ADVERTISEMENT

ನುಡಿ ಬೆಳಗು: ನೆಮ್ಮದಿಯ ನಾಳೆಗಳಿಗಾಗಿ

ದೀಪಾ ಹಿರೇಗುತ್ತಿ
Published 10 ನವೆಂಬರ್ 2025, 19:30 IST
Last Updated 10 ನವೆಂಬರ್ 2025, 19:30 IST
   

ಹೂಗಳ ಪರಿಮಳದ, ಹಣ್ಣಿನ ಘಮದ, ಹರಿವ ನೀರಿನ ಜುಳುಜುಳು ಸದ್ದಿನ, ಮುಗಿಲು ಮುಟ್ಟುವ ಮರಗಳ ಅರಣ್ಯದಲ್ಲಿ ಗುಬ್ಬಿಯೊಂದಿತ್ತು. ಬಹಳ ಚುರುಕಿನ ಗುಬ್ಬಿಯಾದರೂ ಕೆಲವು ವಿಚಾರಗಳಲ್ಲಿ ಅಸಡ್ಡೆ ತೋರಿಸುತ್ತಿತ್ತು. ಅದರ ಅಮ್ಮ, ‘ಮಳೆಗಾಲ ಬರುತ್ತಿದೆ, ಆಹಾರ ಒಟ್ಟು ಹಾಕಿಟ್ಟುಕೋ’ ಅಂದರೆ, ‘ಹೋಗಮ್ಮಾ ಬೇಕಾದಷ್ಟು ಸಮಯವಿದೆ’ ಅನ್ನುತ್ತಿತ್ತು. ತನ್ನ ಸುತ್ತಲೂ ಇರುವೆಗಳು, ಅಳಿಲುಗಳು, ದುಂಬಿಗಳು ಮುಂತಾದ ಎಲ್ಲ ಪ್ರಾಣಿ ಪಕ್ಷಿ ಕೀಟಗಳೆಲ್ಲ ಆಹಾರ ಸಂಗ್ರಹಿಸುತ್ತಿರುವುದನ್ನು ನೋಡಿದರೂ ಹಾಡುತ್ತ ಹಾರುತ್ತ ಸಮಯ ಕಳೆದುಬಿಡುತ್ತಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮೋಡಗಳು ದಟ್ಟೈಸಿ ಮಳೆ ಶುರುವಾಯಿತು. ಅಂದರೆ ಮಳೆಗಾಲ ಶುರುವಾಗಿತ್ತು. ಗಾಳಿ ಜೋರಾಯಿತು. ಗುಬ್ಬಿ ಮರಿ ತನ್ನ ಗೂಡಿಗೆ ನಡುಗುತ್ತ ಹಾರಿ ಬಂತು. ಚಳಿಯ ಜತೆ ಹಸಿವೂ ಆಗತೊಡಗಿತು. ಹುಡುಕಿದರೆ ತಿನ್ನಲು ಗೂಡಿನೊಳಗೆ ಏನಿದೆ? ಏನೂ ಇಲ್ಲ. ಇರುವೆಗಳು ಹುತ್ತದೊಳಗೆ ಸೇರಿಕೊಂಡಿದ್ದವು. ಅಳಿಲುಗಳು ತಾವು ಬೇಸಿಗೆಯಲ್ಲಿ ಕಷ್ಟಪಟ್ಟು ಕೊರೆದ ಬಿಲದೊಳಗೆ ಬೆಚ್ಚಗಿದ್ದವು. ದುಂಬಿಗಳು ಗೂಡು ಸೇರಿಕೊಂಡು ಮಕರಂದವನ್ನು ಹೀರುತ್ತ ರಾಗವೊಂದನ್ನು ಗುನುಗುತ್ತಿದ್ದವು. ಎರಡು ದಿನಗಳಾದರೂ ಮಳೆ ಕಡಿಮೆಯಾಗಲೇ ಇಲ್ಲ. ಹಸಿವು ಚಳಿಯಿಂದ ಗುಬ್ಬಿ ನಿತ್ರಾಣವಾಗಿತ್ತು. ಮೂರನೆಯ ದಿನ ಮಳೆ ನಿಂತಮೇಲೆ ಕಷ್ಟಪಟ್ಟು ಸೋತ ರೆಕ್ಕೆಗಳೊಂದಿಗೆ ಗುಬ್ಬಿ ತನ್ನ ಸ್ನೇಹಿತ ಅಳಿಲನ್ನು ಭೇಟಿ ಮಾಡಲು ಹಾರಿತು. ಅಳಿಲು ಸ್ವಲ್ಪ ಧಾನ್ಯವನ್ನೂ, ಕಾಳುಗಳನ್ನೂ ಗುಬ್ಬಿಗೆ ಕೊಟ್ಟಿತು. ಗುಬ್ಬಿಗೆ ಮುಜುಗರವಾಯಿತು. ‘ನಾನು ಮೊದಲೇ ಕಷ್ಟಪಟ್ಟು ಕೆಲಸ ಮಾಡಬೇಕಿತ್ತು, ನಾನು ಇನ್ನೂ ಸಮಯವಿದೆ ಅಂದುಕೊಂಡೆ’ ಅಂದಿತು ತಲೆತಗ್ಗಿಸಿ. ಅಳಿಲು ನಕ್ಕು ಹೇಳಿತು, ‘ನೋಡು,  ನಾವೆಲ್ಲರೂ ನಮ್ಮದೇ ಆದ ಸಮಯದಲ್ಲಿ, ನಮ್ಮದೇ ಆದ ರೀತಿಯಲ್ಲಿ ಬದುಕಿನಲ್ಲಿ ಪಾಠ ಕಲಿಯುತ್ತೇವೆ. ಈ ಕಾಡು ನಮ್ಮ ತಾಯಿ, ಇದು ನಮಗೆ ರಕ್ಷಣೆಯನ್ನೂ ಕೊಡುತ್ತದೆ, ಸೂಕ್ತ ಸಮಯದಲ್ಲಿ ಎಚ್ಚರಿಕೆಯನ್ನೂ ಕೊಡುತ್ತದೆ’.

