ADVERTISEMENT

ಸುಮಲತಾ ಗೆಲುವು ಮಹಿಳೆಯರಿಗೆ ಸ್ಫೂರ್ತಿ

ವಿಜಯ್ ಜೋಷಿ
Published 24 ಮೇ 2019, 19:57 IST
Last Updated 24 ಮೇ 2019, 19:57 IST
ವಿಧಾನಸೌಧದಲ್ಲಿ ಬುಧವಾರ ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧ ಮಾತನಾಡಿದರು -ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ಬುಧವಾರ ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧ ಮಾತನಾಡಿದರು -ಪ್ರಜಾವಾಣಿ ಚಿತ್ರ   

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಸಾಧಿಸಿರುವ ಗೆಲುವು ಎಲ್ಲರ ಗಮನ ಸೆಳೆದಿದೆ. ಪಕ್ಷೇತರರಾಗಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಲಿರುವ ಕರ್ನಾಟಕದ ಮೊದಲ ಮಹಿಳೆ ಎಂಬ ಹಿರಿಮೆ ಕೂಡ ಅವರಿಗೆ ಸಂದಿದೆ. ಈ ಹೊತ್ತಿನಲ್ಲಿ ತಾರಾ ಅವರು ಸುಮಲತಾ ಗೆಲುವಿನ ಕುರಿತು ಹೇಳುವುದೇನು? ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ

* ಸಿನಿಮಾ ರಂಗದ ಮಹಿಳೆ ಗೆದ್ದಿರುವುದು ಸಿನಿಮಾ ಲೋಕದ ಇತರ ಹೆಣ್ಣುಮಕ್ಕಳಿಗೆ ಯಾವ ಸಂದೇಶ ನೀಡುವಂತಿದೆ?

ಸುಮಲತಾ (ತಾರಾ ಮಾತುಗಳಲ್ಲಿ ‘ಸುಮಮ್ಮ’) ಅವರು ಮೊದಲು ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರಿಗೆ ಆ ಅವಕಾಶ ಸಿಗಲಿಲ್ಲ. ಹಾಗಾಗಿ ಪಕ್ಷೇತರರಾಗಿ ಕಣಕ್ಕಿಳಿದರು. ನಾನು ಕೂಡ ಸಿನಿಮಾ ರಂಗದಲ್ಲೇ ಇರುವವಳಾದ ಕಾರಣ, ನಮ್ಮ ಕ್ಷೇತ್ರದ ಯಾರೇ ಗೆದ್ದರೂ ಖಂಡಿತ ಖುಷಿ ಆಗುತ್ತದೆ. ಸುಮಲತಾ ಗೆಲುವು ಎಲ್ಲ ಹೆಣ್ಣುಮಕ್ಕಳಿಗೆ ಭರವಸೆ ಕೊಡುವ ಸಂಗತಿ. ಇವರ ಗೆಲುವು ಮಾತ್ರವೇ ಅಲ್ಲ, ಯಾವುದೇ ಮಹಿಳೆಯ ಗೆಲುವು ಇನ್ನೊಬ್ಬಳಿಗೆ ಸ್ಫೂರ್ತಿ.

ADVERTISEMENT

* ಸಿನಿಮಾ ರಂಗಕ್ಕಾಗಿ ಯಾವ ಕೆಲಸ ಮಾಡುವ ಅವಕಾಶ ಸುಮಲತಾ ಅವರಿಗಿದೆ?

ಚಿತ್ರರಂಗದ ಆಂತರಿಕ ಸಮಸ್ಯೆಗಳು ಇಂದಿಗೂ ಹಲವಿವೆ. ಸುಮಲತಾ ಅವರ ಆದ್ಯತೆಗಳು ಏನು ಎಂಬುದು ಗೊತ್ತಿಲ್ಲ. ಆದರೆ ಅವರಿಂದ ಒಳ್ಳೆಯ ಕೆಲಸಗಳು ಆಗಬೇಕು ಎಂದು ಬಯಸುವೆ.

* ಆಡಳಿತ ಪಕ್ಷವನ್ನು, ಪುರುಷ ಪ್ರಧಾನ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಗೆದ್ದ ಪರಿಯ ಬಗ್ಗೆ ನಿಮ್ಮ ಅನಿಸಿಕೆ?

ಇಂದು ಚುನಾವಣೆ ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ, ಈ ರೀತಿ ಆಳುವ ಪಕ್ಷವನ್ನು ಎದುರು ಹಾಕಿಕೊಂಡು ಗೆದ್ದದ್ದು ಬಹಳ ದೊಡ್ಡದು. ಅಂದಹಾಗೆ, ಅಧಿಕಾರ ಸಿಕ್ಕಿದೆ ಎಂದು ಈಗಿನ ಕಾಲದಲ್ಲಿ ಬೀಗುವಂತಿಲ್ಲ. ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದು ಮುಖ್ಯ. ಸುಮಲತಾ ಅವರಿಗೆ ನೋವಾಗುವಂತೆ ಕೆಲವು ರಾಜಕಾರಣಿಗಳು ಆಡಿದ ವೈಯಕ್ತಿಕ ಮಟ್ಟದ ಮಾತುಗಳೇ ಸುಮಲತಾ ಪರ ಮತ ಚಲಾಯಿಸಲು ಹೆಣ್ಣುಮಕ್ಕಳನ್ನು ಪ್ರಚೋದಿಸಿರಬಹುದು.

* ಕರ್ನಾಟಕಕ್ಕೆ ಸುಮಲತಾ ಅವರಿಂದ ಯಾವೆಲ್ಲ ಕೆಲಸಗಳು ಆಗಬಹುದು?

ರೈತರು ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಗಳಲ್ಲಿ ನಮ್ಮದೂ ಸೇರಿದೆ. ಮಂಡ್ಯದಲ್ಲಿ ಹೆಚ್ಚು ಜನ ಆಶ್ರಯಿಸಿರುವುದು ಕೃಷಿಯನ್ನು. ಹಾಗಾಗಿ ಅವರು ಕೃಷಿಕರಿಗೆ ಮೊದಲ ಆದ್ಯತೆ ನೀಡಬಹುದು ಎಂದು ಭಾವಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.