ADVERTISEMENT

ನುಡಿ ಬೆಳಗು: ಆಸೆ ನಿರಾಸೆಗಳ ನಡುವೆ ಒಲವಿನ ಮಾಧುರ್ಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2025, 23:30 IST
Last Updated 30 ನವೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಡಾ.ರಾಜಕುಮಾರ್ ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ?’ ಎಂಬ ಗೀತೆಯನ್ನು ಎಲ್ಲಿಯೇ ಆಗಲಿ ಯಾರಾದರೂ ಕೇಳಿಸಿಕೊಳ್ಳಲಿ, ಇದು ತನಗೇ ಸಂಬಂಧಿಸಿದಂತಿರುವ ಹಾಡು ಅನಿಸುತ್ತದೆ. ಹೌದು, ಮನುಷ್ಯನ ಬದುಕಿನಲ್ಲಿ ಆಸೆ ನಿರಾಸೆಗಳು ಅನೂಹ್ಯವಾದ ತಿರುವುಗಳನ್ನು, ಬಿಕ್ಕಟ್ಟುಗಳನ್ನು ಹುಟ್ಟಿಸುತ್ತವೆ. ಬಿಕ್ಕಟ್ಟುಗಳ ತೀವ್ರ ಸ್ಥಿತಿಯಲ್ಲಿ ಅವುಗಳನ್ನು ಎದುರಿಸುವ ಉಪಾಯಗಳು, ಪರಿಹರಿಸುವ ಪರ್ಯಾಯಗಳು ಹೊಳೆಯುವುದೇ ಇಲ್ಲ. ಅವುಗಳು ತಂತಮ್ಮ ಪಾಲಿನ ಪರಿಣಾಮದಲ್ಲಿ ಪರ್ಯಾವಸಾನವಾಗುತ್ತವೆ. ಅನಿಶ್ಚಿತ ಸ್ವರೂಪದ ಬದುಕಿನಲ್ಲಿ ಇಂಥದೇ ಪುಣ್ಯಭೂಮಿಯಲ್ಲಿ ಹುಟ್ಟಬೇಕು, ಸಾಯಬೇಕು, ಇಂಥವರೇ ನಮ್ಮ ಹೆತ್ತವರಾಗಬೇಕು ಎನ್ನುವ ಯಾವುದರ ಆಯ್ಕೆಯೂ ನಮ್ಮ ಕೈಯಲ್ಲಿ ಇರುವುದಿಲ್ಲ. ಇರುವುದು ಒಂದೇ, ಅದು ಎಂಥವರ ಒಲವನ್ನು ಸಂಪಾದಿಸಬೇಕು ಅಥವಾ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದು. ನಾವು ಬಯಸಿದ ಒಲವು ದೊರೆತರೆ ನಾವು ಸುಖವಾಗಿರಬಹುದು ಎಂಬುದು ಸಹಜವಾದ ನಿರೀಕ್ಷೆ. ಆದರೆ ಹಾಗೇ ಆಗುತ್ತದೆ ಎಂಬ ಖಾತ್ರಿಯಿಲ್ಲ. ಸಾಮಾಜಿಕ ಒತ್ತಡದಿಂದ ಉಂಟಾದ ಸಂಬಂಧದಲ್ಲಿ ಒಲವಿಗಿಂತ ಹೆಚ್ಚಾಗಿ ಹೊಂದಾಣಿಕೆಯೇ ಬದುಕನ್ನು ರೂಪಿಸುತ್ತದೆ. ಅಪರೂಪದ ಸಂದರ್ಭಗಳಲ್ಲಿ ಎಲ್ಲ ಬಗೆಯ ನೈತಿಕ ಸೀಮೆಯನ್ನು ಮೀರಿದ ಸಂಬಂಧಗಳು ಒಲವನ್ನು ಉಳಿಸಿಕೊಳ್ಳಲು ಹೆಣಗಾಡುತ್ತವೆ.

ಜನ್ನನ ಯಶೋಧರ ಚರಿತೆಯ ಅಮೃತಮತಿಯ ಒಲವನ್ನು ಅನೈತಿಕ ಎಂದು ತೀರ್ಮಾನಿಸಿದ ಸಮಾಜ ಆಕೆಯ ಮೇಲಿನ ದೈಹಿಕ ಹಲ್ಲೆಯನ್ನು ದೌರ್ಜನ್ಯ ಎಂದು ಭಾವಿಸದೆ ಇರುವುದು ಆಶ್ಚರ್ಯವೇನಲ್ಲ. ಆಕೆಯ ಎಲ್ಲ ಬಗೆಯ ಸೀಮೋಲ್ಲಂಘನ ಸ್ವರೂಪದ ಒಲವನ್ನು ಪಡೆದ ಅಷ್ಟಾವಂಕ ಅನಾಗರಿಕನಂತೆ ವರ್ತಿಸುವುದು ಅವನಿಗೂ ಅಸಹಜವಲ್ಲ. ಅರಸಿಯೊಬ್ಬಳ ಪ್ರೇಮ ಅನಾಯಾಸವಾಗಿ ತನ್ನನ್ನು ಅರಸಿಕೊಂಡು ಬಂದ ಬಗೆಯನ್ನು ಅಮಿತವಾದ ಉಲ್ಲಾಸದಿಂದ ಸ್ವೀಕರಿಸುವುದೂ ಅವನಿಗೆ ಅಪರಿಚಿತ ನಡವಳಿಕೆಯಾಗುತ್ತದೆ. ಈ ಜಗತ್ತಿನಲ್ಲಿ ನಿನ್ನೊಬ್ಬನ ಹೊರತಾದ ಗಂಡಸರೆಲ್ಲ ಸಹೋದರ ಸಮಾನರು ಎಂದು ಬಂದ ಸಂಪೂರ್ಣ ಸಮರ್ಪಣೆಯ ಪ್ರೀತಿಯನ್ನು ಉಳಿಸಿಕೊಳ್ಳಲು ಅವನಿಂದ ಪ್ರಜ್ಞಾಪೂರ್ವಕ ಪ್ರಯತ್ನಗಳೂ ನಡೆಯುವುದಿಲ್ಲ. ಇಡೀ ಕಾವ್ಯದ ಧ್ವನಿ ವಿರಕ್ತಕೇಂದ್ರಿತವಾಗಿರುವುದರಿಂದ ಇಂಥ ಲೌಕಿಕ ಪ್ರಶ್ನೆಗಳು ಅಲ್ಲಿ ಪ್ರಸ್ತುತವಾಗುವುದಿಲ್ಲ.

