ಕಿಟಕಿಯಿಂದ ಆಚೆ ನೋಡಿದರೆ ಪಕ್ಕದಲ್ಲೇ ಒಂದು ಕಲ್ಲು ಬೆಂಚು. ಯಥಾವತ್ತಿನ ಹಾಗೆ ಗಂಟೆ ಹೊಡೆದಂತೆ ಮಧ್ಯ ವಯಸ್ಕ ಮೂವರು ವ್ಯಕ್ತಿಗಳು ಬಂದು ಕುಳಿತಿರುತ್ತಿದ್ದರು. ಬೆಳಗ್ಗೆ ಬಂದರೆ ಕತ್ತಲಾಗುವ ತನಕವೋ ಅಥವಾ ಅನಂತರವೂ ಕುಳಿತೇ ಇರುತ್ತಿದ್ದ ಹಾಗೆ ಕಾಣಿಸುತ್ತಿದ್ದರು. ಹಸಿವೋ ನೀರಡಿಕೆಯೋ ನಿದ್ದೆಯೋ ಏನೂ ಕಾಣಿಸದ ಹಾಗೆ, ತೋರಿಸಿಕೊಳ್ಳದ ಹಾಗೆ. ಸುತ್ತಮುತ್ತ ಹತ್ತಾರು ಮನೆ ಮಾತು ಕತೆ ಗದ್ದಲ ಗೌಜು ಮತ್ತು ನೀರವ ಮೌನ ಕೂಡಾ. ಈ ಮನೆಯ ಕಿಟಕಿಯಿಂದ ನಿತ್ಯವೂ ಈ ಮೂವರನ್ನು ನೋಡುತ್ತ ನಿಲ್ಲುತ್ತಿದ್ದ ಪುಟ್ಟ ಹುಡುಗಿಗೆ ಆ ಮೂವರನ್ನು ಮನೆಗೆ ಕರೆಸಿ ಏನಾದರೂ ತಿಂಡಿ ಊಟ ಕೊಡುವ ಹಂಬಲ. ಅಪ್ಪ ಅಮ್ಮ ಒಪ್ಪಿದ ಮೇಲೆ ಆ ಮೂವರನ್ನು ಮಾತನಾಡಿಸಲು ಹೊರಟಳು. ‘ನನ್ನ ಅಪ್ಪ ಅಮ್ಮ ನೀವು ಮೂವರನ್ನೂ ಮನೆಗೆ ಕರೆದಿದ್ದಾರೆ, ದಯವಿಟ್ಟು ಬನ್ನಿ’ ಎಂದಳು. ಪುಟ್ಟ ಹುಡುಗಿಯ ಕರೆಗೆ ಅವಾಕ್ಕಾದ ಮೂವರಲ್ಲಿ ಒಬ್ಬ ‘ಇಲ್ಲ ಕಂದ, ಮೂವರೂ ಒಟ್ಟಿಗೆ ಮನೆ ಒಳಗೆ ಬರಲಾರೆವು. ನೀನು ಯಾರಾದರೂ ಒಬ್ಬರನ್ನು ಕರೆದುಕೊಂಡು ಹೋಗಬಹುದು’ ಎಂದ.
ಪುಟ್ಟಿ ಕೇಳಿದಳು: ‘ಸರಿ ಹಾಗಾದರೆ ನಿಮ್ಮ ಹೆಸರೇನು, ನೀವು ಮೂವರೂ ಯಾರು?’ ಮೂವರಲ್ಲಿ ಒಬ್ಬ, ‘ನಾನು ಸಂಪತ್ತು’ ಎಂದ. ಇನ್ನೊಬ್ಬ ‘ನಾನು ಯಶಸ್ಸು’ ಅಂದ. ಮೂರನೇ ವ್ಯಕ್ತಿ ‘ನಾನು ಪ್ರೀತಿ’ ಅಂದ. ಯಾರನ್ನು ಕರೆಯುವುದು ಮನೆಯೊಳಗೆ ಗೊತ್ತಾಗದೆ ಪುಟ್ಟ ಹುಡುಗಿ ಮನೆಯ ಒಳಗೆ ಹೋಗಿ ಚರ್ಚೆ ಮಾಡಿದಳು.
