ADVERTISEMENT

ನುಡಿ ಬೆಳಗು | ಪರಧನ ಮಡಿಲಲ್ಲಿ ಕಟ್ಟಿಕೊಂಡ ಕೆಂಡ

ಡಾ.ದಾದಾಪೀರ್ ನವಿಲೇಹಾಳ್
Published 28 ಸೆಪ್ಟೆಂಬರ್ 2025, 22:30 IST
Last Updated 28 ಸೆಪ್ಟೆಂಬರ್ 2025, 22:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಭಾರತದ ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿಯವರ ಪ್ರವೇಶದಿಂದ ಅಪೂರ್ವವಾದ ನೈತಿಕ ಬಲ ಬಂದಿತು. ಸಾರ್ವಜನಿಕ ಹಣಕಾಸಿನ ನಿರ್ವಹಣೆಯ ಕುರಿತಾದ ಅವರ ಪಾರದರ್ಶಕ ಹಾಗೂ ನಿಷ್ಠುರ ನಿಲುವುಗಳು ಆ ನೈತಿಕ ಬಲದ ಭಾಗವಾಗಿದ್ದವು. ಅಸ್ಪೃಶ್ಯತೆಯ ನಿರ್ಮೂಲನೆಯ ಕಾರ್ಯಕ್ರಮಗಳಿಗಾಗಿ ತಮ್ಮನ್ನು ಭೇಟಿ ಮಾಡಲು ಬಂದವರು ದೇಣಿಗೆ ನೀಡಲು ಅವರು ಆಗ್ರಹಿಸುತ್ತಿದ್ದರು. ಹಾಗೆ ನಗದು ರೂಪದಲ್ಲಿ ಕಾಣಿಕೆ ನೀಡುವವರು ಅದಕ್ಕಾಗಿ ಮೀಸಲಾಗಿದ್ದ ಹುಂಡಿಯಲ್ಲಿ ಹಣ ಹಾಕಿ ಸಂಬಂಧಿಸಿದ ಪುಸ್ತಕದಲ್ಲಿ ಅವರ ಹೆಸರು, ನೀಡಿದ ದೇಣಿಗೆಯ ವಿವರ ಬರೆಯಬೇಕಾಗಿತ್ತು. ಒಮ್ಮೆ ಧನಿಕರೊಬ್ಬರು ಬಂದಾಗ ಗಾಂಧೀಜಿಯವರು ಆಶ್ರಮದಲ್ಲಿ ಇರಲಿಲ್ಲ. ಕಸ್ತೂರಬಾ ಅವರನ್ನು ಕಂಡು ಮಾತನಾಡಿ ಹರಿಜನೋದ್ಧಾರ ಕಾರ್ಯಕ್ಕಾಗಿ ಎರಡು ರೂಪಾಯಿ ಕೊಟ್ಟರು. ಕಸ್ತೂರಬಾ ಆ ಧನಿಕರಿಗೆ ವಿವರ ಬರೆಯಲು ತಿಳಿಸಿ ತಮ್ಮ ಕೆಲಸದಲ್ಲಿ ನಿರತರಾದರು. ಮತ್ತು ಅವರು ಕೊಟ್ಟ ಎರಡು ರೂಪಾಯಿಗಳನ್ನು ಆಮೇಲೆ ಹುಂಡಿಯಲ್ಲಿ ಹಾಕಿದರಾಯಿತು ಎಂದುಕೊಂಡು ಹಾಕುವುದನ್ನು ಮರೆತುಬಿಟ್ಟರು. ಸಂಜೆ ಬಂದವರೇ ಗಾಂಧೀಜಿಯವರು ಅಂದು ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಸಿ ಪುಸ್ತಕದಲ್ಲಿ ಬರೆದ ವಿವರವನ್ನು ಪರಿಶೀಲಿಸಿದರು. ತಾಳೆಯಾಗಲಿಲ್ಲ. ಕಸ್ತೂರಬಾ ತಕ್ಷಣ ಬಂದು ಎರಡು ರೂಪಾಯಿ ಕೊಟ್ಟು ಅದನ್ನು ಹುಂಡಿಗೆ ಹಾಕುವುದನ್ನು ಮರೆತೆ ಎಂದರು. ಹಾಗೆ ಸಾರ್ವಜನಿಕ ಹಣವನ್ನು ಅದು ಸೇರಬೇಕಾದ ಜಾಗಕ್ಕೆ ಸೇರಿಸದೇ ತನ್ನಲ್ಲೇ ಇಟ್ಟುಕೊಳ್ಳುವುದು ಸ್ವಂತಕ್ಕೆ ಬಳಸಿಕೊಂಡಂತಹ ಅಪರಾಧ ಎಂದು ನಿರ್ಧರಿಸಿ ಎರಡು ರೂಪಾಯಿಗೆ ಮತ್ತೆರಡು ರೂಪಾಯಿ ದಂಡಹಾಕಿ ಕಸ್ತೂರಬಾ ಅವರಿಂದ ವಸೂಲಿ ಮಾಡಿ ವಿವರವನ್ನು ಪುಸ್ತಕದಲ್ಲಿ ದಾಖಲಿಸುತ್ತಾರೆ.

