ADVERTISEMENT

ನುಡಿ ಬೆಳಗು: ಹೊಗಳಿ ಅಟ್ಟಕ್ಕೇರಿಸುವುದು

ರೇಣುಕಾ ನಿಡಗುಂದಿ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
   

‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ’ ಎಂದು ತನ್ನನ್ನು ಮೆಚ್ಚಿಕೊಂಡವರು ಬಣ್ಣ ಬಣ್ಣದ ಮಾತುಗಳಿಂದ ಹೊಗಳಿ ಬಣ್ಣಿಸುವ ಕ್ರಿಯೆಯನ್ನು ಹೊನ್ನಶೂಲದ ಉರುಳಿಗೆ ವ್ಯಕ್ತಿಯ ಕೊರಳನ್ನಿಕ್ಕಿ ಜೀವವನ್ನು ತೇಯುವ ಕ್ರಿಯೆಗೆ ಹೋಲಿಸಿದ್ದಾರೆ ಬಸವಣ್ಣ. ಅತಿಯಾದ ಹೊಗಳಿಕೆಗೆ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ.

ನಾವು ವಾಸಿಸುವ ನೆರೆಹೊರೆ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ಜನರಿರುವುದನ್ನು ಕಂಡಿದ್ದೇವೆ. ಹಲವರಿಗೆ ಇನ್ನೊಬ್ಬರಿಂದ ತಮ್ಮ ಕೆಲಸವಾಗಬೇಕು ಎಂದರೆ ಅವರನ್ನು ಅತಿಶಯವಾಗಿ ಹೊಗಳಿ ತಮ್ಮ ಕೆಲಸ ಸಿದ್ಧಿಸಿಕೊಳ್ಳುತ್ತಾರೆ. ಹೊಗಳಿದರಷ್ಟೇ ಕೆಲಸವಾಗುತ್ತದೆ ಎಂದು ಇತರರಿಗೂ ಉಪದೇಶಿಸುತ್ತಾರೆ. ಇನ್ನು ಅನೇಕರಿಗೆ ತಮ್ಮನ್ನು ಏಕೆ ಹೊಗಳುತ್ತಿದ್ದಾರೆ ಎನ್ನುವುದು ಬೇಗ ಗೊತ್ತಾಗುವುದಿಲ್ಲ. ಹೊಗಳಿದಾಗ ಉಬ್ಬಿಬಿಡುತ್ತಾರೆ. ಅಲ್ಲಿಗೆ ಹೊಗಳಿದವರ ಉದ್ದೇಶ ಈಡೇರಿದಂತೆಯೇ. ತಮ್ಮನ್ನು ಹೊಗಳಿದಾಗ ಆ ಹೊಗಳಿಕೆಗೆ ತಾವು ಅರ್ಹರಾಗಿದ್ದೇವೆಯೇ ಎಂಬ ಆತ್ಮವಿಮರ್ಶೆಯಲ್ಲಿ ತೊಡಗಿಕೊಂಡರೆ ಸತ್ಯ ತಾನಾಗಿಯೇ ತಿಳಿಯುತ್ತದೆ. ಕೆಲವರು ಹೊಗಳಿದವರ ಉದ್ದೇಶವನ್ನು ಲೆಕ್ಕಿಸದೇ ಅವರ ಹೊಗಳಿಕೆಗೆ ತಾವು ಅರ್ಹರು ಎಂದೇ ಹೆಮ್ಮೆಪಡುತ್ತಾರೆ. ಸಣ್ಣ ತೆಗೆಳಿಕೆಯನ್ನೂ ಸಹಿಸದ ಇವರು ಅಪಮಾನ ಹೊಂದಿದವರಂತೆ ಕುಗ್ಗುತ್ತಾರೆ. ಅಥವಾ ಹೊಗಳಿಕೆ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂಬ ಆತ್ಮಜ್ಞಾನವನ್ನು ಹೊಂದುತ್ತಾರೆ.

ಇಂಥ ಆತ್ಮಜ್ಞಾನ ಬಸವಣ್ಣನವರಿಗೆ ಇದ್ದುದರಿಂದಲೇ ಅವರು ಹೊಗಳಿಕೆಯನ್ನು ಹೊನ್ನಶೂಲ ಎಂದು ಕರೆದುದು. ಶೂಲ ಹೊನ್ನಿನದಾದರೇನು, ಕಬ್ಬಿಣದ್ದಾದರೇನು? ಅದು ಉಂಟುಮಾಡುವ ನೋವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗದು. ಹೊಗಳಿಕೆಗಿಂತ ಟೀಕೆಗೆ ಬಸವಣ್ಣ ಮಹತ್ವ ಕೊಟ್ಟರು.