ಮುಂದಿನ ಬೇಸಿಗೆಯಲ್ಲಿ ಗುಬ್ಬಿ ಸುಮ್ಮನೆ ಹಾರಾಡುತ್ತ ಹಾಡುತ್ತ ಸಮಯ ಕಳೆಯಲಿಲ್ಲ. ಬೀಜಗಳು, ಕಾಳುಗಳನ್ನು ಸಂಗ್ರಹಿಸಿ ಗೂಡಿನಲ್ಲಿ ಅಚ್ಚುಕಟ್ಟಾಗಿ ಇಡತೊಡಗಿತು. ಜತೆಗೆ ತನ್ನ ಗೂಡಿನ ಹತ್ತಿರದ ಇರುವೆಗಳಿಗೂ ಆಹಾರ ಸಂಗ್ರಹಿಸಲು ಸಹಾಯ ಮಾಡಿತು. ಸುತ್ತಮುತ್ತಲಿನ ಪ್ರಾಣಿಗಳು ಗುಬ್ಬಿಯಲ್ಲಾದ ಬದಲಾವಣೆಯನ್ನು ಹೊಗಳಿದವು. ಕೊನೆಗೆ, ಆಮೇಲೆ, ಮತ್ತೆ, ನಂತರ ಎನ್ನುವ ‍ಪದಗಳನ್ನು ಗುಬ್ಬಿ ಬಳಸಲೇ ಇಲ್ಲ. ಯೋಗ್ಯ ಸಮಯದಲ್ಲಿ ಮಾಡಬೇಕಾದ ಕೆಲಸ ಮಾಡುವುದರಿಂದ ಬದುಕು ಸರಳವೂ ಸಂತೋಷದಾಯಕವೂ ಆಗುತ್ತದೆ ಎಂಬುದನ್ನು ಗುಬ್ಬಿ ಕಂಡುಕೊಂಡಿತ್ತು. ಮುಂದಿನ ಮಳೆಗಾಲದಲ್ಲಿ ಸಂಗ್ರಹಿಸಿಟ್ಟ ಆಹಾರ ತಿಂದುಕೊಂಡು ಕೂಡಿಟ್ಟ ಹತ್ತಿಯ ರಾಶಿಯಲ್ಲಿ ನೆಮ್ಮದಿಯಿಂದಿತ್ತು. ಬೆಚ್ಚಗೆ ಗೂಡಿನಲ್ಲಿ ಕುಳಿತ, ಹೊಟ್ಟೆ ತುಂಬಿದ ಗುಬ್ಬಿಯ ಬಾಯಿಂದ ಸಣ್ಣ ಧ್ವನಿಯಲ್ಲಿ ಹಾಡೊಂದು ಹೊರಟಿತ್ತು. ಆ ಹಾಡು ಬೇಸಿಗೆಯಲ್ಲಿ ಕಷ್ಟಪಟ್ಟು ಆಹಾರ ಸಂಗ್ರಹಿಸಿದ ಪರಿಣಾಮ ಎಂಬುದು ಗುಬ್ಬಿಗೆ ಗೊತ್ತಾಗಿತ್ತು.

ADVERTISEMENT

ನಾವೂ ಅಷ್ಟೇ ಎಷ್ಟೋ ಸಲ, ಇನ್ನೂ ಸಮಯವಿದೆ ಎನ್ನುತ್ತ ಬದುಕನ್ನು ಹಗುರವಾಗಿ ತೆಗೆದುಕೊಳ್ಳುತ್ತಿರುತ್ತೇವೆ. ಮಾಡಲೇಬೇಕಾದ ಮುಖ್ಯವಾದ ಕೆಲಸಗಳನ್ನು ಕಷ್ಟವಾಗುತ್ತದೆಂದು ಮುಂದೂಡುತ್ತಲೇ ಇರುತ್ತೇವೆ. ಮತ್ತೆ ಪಶ್ಚಾತ್ತಾಪ ಪಡುತ್ತೇವೆ. ಆದರೆ ನೆಮ್ಮದಿಯ ನಾಳೆಗಳಿಗಾಗಿ ಇಂದು ಕಷ್ಟಪಡಬೇಕೆಂಬುದನ್ನು ತಡವಾಗಿಯಾದರೂ ಸರಿ, ಅರ್ಥಮಾಡಿಕೊಂಡರೆ ಬದುಕು ಸುಂದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.