ವಿದೇಶಿ ಪತ್ರಕರ್ತೆಯೊಬ್ಬಳು ಗಾಂಧೀಜಿಯವರ ಸಂದರ್ಶನ ಮಾಡಿ ಕೊನೆಯಲ್ಲಿ ‘ನಿಮ್ಮ ದೃಷ್ಟಿಯಲ್ಲಿ ವಿಶ್ವಸುಂದರಿ ಯಾರು? ಅವರು ಹೇಗಿರಬೇಕು’ ಎಂದು ಪ್ರಶ್ನಿಸುತ್ತಾಳೆ. ಗಾಂಧೀಜಿ ತಕ್ಷಣ ‘ಕಸ್ತೂರಬಾ’ ಎಂದು ಉತ್ತರಿಸುತ್ತಾರೆ. ನಗುತ್ತಾ ಸಂದರ್ಶನ ಮುಗಿಸಿದ ಆಕೆ ಸೀದಾ ಕಸ್ತೂರಬಾ ಅವರ ಬಳಿ ಹೋಗಿ, ‘ಗಾಂಧೀಜಿಯವರು ಹೀಗೆ ಹೇಳಿದರು. ನಿಮ್ಮ ಅನಿಸಿಕೆ ಏನು’ ಎಂದು ಕೇಳುತ್ತಾಳೆ. ಕಸ್ತೂರಬಾ ‘ಗಾಂಧೀಜಿಯವರು ಸುಳ್ಳು ಹೇಳುವುದಿಲ್ಲ’ ಎನ್ನುತ್ತಾರೆ. ಮೋಹನದಾಸ ಕರಮಚಂದ ಗಾಂಧಿ ಮಹಾತ್ಮ ಗಾಂಧಿಯಾಗಿದ್ದು ಇಂಥ ನೂರಾರು ಕಾರಣಗಳಿಂದ. ಅದು ಎಷ್ಟೇ ಇರಲಿ, ಹೇಗೇ ಇರಲಿ ಪರಧನ ಎನ್ನುವುದು ಮಡಿಲಲ್ಲಿ ಕಟ್ಟಿಕೊಂಡ ಕೆಂಡದಂತೆ. ಸ್ವಂತಕ್ಕೆ ಬಳಸಿಕೊಂಡರೆ ಸುಡುತ್ತದೆ. ಸಾರ್ವಜನಿಕ ಉದ್ದೇಶಗಳಿಗಾಗಿ ಸಂಗ್ರಹಿಸಿದ ಒಂದೊಂದು ಪೈಸೆಯನ್ನೂ ಅದೇ ಉದ್ದೇಶಕ್ಕಾಗಿ ಬಳಸುವುದು ಮತ್ತು ಅದನ್ನು ಪಾರದರ್ಶಕ ವಿವರಗಳೊಂದಿಗೆ ಬಹಿರಂಗಗೊಳಿಸುವುದರಿಂದ ಸಂಗ್ರಹಿಸಿದವನ ನೈತಿಕ ಶಕ್ತಿ ಹೆಚ್ಚುತ್ತದೆ.

