ADVERTISEMENT

VP ಚುನಾವಣೆಯಲ್ಲಿ ಸಂಖ್ಯೆ ಅಪ್ರಸ್ತುತ.. ನ್ಯಾ. ಬಿ.ಸುದರ್ಶನ ರೆಡ್ಡಿ ಸಂದರ್ಶನ

ಪ್ರಜಾವಾಣಿ ಸಂದರ್ಶನ

ಶೆಮಿನ್ ಜಾಯ್‌
Published 24 ಆಗಸ್ಟ್ 2025, 0:07 IST
Last Updated 24 ಆಗಸ್ಟ್ 2025, 0:07 IST
ಸುದರ್ಶನ ರೆಡ್ಡಿ
ಸುದರ್ಶನ ರೆಡ್ಡಿ   

ಜಗದೀಪ್‌ ಧನಕರ್‌ ಅವರ ದಿಢೀರ್‌ ರಾಜೀನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಎನ್‌ಡಿಎ ಮೈತ್ರಿಕೂಟವು ಸಿ.ಪಿ ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿದೆ. ನ್ಯಾ. ರೆಡ್ಡಿ ಅವರು ಉಪರಾಷ್ಟ್ರಪತಿ ಚುನಾವಣೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪ ಮತ್ತಿತರ ವಿಚಾರಗಳ ಬಗ್ಗೆ  ‘ಪ್ರಜಾವಾಣಿ’ ಜೊತೆ  ಮಾತನಾಡಿದ್ದಾರೆ.

–––––––

*ಬಹುಮತಕ್ಕೆ ಬೇಕಿರುವ ಸಂಖ್ಯೆಗಳು ನಿಮ್ಮ ವಿರುದ್ಧ ಇದ್ದರೂ ಉಮೇದುವಾರಿಕೆ ಸಲ್ಲಿಸಿದ್ದೀರಿ. ಇದರ ಅರ್ಥವೇನು?

ADVERTISEMENT

ಉಪರಾಷ್ಟ್ರಪತಿ ಚುನಾವಣೆಯು ಸಂಸದರನ್ನು ಒಳಗೊಂಡಿರುತ್ತದೆಯೇ ವಿನಾ ಪಕ್ಷಗಳನ್ನಲ್ಲ. ಹೀಗಾಗಿ ದೇಶದಲ್ಲಿ ಎಷ್ಟು ರಾಜಕೀಯ ಪಕ್ಷಗಳಿವೆ ಅಥವಾ ‘ಇಂಡಿಯಾ’ ಕೂಟದಲ್ಲಿ ಎಷ್ಟು ಪಕ್ಷಗಳಿವೆ ಎಂದು ಎಣಿಸುವ ಗೊಡವೆಗೆ ಹೋಗಿಲ್ಲ. ನನಗೆ ಮತ ಚಲಾಯಿಸುವಂತೆ ಸಂಸದರನ್ನು ಕೋರುತ್ತೇನೆ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲ್ಲಿ ಬಹುಮತದ ಸಂಖ್ಯೆ ಕುರಿತ ಪ್ರಶ್ನೆ ಅಪ್ರಸ್ತುತ. 

*ಎನ್‌ಡಿಎ ಅಭ್ಯರ್ಥಿ ತಮಿಳುನಾಡಿನವರು. ಹೀಗಾಗಿ ಕೆಲವರು ಈ ಚುನಾವಣೆಯನ್ನು ತಮಿಳು ಮತ್ತು ತೆಲುಗು ನಡುವಣ ಹಣಾಹಣಿ ಎಂದು ಕರೆಯುತ್ತಿದ್ದಾರೆ. ಈ ಸಂಕಥನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತ ಒಂದೇ. ಇಲ್ಲಿರುವುದು ಒಂದೇ ಪೌರತ್ವ. ನಾನು ಮತ್ತು ರಾಧಾಕೃಷ್ಣನ್‌ ಭಾರತೀಯರು. ನೀವು ಹೇಳಿದ ರೀತಿಯ ಸಂಕಥನವೇ ತಪ್ಪು.

*ನಾಮಪತ್ರ ಸಲ್ಲಿಕೆ ನಂತರ ಈ ಚುನಾವಣೆ ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಈ ಚುನಾವಣೆ ಏನು?

ನನಗೆ ಯಾವುದೇ ಅಜೆಂಡಾ ಇರಲಿಲ್ಲ. ಆದರೆ, ಅವರೇ ‌‘ನಮ್ಮ ಅಭ್ಯರ್ಥಿ 15 ವರ್ಷದವರಿದ್ದಾಗಲೇ ಆರ್‌ಎಸ್‌ಎಸ್‌ ಸೇರಿದ್ದರು. ಇದು ಸೈದ್ಧಾಂತಿಕ ಹೋರಾಟ’ ಎಂದು ಹೇಳಲು ಆರಂಭಿಸಿದರು. ನಂತರ ನಾನೂ, ‘ನಿಜ, ಇದು ಉದಾರ ಸಾಂವಿಧಾನಿಕ ಪ್ರಜಾಪ್ರಭುತ್ವವಾದಿಯ  ಮತ್ತು ಸರ್ವೋತ್ಕೃಷ್ಟ ಆರ್‌ಎಸ್‌ಎಸ್ ವ್ಯಕ್ತಿಯ ನಡುವಣ ಹೋರಾಟ ಆಗಲಿದೆ’ ಎಂದು ಪ್ರತಿಕ್ರಿಯಿಸಲು ಆರಂಭಿಸಿದೆ.

*ಇತ್ತೀಚೆಗೆ ತನಿಖಾ ಸಂಸ್ಥೆಗಳು ಸರ್ಕಾರದ ಕೈಗೊಂಬೆಗಳಾಗಿವೆ, ಮತ ಕಳವು ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುವಿರಿ?

ಮತದಾನದ ಹಕ್ಕು ಶಾಸನಬದ್ಧವಾದ ಹಕ್ಕಲ್ಲ; ಸಾಂವಿಧಾನವು ಖಾತರಿಪಡಿಸಿದ ಹಕ್ಕು. ಭಾರತ ವಿಭಜನೆಯ ಸಂದರ್ಭದಲ್ಲೂ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೂಲಕ ಮತದಾರರನ್ನು ಹೊರಗಿಡಲಾಗುತ್ತಿದೆ. ಇದು ಸಂವಿಧಾನದ ಉಲ್ಲಂಘನೆಯಲ್ಲವೇ?

*ನೀವು ನಕ್ಸಲಿಸಂ ಬೆಂಬಲಿಗರು ಎಂದು ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

‘ಸಲ್ವಾ ಜುಡೂಮ್‌’ ತೀರ್ಪು ನನ್ನ ತೀರ್ಪು ಅಲ್ಲ ಸುಪ್ರೀಂ ಕೋರ್ಟ್‌ನದ್ದು. ತೀರ್ಪನ್ನು ಬರೆದಿದ್ದು ನಾನು ಎಂಬುದು ನಿಜ. ನ್ಯಾಯಮೂರ್ತಿ ಎಸ್‌.ಎಸ್‌.ನಿಜ್ಜರ್‌ ಅವರೂ ನ್ಯಾಯಪೀಠದಲ್ಲಿ ನನ್ನೊಂದಿಗೆ ಇದ್ದರು. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ನನ್ನ ನಿವೃತ್ತಿ  ಬಳಿಕ ಈ ಕುರಿತ ತೀರ್ಪಿನ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು ಛತ್ತೀಸಗಢಕ್ಕೆ ಮಾತ್ರ ತೀರ್ಪು ಅನ್ವಯವಾಗುವಂತೆ ಸೀಮಿತಗೊಳಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ.  ಸಲ್ವಾ ಜುಡೂಮ್‌ ಈಗ ಅಸ್ತಿತ್ವದಲ್ಲೇ ಇಲ್ಲದ ಕಾರಣ ತೀರ್ಪು ಛತ್ತೀಸಗಢಕ್ಕೆ ಮಾತ್ರ ಅನ್ವಯವಾಗುವಂತೆ ಸೀಮಿತಗೊಳಿಸುವ ಅಗತ್ಯ ಇರಲಿಲ್ಲ. ಯಾವುದೇ ತೀರ್ಪನ್ನು ಮರುಪರಿಶೀಲಿಸಲು ಹಾಗೂ ಅದರ ಬಗ್ಗೆ ಟಿಪ್ಪಣಿ ಮಾಡಲು ಒಪ್ಪಿತವಾದ ವಿಧಾನವಿದೆ. ಇಂಥ ಸಂದರ್ಭದಲ್ಲಿ ತೀರ್ಪು ಬರೆದವರ ಕುರಿತಾಗಿ ಯಾವುದೇ ಟೀಕೆ–ಟಿಪ್ಪಣಿ ಮಾಡುವುದಿಲ್ಲ. ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕವಾಗಿ ತಮ್ಮ ತೀರ್ಪಿನ ಸಮರ್ಥನೆ ಮಾಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.