ADVERTISEMENT

ಮೂರ್ಖ ಕಾಗೆ ಮತ್ತು ಕುತಂತ್ರಿ ನರಿಯ ಬಗ್ಗೆ ಈಸೋಪನ ಒಂದು ಜನಪ್ರಿಯ ಕಥೆ ನೆನಪಿರಬಹುದು. ಹಸಿದ ಕಾಗೆ ಬ್ರೆಡ್ ತುಂಡನ್ನು ಕಚ್ಚಿಕೊಂಡು ಬಂದು ಮರದ ಕೊಂಬೆಯ ಮೇಲೆ ಕುಳಿತು ಆನಂದದಿಂದ ತಿನ್ನುತ್ತಿರುತ್ತದೆ. ಅಲ್ಲಿಗೆ ಬಂದ ಹಸಿದ ನರಿ ಬ್ರೆಡ್ ತುಂಡನ್ನು ಕದಿಯಬೇಕೆಂದು ಕಾಗೆಯನ್ನು ಹೊಗಳತೊಡಗುತ್ತದೆ. ‘ಕಾಗಕ್ಕ, ನೀನೆಷ್ಟು ಚೆಂದ, ನಿನ್ನ ದನಿಯೆಷ್ಟು ಚೆಂದ, ನಿನ್ನ ದನಿಯನ್ನು ಕೇಳುವ ಆಸೆಯಾಗಿದೆ ಒಂದು ಹಾಡು ಹೇಳು’ ಎನ್ನುತ್ತದೆ. ನರಿಯ ಹೊಗಳಿಕೆಗೆ ಉಬ್ಬಿಹೋದ ಕಾಗೆ.. ಕಾ… ಕಾ ಎಂದು ಬಾಯಿ ತೆರೆಯುತ್ತದೆ. ತಕ್ಷಣ ಅದರ ಬಾಯಿಂದ ಬಿದ್ದ ಬ್ರೆಡ್ ಚೂರನ್ನು ಎತ್ತಿಕೊಂಡು ನರಿ ಓಡಿಹೋಗುತ್ತದೆ. ಆಗಲೇ ತಾನು ನರಿಯ ಮೋಸಕ್ಕೆ ಬಲಿಯಾದೆನಲ್ಲ, ಬ್ರೆಡ್ಡಿನ ಚೂರನ್ನೂ ಕಳೆದುಕೊಂಡೆನಲ್ಲ ಎಂಬ ಅರಿವಿನಿಂದ ಕಾಗೆ ದುಃಖಪಡುತ್ತದೆ.

ಈ ಕತೆಯನ್ನು ಕೇಳಿಯೇ ನಾವೆಲ್ಲರೂ ಬೆಳೆದಿದ್ದೇವೆ. ಈಗಲೂ ನಮ್ಮ ಸುತ್ತಲೂ ನರಿಯಂತಹ ಕುತಂತ್ರಿಗಳು, ಮೋಸಗಾರರು ತಮ್ಮ ಬಲೆ ಹೆಣೆಯುತ್ತಲೇ ಇರುತ್ತಾರೆ. ಇಂತಹ ಕುತಂತ್ರಿಗಳ ಬಣ್ಣದ ಮಾತಿನ ಹೊಗಳಿಕೆಗೆ ಮರುಳಾಗದೇ, ನಮ್ಮ ವಿವೇಕವನ್ನು ಕಳೆದುಕೊಳ್ಳದೇ ಇರಬೇಕು. ಹೊಗಳಿಕೆಗೆ ಮತ್ತು ತೆಗಳಿಕೆಗೆ ಪ್ರತಿಕ್ರಿಯಿಸಬೇಡ ಮೌನಿಯಾಗು, ವಿಷಯದ ಬಗ್ಗೆ ಮನನ ಮಾಡು, ದುಡುಕಬೇಡ ಎನ್ನುತ್ತಾನೆ ಕೃಷ್ಣ ಗೀತೋಪದೇಶದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.