
ನುಡಿ ಬೆಳಗು
‘ಮಾನವ ಜನ್ಮ ದೊಡ್ಡದು’, ಹೌದು. ಆದರೆ ಮನುಷ್ಯ ಜನ್ಮ ಹೇಗೆ ಯಾವಾಗ ದೊಡ್ಡದಾಗುತ್ತದೆ ಎಂದು ಯೋಚಿಸುವವರು ಕಡಿಮೆಯೇ. ಹೊನ್ನು ಮಣ್ಣು ಹೆಣ್ಣಿನ ಬೆನ್ನು ಹತ್ತಿ ದೊಡ್ಡವರಾಗಲು ಹೋದವರ ಗತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಂತ ಅಂತಹವರ ಸಂಖ್ಯೆಯಲ್ಲಿ ಏನೇನೂ ಕಡಿಮೆಯಾಗಿಲ್ಲ. ಅತಿ ಎತ್ತರದ ಪ್ರತಿಮೆಗಳಿಂದ, ಬೃಹತ್ತಾದ ಕಟ್ಟಡಗಳಿಂದ ದೊಡ್ಡತನ ಸಾಧಿತವಾಗುತ್ತದೆ ಎಂದು ಭಾವಿಸುವ ಅವಿವೇಕವೇ ತುಂಬಿರುವ ವರ್ತಮಾನದಲ್ಲಿ ಮಾನವ ಜನ್ಮವನ್ನು ಎತ್ತರಿಸುವ ಸಾರ್ಥಕ ಪ್ರಯತ್ನಗಳು ವಿರಳವಾಗಿವೆ. ಅರಮನೆಯಿಂದ ಹೊರಗೆ ಹೋದ ಬುದ್ಧನ ಹಿರಿತನ ಮತ್ತು ಹೊರಗಿನಿಂದ ಅರಮನೆಗೆ ಬಂದು ಬಸವಣ್ಣ ಸಾಧಿಸಿದ ದೊಡ್ಡತನ ಬೇರೆ ಬೇರೆ ಕಾಲ, ಪ್ರದೇಶದ ವಿದ್ಯಮಾನಗಳಾಗಿರಬಹುದು. ಆಳದಲ್ಲಿ ಅವುಗಳ ಗತಿಶೀಲ ಗಮ್ಯ ಒಂದೇ ಆಗಿದೆ. ಸಮಾಜ ಅವರ ಚಿಕಿತ್ಸಕ ಸಂದೇಶವನ್ನು ನೀತಿ ಆದರ್ಶಗಳ ಸುವರ್ಣ ಚೌಕಟ್ಟಿನೊಳಗೆ ಅಡಗಿಸಿಟ್ಟು ದಿನನಿತ್ಯ ಅನುತ್ಪಾದಕ ಆರಾಧನೆಯಲ್ಲಿ ತೊಡಗಿದೆ. ಸಮಾನತೆಯನ್ನು ಸಾಮಾಜಿಕ ಅಧ್ಯಾತ್ಮದ ತತ್ವಕೇಂದ್ರವನ್ನಾಗಿ ರೂಪಿಸಿದ ಪ್ರಯೋಗಶೀಲತೆಯೇ ಅವರ ಹಿರಿತನಕ್ಕೆ ಪುರಾವೆ.
ಜೀವನಾನುಭವದ ಕುಲುಮೆಯಲ್ಲಿ ನಿರಂತರವಾಗಿ ರೂಪುಗೊಳ್ಳುವ ಮೌಲ್ಯನಿಷ್ಠೆಯಲ್ಲಿ ಜೀವಿಸುವುದು ‘ಹೀಗೆಯೇ ಬದುಕಬೇಕು’ ಎಂದು ಆದರ್ಶಗಳ ಟ್ರ್ಯಾಕ್ ನಿರ್ಮಿಸಿಕೊಂಡು ಅದರಿಂದ ಜಾರದ ಹಾಗೆ ಸರ್ಕಸ್ ಮಾಡುವುದಕ್ಕಿಂತ ಉತ್ತಮವಾದುದು. ಎಲ್ಲವೂ ಚೆನ್ನಾಗಿದ್ದಾಗ ಬದುಕು ಅರ್ಥವಾಗುವುದಿಲ್ಲ. ಇನ್ನೇನು ಜೀವನ ಮುಗಿಯುತ್ತಾ ಬಂದಿದೆ ಎನ್ನುವಾಗ ಅರ್ಥವಾಗುತ್ತದೆ. ಆದರೆ ಪ್ರಯೋಜನವಾಗುವುದಿಲ್ಲ. ಹಾಗಾಗಿ ಹಿರಿತನದ ಭ್ರಮೆಯಲ್ಲಿ ಜೀವನಯಾನ ಮುಗಿಸಬೇಕಾಗುತ್ತದೆ. ದೇಹಕ್ಕಾದ ವಯಸ್ಸಿನಿಂದ, ಗಳಿಸಿದ ಸಂಪತ್ತಿನಿಂದ, ಹೋರಾಡಿದ ಯುದ್ಧಗಳಿಂದ ಹಿರಿತನವನ್ನು ಕ್ಲೇಮ್ ಮಾಡುವುದು ಮತ್ತು ಅದನ್ನು ಪರಿಗಣಿಸುವುದು ಉತ್ತಮ ನಾಗರಿಕತೆಯ ಲಕ್ಷಣವಲ್ಲ. ಗಡ್ಡ ಬಿಟ್ಟವರೆಲ್ಲ ಋಷಿಗಳಾಗುವುದಿಲ್ಲ. ಹಾಗೆಯೇ ವ್ಯಕ್ತಿಯೊಬ್ಬನ ಒಳಗಿನ ಒಲುಮೆ ಹೊರಗಿನ ನಡವಳಿಕೆಗೆ, ಹೊರಗಿನ ಬಾಂಧವ್ಯ ಒಳಗಿನ ತುಡಿತಕ್ಕೆ ಪ್ರೇರಣೆಯಾಗುತ್ತದೆ.
