ADVERTISEMENT

ನುಡಿ ಬೆಳಗು: ದೂರುವುದರಿಂದ ಪ್ರಯೋಜನವಿಲ್ಲ

ದೀಪಾ ಹಿರೇಗುತ್ತಿ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

ಒಂದೂರಿನಲ್ಲಿ ಒಂದು ಬಹಳ ಹಳೆಯ ಆಲದ ಮರವಿತ್ತು. ನದಿ ದಡದಲ್ಲಿರುವ ಆ ಮರ ಬೃಹದಾಕಾರವಾಗಿತ್ತು. ದಪ್ಪ ದಪ್ಪ ಬೇರುಗಳು ನೆಲ ಮುಟ್ಟುವಂತೆ ಇಳಿಬಿದ್ದಿದ್ದವು. ದೊಡ್ಡ ದೊಡ್ಡ ರೆಂಬೆ ಕೊಂಬೆಗಳಲ್ಲಿ ವಿಧವಿಧದ ಹಕ್ಕಿಗಳು, ಅಳಿಲುಗಳು ಗೂಡು ಕಟ್ಟಿಕೊಂಡಿದ್ದವು. ಊರಿನ ಜನರಿಗೆ ಆ ಮರವೆಂದರೆ ಊರಿನ ಅಸ್ಮಿತೆಯಂತೆ. ಯಾರಾದರೂ ಸ್ನೇಹಿತರು, ನೆಂಟರು ಬಂದರೆ ಆಲದಮರವನ್ನು ತೋರಿಸಲು ಕರೆದುಕೊಂಡು ಬರುತ್ತಿದ್ದರು.

ಆ ಊರಿನ ಮಕ್ಕಳಂತೂ ರಜೆ ಸಿಕ್ಕರೆ ಸಾಕು ಮರದಡಿ ಬೀಡು ಬಿಡುತ್ತಿದ್ದರು. ಅವರಲ್ಲೊಬ್ಬಳು ಹುಡುಗಿಯ ಹೆಸರು ಮೇಘಾ. ಆಕೆ ಜಾಣೆ ಮತ್ತು ಎಲ್ಲದರಲ್ಲೂ ಆಸಕ್ತಿ ಹೊಂದಿರುವ ಉತ್ಸಾಹಿ ಹುಡುಗಿ. ಆದರೆ ಅವಳ ಒಂದು ಸಮಸ್ಯೆ ಎಂದರೆ ಯಾವಾಗಲೂ ಬೇರೆಯವರನ್ನು ದೂರುವುದು. ಅವಳ ಸ್ನೇಹಿತೆಗೆ ಜಾಸ್ತಿ ಅಂಕ ಬಂದರೆ, ಮನೆಯಲ್ಲಿ ಹಣ್ಣಿನಲ್ಲೋ ಸಿಹಿಯಲ್ಲೋ ತಮ್ಮನಿಗೆ ದೊಡ್ಡ ಪಾಲು ಸಿಕ್ಕಿಬಿಟ್ಟರೆ ಎಲ್ಲದರಲ್ಲೂ ಅವಳ ದೂರು ಇದ್ದೇ ಇರುತ್ತಿತ್ತು. ಆಟ ಆಡುವಾಗಲೂ ಸಣ್ಣ ಸಣ್ಣ ಕಾರಣಗಳಿಗೆ ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಗೊಣಗುತ್ತಿದ್ದಳು.

ಒಂದು ದಿನ ಸಂಜೆ ಮುಖ ಊದಿಸಿಕೊಂಡು ಆಲದ ಮರದ ಕೆಳಗೆ ಬಂದು ಕುಳಿತಳು ಮೇಘಾ. ಶಾಲೆಯಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಅವಳು ಮೂರನೇ ಸ್ಥಾನ ಪಡೆದಿದ್ದಳು. ತನ್ನಷ್ಟಕ್ಕೆ ತಾನು ಬಿಕ್ಕುತ್ತ, ‘ಬದುಕಿನಲ್ಲಿ ಯಾವುದೂ ಸರಿ ಇಲ್ಲ, ನಾನು ಅಂದುಕೊಂಡ ಹಾಗೆ ಯಾವುದೂ ಆಗುತ್ತಾ ಇಲ್ಲ’ ಎಂದು ಹೇಳಿಕೊಳ್ಳುತ್ತಿದ್ದಳು.

