
ನುಡಿ ಬೆಳಗು
ಓದಲು ದೂರದ ಪಟ್ಟಣಕ್ಕೆ ಹೋಗಿದ್ದ ಮಗ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿ ಊರಿಗೆ ಬಂದ. ಹಬ್ಬಗಳಲ್ಲಿ ಮಾತ್ರ ಹುಗ್ಗಿ ತಿನ್ನುತ್ತಿದ್ದ ಅಪ್ಪ ಅವ್ವರಿಗೆ ತಾನು ತಂದಿದ್ದ ಸಿಹಿ ತಿಂಡಿ ಕೊಟ್ಟ. ಆಸೆ ಪಟ್ಟು ಎಂದೂ ಹೊಸ ಬಟ್ಟೆ ಉಡದಿದ್ದ ಅವರಿಗೆ ಬಟ್ಟೆ ಬರೆಯನ್ನೂ ತಂದಿದ್ದ. ಅವರಿಗೆ ಈ ಯಾವುದರಿಂದಲೂ ಸಂತೋಷ ಉಂಟಾದಂತೆ ಕಾಣಲಿಲ್ಲ. ಅವ್ವ ಮಗನ ಮಾತು, ನಡತೆ ನೋಡುತ್ತಾ ಅಪರಿಚಿತನಂತೆ ಕಾಣುತ್ತಿದ್ದ ಅವನಿಗೆ ಕುಡಿಯಲು ನೀರನ್ನೂ ಕೊಡಲಿಲ್ಲ. ಅಪ್ಪ ಏನನ್ನೋ ಕಳೆದುಕೊಂಡವನಂತೆ ಹುಡುಕುತ್ತಿದ್ದ. ಇದ್ದಕ್ಕಿದ್ದಂತೆ ಹೊರಗೆ ಬಂದ ಅಪ್ಪ ಸೀದಾ ತಿಪ್ಪೆಗೆ ಬಂದು ಹುಲ್ಲು, ಸಗಣಿಯನ್ನೆಲ್ಲಾ ಗೆಬರಾಡಿದ. ಅಲ್ಲೇನು ಸಿಕ್ಕೀತು? ಅನ್ಯಮನಸ್ಕನಾಗಿದ್ದ ಅಪ್ಪ ವಿಪರೀತ ಮುಂಗೋಪಿ. ಮಗ ತಂದ ಬಟ್ಟೆ, ಅವನ ನೌಕರಿ, ಮಾತು ಕತೆಯೆಲ್ಲ ಜುಜುಬಿ ಎನ್ನುವಂತಿತ್ತು ಅವನ ವರ್ತನೆ. ಹಿಂದೊಮ್ಮೆ ತನಗೆ ಬಂದ ಸ್ಕಾಲರ್‌ಶಿಪ್ ಹಣವನ್ನು ಅಪ್ಪನಿಗೆ ಎಂ.ಒ ಮಾಡಿದ್ದ. ಅಪ್ಪನಿಗೆ ಕೆಟ್ಟ ಕೋಪ ಬಂದಿತ್ತು. ‘ನೀನು ನನಗೆ ದುಡ್ಡು ಕಳಿಸುವಂತಾದೆಯಾ?’ ಎಂದು ಪತ್ರ ಬರೆಸಿ ಆ ಹಣವನ್ನು ವಾಪಸ್ ಕಳಿಸಿದ್ದ. ಅಪ್ಪನ ಇಂಥ ವಿಕ್ಷಿಪ್ತ ವರ್ತನೆಯ ಅರಿವಿದ್ದ ಮಗ ಏನು ಕಳೆದಿದೆ? ಏನು ಹುಡುಕುತ್ತಿದ್ದೀಯ? ಅಂತ ಕೂಡ ಕೇಳಲಿಲ್ಲ. ತಾನು ಸಣ್ಣವನಿದ್ದಾಗಿನಿಂದಲೂ ಅಪ್ಪ ಅವ್ವ ಹೀಗೆ ವಿರುದ್ಧ ಧ್ರುವಗಳಂತೆ, ಭಾವಶೂನ್ಯರಂತೆ ಒಟ್ಟಾಗಿ ಬದುಕಿರುವುದನ್ನು ಕಂಡಿದ್ದ. ಪ್ರಶ್ನೆ ಮಾಡಿದರೆ ಇನ್ನೇನಾದರೂ ಎಡವಟ್ಟಾದೀತೆಂದು ಸುಮ್ಮನಿದ್ದ.
