
‘ವಂದೇ ಮಾತರಂ’ ಗೀತೆಯ ಸಂಪೂರ್ಣ ಪಠ್ಯ ಹಾಡುವುದನ್ನು ಕಡ್ಡಾಯಗೊಳಿಸುವ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ರೂಪಿಸಿರುವುದು, ರಾಷ್ಟ್ರೀಯ ಗೀತೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನವಾಗಿದೆ. ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರ ಭಾವಪೂರ್ಣ ಸಾಲುಗಳನ್ನು ಒಳಗೊಂಡಿರುವ ಗೀತೆಯು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಾಗೂ ಸ್ವಾತಂತ್ರ್ಯಾನಂತರವೂ ಭಾರತೀಯರ ಮನಸ್ಸನ್ನು ಆವರಿಸಿಕೊಂಡಿದೆ. ಮೂಲ ಗೀತೆ ಆರು ಚರಣಗಳನ್ನು ಹೊಂದಿದ್ದು, ಅವುಗಳಲ್ಲಿ ಎರಡು ಭಾಗಗಳನ್ನಷ್ಟೇ ಸಂವಿಧಾನ ಸಭೆಯು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು. ಆದರೆ, ಕೇಂದ್ರ ಗೃಹ ಸಚಿವಾಲಯವು ಕಳೆದ ಜನವರಿಯಲ್ಲಿ ಹೊರಡಿಸಿರುವ ವಿವರವಾದ ಅಧಿಸೂಚನೆಯಲ್ಲಿ, ವಂದೇ ಮಾತರಂ ಗೀತೆಯ ಆರೂ ಚರಣಗಳನ್ನು ಉಳಿಸಿಕೊಳ್ಳುವಂತೆ ತಿಳಿಸಿದೆ; ರಾಷ್ಟ್ರೀಯ ಗೀತೆಯನ್ನು ಪೂರ್ಣಪ್ರಮಾಣದಲ್ಲಿ ಹಾಡುವಂತೆ ಆದೇಶ ಹೊರಡಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರೀಯ ಗೀತೆಯನ್ನೂ ಹಾಡುವ ಸಂದರ್ಭದಲ್ಲಿ, ವಂದೇ ಮಾತರಂ ಹಾಡಿದ ಬಳಿಕ ರಾಷ್ಟ್ರಗೀತೆಯನ್ನು ಹಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಮೊಹಮ್ಮದ್ ಅಲಿ ಜಿನ್ನಾ ಅವರ ಅತೀವ ಒತ್ತಡದಿಂದಾಗಿ ಹಾಗೂ ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ, ಮಾತೃಭೂಮಿಯನ್ನು ದೇವತೆಯೆಂದು ಬಣ್ಣಿಸುವ ಚರಣಗಳನ್ನು ಜವಾಹರಲಾಲ್ ನೆಹರೂ ಕೈಬಿಟ್ಟಿದ್ದರು ಎಂದು ಸಂಸತ್‌ನಲ್ಲಿ ನಡೆದ ‘ವಂದೇ ಮಾತರಂ’ನ 150ನೇ ವರ್ಷಾಚರಣೆ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಆದರೆ, ರವೀಂದ್ರನಾಥ ಟ್ಯಾಗೋರ್ ಅವರ ಶಿಫಾರಸಿನ ಮೇರೆಗೆ ಕಾಂಗ್ರೆಸ್ ಪಕ್ಷ ಪರಿಷ್ಕಾರದ ನಿರ್ಧಾರವನ್ನು ತೆಗೆದುಕೊಂಡಿತ್ತು. ಆ ನಿರ್ಧಾರದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್, ಮುಂತಾದ ನಾಯಕರ ಪಾತ್ರವೂ ಇತ್ತು. ಹಿಂದೂಗಳಲ್ಲದವರ ಭಾವನೆಗಳನ್ನು ಗೌರವಿಸುವ, ಮುಖ್ಯವಾಗಿ ಮುಸ್ಲಿಮರ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ತೆಗೆದುಕೊಂಡ ನಿರ್ಣಯ ಅದಾಗಿತ್ತು. ಹಿಂದೂ ಧಾರ್ಮಿಕ ಸಂಕೇತಗಳನ್ನು ಒಳಗೊಂಡಿದ್ದ ಸಾಲುಗಳು ಹಿಂದೂಗಳಲ್ಲದವರಿಗೆ ಉಂಟುಮಾಡಬಹುದಾದ ಮುಜುಗರದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶ ಆ ತೀರ್ಮಾನದ ಹಿಂದಿತ್ತು. ವಂದೇ ಮಾತರಂ ಗೀತೆ ಇಂದಿಗೂ ಭಾರತೀಯರ ಒಗ್ಗಟ್ಟು ಮತ್ತು ಒಳಗೊಳ್ಳುವಿಕೆಯ ಸಂಕೇತವಾಗಿ ಮುಂದುವರಿದಿದೆ; ಸಂಸ್ಕೃತಿ, ಚರಿತ್ರೆ ಮತ್ತು ರಾಷ್ಟ್ರೀಯತೆಯ ಸಮೀಕರಣದ ರೂಪದಲ್ಲಿ ನೋಡಬಹುದಾದ ಈ ಗೀತೆ, ತನ್ನೊಳಗಿನ ಏಕತೆಯ ಶಕ್ತಿಯಿಂದ ಎಲ್ಲರನ್ನೂ ಸೆಳೆಯುವಂತಿದೆ. ಈ ಗೀತೆಯು ಧರ್ಮ, ಜಾತಿ, ಭಾಷೆಗಳಿಗೆ ಅತೀತವಾಗಿ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯ ಸಂಕೇತವಾಗಿದೆ. ಭಾರತೀಯರ ಭಾವಕೋಶದ ಭಾಗವಾದ ಈ ಅಪೂರ್ವ ಗೀತೆಗೆ ರಾಜಕೀಯದ ಸ್ಪರ್ಶವಾದಾಗ, ಅದು ತನ್ನ ಬಹು ಆಯಾಮದ ಅರ್ಥ ಸಾಧ್ಯತೆಗಳನ್ನು ಕಳೆದುಕೊಳ್ಳುತ್ತದೆ.
