರಮ ಮಾದಕವಸ್ತು ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಉಲ್ಲೇಖಿಸಲಾಗಿದೆ, ಇರಾನ್‌ನಲ್ಲಿನ ಚಾಬಹಾರ್ ಬಂದರಿನ ಮೇಲಿನ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರಲಾಗಿದೆ, ಈಗ ಎಚ್‌–1ಬಿ ವೀಸಾ ಪಡೆಯಲು 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸಲಾಗಿದೆ.

ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಭಾರತವು ‘ಭಯೋತ್ಪಾದನೆಯ ಬಗ್ಗೆ ಕಠಿಣ ನಿಲುವು ತಳೆಯುವ’ ಮಾಮೂಲಿ ಕೆಲಸದ ಆಚೆಗೂ ಕಣ್ಣುಹಾಯಿಸಬೇಕು. ಭಾರತದ ಹಿತಾಸಕ್ತಿ ಹಾಗೂ ಅಮೆರಿಕದಲ್ಲಿ ನೆಲಸಿರುವ ಭಾರತೀಯ ಸಮುದಾಯದವರ ಹಿತಾಸಕ್ತಿಗಳಿಗೆ ಧಕ್ಕೆ ತರುವ ಅಮೆರಿಕದ ನೀತಿಗಳ ಬಗ್ಗೆ ಪ್ರಧಾನಿ ಮೋದಿ ಅವರು ತಾಳಿರುವ ಮೌನವನ್ನು ಕೊನೆಗೊಳಿಸಬೇಕು. ಅಮೆರಿಕದ ಜೊತೆ ಮಾತುಕತೆ ನಡೆಸಲು ಆ ದೇಶದ ಮೇಲೆ ಅತಿಯಾದ ಪ್ರೀತಿ ಹೊಂದಿಲ್ಲದ ಮಧ್ಯಸ್ಥಿಕೆದಾರರ ಅಗತ್ಯ ಇದೆ. ಇಲ್ಲದಿದ್ದರೆ ಮಾತುಕತೆಗಳಿಂದ ಏನೂ ಸಾಧಿಸಲಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.