
ನುಡಿ ಬೆಳಗು
ಬನಾರಸಿನ ಸಣ್ಣ ಓಣಿಯೊಂದರಲ್ಲಿ ಕಬೀರನ ಕೈಮಗ್ಗದ ಸದ್ದು ಕೇಳಿಬರುತ್ತಿತ್ತು. ‘ಟಕ್ ಟಕ್ ಟಕ್…’ ಆತ ಹತ್ತಿ ನೇಯುವ ಕೆಲಸದಲ್ಲೇ ತಲ್ಲೀನನಾಗಿದ್ದ. ಆದರೆ ಅವನ ಮನಸ್ಸು ಕೇವಲ ಕೆಲಸದಲ್ಲಿ ಇರಲಿಲ್ಲ — ಪ್ರತಿ ನೇಯುವ ನೇಯ್ಗೆಯ ನುಣುಪಿನಲ್ಲಿ ಅವನು ದೇವರನ್ನು ನೆನೆಯುತ್ತಿದ್ದ. ಒಂದು ಬೆಳಿಗ್ಗೆ ಇಬ್ಬರು ಪಂಡಿತರು ಅಲ್ಲಿ ಬಂದರು. ಒಬ್ಬ ಹಿಂದೂ ಬ್ರಾಹ್ಮಣ, ಮತ್ತೊಬ್ಬ ಮುಸ್ಲಿಂ ಖಾಜಿ.
ಇಬ್ಬರೂ ಜಗಳಾಡುತ್ತಿದ್ದರು: ‘ನಮ್ಮ ಧರ್ಮವೇ ಶ್ರೇಷ್ಠ’
‘ಮಸೀದಿಯಲ್ಲಿ ನಮಾಜು ಮಾಡಿದರೆ ಮಾತ್ರ ಮೋಕ್ಷ’
‘ಗಂಗೆಯಲ್ಲಿ ಸ್ನಾನ ಮಾಡಿದರೆ ಮಾತ್ರ ಪಾಪ ನಿವಾರಣೆ’
ಕಬೀರ ನಗುತ ಕೇಳಿಸಿಕೊಳ್ಳುತ್ತಿದ್ದ. ಅವರು ಕಬೀರನತ್ತ ತಿರುಗಿ ಕೇಳಿದರು: ‘ಓ ಕಬೀರಾ, ನೀನು ಹಿಂದೂನಾ ಅಥವಾ ಮುಸ್ಲಿಮನಾ?’
ಕಬೀರ ನಿಧಾನವಾಗಿ ಹೇಳಿದ: ‘ನಾನು ಈ ಹತ್ತಿಯ ನೂಲಿನಂತಿರುವೆ — ಹತ್ತಿ ನೂಲುವವರಲ್ಲಿ ಯಾರಾದರೂ ಕೇಳಿದ್ದಾರೇನು ಅದು ಹಿಂದೂ ಹತ್ತಿಯೆ, ಮುಸ್ಲಿಂ ಹತ್ತಿಯೆ’ ಎಂದು. ಕಬೀರನ ಮಾತು ಕೇಳಿ ಪಂಡಿತರು ಗಾಬರಿಯಾದರು.
ಕಬೀರ ಮುಂದೆ ಹೇಳಿದ: ‘ದೇವರು ಎಂದರೆ ಗಂಗೆಯ ನೀರಲ್ಲ ಅಥವಾ ಕಾಬಾದ ಮಸೀದಿಯಲ್ಲ. ಆತನು ಮನುಷ್ಯನ ಹೃದಯದಲ್ಲಿದ್ದಾನೆ. ಹೃದಯವನ್ನು ಶುದ್ಧಗೊಳಿಸದೆ ಹೊರಗಿನ ವಿಧಿಗಳು ವ್ಯರ್ಥ.’ ಕಬೀರನ ಮಾತುಗಳು ಪಂಡಿತರಿಗೆ ರುಚಿಸಲಿಲ್ಲ. ಅವರು ಕಬೀರನನ್ನು ನಿಂದಿಸಿ ಹೊರಟರು.
