ADVERTISEMENT

ಸಂಪಾದಕೀಯ: ಪಶ್ಚಿಮಘಟ್ಟ ಸಂರಕ್ಷಣೆ ಸಮಗ್ರ ಚರ್ಚೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 1:10 IST
Last Updated 11 ಜನವರಿ 2022, 1:10 IST
   

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಕಸ್ತೂರಿ ರಂಗನ್‌ ವರದಿಯ ಅನುಷ್ಠಾನಕ್ಕೆ ಮತ್ತೆ ಆರು ತಿಂಗಳ ಕಾಲಾವಕಾಶ ಸಿಕ್ಕಿದೆ. ಅದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ಕಳೆದ ಡಿಸೆಂಬರ್‌ 31ರ ಗಡುವನ್ನು ನೀಡಲಾಗಿತ್ತು. ಎರಡು ವರ್ಷಗಳಿಂದ ನಾಲ್ಕು ಬಾರಿ ಗಡುವನ್ನು ವಿಸ್ತರಿಸಲಾಗಿತ್ತು. ಈಗ, ಬರುವ ಜೂನ್‌ 30ರೊಳಗೆ ಅಂತಿಮಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಐದನೇ ಬಾರಿ ಗಡುವನ್ನು ನೀಡಿದೆ. ಕರ್ನಾಟಕದ ಹಿಂದಿನ ಯಾವ ಸರ್ಕಾರವೂ ಈ ವರದಿಯ ಅನುಷ್ಠಾನ ಕುರಿತು ಆಸಕ್ತಿಯನ್ನು ತೋರಿರಲಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಈಗಿನ ಸರ್ಕಾರವಂತೂ ಅದನ್ನು ಸಾರಾಸಗಟಾಗಿ ತಿರಸ್ಕರಿಸುವುದಾಗಿ ಹೇಳಿತ್ತು. ಇಂಥ ಏಕಾಏಕಿ ನಿರ್ಣಯವು ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರಕ್ಕೆ ಮಾರಕವಾಗುತ್ತದೆಂದು ವಿಜ್ಞಾನಿಗಳು, ವನ್ಯತಜ್ಞರು ಮತ್ತು ಪರಿಸರ ತಜ್ಞರು ದನಿ ಎತ್ತಿದ್ದರು.

ವಿಪರ್ಯಾಸದ ಸಂಗತಿ ಏನೆಂದರೆ, ವರದಿಯಲ್ಲಿ ಏನಿದೆ ಎಂಬುದರ ಕುರಿತು ವಿಸ್ತೃತ ಚರ್ಚೆ ನಡೆದೇ ಇಲ್ಲ. ಈ ವರದಿಯ ಸಮಗ್ರ ಅಂಶಗಳನ್ನು ಸ್ಥಳೀಯ ಭಾಷೆಗಳಿಗೆ ತರ್ಜುಮೆ ಮಾಡಿ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಿತ್ತು. ಕಸ್ತೂರಿ ರಂಗನ್‌ ವರದಿಗೂ ಮುಂಚೆ ಪ್ರಕಟವಾಗಿದ್ದ ಮಾಧವ ಗಾಡ್ಗೀಳ್‌ ವರದಿಯಲ್ಲಿ ಅದನ್ನು ಸ್ಪಷ್ಟವಾಗಿ ಹೇಳಲಾಗಿತ್ತು ಕೂಡ. ಗಾಡ್ಗೀಳ್‌ ವರದಿಗೆ ಹೋಲಿಸಿದರೆ ತದನಂತರ ಬಂದ ಕಸ್ತೂರಿ ರಂಗನ್‌ ವರದಿ ಬಹಳಷ್ಟು ದುರ್ಬಲವಾಗಿದೆ. ಆದರೂ ವರದಿಗೆ ಸಂಬಂಧಿಸಿದ ಮಾಹಿತಿಗಳನ್ನು ಬೇಕೆಂದೇ ಕತ್ತಲಲ್ಲಿ ಇಟ್ಟು ಘಟ್ಟಪ್ರದೇಶಗಳ ನಿವಾಸಿಗಳಲ್ಲಿ ಬೆದರಿಕೆ ಹುಟ್ಟುವಂತೆ ಮಾಡುತ್ತ ಇತ್ತ ಕಲ್ಲು–ಮರಳಿನ ಗಣಿಗಾರರು, ರಸ್ತೆ-ಸೇತುವೆ-ಸುರಂಗಗಳ ಗುತ್ತಿಗೆದಾರರು, ರೆಸಾರ್ಟ್‌ ಮಾಲೀಕರೇ ಮುಂತಾದ ಪಟ್ಟಭದ್ರರ ಹಿತಾಸಕ್ತಿಗಳನ್ನು ಪೊರೆಯಲೆಂದೇ ವರದಿಯನ್ನು ಮತ್ತೆ ಮತ್ತೆ ತಿರಸ್ಕರಿಸಲಾಗುತ್ತಿದೆ ಎಂಬ ಆಪಾದನೆ ಈ ಎಲ್ಲ ಸರ್ಕಾರಗಳ ಮೇಲಿದೆ.

