ನುಡಿ ಬೆಳಗು
ಸಂತ ಕಬೀರನಿಗೆ ಕಮಾಲ್ ಎನ್ನುವ ಮಗನಿದ್ದ. ಕಬೀರ ವಿರಾಗಿ. ಅವನಿಗೆ ಭಗವಂತನಲ್ಲಿ ಶ್ರದ್ಧೆ ವಿನಾ ಮತ್ಯಾವುದೂ ಮುಖ್ಯವಲ್ಲ. ಕಬೀರರನ್ನು ನೋಡಲು ಬಂದವರು ಪ್ರೀತಿಯಿಂದ ಏನನ್ನಾದರೂ ಹಿಡಿದು ಬರುತ್ತಿದ್ದರು. ಹಣ್ಣು, ತರಕಾರಿ, ಧಾನ್ಯಗಳು ಹೀಗೆ... ಅಪರೂಪಕ್ಕೆ ಹಣ ಕೊಡುವವರೂ ಇದ್ದರು. ಕಬೀರರು ಯಾವುದನ್ನೂ ಸ್ವೀಕರಿಸುತ್ತಿರಲಿಲ್ಲ. ಆದರೆ, ಕಮಾಲ್ ಎಲ್ಲವನ್ನೂ ತೆಗೆದಿಟ್ಟುಕೊಳ್ಳುತ್ತಿದ್ದ. ಇದು ಕಬೀರರ ಗಮನಕ್ಕೂ ಬಂದಿತು. ಆತ ಮಗನನ್ನು ಕರೆದು ಹೇಳಿದರು: ‘ಯಾರಿಂದಲೂ ನಾವು ಏನನ್ನೂ ಸ್ವೀಕರಿಸಬಾರದು’ ಅದಕ್ಕವನು, ‘ನಾವೇನು ಬೇಡಲು ಹೋಗಿಲ್ಲವಲ್ಲ, ಕೊಟ್ಟಿದ್ದನ್ನು ತೆಗೆದು ಇಡುತ್ತಿದ್ದೇನೆ, ಮುಚ್ಚಿಡುತ್ತಿಲ್ಲ; ಯಾರು ಬೇಕಾದರೂ ತೆಗೆದುಕೊಂಡು ಹೋಗಲಿ’ ಎನ್ನುತ್ತಿದ್ದ. ಕಬೀರರಿಗೆ ಇದು ಸರಿಕಾಣಿಸದೆ, ‘ನೀನು ನನ್ನೊಂದಿಗೆ ಇರಬೇಡ’ ಎಂದುಬಿಟ್ಟರು. ಆತ ಬೇರೆ ಗುಡಿಸಲನ್ನು ಕಟ್ಟಿಕೊಂಡು ಇರತೊಡಗಿದ. ಯಾರಾದರೂ ಇದರ ಬಗ್ಗೆ ಕೇಳಿದರೆ ಕಬೀರರು, ‘ಅವನಿಗೆ ಹಣದ ಮೋಹ ಇದೆ, ಯಾರು ಏನನ್ನು ಕೊಟ್ಟರೂ ತೆಗೆದುಕೊಳ್ಳುತ್ತಾನೆ’ ಎನ್ನುತ್ತಿದ್ದರು.
