ADVERTISEMENT

Interview| ಬಿಜೆಪಿಯಿಂದ ಸ್ಪರ್ಧಿಸುವಂತೆ ಹಿಂದಿನ ಬಾರಿಯೇ ಒತ್ತಡವಿತ್ತು: ಹೊರಟ್ಟಿ

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 4:35 IST
Last Updated 6 ಜೂನ್ 2022, 4:35 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ಮೂರೂವರೆ ದಶಕದ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಪರಿಷತ್ ಪ್ರವೇಶಿಸಿದ ಬಸವರಾಜ ಹೊರಟ್ಟಿ ಅವರು ನಂತರ ಲೋಕ ಜನಶಕ್ತಿ, ಜೆಡಿಎಸ್‌ನಿಂದ ಏಳು ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಸಚಿವರಾಗಿ ಮತ್ತು ಸಭಾಪತಿಯಾಗಿ ಕಾರ್ಯನಿರ್ವಹಿಸಿರುವ ನಾಡಿನ ಅನುಭವಿ ರಾಜಕಾರಣಿ.

ಇದೀಗ, ಎಂಟನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ?

ADVERTISEMENT

ಹಿಂದಿನ ಚುನಾವಣೆಯಲ್ಲೇ ಬಿಜೆಪಿಯಿಂದ ಸ್ಪರ್ಧಿಸುವಂತೆ ಒತ್ತಡ ಇತ್ತು. ಈ ಬಾರಿ ಹಿರಿಯ ಜೊತೆಗೆ ಯುವ ಶಿಕ್ಷಕರಿಂದಲೂ ಒತ್ತಡ ಹೆಚ್ಚಿತು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಲ್ಲಿರುವ ಪಕ್ಷದಿಂದ ಸ್ಪರ್ಧಿಸಿ ಗೆದ್ದರೆ, ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಒತ್ತಾಯಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿ.ವಿ ಸೇರಿದಂತೆ ಕೆಲವು ಕಾಲೇಜುಗಳ ಬೋಧಕರುಇದಕ್ಕೆ ದನಿಗೂಡಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಉನ್ನತ ನಾಯಕರಿಂದ ಪಕ್ಷ ಸೇರ್ಪಡೆಗೆ ‌ಆಹ್ವಾನ ಬಂತು. ಶಿಕ್ಷಕರ ಒತ್ತಾಸೆಯಂತೆ ಬಿಜೆಪಿ ಸೇರಿ ಸ್ಪರ್ಧಿಸಿದ್ದೇನೆಯೇ ಹೊರತು, ಸೋಲುವ ಭೀತಿಯಿಂದಲ್ಲ.

*ಪಕ್ಷದೊಳಗಿನ ಒಂದು ಗುಂಪಿನ ವಿರೋಧ ನಿಮ್ಮ ಗೆಲುವಿನ ಓಟಕ್ಕೆ ಅಡ್ಡಿಯಾಗಬಹುದೇ?

ಬಿಜೆಪಿ ಸೇರುವುದಕ್ಕೆ ಮುಂಚೆ ಅಲ್ಲಿ ನಡೆದ ಬೆಳವಣಿಗೆಗೂ ನನಗೂ ಸಂಬಂಧವಿಲ್ಲ. ಅಲ್ಲದೆ, ಪಕ್ಷದಿಂದ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ನಾನು ಪಕ್ಷ ಸೇರಿದಾಗ, ನೀವು ಮುಂಚೆಯೇ ಬರಬೇಕಿತ್ತು ಎಂದು ಆ ಪಕ್ಷದ ನಾಯಕರು ಸ್ವಾಗತಿಸಿದ್ದಾರೆ. ವಿರೋಧದ ಮಾತೇ ಬರುವುದಿಲ್ಲ.

* ನೀವು ಯಾವುದೇ ಕೆಲಸ ಮಾಡಿಲ್ಲ ಎಂದು ವಿರೋಧಿಗಳು ಹೇಳುತ್ತಿದ್ದಾರಲ್ಲ?

ಕೆಲಸ ಮಾಡದಿದ್ದರೂ ಗೆಲ್ಲಿಸುವ ದಡ್ಡರಲ್ಲ ಶಿಕ್ಷಕರು. ಸಚಿವನಾಗಿದ್ದಾಗ ವರ್ಗಾವಣೆ ನೀತಿ ಜಾರಿಗೆ ತಂದು, ಭ್ರಷ್ಟಾಚಾರ ಹಾಗೂ ಶೋಷಣೆಗೆ ಕಡಿವಾಣ ಹಾಕಿದ್ದೇನೆ. 23 ಸಾವಿರ ಶಿಕ್ಷಕರನ್ನು ವೇತನಾನುದಾನಕ್ಕೆ ಒಳಪಡಿಸಿದ್ದೇನೆ. ಪ್ರೌಢಶಾಲೆಗೂ ಬಿಸಿಯೂಟ ವಿಸ್ತರಣೆ, ಸೈಕಲ್ ವಿತರಣೆ, 48 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ಕೊಟ್ಟಿದ್ದೇನೆ. ಹೇಳಲು ಇನ್ನೂ ಬೇಕಾದಷ್ಟಿವೆ. ವಿರೋಧಿಗಳಿಗೆ ಪ್ರಚಾರಕ್ಕೆ ವಿಷಯವೇ ಇಲ್ಲ. ಹಾಗಾಗಿ, ಏನೂ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.

*ಹೊರಟ್ಟಿ ಅವರ ಜಾಯಮಾನಕ್ಕೆ ಬಿಜೆಪಿ ಹೊಂದುವುದಿಲ್ಲ ಎಂಬ ಮಾತುಗಳಿವೆ. ಇದನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ?

ವಿಚಾರಧಾರೆಯಲ್ಲಿ ಭಿನ್ನತೆಗಳಿದ್ದರೂ ಕ್ರಮೇಣ ಒಗ್ಗಿಕೊಂಡು ಹೋಗಬೇಕಾಗುತ್ತದೆ. ಯಾವುದೇ ಪಕ್ಷದಲ್ಲಿದ್ದರೂ ಶಿಕ್ಷಕರ ವಿಷಯದಲ್ಲಿರುವ ಬದ್ಧತೆ ಬದಲಾಗದು. ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಎಂದಿನಂತೆ ದನಿ ಎತ್ತುವೆ.

* ಶಿಕ್ಷಕರು ನಿಮಗೆ ಏಕೆ ಮತ ಹಾಕಬೇಕು? ಆಯ್ಕೆಯಾದರೆ ನಿಮ್ಮಿಂದ ಅವರು ಏನನ್ನು ನಿರೀಕ್ಷಿಸಬಹುದು?

ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಷತ್‌ನಲ್ಲಿ ಹಿಂದಿನಿಂದಲೂ ದನಿಯಾಗುತ್ತಾ ಬಂದಿದ್ದೇನೆ. ಮುಂದೆಯೂ ದನಿ ಎತ್ತುತ್ತಾ, ಸಮಸ್ಯೆಗಳಿಗೆ ಸ್ಪಂದಿಸಲು ನನಗೆ ಮತ ಹಾಕಿ ಪರಿಷತ್‌ಗೆ ಕಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.