ADVERTISEMENT

ಸಾಹಿತಿ ಬಾನು ಮುಷ್ತಾಕ್ ಸಂದರ್ಶನ: ಕೆಂಡ ಹಾಯ್ದು ಹಿಂದಿರುಗಿ ನೋಡಿದಂತೆ...

ಅಗ್ನಿಪರೀಕ್ಷೆ ಒಡ್ಡಿದಾಗ ಜನರೇ ಕೈ ಹಿಡಿದು ಮುನ್ನಡೆಸಿದರು

ಸಂಧ್ಯಾ ಹೆಗಡೆ
Published 28 ಫೆಬ್ರುವರಿ 2025, 0:05 IST
Last Updated 28 ಫೆಬ್ರುವರಿ 2025, 0:05 IST
ಬಾನು ಮುಷ್ತಾಕ್‌
ಬಾನು ಮುಷ್ತಾಕ್‌   

ಮಂಗಳೂರು: ‘ಬುಕರ್’ ಇದು ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ. ಇಡೀ ಸಾಹಿತ್ಯ ಲೋಕವೇ ಕುತೂಹಲದಿಂದ ನಿರೀಕ್ಷಿಸುವ ‘ಬುಕರ್’ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಈ ಬಾರಿ, ಕನ್ನಡ ಸಾಹಿತಿ ಹಾಸನದ ಬಾನು ಮುಷ್ತಾಕ್ ಅವರ ಸಣ್ಣಕಥೆಗಳ ಅನುವಾದಿತ ಕೃತಿ ‘ಹಾರ್ಟ್‌ ಲ್ಯಾಂಪ್’ ಆಯ್ಕೆಯಾಗಿರುವುದು ಕನ್ನಡ ಸಾರಸ್ವತ ಪ್ರಪಂಚದಲ್ಲಿ ಮಿಂಚು ಹರಿಸಿದೆ.

ಬಾನು ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯಲ್ಲಿರುವ ಕಥೆಗಳನ್ನು ದೀಪಾ ಭಸ್ತಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

‘ಕನ್ನಡಕ್ಕೆ ಸಂದ ಗೌರವ ಇದು’ ಎನ್ನುತ್ತಲೇ ಸಂಭ್ರಮವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಬಾನು ಮುಷ್ತಾಕ್ ಅವರ ಮನದಾಳದ ಮಾತುಗಳು ಇಲ್ಲಿವೆ. 

ADVERTISEMENT

ನೀವು ಕಥಾಲೋಕಕ್ಕೆ ತೆರೆದುಕೊಂಡ ನೆನಪುಗಳ ಮೆಲುಕು...

ಜೀವನದ ನಿರಂತರ ಪಯಣದಲ್ಲಿ ಏಳುಬೀಳು, ಸವಾಲುಗಳು, ಕಠಿಣ ಪರೀಕ್ಷೆಗಳು, ಸಾಫಲ್ಯ ಇದ್ದೇ ಇವೆ. ಇವೆಲ್ಲ ಪಯಣದ ಹೆಜ್ಜೆ ಗುರುತುಗಳು ಮತ್ತು ಅಗ್ನಿ ಪರೀಕ್ಷೆಗಳು. ಕೆಂಡ ಹಾಯ್ದು ಇಲ್ಲಿವರೆಗೆ ಬಂದು ನಿಂತು, ಹಿಂದಿರುಗಿ ನೋಡುವ ಸಂದರ್ಭ ಈಗ ದೊರಕಿದೆ. ಕಠಿಣ ಸವಾಲುಗಳನ್ನು ಎದುರಿಸಲು ಜನರೇ ಶಕ್ತಿ ತುಂಬಿದ್ದಾರೆ. ಕೆಲವರು ಅಗ್ನಿಪರೀಕ್ಷೆ ಒಡ್ಡಿರಬಹುದು, ಪಾರಾಗಲು ಜನರೇ ತಮ್ಮ ಕೈಗಳಿಂದ ಎತ್ತಿ ಮುನ್ನಡೆಸಿದ್ದಾರೆ.

‘ಹಾರ್ಟ್ ಲ್ಯಾಂಪ್‌’ನ ಹೂರಣ...

ಆಯಾ ಕಾಲಘಟ್ಟದ ಸವಾಲುಗಳು, ಮಹಿಳೆಯರ ಮೇಲೆ ಬೀರಬಹುದಾದ ಪರಿಣಾಮ, ಸಮಾಜದ ಶೋಷಕ ನಿಲುವು, ಪುರುಷ ಪ್ರಾಧಾನ್ಯತೆಯ ಆಕ್ರಮಣ, ಅದನ್ನು ಮೀರುವ ಹೆಣ್ಣು ಮಕ್ಕಳ ಪ್ರಯತ್ನ ಎಲ್ಲವೂ ಭಿನ್ನವಾಗಿ ಸೇರಿಕೊಂಡಿವೆ.