ಇವೆಲ್ಲವನ್ನೂ ತಿಳಿದ ಕಾಶಿಯ ರಾಜ, ಅಂಥಾ ವಿರಾಗಿಗೆ ಇಂಥಾ ಮಗನೇ, ಪರೀಕ್ಷೆ ಮಾಡಿಯೇ ಬಿಡೋಣ ಎಂದು ಹೊರಡುತ್ತಾನೆ. ಕಮಾಲನ ಬಳಿಗೆ ಬಂದ ರಾಜ ತನ್ನ ಬಳಿಯಿಂದ ಒಂದು ಅತ್ಯಮೂಲ್ಯವಾದ ವಜ್ರವನ್ನು ಅವನಿಗಿತ್ತು, ‘ಜಗತ್ತಿನ ಅತ್ಯಂತ ದುಬಾರಿ ವಜ್ರವಿದು, ಸ್ವೀಕರಿಸಿ’ ಎನ್ನುತ್ತಾನೆ. ಕೈಲಿ ಹಿಡಿದು ನೋಡುತ್ತಾ ಕಮಾಲ್, ‘ತರೋನು ತಂದೆ, ಈ ಕಲ್ಲನ್ನೇಕೆ ತಂದೆ. ಇದನ್ನು ತಿನ್ನಲಿಕ್ಕಾಗುವುದಿಲ್ಲವಲ್ಲಾ’ ಎನ್ನುತ್ತಾನೆ. ರಾಜನಿಗೆ ಕಬೀರರು ತಮ್ಮ ಮಗನ ಬಗ್ಗೆಯೇ ಹಣದ ಮೋಹಿ ಎನ್ನುತ್ತಾರೆ. ಈತ ನೋಡಿದರೆ ವಜ್ರವನ್ನು ಕಲ್ಲೆನ್ನುತ್ತಾನಲ್ಲಾ ಎಂದು ಅಚ್ಚರಿಯಾಗಿ,‘ಇದು ವಜ್ರ, ಬಹು ಬೆಲೆಬಾಳುವಂಥದ್ದು, ಇದನ್ನು ತೆಗೆದು ಎಲ್ಲಿಡಲಿ’ ಎನ್ನುತ್ತಾನೆ. ಕಮಾಲ್ ನಗುತ್ತಾ, ‘ಆ ಕಲ್ಲನ್ನು ಎತ್ತಿಡುವ ಕಷ್ಟ ತೆಗೆದುಕೊಳ್ಳಬೇಡ. ಅದನ್ನಲ್ಲೇ ಬಿಡು’ ಎನ್ನುತ್ತಾನೆ. ಆದರೂ ಬಿಡದೆ ಅವನಿಗೆ ಕಾಣುವ ಹಾಗೆ ಗುಡಿಸಿಲಿನ ಒಂದು ಮೂಲೆಯಲ್ಲಿ ಸಿಕ್ಕಿಸಿ, ‘ನಾನು ಹೊರಟ ತಕ್ಷಣ ಇದನ್ನು ಇವನು ಎತ್ತಿಟ್ಟುಕೊಳ್ಳುತ್ತಾನೆ’ ಎಂದುಕೊಂಡು ಹೊರಡುತ್ತಾನೆ ರಾಜ.
ಆರು ತಿಂಗಳು ಬಿಟ್ಟು ಮತ್ತೆ ಕಮಾಲನನ್ನು ಪರೀಕ್ಷಿಸುವ ಸಲುವಾಗಿ ರಾಜ ಬರುತ್ತಾನೆ. ‘ನಾನು ನಿಮಗೆ ಕೊಟ್ಟಿದ್ದ ದಾನದ ಆ ಕಲ್ಲು ಎಲ್ಲಿ ಎನ್ನುತ್ತಾನೆ. ಕಮಾಲ್ ನಗುತ್ತಾ, ‘ಯಾವ ದಾನದ ಕಲ್ಲು’ ಎನ್ನುತ್ತಾನೆ. ಮೋಹಿಯಾದ ಈ ಮನುಷ್ಯ ಅದನ್ನು ತೆಗೆದಿಟ್ಟುಕೊಂಡು ನಾಟಕ ಆಡುತ್ತಿದ್ದಾನೆ ಎಂದುಕೊಂಡ ರಾಜ, ‘ಅದು ಅತ್ಯಂತ ಬೆಲೆಯುಳ್ಳ ವಜ್ರ, ನೀವು ತೆಗೆದುಕೊಂಡಿದ್ದೀರಿ’ ಎನ್ನುತ್ತಾನೆ. ಕಮಾಲ್ ನಗುತ್ತಾ, ‘ನೀನು ಎಲ್ಲಿಟ್ಟಿದ್ದೀಯೋ ಅಲ್ಲೇ ಇರಬೇಕು ನೋಡು’ ಎನ್ನುತ್ತಾನೆ. ತಾನಿಟ್ಟ ಕಡೆ ರಾಜ ಹೋಗಿ ನೋಡುತ್ತಾನೆ; ಅದಲ್ಲೇ ಇದೆ. ಕಮಾಲ್ ನಗುತ್ತಾ ಹೇಳುತ್ತಾನೆ, ‘ನನ್ನ ಬಳಿ ಬರುವವರು ಒಂದು ಹೊತ್ತಿನ ಊಟಕ್ಕೆ ಇಲ್ಲದವರು, ಅವರಿಗೆ ಇದರಿಂದ ಪ್ರಯೋಜನವಿಲ್ಲ. ಹಾಗಾಗಿ ಇದನ್ನು ನಾನು ಯಾರಿಗೂ ಕೊಡಲಿಲ್ಲ. ಇದರಿಂದ ಉಪಯೋಗಕ್ಕಿಂತ ಕಷ್ಟವೇ ಹೆಚ್ಚು’ ಎಂದನು. ಆಗ ರಾಜ ‘ಹಾಗಾದರೆ ನಿಮ್ಮ ತಂದೆ ನಿಮ್ಮನ್ನು ಮೋಹಿ ಎಂದೆಲ್ಲಾ ಹೇಳುತ್ತಾರಲ್ಲಾ, ನಿಮಗೆ ಈ ವಜ್ರದ ಮೇಲೆ ಮೋಹ ಹುಟ್ಟಲೇ ಇಲ್ಲವೇ’ ಎನ್ನುತ್ತಾನೆ. ಆಗ ಕಮಾಲ್, ‘ನನ್ನ ತಂದೆಗೆ ಜನಕ್ಕೆ ದೈವದ ಬಗ್ಗೆ ಹೇಳುವುದು ಮಾತ್ರ ಗೊತ್ತು. ಆದರೆ ನನಗೆ ಅವರ ಹಸಿವೆಯೂ ಗೊತ್ತು. ಯಾಕೆಂದರೆ, ನಾನು ಸಣ್ಣ ಹುಡುಗನಿದ್ದಾಗಿನಿಂದ ಹಸಿವನ್ನು ಅನುಭವಿಸಿದವನು. ಅಪ್ಪನಿಗೆ ಯಾವತ್ತೂ ಸಂಸಾರದ ಕಡೆಗೆ ಗಮನವೇ ಇರುತ್ತಿರಲಿಲ್ಲ. ಅಮ್ಮ ನಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದಳು. ಅವಳು ನನಗೆ ಹೇಳಿದ್ದಳು, ಮಗೂ ಮೊದಲು ಜೀವ ಉಳಿಯಬೇಕು, ಅದಕ್ಕೆ ಅನ್ನ ಬೇಕು. ಇದನ್ನು ಅರ್ಥ ಮಾಡಿಕೋ ಎಂದು. ಹಾಗಾಗಿ ಕೊಟ್ಟವರಿಂದ ದವಸ ಧಾನ್ಯ ಹಣ್ಣು ತರಕಾರಿಗಳನ್ನು ಸ್ವೀಕಾರ ಮಾಡುವೆ. ಅದನ್ನು ಸಮಾಜಕ್ಕೆ ಹಂಚುವೆ. ಇಂಥಾ ಬೆಲೆಬಾಳುವ ಕಲ್ಲುಗಳಿಂದ ಏನೂ ಪ್ರಯೋಜನವಿಲ್ಲ. ಯಾರಾದರೂ ವ್ಯಾಪಾರಿಯ ಹತ್ತಿರ ತೆಗೆದುಕೊಂಡು ಹೋದರೆ ಅದಕ್ಕೆ ಬೆಲೆ ಕೊಡುವ ಬದಲು ನನ್ನನ್ನೇ ಕಳ್ಳನನ್ನಾಗಿ ನೋಡುತ್ತಾರೆ. ಹೊಟ್ಟೆ ತುಂಬಿದವರಿಗೆ ಮಾತ್ರ ಇದೆಲ್ಲ’ ಎನ್ನುತ್ತಾನೆ.
ತತ್ವಶುದ್ಧಿಯ ಕಬೀರರಿಗಿಂತ ಕಮಾಲ್ ದೊಡ್ಡವನು, ಕಬೀರ ಅಧ್ಯಾತ್ಮದ ಹಸಿವನ್ನು ಕಂಡವರು; ಕಮಾಲ್ ಲೋಕದ ಹೊಟ್ಟೆಯ ಹಸಿವು ತಿಳಿದವನು. ಹೊಟ್ಟೆ ತುಂಬಿದ ಮೇಲೆ ಉಳಿದೆಲ್ಲವೂ- ಅದೇ ದೊಡ್ಡ ಅಧ್ಯಾತ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.