ಉತ್ತಮ ಅಭಿರುಚಿಗಳಿಂದ ಮಾತ್ರ ಉತ್ತಮ ಚಿಂತನೆ ಹಾಗೂ ನಡವಳಿಕೆಗಳು ಹುಟ್ಟುತ್ತವೆ. ಹೊರಗಿನ ಬಾಂಧವ್ಯವನ್ನು ಗಟ್ಟಿಗೊಳಿಸದ ಒಳತುಡಿತಗಳಿಗೆ ಹಿರಿತನವೆಲ್ಲಿಂದ ಬಂದೀತು? ಜನಜೀವನ ಇಲ್ಲದ ಕಡೆ ಆಕೃತಿಗೊಂಡು ಕಾಲಿಕವಾಗಿ ಮೆರೆಯುವುದಕ್ಕಿಂತ ಕೃತಿಗೊಂಡು ಕಾಲಾತೀತವಾಗುಳಿಯುವುದು ಹಿರಿತನ.
ಕುವೆಂಪು ಕಂಡರಿಸಿದ ಶ್ರೀರಾಮಚಂದ್ರನ ಹಿರಿತನದ ಬಗೆ ಅಂತಹದ್ದು. ರಾವಣನನ್ನು ಕೊಂದ ಕಾರಣವೇ ಆತನ ಹಿರಿತನಕ್ಕೆ ಸಾಕ್ಷಿಯಾಗುವುದಾದರೆ ರಾಮನ ಮಹತ್ತಿಗೆ ಬೆಲೆ ಬಂದದ್ದಾದರೂ ಏನು? ಹಗೆತನವನ್ನೇ ಹಿರಿತನ ಎನ್ನುವುದಾದರೆ ಅವನ ಪುರುಷೋತ್ತಮಿಕೆಗೆ ಕುಂದಲ್ಲವೇ? ಹಿಂಸಾಮೋಹಕ್ಕೆ ಮರುಳಾದವರೆಲ್ಲ ರಾವಣನ ಕೊಲೆಗಾಗಿ ರಾಮನನ್ನು ಕೊಂಡಾಡಿದರೆ ವಿವೇಕಿಗಳಿಗೂ ಆ ಭ್ರಾಂತಿ ಯಾಕಿರಬೇಕು? ಶ್ರೀರಾಮ ದಯಾಪರನೂ ನಿಷ್ಕಾಮ ಪ್ರೇಮಿಯೂ ಆಗಿರುವುದು ಅವನ ಹಿರಿತನದ ಸಂಕೇತ. ಪೆರ್ಮೆಗೊಲ್ಮೆಯೆ ಚಿಹ್ನೆ! ಕಪಟವರಿಯದ ಎದೆಯೊಲುಮೆಯೇ ಅವನ ಒಳತುಡಿತ. ಅದನ್ನೇ ಹೊರಗೂ ಹಂಚಿದ. ಹಿರಿತನ ಮೆರೆದ. ಗುರುವಾದ. ಗುರುತರವಾಗಿ ಬದುಕಿದರೆ ಗುರುತನ. ಅನ್ಯವೆಂದೆಣಿಸದೆ ಅಪ್ಪಿದರೆ ಹಿರಿತನ.
ಒಲುಮೆ ತುಂಬಿದ ದಯೆಗೆ ದನಿಗೊಡದೆ ಬರಿಯ ಹೆಸರು ಜಪಿಸಿದರೆ ಬರುವ ಭಾಗ್ಯವೇನು? ಹಗೆ ಸಾಧಿಸಿದವರು ದೊಡ್ಡವರಾದ ಚರಿತ್ರೆ ಎಲ್ಲಿದೆ? ರಾವಣನಂಥವರನ್ನೂ ಉದ್ಧರಿಸುವ ಶ್ರೀರಾಮನ ದಯೆಗೆ ವರ್ತಮಾನದ ಹಿಂಸಾರುಚಿಯನ್ನು ತಗ್ಗಿಸುವ ಶಕ್ತಿಯಿದೆ. ವಿಂಗಡಿಸುವ ದ್ವೇಷ ಬೇಡ. ಒಗ್ಗೂಡಿಸುವ ಒಲುಮೆ ಬೇಕು. ಮಾನವ ಜನ್ಮ ದೊಡ್ಡದು ಎಂದು ನಂಬಿದವರ ಆದ್ಯತೆಯು ಆದರ್ಶ ರಾಮರಾಜ್ಯದ ಜೀವಾಳವಾಗಿರುವ ಒಲುಮೆಯೇ ಆಗಿರಬೇಕು. ದಯೆಯೇ ದೊಡ್ಡತನ. ಹಗೆಯೇ ಸಣ್ಣತನ. ಬಯಕೆ ತುಂಬಿದ ಬಾಳಿನಲ್ಲಿ ಒಲುಮೆಯ ಹೂ ಚೆಲ್ಲಿ ಬದುಕಿನ ಎತ್ತರವನ್ನು ಉತ್ತಮಗೊಳಿಸುತ್ತಾ ಸಾಗಬೇಕು. ಕುಳಿತುಣ್ಣುವ ಕಲರವದಲ್ಲಿ ಒಡಕು ಮಾತಿಗೇನು ಮರ್ಯಾದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.