ವಂದೇ ಮಾತರಂ ಗೀತೆ ಭಾವೋತ್ಕರ್ಷದ ಮೌಲ್ಯವಾಗಿ ಗುರ್ತಿಸಿಕೊಂಡಿರುವ ಪಶ್ಚಿಮ ಬಂಗಾಳದಲ್ಲೀಗ ಚುನಾವಣಾ ಪರ್ವ. ಚುನಾವಣಾ ಲಾಭದ ಅವಕಾಶಗಳು ಹಾಗೂ ಕೋಮು ಧ್ರುವೀಕರಣದ ಲೆಕ್ಕಾಚಾರದ ರೂಪದಲ್ಲಿ ರಾಷ್ಟ್ರೀಯ ಗೀತೆಯನ್ನು ರಾಜಕೀಯಗೊಳಿಸುತ್ತಿರುವ ವಿದ್ಯಮಾನವನ್ನು ಗಮನಿಸಬೇಕು. ಹಾಗೆಯೇ ಈ ಪ್ರಯತ್ನ, ಬಹುತ್ವ ಮತ್ತು ವಿಶ್ವಮಾನವ ದೃಷ್ಟಿಕೋನವನ್ನು ಹೊಂದಿದ್ದ, ಪಶ್ಚಿಮ ಬಂಗಾಳದ ಬಹುದೊಡ್ಡ ಐಕಾನ್ ಆಗಿರುವ ರವೀಂದ್ರನಾಥ ಟ್ಯಾಗೋರರಿಗೆ ಮುಖಾಮುಖಿಯಾಗಿ ಬಂಕಿಮಚಂದ್ರರನ್ನು ನಿಲ್ಲಿಸುವ ಹುನ್ನಾರವೂ ಆಗಿದೆ. ರಾಷ್ಟ್ರೀಯ ಸಂಕೇತಗಳು ಏಕತೆ ಮತ್ತು ಒಮ್ಮತದ ಪ್ರತಿನಿಧಿಗಳಾಗಿವೆ. ಇತಿಹಾಸದಿಂದ ಆಯ್ದುಕೊಂಡಿರುವ ಅಶೋಕಸ್ಥಂಭ ಹಾಗೂ ಚಕ್ರಗಳು ನಿರ್ದಿಷ್ಟ ಅರ್ಥವನ್ನು ಹೊಂದಿದ್ದರೂ, ಅವು ಬಹುತ್ವ ಹಾಗೂ ರಾಷ್ಟ್ರೀಯ ಚಿಂತನೆಯನ್ನು ಪ್ರತಿನಿಧಿಸುತ್ತವೆ. ನಾಗರಿಕರ ಮೇಲೆ ಸರ್ಕಾರ ಏಕರೂಪದ ವ್ಯಾಖ್ಯಾನ ಅಥವಾ ಸಂಕೇತವನ್ನು ಹೇರಬಾರದು. ವಂದೇ ಮಾತರಂ ಗೀತೆಯ ಕೆಲವು ಭಾಗಗಳೊಂದಿಗೆ ಸಂಬಂಧ ಹೊಂದುವುದು ಹಿಂದೂ ಅಲ್ಲದ ಸಮುದಾಯಗಳಿಗೆ ಸಮಸ್ಯೆಯಾಗುತ್ತದೆ ಎನ್ನುವುದನ್ನು ತಿಳಿದೂ, ಆ ಗೀತೆಯ ಪೂರ್ಣ ಪಠ್ಯದ ಪ್ರಸ್ತುತಿಯನ್ನು ದೇಶಭಕ್ತಿ ಅಥವಾ ನಿಷ್ಠೆಯ ಪರೀಕ್ಷೆಯನ್ನಾಗಿ ಮಾಡಬಾರದು. ವಂದೇ ಮಾತರಂ ಹಾಡುವಿಕೆಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಬೆಂಬಲಿಸುವ ರಾಜಕೀಯ ಸಂಕಥನಗಳು, ದೇಶದ ಸಾಂವಿಧಾನಿಕ ತತ್ತ್ವಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗುವಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.