ADVERTISEMENT

ನುಡಿ ಬೆಳಗು: ದಾಂಪತ್ಯ ಹೇಗಿರಬೇಕು?

ಡಾ.ದಾದಾಪೀರ್ ನವಿಲೇಹಾಳ್
Published 9 ನವೆಂಬರ್ 2025, 19:30 IST
Last Updated 9 ನವೆಂಬರ್ 2025, 19:30 IST
   

ಗಿಡ್ಡನ ಮನೆಯವರು ಮಗನಿಗೆ ಜೋಡಿಯಾಗಬಲ್ಲ ಗಿಡ್ಡಿಯನ್ನು ಹುಡುಕಿ ಮದುವೆ ಮಾಡಿದರು. ಗಿಡ್ಡ ತನ್ನ ಹೆಂಡತಿಯನ್ನು ಗಿಡ್ಡಿ ಅಂತ ಕರೆದರೆ ಆಕೆಯೂ ತನ್ನ ಗಂಡನನ್ನು ಗಿಡ್ಡ ಅಂತಲೇ ಕೂಗಿ ಕರೆಯುವಂತಹ ಅನ್ಯೋನ್ಯತೆ ಅವರಲ್ಲಿತ್ತು. ಆದರೆ ಗಿಡ್ಡಿ ಮನೆಯಲ್ಲಿ ಮಾತ್ರವಲ್ಲದೆ ಮಾರ್ಕೆಟ್ಟು, ಬಸ್ ಸ್ಟ್ಯಾಂಡ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತನ್ನನ್ನು ಗಿಡ್ಡ ಅಂತ ಕರೆಯುವುದರಿಂದ ಮುಜುಗರಪಡುತ್ತಿದ್ದ. ಮನೆಯಲ್ಲಿದ್ದಾಗ ಗಿಡ್ಡ ಅಂತ ಕರಿ, ಹೊರಗಡೆ ಗೌರವದಿಂದ ರೀ, ಬನ್ನಿ, ಹೋಗಿ ಅಂತ ಕರಿ ಎಂದು ಆಕೆಗೆ ಪ್ರೀತಿಯಿಂದಲೇ ಹೇಳಿದ. ಆಕೆ ಒಪ್ಪಿಕೊಂಡಳು.

ಒಂದು ದಿನ ಅಪ್ಪ ಅಮ್ಮ ಅವರ ಮನೆಗೆ ಬರುತ್ತಿದ್ದುದನ್ನು ಅಂಗಳದಲ್ಲಿದ್ದ ಗಿಡ್ಡಿ ನೋಡಿದಳು. ಸಂತೋಷ ತಡೆಯಲಾರದೆ ‘ಗಿಡ್ಡ ಗಿಡ್ಡ... ನಮ್ಮಪ್ಪ ನಮ್ಮಮ್ಮ ಬಂದ್ರು’ ಅಂತ ಕುಣಿದಾಡುತ್ತಾ ಕೂಗಿದಳು. ಗಿಡ್ಡನಿಗೆ ತನ್ನ ಅತ್ತೆ ಮಾವನ ಎದುರಿಗೆ ಅಸಾಧ್ಯವಾದ ಅವಮಾನವಾದಂತಾಗಿ ಹಲ್ಲು ಹಲ್ಲು ಕಡಿದ. ಊಟೋಪಚಾರದ ನಂತರ ಮಗಳು ಅಳಿಯನನ್ನು ಹರಸಿ ಅತ್ತೆ ಮಾವ ಹೊರಟು ಹೋದರು. ಅವರು ಅತ್ತ ಹೋಗುತ್ತಿದ್ದಂತೆ ಗಿಡ್ಡ ತುಂಬಿಕೊಂಡಿದ್ದ ಸಿಟ್ಟನ್ನೆಲ್ಲಾ ಒಟ್ಟುಗೂಡಿಸಿಕೊಂಡು ಗಿಡ್ಡಿಯನ್ನು ದರದರ ಎಳೆದುಕೊಂಡು ಹಿತ್ತಲಿಗೊಯ್ದು ಕತ್ತರಿಸಿ ಸಣ್ಣ ಸಣ್ಣ ತುಂಡು ಮಾಡಿ ಬಿಸಾಕಿದ. ಒಂದೆರಡು ದಿನದಲ್ಲಿ ಗಿಡ್ಡಿಯ ದೇಹದ ತುಂಡುಗಳೆಲ್ಲಾ ಗರಿಕೆ ಹುಲ್ಲಾಗಿ ಹುಟ್ಟಿ ಚಿಗುರಿದವು. ಹಸುವೊಂದು ಆ ಹುಲ್ಲನ್ನು ತಿಂದು ‘ಅಂಬಾ ಗಿಡ್ಡಾ’ ಅಂತ ತೇಗಿತು. ಕೇಳಿಸಿಕೊಂಡ ಗಿಡ್ಡನಿಗೆ ರೇಗಿತು. ಹಸುವನ್ನು ಕೊಂದು ಅದರ ಚರ್ಮವನ್ನು ತುಂಡುಗಳಾಗಿ ಕತ್ತರಿಸಿ ಹಿತ್ತಲಲ್ಲಿ ಸುರಿದ. ಮರುದಿನ ಹುಂಜವೊಂದು ಹಿತ್ತಲಲ್ಲಿ ಚೆಲ್ಲಿದ್ದ ಚರ್ಮದ ತುಣುಕುಗಳನ್ನು ತಿಂದು ‘ಕೊಕ್ಕೊಕ್ಕೋ ಗಿಡ್ಡಾ’ ಅಂತ ಕೂಗಿತು. ಕೆಂಡದಂತಹ ಕೋಪದಿಂದ ಗಿಡ್ಡ ಹುಂಜವನ್ನು ಹಿಡಿದು ಕೊಯ್ದು ಸಾರು ಮಾಡಿಕೊಂಡು ಗಟಗಟ ಕುಡಿದ. ಸ್ವಲ್ಪ ಹೊತ್ತಿನಲ್ಲೇ ಗಿಡ್ಡನ ಗಂಟಲಿನಿಂದ ತೇಗುಗಳು ಶುರುವಾಗಿ ಪ್ರತಿ ತೇಗಿನ ಕೊನೆಯಲ್ಲಿ ‘ಗಿಡ್ಡಾ’ ಅಂತ ತನ್ನ ಹೆಂಡತಿಯೇ ಕೂಗಿದಂತಾಯಿತು. ತನ್ನ ಹೊಟ್ಟೆಯಲ್ಲೇ ಅವಳು ಸೇರಿಕೊಂಡಿದ್ದಾಳೆಂದು ತಿಳಿದ ಗಿಡ್ಡ ಅವಳನ್ನು ಎಲ್ಲಿದ್ದರೂ ಕೊಂದೇ ತೀರಬೇಕೆಂಬ ಹಟದಲ್ಲಿ ತನ್ನನ್ನು ತಾನು ಕೊಂದುಕೊಂಡ.