ಇವರಿಗೆ ಯಾವುದರಿಂದ ಖುಷಿ ಸಿಗಬಹುದು ಎಂದು ಯೋಚಿಸಿದ. ಅವ್ವ ಎಂದಿನಂತೆ ಕಸ ಮುಸುರೆ ಮಾಡಿಕೊಂಡಿದ್ದರೆ ಅಪ್ಪ ದನಕರು, ಕುಂಟೆ ಕೂರಿಗೆ ಅಂತ ದಿನ ದೂಡುತ್ತಿದ್ದ. ಕೆಲಸವೇ ಅವನ ಧ್ಯಾನ. ಬಿಡುವಾದಾಗೊಮ್ಮೆ ಕತೆ ಪುಸ್ತಕ ಹಿಡಿದುಕೊಂಡು ಓದುತ್ತಾ ತೂಕಡಿಸುವುದು ಅಪ್ಪನ ಅಭ್ಯಾಸ. ಅಪ್ಪ ತಿಪ್ಪೆಯಲ್ಲಿ ಹುಡುಕುತ್ತಿದ್ದುದು ಆ ಕತೆಯ ಪುಸ್ತಕವನ್ನೇ ಅಂತ ತಡವಾಗಿ ತಿಳಿಯಿತು. ಕುಳಿತಲ್ಲೇ ತೂಕಡಿಸುತ್ತಿದ್ದ ಅಪ್ಪನ ಅಭ್ಯಾಸಕ್ಕೆ ರೋಸಿ ಹೋಗಿ ಅವ್ವ ಆ ಪುಸ್ತಕವನ್ನು ಯಾರಿಗೂ ಕಾಣದಂತೆ ಎಸೆದಿದ್ದಳು.
ನಾವೆಲ್ಲರೂ ಒಂದು ಪುಟ್ಟ ಅವಧಿಗಾಗಿ ಈ ಮಣ್ಣಿಗೆ ಬಂದಿದ್ದೇವೆ. ಒಮ್ಮೆ ಬಂದಾದ ಮೇಲೆ ‘ನಾವು ಬಂದುದೆಲ್ಲಿಂದ?’ ಎಂದು ಕೇಳಿಕೊಳ್ಳುವುದು ತಡವಾಗುತ್ತದೆ. ಇದೀಗ ಬದುಕು ಹೇಗೋ ಶುರುವಾಗಿದೆ, ಇಲ್ಲಿನ ಸಂತೆ ಮುಗಿದ ಮೇಲೆ ಎಲ್ಲಿಗೆ ಹೋಗುತ್ತೇವೆ ಎಂದು ಕೇಳಿ ಕೊಳ್ಳುವುದು ಅವಸರವಾಗುತ್ತದೆ. ಆದರೆ ಬಂದ ಬದುಕನ್ನು ಬೊಗಸೆಯಲ್ಲಿಟ್ಟುಕೊಂಡು ಬಾಳಬೇಕಾದ ಜವಾಬ್ದಾರಿ ಬೇಕಲ್ಲ? ಅದು ಎಲ್ಲರಿಗೂ ಇರುವುದಿಲ್ಲ. ಕೆಲವರು ಅದನ್ನು ಬೆಚ್ಚಗೆ ಬಚ್ಚಿಟ್ಟುಕೊಳ್ಳುತ್ತಾರೆ. ಮತ್ತೆ ಕೆಲವರು ಕೈಚೆಲ್ಲಿ ಕುಳಿತು ಕೊರಗುತ್ತಾರೆ. ಹೆತ್ತ ತಂದೆ ತಾಯಿಯ ಶವಸಂಸ್ಕಾರಕ್ಕೂ ದೂರದ ನೆಂಟರ ಹಾಗೆ ಬಂದು ಹೋಗುವವರು ಕೆಲವರು. ನಾವು ಬಂದು ಮಾಡುವುದೇನಿದೆ? ಇಂತಿಷ್ಟು