ಪಿ. ಪ್ರದೀಪ್ ಕುಮಾರ್
101 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಸುದ್ದಿಯಲ್ಲಿದೆ. ಬ್ಯಾಂಕ್‌ನ ಎಂ.ಡಿ ಮತ್ತು ಸಿಇಒ ಹುದ್ದೆಗೆ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ‘ವೈಯಕ್ತಿಕ ಕಾರಣ’ಗಳಿಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಶೇಖರ್ ರಾವ್ ರಾಜೀನಾಮೆ ನೀಡಿದ್ದಾರೆ.
ಇವರಿಬ್ಬರ ರಾಜೀನಾಮೆಯ ನಂತರ ಬ್ಯಾಂಕ್‌ನ ಷೇರುಮೌಲ್ಯವು ಒಂದು ದಿನದ ವಹಿವಾಟಿನ ನಡುವಿನಲ್ಲಿ ಶೇಕಡ 8ರವರೆಗೂ ಇಳಿಕೆ ಕಂಡಿತ್ತು. ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಇಒ ನಡುವೆ ಹೊಂದಾಣಿಕೆ ಬಾರದ ಕಾರಣಕ್ಕೆ ಈ ರಾಜೀನಾಮೆ ಎಂಬ ಮಾತುಗಳು ಇವೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್‌ನ ಆರ್ಥಿಕ ಸ್ಥಿತಿಯ ಬಗ್ಗೆ ‘ಆತಂಕ’ದ ಮಾತುಗಳೂ ಹರಿದಾಡಿವೆ.
ಈ ಹೊತ್ತಿನಲ್ಲಿ ಬ್ಯಾಂಕ್‌ನ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ಬ್ಯಾಂಕ್ ಆರ್ಥಿಕವಾಗಿ ಸುಭದ್ರವಾಗಿದೆ, ಹೂಡಿಕೆದಾರರಿಗೆ ಹಾಗೂ ಠೇವಣಿದಾರರಿಗೆ ಆತಂಕ ಬೇಡ ಎಂದು ಹೇಳಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಕರ್ಣಾಟಕ ಬ್ಯಾಂಕ್ ಎಂ.ಡಿ ಹಾಗೂ ಸಿಇಒ ಹುದ್ದೆಗೆ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ರಾಜೀನಾಮೆ ನೀಡಿದ ನಂತರದ ಬೆಳವಣಿಗಳ ಬಗ್ಗೆ ಪ್ರತಿಕ್ರಿಯೆ ಏನು?
ಈ ಪ್ರಶ್ನೆಯನ್ನು ಆಧಾರ ಇಲ್ಲದೆ ಗದ್ದಲ ಮಾಡಿದವರ ಬಳಿಯೇ ಕೇಳಬೇಕು. ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಜನರು ಬದಲಾಗುವುದು ಹೊಸದೇನೂ ಅಲ್ಲ. ಬದಲಾವಣೆ ಆಗುತ್ತಲೇ ಇರುತ್ತದೆ.
ಬ್ಯಾಂಕ್‌ನ ಹಣಕಾಸಿನ ಸ್ಥಿತಿ ಹೇಗಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪರಿಶೀಲನೆ ನಡೆಸದೆ ಏನೇನೋ ಮಾಹಿತಿ ಹಂಚಿಕೊಳ್ಳಲಾಗಿದೆ. ಏಕೆ ಆ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಬ್ಯಾಂಕಿನ ನೆಲಗಟ್ಟು ಬಹಳ ಗಟ್ಟಿಯಾಗಿದೆ. ಬ್ಯಾಂಕಿಗೆ ಅಗತ್ಯ ಇರುವುದು ಬಂಡವಾಳ. ಆರ್‌ಬಿಐ ನಿಗದಿ ಮಾಡಿರುವ ಬಂಡವಾಳ ಮೀಸಲು ಅನುಪಾತ (ಸಿಎಆರ್) ಶೇಕಡ 11.5ರಷ್ಟು. ಆದರೆ ನಾವು ಮಾತ್ರ ಅದನ್ನು ಶೇಕಡ 13ರಷ್ಟು ಇರಿಸಬೇಕು ಎಂದು ತೀರ್ಮಾನ ಮಾಡಿದ್ದೆವು. ಹೀಗಿದ್ದರೂ, ಈ ವರ್ಷದ ಮಾರ್ಚ್ ವೇಳೆಗೆ ಅದು ಶೇ 19.85ರಷ್ಟು ಆಗಿದೆ. ಇನ್ನೂ ನಾಲ್ಕು ವರ್ಷಗಳಿಗೆ ಬೇಕಾಗುವಷ್ಟು ಬಂಡವಾಳ ನಮ್ಮ ಬಳಿ ಇದೆ. ಬ್ಯಾಂಕ್‌ನ ಬೆಳವಣಿಗೆಗೆ ಯಾವ ತೊಂದರೆಯೂ ಇಲ್ಲ. ಠೇವಣಿಗಳು ಬರುತ್ತಲೇ ಇವೆ. ಕೆಲವರ ಮನಸ್ಸಿನಲ್ಲಿ ಇದ್ದ ಆತಂಕ ನಿವಾರಣೆ ಆಗಿದೆ. ಲಾಭವೂ ಚೆನ್ನಾಗಿ ಇದೆ.