ಕಸ್ತೂರಿ ರಂಗನ್‌ ವರದಿ ಬೇಡವೇ ಬೇಡವೆಂದು ನಿರ್ಣಯ ಕೈಗೊಳ್ಳುವ ಮುನ್ನ ಕರ್ನಾಟಕ ಸರ್ಕಾರವು ಕೇರಳದ ಮಾರ್ಗವನ್ನಾದರೂ ಅನುಸರಿಸಬೇಕಿತ್ತು. ಅಲ್ಲಿ ಈ ವರದಿ ಕುರಿತು ವಿರೋಧ ವ್ಯಕ್ತವಾದಾಗ ಅಲ್ಲಿನ ಸರ್ಕಾರವು ಸಾರಾಸಗಟಾಗಿ ವರದಿಯನ್ನು ತಿರಸ್ಕರಿಸಲಿಲ್ಲ. ಉಪಗ್ರಹ ಚಿತ್ರಗಳನ್ನು ಆಧರಿಸಿ ಗೆರೆ ಎಳೆದಾಗ ಕೆಲವು ಊರುಗಳು ತಪ್ಪಾಗಿ ಅರಣ್ಯ ಪ್ರದೇಶವೆಂದು ಘೋಷಿತವಾಗಿರುವ ಸಂಭವ ಇರುವುದರಿಂದ ಅಂಥ ಸ್ಥಳಗಳ ಮರು ಪರಿಶೀಲನೆ ಮಾಡಿಸಲಾಯಿತು. ಸ್ಥಳೀಯ ಮಟ್ಟದಲ್ಲಿ ಕೆಲವೆಡೆ ಗಡಿರೇಖೆಗಳನ್ನು ತುಸು ಬದಲಿಸಬೇಕಿರು
ವುದರಿಂದ ಅಂತಿಮ ಅಧಿಸೂಚನೆಯ ದಿನವನ್ನು ಮುಂದೂಡಿರೆಂದು ಅವರೇ ಕೇಳಿದ್ದರು. ನಮ್ಮಲ್ಲಿ ಅಂಥ ಯಾವ ಸ್ಥಳೀಯ ಸಮಿತಿಗಳನ್ನೂ ಅಧ್ಯಯನಕ್ಕೆ ಕಳುಹಿಸದೆ ವರದಿಯೇ ಬೇಡವೆಂದು ತಿರಸ್ಕರಿಸಿದ್ದು ಸಮರ್ಥನೀಯವೇನಲ್ಲ. ಗಮನಿಸಬೇಕಾದ ಸಂಗತಿ ಏನೆಂದರೆ, ವರದಿ ಸಮಗ್ರವಾಗಿ ಜಾರಿಗೆ ಬಂದರೆ ಕೇರಳದಲ್ಲಿ ಗುಡ್ಡಗಾಡು ಜನರಿಗೆ ನಿಜಕ್ಕೂ ಅನ್ಯಾಯವಾದೀತೆಂಬ ಕಳಕಳಿ ಎದ್ದು ಕಾಣುತ್ತಿತ್ತು. ಅದಕ್ಕೇ ಅಲ್ಲಲ್ಲಿ ಮಾರ್ಪಾಟುಗಳನ್ನು ಸೂಚಿಸಲಾಗಿತ್ತು. ನಮ್ಮಲ್ಲಿ ಹೆದ್ದಾರಿ ವಿಸ್ತರಣೆ, ಕಲ್ಲುಗಣಿಗಾರಿಕೆ
ಮುಂತಾದ ಅಭಿವೃದ್ಧಿ ಹಿತಾಸಕ್ತಿಯೇ ವರದಿಯನ್ನು ತಿರಸ್ಕರಿಸಲು ಮುಖ್ಯ ಕಾರಣವೆಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಕನ್ನಡದಲ್ಲಿ ವರದಿಯನ್ನು ಓದದೇ ಯಾರದೋ ಅಭಿಪ್ರಾಯಕ್ಕೆ ಸೈ ಎನ್ನುವವರಿಂದಾಗಿ ಇಡೀ ವರದಿ ತಿರಸ್ಕೃತವಾಗಿ ಪಶ್ಚಿಮ ಘಟ್ಟಗಳ ಜೀವಜಂತುಗಳು, ಅಪರೂಪದ ಸಸ್ಯಪ್ರಭೇದಗಳು ಬಲಿಯಾಗುವುದಾದರೆ ಅದಕ್ಕಿಂತ ವಿಷಾದದ ಸಂಗತಿ ಬೇರೊಂದಿಲ್ಲ. ಅದರಲ್ಲೂ ಪಶ್ಚಿಮ ಘಟ್ಟಗಳ ಶೇಕಡ 65ರಷ್ಟು ಭಾಗ ಕರ್ನಾಟಕದಲ್ಲೇ ಇರುವಾಗ ಅದರ ರಕ್ಷಣೆ ಕುರಿತ ಕಾಳಜಿ ನಮ್ಮಲ್ಲೇ ಹೆಚ್ಚಿಗೆ ವ್ಯಕ್ತವಾಗಬೇಕಿತ್ತು. ಈಗಿನ ಚುನಾಯಿತ ಪ್ರತಿನಿಧಿಗಳ ‘ಅಭಿವೃದ್ಧಿಪರ’ ಧೋರಣೆಯೇ ಹಿಂದೆ 1960-70ರ ದಶಕಗಳ ಪ್ರತಿನಿಧಿಗಳಿಗೂ ಇದ್ದಿದ್ದರೆ ಈಗ ನಮಗೆ ಆಗುಂಬೆಯ ರಕ್ಷಿತಾರಣ್ಯ ಇರುತ್ತಿರಲಿಲ್ಲ; ದಾಂಡೇಲಿ, ಭದ್ರಾ, ಬ್ರಹ್ಮಗಿರಿ, ಬಿಳಿಗಿರಿರಂಗನ ಬೆಟ್ಟಗಳ ಅಭಯಾರಣ್ಯಗಳೂ ಇರುತ್ತಿರಲಿಲ್ಲ; ಕುದುರೆಮುಖ ರಾಷ್ಟ್ರೀಯ ಉದ್ಯಾನವೂ ಇರುತ್ತಿರಲಿಲ್ಲ. ಮುಂಬರುವ 50-100 ವರ್ಷಗಳ ನಂತರದ ಪೀಳಿಗೆಯವರು ನಮ್ಮ ಹೆಜ್ಜೆಗಳನ್ನು ವಿಮರ್ಶಿಸುತ್ತಾರೆ ಎಂಬ ಮುಂಧೋರಣೆ ನಮ್ಮದಾಗಬೇಕಿತ್ತು. ಈ ಅಪೂರ್ವ ನಿಸರ್ಗ ಸಿರಿಸಂಪತ್ತು ನಮಗೆ ಬಳುವಳಿಯಾಗಿ ಬಂದಿದ್ದಲ್ಲ, ಮುಂದಿನ ಪೀಳಿಗೆಯಿಂದ ಎರವಲು ಪಡೆದಿದ್ದು ಎಂಬ ಪರಿಜ್ಞಾನ ನಮಗಿರಬೇಕಿತ್ತು.