ಅನುವಾದದ ಸಂದರ್ಭದಲ್ಲಿ ಕೃತಿಕಾರರ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಅಭಿವ್ಯಕ್ತಿಗೊಳಿಸಲು ಸಾಧ್ಯವೇ?

ಕನ್ನಡದ ಗಡಿ ಮೀರಿ, ಜಗತ್ತಿನ ಅನೇಕ ಭೂ ಭಾಗಗಳ ಸಹೃದಯಿ ಓದುಗರೊಂದಿಗೆ ನನ್ನ ವಿಚಾರಧಾರೆಯ ವಿನಿಯಮ ಇಂಗ್ಲಿಷ್ ಅನುವಾದದಿಂದಾಗಿ ಸಾಧ್ಯವಾಗಿದೆ. ಮೂಲ ಕೃತಿಯಲ್ಲಿರುವ ಅರೆಬಿಕ್, ಉರ್ದು ಪದಗಳು, ಕನ್ನಡ ಸೊಗಡಿನ ಪದಗುಚ್ಚಗಳನ್ನು ಅನುವಾದಕರು ಹಾಗೂ ಪ್ರಕಾಶಕರು ಯಥಾವತ್ ಉಳಿಸಿಕೊಂಡಿದ್ದಾರೆ. ಕೃತಿಯ ಅನುವಾದಿತ ರೂಪದ ಬಗ್ಗೆ ಸಂತೃಪ್ತಿಯಿದೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮುಸ್ಲಿಂ ಮಹಿಳೆಯರ ಪ್ರಮಾಣ ಇಳಿಮುಖವಾದಂತೆ ಅನ್ನಿಸುತ್ತದೆಯೇ?

ಹಾಗೆನ್ನಲು ಆಗದು. ಮುಸ್ಲಿಂ ಯುವ ಸಮೂಹ ಬರವಣಿಗೆಯಲ್ಲಿ ಭರವಸೆ ಮೂಡಿಸಿದೆ. ಅವರಲ್ಲಿ ಅನೇಕ ಹೆಣ್ಣು ಮಕ್ಕಳೂ ಸೇರಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಪುಸ್ತಕ ಪ್ರಕಟಿಸಿರುವ ಮುಸ್ಲಿಂ ಬರಹಗಾರರ ಪಟ್ಟಿ ಮಾಡಿದಾಗ 600ಕ್ಕೂ ಹೆಚ್ಚು ಹೆಸರುಗಳು ಇದ್ದವು. ವೈಯಕ್ತಿಕವಾಗಿ ಪ್ರಕಟಗೊಳ್ಳುವ ಕೃತಿಗಳು ವ್ಯವಸ್ಥಿತವಾಗಿ ಓದುಗರ ಕೈ ಸೇರುವ ಕಾರ್ಯ ಆಗಬೇಕಾಗಿರುವ ತುರ್ತು.

ಶಿಕ್ಷಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಸಂಪ್ರದಾಯವಾದಿತನ ಹೆಚ್ಚುತ್ತಿದೆಯೇ?

ಹೌದು, ಅತಿರೇಕವಾದ ಕೋಮುವಾದ, ಒಂದು ಕೋಮುವಾದ ಇನ್ನೊಂದು ಕೋಮುವಾದಕ್ಕೆ ಉತ್ತೇಜನ ನೀಡುವಂತಹ, ಕೋಮುವಾದವನ್ನೇ ವಿಜೃಂಭಿಸುವ ಪರಿಸ್ಥಿತಿಗೆ ನಾವು ಸಾಕ್ಷಿಗಳಾತ್ತಿದ್ದೇವೆ. ಕೋಮುವಾದ ಹೆಚ್ಚಾದಂತೆ, ಕೆಲವು ರಾಜಕೀಯ ಪಕ್ಷಗಳಿಗೆ, ಕೆಲವರ ರಾಜಕಾರಣಕ್ಕೆ ಅನುಕೂಲವೂ ಆಗಿದೆ. ಹೀಗಾಗಿ, ಕೋಮುವಾದ ಹೆಚ್ಚಿಸುವ ತಂತ್ರಗಾರಿಕೆ, ಸುಳ್ಳು ಸುದ್ದಿ ಹರಡುವಿಕೆ, ಜನರನ್ನು ಒಡೆದು ಮತ ಪಡೆಯುವ ಒಂದು ಪದ್ಧತಿ ಢಾಳಾಗಿ ಗೋಚರಿಸುತ್ತಿದೆ. ಕೆಲವು ರಾಜಕಾರಣಿಗಳು ಪರಸ್ಪರ ವರ್ಗಗಳ ನಡುವೆ ಅಪನಂಬಿಕೆ, ದ್ವೇಷ ಹೆಚ್ಚಿಸುತ್ತ ತಮ್ಮ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಮುಕ್ತ ಅಭಿವ್ಯಕ್ತಿ ಮತ್ತು ಇಂದಿನ ಕಾಲಘಟ್ಟ ಇವನ್ನು ಹೇಗೆ ವಿಶ್ಲೇಷಿಸುವಿರಿ?