ADVERTISEMENT

‘ಎಲ್ಲ ನೀನಂದುಕೊಂಡ ಹಾಗೆಯೇ ಆಗಬೇಕಾ ಮರೀʼ ಎಂಬ ಒಂದು ಮೃದುವಾದ ಧ್ವನಿ ಕೇಳಿ ತಿರುಗಿದರೆ ಅಲ್ಲಿ ಯಾರೂ ಇಲ್ಲ.ಕೊಂಚ ಭಯದಿಂದ ‘ಯಾರದು, ಯಾರು ಮಾತಾಡ್ತಾ ಇರೋದು’ ಅಂದಳು ಮೇಘಾ. ‘ನಾನು ನೀನು ಕುಳಿತಿರುವ ಆಲದ ಮರ. ನಾನು ಅನೇಕ ಪೀಳಿಗೆಗಳನ್ನು ನೋಡಿದ್ದೇನೆ, ನಿನಗೊಂದು ಗುಟ್ಟು ಹೇಳುತ್ತೇನೆ, ನಿಂತುಕೋ’ ಅಂದಿತು.

ಮೇಘಾ ಕಣ್ಣೊರೆಸಿಕೊಂಡು ಎದ್ದು ನಿಂತಳು. ‘ನನ್ನ ಬೇರುಗಳನ್ನು ನೋಡು, ಕೆಲವು ನೇರವಾಗಿವೆ. ಮತ್ತೆ ಕೆಲವು ಸುರುಳಿಯಾಗಿವೆ. ಒಮ್ಮೊಮ್ಮೆ ಮಳೆ ಬರದೇ ನನಗೆ ನೀರೇ ಸಿಗುವುದಿಲ್ಲ, ಹತ್ತಿರದಲ್ಲಿ ನದಿ ಇದ್ದರೂ ನಾನು ಬಾಯಾರಿರುತ್ತೇನೆ. ಆದರೂ ನಾನು, ನನಗೆ ಯಾರೂ ನೀರು ತಂದುಕೊಡಲಿಲ್ಲ ಎಂದು ದೂರುವುದಿಲ್ಲ, ಹಾಗಂತ ನಾನು ಬೆಳೆಯುವುದನ್ನು ನಿಲ್ಲಿಸುವುದಿಲ್ಲ, ನನ್ನ ಪಾಡಿಗೆ ನಾನು ಬೆಳೆಯುತ್ತಲೇ ಇದ್ದೇನೆ. ಒಂದು ವೇಳೆ ನಾನು ಬಿಸಿಲು, ಮಳೆ, ಗಾಳಿಯ ಬಗ್ಗೆ ದೂರುತ್ತಲೇ ಉಳಿದಿದ್ದರೆ ನಾನು ಇಷ್ಟು ಬಲಿಷ್ಠವಾಗುತ್ತಿದ್ದೆನೇ? ದೂರುವುದರಿಂದ ಬದುಕಿನಲ್ಲಿ ಸರಿ ಇಲ್ಲದಿರುವ ಸಂಗತಿಗಳು ಸರಿಯಾಗಿ ಬಿಡುವುದಿಲ್ಲ. ದೂರನ್ನು ಬದಿಗಿರಿಸಿ ನಮ್ಮನ್ನು ನಾವು ಸದೃಢವಾಗಿಸಿಕೊಂಡಾಗ ಜೀವನದಲ್ಲಿ ನಾವು ಬಯಸಿದ್ದು ನಡೆಯುತ್ತದೆ’ ಎಂದು ಹೇಳಿತು ಆಲದ ಮರ. ಮೇಘಾಳಿಗೆ ಮರ ಹೇಳುತ್ತಿರುವುದು ಅರ್ಥವಾಯಿತು. ಅವಳ ಮನಸ್ಸೀಗ ಹಗುರವಾಗಿತ್ತು. ಅವತ್ತಿನಿಂದ ಮೇಘಾ ಬದಲಾದಳು. ಸೋತಾಗ ದೂರುವ ಬದಲು ಜಾಸ್ತಿ ಪ್ರಯತ್ನ ಪಟ್ಟಳು, ಬೇರೆಯವರು ಗೆದ್ದಾಗ ಚಪ್ಪಾಳೆ ತಟ್ಟಿ ಅಭಿನಂದಿಸಿದಳು.

ದೂರುವುದರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ನೋಡನೋಡುತ್ತಿದ್ದಂತೆಯೇ ಸಮಯ ಸರಿದು ಹೋಗುತ್ತದೆ. ಕೊನೆಯಲ್ಲಿ ಪಶ್ಚಾತ್ತಾಪ ಮಾತ್ರ ಉಳಿದುಕೊಳ್ಳುತ್ತದೆ. ವಾಸ್ತವವನ್ನು ಒಪ್ಪಿಕೊಂಡು ಧೈರ್ಯದಿಂದ ಪ್ರಯತ್ನಶೀಲರಾಗುವುದರಲ್ಲಿಯೇ ಬದುಕಿನ ಅರ್ಥ ಅಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.