ಕಾಲ ಕಳೆಯಿತು. ಒಂದು ದಿನ ಬ್ರಾಹ್ಮಣನ ಮಗ ಅನಾರೋಗ್ಯದಿಂದ ಸತ್ತು ಹೋದ. ಖಾಜಿಯ ಮಗಳು ಕೂಡ ಅದೇ ರೋಗದಿಂದ ಬಾಧಿತಳಾಗಿದ್ದಳು. ಎರಡೂ ಕುಟುಂಬಗಳು ದುಃಖದಲ್ಲಿ ಮುಳುಗಿದವು. ಅವರೆಲ್ಲ ಕಬೀರನ ಬಳಿ ಬಂದರು. ‘ನಮಗಾಗಿ ಪ್ರಾರ್ಥನೆ ಮಾಡಿ, ನಮ್ಮ ಮಕ್ಕಳನ್ನು ಉಳಿಸಿಕೊಡು’ ಎಂದರು. ಕಬೀರ ಶಾಂತವಾಗಿ ನಗುತ್ತ ಹೇಳಿದ: ‘ಈಗ ನಿಮಗೆ ಗೊತ್ತಾಯಿತೇ, ಧರ್ಮಕ್ಕೆ ಗೋಡೆಗಳಿಲ್ಲವೆಂದು. ಮಾನವೀಯತೆಯೇ ನಿಜವಾದ ಧರ್ಮ. ದುಃಖ ಬಂದಾಗ ಎಲ್ಲರೂ ಒಂದೇ.’ ಅವರು ಕಣ್ಣು ಮುಚ್ಚಿ ಪ್ರಾರ್ಥಿಸಿದರು: ‘ಓ ಪ್ರಭು, ಇವರ ಮನಸ್ಸಿನಲ್ಲಿ ಮಾನವೀಯತೆಯ ಬೆಳಕು ಹರಡು.’ ಎರಡು ದಿನಗಳಲ್ಲಿ ಖಾಜಿಯ ಮಗಳು ಚೇತರಿಸಿಕೊಂಡಳು. ಬ್ರಾಹ್ಮಣನ ಕುಟುಂಬವೂ ಶಾಂತಿಯನ್ನು ಕಂಡಿತು. ಅವರು ಇಬ್ಬರೂ ಕಬೀರನ ಪಾದದಲ್ಲಿ ಬಿದ್ದು ಅತ್ತರು. ಕಬೀರ ಹೇಳಿದ: ‘ಧರ್ಮ ಎಂದರೆ ದೇವರನ್ನು ಹುಡುಕುವುದಲ್ಲ. ಮನುಷ್ಯತ್ವವನ್ನು ಕಳೆದುಕೊಳ್ಳದಿರುವುದು.’
ಝೊಮೆಟೊ ಡೆಲಿವರಿ ವ್ಯಕ್ತಿಯ ಧರ್ಮ ಕೇಳಿ ಪಾರ್ಸೆಲ್ ಹಿಂತಿರುಗಿಸಿದವರು, ಎ.ಸಿ. ರಿಪೇರಿಗೆ ಬಂದವರ ಧರ್ಮ ಕೇಳಿ ಮನೆಯೊಳಗೆ ಬಿಟ್ಟುಕೊಳ್ಳದವರು ನಮ್ಮ ನಡುವೆಯೇ ಇದ್ದಾರೆ. ಬುದ್ಧ, ಬಸವ, ಕಬೀರ, ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹನೀಯರು ಬಾಳಿಬದುಕಿ ಹೋದ ಈ ಭಾರತದ ಪುಣ್ಯಭೂಮಿಯಲ್ಲಿ ಇಂದು ಧರ್ಮದ ಹೆಸರಿನಲ್ಲಿ ಮನುಷ್ಯರು ಒಬ್ಬರಿಗೊಬ್ಬರು ಬಡಿದಾಡುತ್ತಿರುವರು. ಇಂತಹ ಸಂಕೀರ್ಣವಾದ ಕಾಲದಲ್ಲಿ ನಾವು ಮನುಷ್ಯತ್ವವನ್ನು ಕಳೆದುಕೊಳ್ಳದಿರುವುದೇ ಧರ್ಮವೆಂದು ತಿಳಿದು ಬಾಳಬೇಕು. ತರಕಾರಿ ಮಾರುವವರು, ಗ್ಯಾರೇಜ್
ನಡೆಸುವವರು, ನಮಗೆ ಮನೆಗಳನ್ನು ನಿರ್ಮಿಸಿಕೊಟ್ಟವರು ಗುಡಿಸಿಲಲ್ಲೇ ಇರುತ್ತಾರಲ್ಲ, ನಾವೆಂದಾದರೂ ಅವರ ಬಗ್ಗೆ ಯೋಚಿಸಿದ್ದೇವೆಯೇ? ಹಣ ನಮ್ಮದಿರಬಹುದು. ಆದರೆ ಹಗಲಿರುಳು ದುಡಿದು ಸುಂದರವಾದ ಮನೆಯನ್ನು ನಿರ್ಮಿಸಿದ ಕೈಗಳನ್ನು ಅವರ ಬೆವರಿನ ಬೆಲೆಯನ್ನು ಈ ಧರ್ಮ ಅಳೆಯಬಲ್ಲುದೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.