ADVERTISEMENT

‘ಹೊನ್ನಿನೊಳಗೊಂದೊರೆಯ, ವಸ್ತ್ರದೊಳಗೊಂದೆಳೆಯ, ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬಯಸಿದೆನಾದೊಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’ ಎಂಬಂತೆ ಬದುಕಿದ ನಾಡು ನಮ್ಮದು. ಮಂದಿರಕ್ಕೆ, ಮಸೀದಿಗೆ, ಹಬ್ಬಹರಿದಿನಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಂದಿಯ ದುಡ್ಡಿನಲ್ಲಿ ತಮ್ಮವರ ಉದ್ಧಾರ ಮಾಡುತ್ತಾ ಮೋಜು ನಡೆಸುವವರ ನಡುವೆ ನಾವಿದ್ದೇವೆ. ಅದು ಪಾಪಿಯ ಧನ, ದಕ್ಕುವುದಿಲ್ಲ ಸತ್ಪಾತ್ರಕ್ಕೆ ಸಲ್ಲುವುದಿಲ್ಲ ಎಂಬ ಯೋಚನೆ ಅವರಿಗೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಗಾಂಧೀಜಿಯವರಿಗೆ ಲೆಕ್ಕ ಕೊಡಿ ಎಂದು ಯಾರೂ ಕೇಳಿರಲಾರರು. ಆದರೆ ಅವರು ಕಂಡವರ ಹಣದ ವಿಷಯದಲ್ಲಿ ಇರಬೇಕಾದ ಪಾರದರ್ಶಕತೆಯ ಇಂಗಿತವನ್ನು ಗ್ರಹಿಸಿ ಜನ ಮೆಚ್ಚುವಂತೆ ಅಲ್ಲ ಮನ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದರು. ಅವರು ಸಾರ್ವಜನಿಕ ಬದುಕಿನಲ್ಲಿ ಸತ್ಯ ಅಹಿಂಸೆಗಳನ್ನು ತೀವ್ರವಾಗಿ ಪ್ರತಿಪಾದಿಸಿದರು. ನಾಲ್ಕು ಜನರ ಹಣದ ದುರುಪಯೋಗ ಮತ್ತು ಸ್ವಜನಪಕ್ಷಪಾತವನ್ನು ಅದಕ್ಕಿಂತ ತೀವ್ರವಾಗಿ ವಿರೋಧಿಸಿದರು.

ಸತ್ಯ ಅಹಿಂಸೆಗಳಿಂದ ಸಮಾಜದಲ್ಲಿ ಸಹಬಾಳ್ವೆಯ ಅಡಿಪಾಯ ಸುಭದ್ರವಾಗುತ್ತದೆ. ನಾಲ್ಕು ಜನರ ಹಣದ ದುರುಪಯೋಗ ಮತ್ತು ಸ್ವಜನಪಕ್ಷಪಾತದಿಂದ ಸಮಾಜದ ನೈತಿಕ ಮಟ್ಟ ಕುಸಿಯುತ್ತದೆ. ತಮ್ಮ ಬೆವರು ಕಂಡವರ ಪಾಲಿನ ಪಾನೀಯವಾದರೆ ಸಮಾಜ ನಂಬಿಕೆಯನ್ನು ಕಳೆದುಕೊಂಡು ಸಿನಿಕವಾಗುತ್ತದೆ. ಸಮಕಾಲೀನ ಬದುಕು ಹೀಗಾಗಬಾರದು ಎಂದಾದರೆ ಎಲ್ಲರೂ ತೀವ್ರ ಎಚ್ಚರದಿಂದ ಈ ಮೌಲ್ಯಗಳನ್ನು ಜೀವಿಸಬೇಕು. ಮತ್ತು ದಾಂಪತ್ಯದ ಸೊಗಸಿನಲ್ಲಿ ಜಗತ್ತಿನ ಸೌಂದರ್ಯವನ್ನು ಕಾಣಬೇಕು. ನೈತಿಕತೆಯನ್ನು ಅಣಕಮಾಡುವ ನಡವಳಿಕೆಗಳಿಂದ ಸಮಾಜ ಪತನಮುಖಿಯಾಗುತ್ತದೆ. ಮಹಾತ್ಮರ ಜಯಂತಿಗಳು ಬರೀ ಉತ್ಸವಗಳಂತಾಗದೆ ನಮ್ಮ ನೈತಿಕ ಪ್ರಜ್ಞೆಯನ್ನು ವಿಸ್ತರಿಸುವ ಕ್ಷಣಗಳೂ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.