ಶರ್ಮ ಅವರು ಇದ್ದಕ್ಕಿದ್ದಂತೆ ಹೊರನಡೆಯಲು ಕಾರಣ ಏನು?
ಅವರಿಗೆ ಮುಂಬೈಗೆ ಮರಳಬೇಕಾಗಿತ್ತು, ಅದಕ್ಕೆ ಕೌಟುಂಬಿಕ ಕಾರಣಗಳು ಇದ್ದಿರಬಹುದು. ಅವನ್ನೆಲ್ಲ ನಾವು ಕೇಳಲು ಆಗುವುದಿಲ್ಲ. ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನಿಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಆದರೆ, ಲೆಕ್ಕಪರಿಶೋಧನೆ ವೇಳೆ ಕೆಲವು ವಿಷಯಗಳಿಗೆ ಆಕ್ಷೇಪ ಎತ್ತಲಾಗಿದೆ ಎಂದು ವರದಿಗಳು ಹೇಳುತ್ತಿವೆಯಲ್ಲ?
ಅದೊಂದು ಚಿಕ್ಕ ಮೊತ್ತ. ಅವೆಲ್ಲವೂ ಈಗ ಪರಿಹಾರ ಕಂಡಿವೆ.
ಬ್ಯಾಂಕ್‌ನ ಆಡಳಿತ ಮಂಡಳಿಯ ಅನುಮೋದನೆ ಪಡೆಯದೆ ಡಿಜಿಎಂ ಹುದ್ದೆಗೆ ನೇಮಕ ಮಾಡಿದ್ದವರನ್ನು, ಆಡಳಿತ ಮಂಡಳಿಯ ಆಕ್ಷೇಪದ ನಂತರದಲ್ಲಿ ಮತ್ತೆ ಎಜಿಎಂ ಆಗಿ ನೇಮಕ ಮಾಡಿದ್ದು ಏಕೆ?
ಡಿಜಿಎಂ ಹುದ್ದೆಗೆ ನೇಮಕ ಮಾಡಲು ಕೆಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ಅವುಗಳ ಪಾಲನೆ ಆಗಿರಲಿಲ್ಲ. ಹೀಗಾಗಿ, ನಾವು (ಆಡಳಿತ ಮಂಡಳಿ) ಅದನ್ನು ಅವರಿಗೆ ತಿಳಿಸಿದ್ದೆವು. ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದೆವು. ಅವರು ಎಜಿಎಂ ಆಗಿದ್ದರೆ ಸಾಕು ಎಂದು ನಂತರ ಆ ಹುದ್ದೆಗೆ ನೇಮಿಸುವ ತೀರ್ಮಾನ ತೆಗೆದುಕೊಂಡರು.
ಈಚಿನ ಬೆಳವಣಿಗೆಗಳಿಂದ ಹೂಡಿಕೆದಾರರ ವಿಶ್ವಾಸಕ್ಕೆ ಏಟು ಬಿದ್ದಿದೆಯೇ?
ರಾಜೀನಾಮೆಯ ಮರುದಿನ ಬ್ಯಾಂಕ್‌ನ ಷೇರು ಬೆಲೆ ಮೇಲೆ ತುಸು ಪರಿಣಾಮ ಆಗಿತ್ತು. ನಂತರದಲ್ಲಿ ಅಷ್ಟು ಪರಿಣಾಮ ಕಾಣುತ್ತಿಲ್ಲ. ಷೇರು ಮೌಲ್ಯ ಹೆಚ್ಚು ಕುಸಿದಿಲ್ಲ. ಹೂಡಿಕೆದಾರರ ವಿಶ್ವಾಸದ ಮೇಲೆ ಒಂದಿಷ್ಟು ಪರಿಣಾಮ ಆಗಿರಬಹುದು, ಅದನ್ನು ಇಲ್ಲ ಎನ್ನಲಾರೆ. ಆದರೆ ನಾನು ಹಲವರ ಬಳಿ ಮಾತನಾಡುತ್ತಿದ್ದೇನೆ. ಹೂಡಿಕೆದಾರರು ಭವಿಷ್ಯದತ್ತ ನೋಡುತ್ತಾರೆ. ಶರ್ಮ ಅವರು ಆರಂಭಿಸಿದ ಉಪಕ್ರಮಗಳನ್ನು ನಾವು ಮುಂದುವರಿಸುತ್ತೇವೆ. ಗುರಿ ತಲುಪಲು ಬೇಕಿರುವುದನ್ನೆಲ್ಲ ನಾವು ಮುಂದುವರಿಸುತ್ತೇವೆ. ಆತಂಕ ಬೇಡ.