ಅಮ್ಮ ಸಂಪತ್ತು ಇರಲಿ ಅವನನ್ನು ಬರಹೇಳು ಎಂದಳು.
ಅಪ್ಪ ಯಶಸ್ಸು ಇರಲಿ ಅವನನ್ನು ಬರಹೇಳು ಎಂದನು.
ಮೂಲೆಯಲ್ಲಿ ಆರಾಮ ಚೇರಿನಲ್ಲಿ ಕೂತಿದ್ದ ಅಜ್ಜ ಯಾರೂ ಬೇಡ ಕಂದ ‘ಪ್ರೀತಿಯನ್ನು ಅಹ್ವಾನಿಸು’ ಎಂದನು.
ಪುಟ್ಟ ಹುಡುಗಿ ಅಜ್ಜನ ಮಾತನ್ನು ಕೇಳಿ ಮತ್ತೆ ಓಡಿ ಹೋಗಿ ಆ ಮೂವರಲ್ಲಿ ಪ್ರೀತಿ ಎಂಬ ವ್ಯಕ್ತಿಯನ್ನು ಮನೆಗೆ ಬರಲು ಹೇಳಿದಳು. ಯಾವಾಗ ಆ ವ್ಯಕ್ತಿ ಎದ್ದು ನಿಂತು ಪುಟ್ಟ ಹುಡುಗಿಯ ಮನೆಗೆ ಹೊರಟನೋ, ಆಗ ಉಳಿದ ಇಬ್ಬರೂ, ಅಂದರೆ ಸಂಪತ್ತು ಮತ್ತು ಯಶಸ್ಸು ಹಿಂಬಾಲಿಸಿದರು.
ಎಷ್ಟೋ ಮನೆಗಳಲ್ಲಿ ಎಲ್ಲ ಇರುತ್ತದೆ, ಆದರೆ ಪ್ರೀತಿ ಇರುವುದಿಲ್ಲ. ಪರಸ್ಪರ ಕಾಳಜಿ ಇರುವುದಿಲ್ಲ. ಅವರವರ ಲೋಕದಲ್ಲೇ ಬಾಳುತ್ತಾ ಉಳಿದುದರ ಬಗ್ಗೆ ಗಮನ ವಹಿಸುವುದಿಲ್ಲ. ಏನಿದ್ದರೇನು ಪ್ರೀತಿ ಇರದೇ ಇದ್ದರೆ ಎಂಬಂತಾದ ಈ ಬಾಳಿನಲ್ಲಿ ಪ್ರೀತಿಯ ಗೈರು ಸಂಪತ್ತು ಮತ್ತು ಯಶಸ್ಸನ್ನು ಕಳೆಗುಂದಿಸುತ್ತದೆ. ಪ್ರೀತಿ ಇದ್ದಲ್ಲಿ ಸಂಪತ್ತು, ಯಶಸ್ಸು ಎಲ್ಲದಕ್ಕೂ ಬೆಲೆ ಎಂಬಂತೆ ಉಳಿದ ಇಬ್ಬರೂ ಆ ಮನೆಯನ್ನು ಪ್ರವೇಶಿಸುತ್ತಾರೆ.
ಪರಸ್ಪರರ ಮಧ್ಯೆ ಇರದ ಆದರ ಮತ್ತು ಕಾಳಜಿಗಳ ಈ ಕಾಲಮಾನದ ಲಾಭಕಾರಿ ಸಂಬಂಧಗಳ ಜಾಲದಲ್ಲಿ ಪ್ರೀತಿ ಅದೆಷ್ಟು ದುಬಾರಿ ನೋಡಿ. ದೊಡ್ಡ ದೊಡ್ಡ ಬಂಗಲೆಗಳಲ್ಲಿ ಕಾಣುವ ಪ್ರೀತಿಯ ಅನುಪಸ್ಥಿತಿ ಉಳಿದೆಲ್ಲವನ್ನೂ ಅಪಹಾಸ್ಯ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.