ಕಾಸು ಕೊಡುತ್ತೇವೆ, ಕ್ರಿಯಾಕರ್ಮಗಳನ್ನು ನೀವೇ ಮುಗಿಸಿಬಿಡಿ ಎಂದು ದೂರದಿಂದಲೇ ಹೇಳಿ ಕೈ ತೊಳೆದುಕೊಳ್ಳುವವರು ಕೆಲವರು. ಊರು ತುಂಬಾ ಇಂಥ ಘಟನೆಗಳನ್ನು ಕೇಳಿ ನೋಡಿ ಹತಾಶರಾದ ಹೆತ್ತವರು ತಮಗೂ ಇಂಥದೇ ಗತಿ ಬಂದೀತೆಂದು ಅಧೀರರಾಗಿ ಬದುಕುತ್ತಾರೆ.
ಇರುವ ಬಟ್ಟೆ ಹರಿಯುವವರೆಗೆ ಬದುಕಿರುತ್ತೇವೆಯೋ ಇಲ್ಲವೋ ಎಂದು ಅನಿಸುತ್ತದೆ. ಬಡತನವನ್ನು ಇಷ್ಟಪಟ್ಟು ಆರಿಸಿಕೊಂಡವರು ಅವರು. ಒಂದಿದೆ ಒಂದಿಲ್ಲ ಎಂಬಂತೆ ಬದುಕಿದವರು. ಇಂಥದು ಬೇಕು ಅನ್ನಲಿಲ್ಲ, ಅಕ್ಕಪಕ್ಕದವರನ್ನು ಕಂಡು ಕರುಬಲಿಲ್ಲ, ಕೊರಗಲಿಲ್ಲ. ದುಡಿದು ತಿಂದರು. ಕಣ್ಣು ಬಿಟ್ಟರೆ ಅದೂ ಇದೂ ಕೆಲಸ. ದಣಿವು ದಪ್ಪತ್ತು ಅನ್ನಲಿಲ್ಲ. ಕಾಯಿಲೆ ಕಸಾಲೆ ಕಾಡಲಿಲ್ಲ. ಕಣ್ಣು ಮುಚ್ಚಿದರೆ ನಿದ್ದೆ. ಅದೇ ಅವರ ಸಿರಿಸಂಪತ್ತು. ಒಬ್ಬರ ಹಂಗಿಗೆ ಬೀಳದಂತೆ ಒಬ್ಬರಿಗೆ ಹೊರೆಯಾಗದೆ ಬದುಕಬೇಕು. ಮೌಲ್ಯಗಳ ಅರಿವೇ ಇಲ್ಲದವರು ಮೌಲ್ಯಯುತ ಬಾಳುವೆ ನಡೆಸುವುದು ನಮ್ಮ ನೆಲದ ಗುಣ. ದೇಹದಲ್ಲಿ ಜೀವ ಇರುವವರೆಗೆ ಅಷ್ಟೇ ಗೌರವ. ಕಷ್ಟಪಡುವ ದೇಹದಲ್ಲಿ ಜೀವ ಸುಖವಾಗಿರುತ್ತದೆ. ಜೀವಸುಖವೇ ದೇಹಕ್ಷೇಮವನ್ನು ಕಾಪಾಡುತ್ತದೆ. ಎಂಥ ಮಹಾನುಭಾವನಾದರೂ ಸತ್ತ ಮೇಲೆ ಹೆಣವೇ ತಾನೆ? ಒಂದಡಕೆಗೂ ಅದನ್ನು ಕೊಳ್ಳುವವರಿರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.