ಶರ್ಮ ಅವರು ಬ್ಯಾಂಕಿನ ಸಿಇಒ ಆಗಿದ್ದ ಅವಧಿಯಲ್ಲಿ ಬ್ಯಾಂಕಿನ ಲಾಭ ಇಳಿಯಿತು, ವೆಚ್ಚಗಳು ಹೆಚ್ಚಾದವು. ಅಲ್ಲವೇ?
ನಾವು ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದೇವೆ ಎಂಬುದನ್ನು ಇಲ್ಲಿ ಹೇಳಬೇಕು. ಆರ್‌ಬಿಐ ಹೊಸ ಲೆಕ್ಕಾಚಾರದ ಕ್ರಮವೊಂದನ್ನು ಜಾರಿಗೆ ತಂದಿದೆ. ಅದರಿಂದಾಗಿ ₹130 ಕೋಟಿಯು ಬಂಡವಾಳ ಎಂದು ಪರಿಗಣನೆ ಆಗಿದೆ. ಲೆಕ್ಕಾಚಾರ ಕ್ರಮದಲ್ಲಿ ವ್ಯತ್ಯಾಸದಿಂದಾಗಿ ಹೀಗೆ ಆಗಿದೆ ಅಷ್ಟೇ.
ಹೊಸ ನಾಯಕ ಯಾವಾಗ? ಅವರು ಬ್ಯಾಂಕಿಗೆ ಹೊರಗಿನವರಾಗಿರುತ್ತಾರೋ?
ಒಳಗಿನವರು ಅಥವಾ ಹೊರಗಿನವರು ಎಂಬುದು ಇಲ್ಲಿ ಪರಿಗಣನೆ ಆಗುವುದಿಲ್ಲ. ನಾವು ಬ್ಯಾಂಕನ್ನು ಮುಂದೆ ನಡೆಸುವ ಪ್ರತಿಭೆಯನ್ನು ಹುಡುಕಬೇಕು. ಹೊಸ ನಾಯಕನ ಹುಡುಕಾಟಕ್ಕೆ 3–4 ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಮಧ್ಯಂತರ ಎಂ.ಡಿ ನೇಮಕಕ್ಕೆ ಹೆಸರನ್ನು ಆರ್‌ಬಿಐ ಒಪ್ಪಿಗೆಗೆ ಕಳುಹಿಸಿದ್ದೇವೆ.
ಶರ್ಮ ಅವರು ಕರ್ಣಾಟಕ ಬ್ಯಾಂಕಿನ ಸಿಇಒ ಹುದ್ದೆಗೆ ಹೊರಗಿನಿಂದ ನೇಮಕ ಆದವರಾದ ಕಾರಣಕ್ಕೆ ಬ್ಯಾಂಕಿನ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳಲು ಆಗಲಿಲ್ಲವೇ?
ಕರ್ಣಾಟಕ ಬ್ಯಾಂಕ್ ಇತಿಹಾಸದಲ್ಲಿ ಹೊರಗಡೆಯಿಂದ ಬಂದು ದೊಡ್ಡ ಹುದ್ದೆಗೆ ಏರಿದವರು ಇದ್ದಾರೆ. ಸೂರ್ಯನಾರಾಯಣ ಅಡಿಗರ ನಂತರ ಹಲವರು ಆ ರೀತಿ ಬಂದಿದ್ದು ಇದೆ. ಅನಂತಕೃಷ್ಣ ಪಿ. ಜಯರಾಮ ಭಟ್ ಎಂ.ಎಸ್. ಮಹಾಬಲೇಶ್ವರ ಅವರು ಇಲ್ಲಿನವರೇ ಆಗಿದ್ದರು. ಶರ್ಮ ಅವರು ಹೊರಗಿನಿಂದ ಬಂದವರು ಸಾಂಸ್ಕೃತಿಕವಾಗಿ ಸಮಸ್ಯೆ ಇತ್ತು ಎಂಬುದನ್ನು ನಾನು ಒಪ್ಪುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.