ADVERTISEMENT

ಈಗಲೂ ಕಾಲ ಮಿಂಚಿಲ್ಲ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಬದಲು, ಅದನ್ನು ತುರ್ತಾಗಿ ಸರಳ ಕನ್ನಡದಲ್ಲಿ ತರ್ಜುಮೆ ಮಾಡಿಸಿ, ತಾಲ್ಲೂಕು ಮಟ್ಟದಲ್ಲಾದರೂ ಅದರ ಕುರಿತು ವ್ಯಾಪಕ ಚರ್ಚೆಗಳನ್ನು ಸರ್ಕಾರಿ ವೆಚ್ಚದಲ್ಲೇ ಏರ್ಪಡಿಸಬೇಕು. ಕಸ್ತೂರಿ ರಂಗನ್‌ ವರದಿಯನ್ನು ಸಿದ್ಧಪಡಿಸುವಾಗ ಯಾವುದು ಮನುಷ್ಯನಿರ್ಮಿತ ಯಾವುದು ನೈಸರ್ಗಿಕ ಎಂಬುದನ್ನು ಪ್ರತ್ಯೇಕಿಸುವಲ್ಲಿ ಅಲ್ಲಲ್ಲಿ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸುವುದು ಮೊದಲ ಹೆಜ್ಜೆಯಾಗಬೇಕು. ಮಾತುಗಳನ್ನಾಡಲಾಗದ, ಮತ ಹಾಕಲಾರದ ಜೀವಿಗಳ ಮತ್ತು ಈಗಿನ್ನೂ ಹುಟ್ಟದಿರುವ ಪೀಳಿಗೆಗಳ ಯೋಗಕ್ಷೇಮಕ್ಕೂ ಈಗಿನಸರ್ಕಾರ ಬಾಧ್ಯಸ್ಥ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.