ಸಾಹಿತ್ಯದಲ್ಲಿ ಮುಕ್ತ ಅಭಿವ್ಯಕ್ತಿಗೆ ಯಾವತ್ತೂ ಅವಕಾಶ ಇರಲಿಲ್ಲ. ಪ್ರಭುತ್ವದ ಆಶಯಗಳಿಗೆ, ಸಮಾಜದ ಧೋರಣೆಗಳಿಗೆ ಅನುಗುಣವಾಗಿ ಬರೆಯುವ ಒಂದು ವರ್ಗ ಲಾಗಾಯ್ತಿನಿಂದ ಇದೆ. ಪ್ರಭುತ್ವದ ಆದೇಶಗಳಿಗೆ ಮಣಿಯದೆ, ವೈಚಾರಿಕತೆಯನ್ನು ನಿಷ್ಠುರವಾಗಿ ಅಭಿವ್ಯಕ್ತಿಸಿದ ಅನೇಕ ವ್ಯಕ್ತಿಗಳು ಆಯಾ ಕಾಲದಲ್ಲಿ ಬಂದು ಹೋಗಿದ್ದಾರೆ. ಆ ರೀತಿಯ ಅಭಿವ್ಯಕ್ತಿಯಿಂದಾಗಿ ಕೆಲವರು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಇತಿಹಾಸದಲ್ಲಿ ಇವೆಲ್ಲ ಇದ್ದೇ ಇವೆ. ಸಾಕ್ರೆಟಿಸ್‌ಗೆ ವಿಷ ಕುಡಿಸಿಲ್ಲವೇ? ಪ್ರತಿ ಕಾಲದಲ್ಲೂ ಈ ರೀತಿಯ ಅಗ್ನಿಪರೀಕ್ಷೆಗಳು ವೈಚಾರಿಕತೆಯುಳ್ಳ ಸಾಹಿತಿಗಳಿಗೆ ಎದುರಾಗಿವೆ. ಅದನ್ನು ಮೀರಿ ನಿರ್ಭಿಡೆಯಿಂದ ಹೇಳುವ ಸಾಹಿತಿಗಳು ಎಲ್ಲ ಕಾಲದಲ್ಲೂ ಇದ್ದಾರೆ.

ನಿಮ್ಮ ಕೃತಿ ‘ಬುಕರ್’ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆಯಾಗಬಹುದೆಂಬ ನಿರೀಕ್ಷೆ ಇತ್ತಾ?

‘ಹಾರ್ಟ್‌ ಲ್ಯಾಂಪ್’ ಕೃತಿಯನ್ನು ಅಭಿರುಚಿ ಪ್ರಕಾಶನ ಪ್ರಕಟಿಸಿದೆ. ಪ್ರಕಾಶಕರು ‘ಬುಕರ್‌’ಗೆ ಕಳುಹಿಸಿದ್ದಾರೆ ಎನ್ನುವ ಮಾಹಿತಿಯೇ ಇರಲಿಲ್ಲ ‘ಲಾಂಗ್‌ ಲಿಸ್ಟ್‌’ ಘೋಷಣೆ ಆದಾಗಲೇ ನನ್ನ ಅರಿವಿಗೆ ಬಂದಿದ್ದು. ಈ ಪಟ್ಟಿಯಲ್ಲಿರುವ 13 ಕೃತಿಗಳಲ್ಲಿ ಆರು ಕೃತಿಗಳು ‘ಶಾರ್ಟ್ ಲಿಸ್ಟ್‌’ ಆಗಿ ಅವುಗಳಲ್ಲಿ ಒಂದು ಕೃತಿ ಬಹುಮಾನಕ್ಕೆ ಆಯ್ಕೆಯಾಗಿ ಏಪ್ರಿಲ್ 8ರಂದು ಅದು ಘೋಷಣೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.