
ನುಡಿ ಬೆಳಗು
ಪ್ರಾಂತ್ಯದುದ್ದಕೂ ದೊರೆ ಡಂಗುರ ಸಾರಿದನು. ಅದು ಅತ್ಯುತ್ತಮ ಚಿತ್ರಕಾರರಿಗೆ ನೀಡಲಾದ ಆಹ್ವಾನವಾಗಿತ್ತು. ಅದೊಂದು ಚಿತ್ರಕಲಾ ಸ್ಪರ್ಧೆಯ ಕರೆ. ಶಾಂತಿಯನ್ನು ಬಿಂಬಿಸುವ ಚಿತ್ರಗಳನ್ನು ಕಲಾವಿದರು ರಚಿಸಬೇಕಾಗಿತ್ತು. ಅದು ಶಾಂತಿಯ ಸ್ವರೂಪವನ್ನು ಗಟ್ಟಿಯಾಗಿ ಹಿಡಿದು ಕೊಡಬಲ್ಲ ಚಿತ್ರವಾಗಿರಬೇಕು. ಪ್ರಾಂತ್ಯದ ಒಳ ಹೊರಗೆ ಎಲ್ಲ ದಿಕ್ಕಿನಿಂದಲೂ ಕಲಾವಿದರು ತಮ್ಮ ತಮ್ಮ ಚಿತ್ರಗಳನ್ನು ಹೊತ್ತು ತಂದು ಆವರಣದಲ್ಲಿ ಪ್ರದರ್ಶನಕ್ಕೆ ಇಟ್ಟರು. ದೊರೆ ಮತ್ತವನ ತೀರ್ಪುಗಾರರ ತಂಡ ಒಮ್ಮೆ ಎಲ್ಲವನ್ನೂ ನೋಡಿ ಹೊರಟರು. ಅತ್ಯದ್ಭುತವಾದ ಚಿತ್ರಗಳಿದ್ದವು. ನೀರವ ನೀಲ ಆಕಾಶ, ಒಂಟಿ ಪರ್ವತ, ತಪಸ್ಸಿಗೆ ಕೂತ ಋಷಿ, ಗೋಡೆಗೆ ಒರಗಿ ಕೂತ ಹೆಣ್ಣು, ತಾಯಿಯ ಎದೆಹಾಲನ್ನು ಸವಿಯುತ್ತ ಮಲಗಿದ್ದ ಮಗು, ದಡವ ತಲುಪಿ ನಿಂತ ಮೌನ ನಾವೆ... ಹೀಗೆ ಒಂದಕ್ಕಿಂತ ಒಂದು ಅಪ್ರತಿಮ ಚಿತ್ರಗಳು ಅಲ್ಲಿ ಮೇಳೈಸಿದ್ದವು. ನೋಡುಗರೆಲ್ಲ ‘ಇದಕ್ಕೇ ಬಹುಮಾನ ಇದಕ್ಕೇ ಪುರಸ್ಕಾರ’ ಎಂದೆಲ್ಲ ಮಾತನಾಡುತ್ತ ಹೊರಟರು. ಬಹುಮಾನದ ಬಗ್ಗೆ ಎಲ್ಲರಲ್ಲೂ ಕುತೂಹಲ. ಮರುದಿನ ಪುರಸ್ಕಾರಕ್ಕೆ ಆಯ್ಕೆಯಾದ ಚಿತ್ರ ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿತು. ಯಾರೂ ನಿರೀಕ್ಷೆ ಮಾಡದ ಒಂದು ಚಿತ್ರಕ್ಕೆ ದೊರೆ ಬಹುಮಾನ ಘೋಷಿಸಿದ್ದ. ಬೇಕಾಬಿಟ್ಟಿ ಚಿತ್ರ, ಅನರ್ಹ ಚಿತ್ರ, ಒಬ್ಬ ಹುಚ್ಚ ಕಲಾವಿದ ಹೀಗೇ ಎಸೆದು ಹೋದ ಚಿತ್ರ ಎಂದೆಲ್ಲ ಜನ ಗೊಣಗುಟ್ಟಿದರೆ ಅನೇಕ ನಿರೀಕ್ಷಿತ ಅದ್ಭುತ ಕಲಾವಿದರು ದೊರೆಯ ಈ ತೀರ್ಪಿನಿಂದ ಗಾಸಿಗೊಂಡರು. ಏನೂ ಮಾತನಾಡದೆ ಹೊರಟರು. ಅತ್ಯಮೋಘ ಎಂದು ನಂಬಲಾಗಿದ್ದ ಅನೇಕ ಚಿತ್ರಗಳು ನೆಲ ಕಚ್ಚಿದ್ದವು.