ADVERTISEMENT

ಈ ಹೊತ್ತಿನ ಸರಕುನಿಷ್ಠ ಭೋಗದ ಸಮಾಜದಲ್ಲಿ ಒಲವು ಕೂಡ ಲೌಕಿಕ ಸುಖಾಪೇಕ್ಷೆಯ ಸಾಧನವಾಗಿ ಕಾಣುತ್ತದೆ. ಹೆಣ್ಣು ಗಂಡಿನ ನಡುವಿನ ಬಾಂಧವ್ಯವು ಇಬ್ಬರ ದುಡಿಮೆಯ ಲಾಭನಷ್ಟಗಳನ್ನು ಅವಲಂಬಿಸಿದೆ.
ಹೆಚ್ಚು ಕಡಿಮೆಯ ಈ ಲೆಕ್ಕಾಚಾರದಲ್ಲಿ ಅಹಂ ಕೂಡಾ ಸೇರಿಕೊಂಡು ಒಲವು ಅರಳಬೇಕಾದ ಕಡೆ ಕೋಪ ಕೆರಳುತ್ತದೆ. ಭಾವಾತಿರೇಕದ ತೀವ್ರ ಸ್ಥಿತಿಯಲ್ಲಿ ಗಂಡು ದೈಹಿಕ ಹಲ್ಲೆಗೆ ಮುಂದಾಗುವ ಮೂಲಕ ತನ್ನ ದೌರ್ಬಲ್ಯವನ್ನು ಪ್ರಕಟಿಸಿದರೂ ಗಂಡಸುತನವನ್ನು ಸಾಬೀತುಪಡಿಸಿದ ಹೆಮ್ಮೆಯಿಂದ ಬೀಗುತ್ತಾನೆ, ಹೆಣ್ಣಿನಲ್ಲಿ ತನ್ನ ಬಗೆಗಿನ ಕ್ಷುದ್ರತೆಯನ್ನು ಇನ್ನಷ್ಟು ಗಾಢಗೊಳಿಸುತ್ತಾನೆ. ಈಗಿನ ದಿನಗಳಲ್ಲಿ ತಿಂಗಳಿಗೆ 4-5 ಲಕ್ಷ ರೂಪಾಯಿಗಳ ಸಂಪಾದನೆಯ ದಂಪತಿ ನಿತ್ಯವೂ ಕಿರುಚಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಅದರಲ್ಲೂ ಇತರರಿಗೆ ನೈತಿಕ ಮೌಲ್ಯಗಳ ಸುದೀರ್ಘ ಪಾಠ ಮಾಡುವವರು ಒಲಿದು ಬಂದ ಹೆಣ್ಣನ್ನು ಹಾದಿ ಬೀದಿಯಲ್ಲಿ ಎಳೆದಾಡಿ ಅವಾಚ್ಯವಾಗಿ ನಿಂದಿಸುತ್ತಾ ಬಡಿಯುವುದು ಅಸಹ್ಯ ಹುಟ್ಟಿಸುತ್ತದೆ. ನೌಕರಿ ಪಡೆಯಲು ಅಗತ್ಯವಾದ ಪದವಿಗಳು ಬಾಳುವೆ ನಡೆಸುವಲ್ಲಿ ಅಷ್ಟಾವಂಕನ ಅನಾಗರಿಕತೆಯನ್ನು ನೆನಪಿಸುವುದಾದರೆ ನಿಜಕ್ಕೂ ನಾವು ಕಲಿತಿರುವುದೇನು?

ಆಸೆ ನಿರಾಸೆಗಳ ನಡುವೆ ಒಲವಿನ ಮಾಧುರ್ಯವನ್ನು ಸವಿಯಬೇಕು. ಒಲಿದ ಜೀವ ಬೆರೆತ ಮನಸು ಅರಿತ ‌ಹೃದಯ ಪ್ರೀತಿ ಪಯಣದ ಪಲ್ಲವಿಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.