ದಟ್ಟವಾದ ಕಾರ್ಮೋಡ, ಬೆಚ್ಚಿ ಬೀಳಿಸುವ ಮಿಂಚು ಸಿಡಿಲು ಗುಡುಗು, ನದಿಯೊಂದರ ಹುಚ್ಚು ಹರಿವು, ಕಿರುಚುವ ಬೆಟ್ಟದ ಮರಗಳು ಅಲ್ಲೇ ಒಂದು ಮರದಲ್ಲಿ ಹಕ್ಕಿಯೊಂದು ಗೂಡಿನಲ್ಲಿ ಕೂತಿತ್ತು. ಒಡಲನ್ನು ಹರವಿ ರೆಕ್ಕೆಗಳನ್ನು ಮುಚ್ಚಿ ಅವುಗಳಿಗೆ ಕಾವು ಕೊಡುತ್ತ ಮೌನವಾಗಿ ಕೂತಿತ್ತು. ಒಂದೇ ಚೌಕಟ್ಟಿನೊಳಗೆ ಕಲಾವಿದ ಇವೆಲ್ಲವನ್ನೂ ತಂದಿದ್ದರೂ ಮರಿಗಳಿಗೆ ಕಾವು ಕೊಡುತ್ತ ಕೂತ ಹಕ್ಕಿಯನ್ನು ಭಿನ್ನವಾಗಿ ಬಿಂಬಿಸಿದ್ದ. ಅದಕ್ಕೆ ಪುರಸ್ಕಾರ ದಕ್ಕಿತ್ತು. ತನ್ನ ಸುತ್ತಣ ಅಷ್ಟೆಲ್ಲಾ ಭಯಭೀತ ಘಟನೆಗಳು ಕುಣಿಯುತ್ತಿದ್ದರೂ ಆ ಹಕ್ಕಿ ಬೆದರದೆ ತನ್ನ ಗೂಡಲ್ಲಿ ಕೂತಿತ್ತು. ಹೊರಗಿನ ಯಾವುದೇ ತಲ್ಲಣಗಳು ಅದರ ಶಾಂತಿಯನ್ನು ನೆಮ್ಮದಿಯ ದಾರಿಯನ್ನು ಕಂಗೆಡಿಸಿರಲಿಲ್ಲ. ಇದೇ ತಾನೇ ಶಾಂತಿಯ ಅನನ್ಯ ಅಸ್ತಿತ್ವ. ಅದು ಹೊರಗೆ ಇಲ್ಲ ಒಳಗೆ ಇದೆ. ವೃಥಾ ಹುಡುಕಿಕೊಂಡು ಹೋಗುತ್ತೇವೆ. ದಣಿಯುತ್ತೇವೆ. ಸಂತೆಯ ಮಧ್ಯೆಯೂ ಸಂತ ತಪಸ್ಸನ್ನು ಕೈಗೊಳ್ಳಬಲ್ಲ.
ಆಂತರಿಕ ಶಾಂತಿ ಅಂತೀವಲ್ಲ ಅದರ ಇರುವಿಕೆ ನಾವೇ ಕಂಡುಕೊಳ್ಳಬೇಕೆಂಬ ಸತ್ಯವನ್ನು ಈ ಕಲಾವಿದ ಹಕ್ಕಿಯ ಮೂಲಕ ಗಹನವಾಗಿ ನಿರೂಪಿಸಿದ್ದ. ಕಾಣುವ ಕಣ್ಣು ಬೇಕು, ಅನುಭವಿಸುವ ಹೃದಯ ಇರಬೇಕು. ‘ಅಲ್ಲಿ ರಣ ದುಂಧುಬಿ, ಇಲ್ಲೊಂದು ವೀಣೆ, ಆ ಮಹಾಕಾವ್ಯ ಈ ಭಾವಗೀತೆ’ ಎಂದು ಹಾಡಿದ ಕೆ.ಎಸ್.ನ. ಅವರಾಗಲಿ, ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲ ಇದೆ ಈ ನಮ್ಮೊಳಗೆ’ ಎಂದು ಹಾಡಿದ ಜಿ.ಎಸ್.ಎಸ್. ಅವರಾಗಲಿ ಇಂತಹ ಒಳಗನ್ನೇ ಹೇಳಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.