ಭೌತಿಕ ಅಸ್ತಿತ್ವವನ್ನು ಕಳೆದುಕೊಂಡರೂ ಗಂಡಿನ ಮೇಲರಿಮೆಯ ವಿರುದ್ಧ ಸ್ಥಿರವಾಗಿ ನಿಂತ ಹೆಣ್ಣಿನ ಗಟ್ಟಿತನವನ್ನು ಸಾಬೀತುಪಡಿಸುವ ಈ ಕತೆ ದುರ್ಬಲ ಗಂಡಸಿನ ಮನೋದಾರಿದ್ರ್ಯವನ್ನೂ ಹೇಳುತ್ತದೆ. ಅಹಮ್ಮಿನ ಸಮರದಲ್ಲಿ ಬದುಕು ಮಾಧುರ್ಯ ಕಳೆದುಕೊಂಡು ದಾಂಪತ್ಯದ ಲಯ ತಪ್ಪುತ್ತಿದೆ. ದಂಪತಿ ನಡುವಿನ ಬೆಸುಗೆ ದೇಹ ಮನಸ್ಸುಗಳ ಸಮಾನ ಸಮ್ಮಿಲನಕ್ಕೆ ಸಾಕ್ಷಿ. ಹಾಗೆ ನೋಡಿದರೆ ಹೆಣ್ಣಿನ ಮೇಲಿನ ಅತಿಯಾದ ಅವಲಂಬನೆಯೇ ಗಂಡಿನ ಕ್ರೌರ್ಯದ ಮೂಲವಾಗಿದೆ.

ADVERTISEMENT

ಗಂಡ ಹೆಂಡತಿ ಸಂಬಂಧ ಭಾವನಾತ್ಮಕ ಹೊಂದಾಣಿಕೆಯನ್ನು ಬಯಸುತ್ತದೆ. ಮೇಲು ಕೀಳು ಮೀರಿದ ಒಲವಿನಿಂದ ಮಾತ್ರ ದಾಂಪತ್ಯ ದೃಢವಾಗುತ್ತಾ ಸಾಗುತ್ತದೆ. ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎನ್ನುವುದು ಭೂಮಿ ಬಂಗಾರ ಎಂಬುದು ಸಂಪತ್ತಲ್ಲ, ಪ್ರೀತಿಯೇ ಸಂಪತ್ತು ಎಂದು ಭಾವಿಸಿ ಬದುಕುವುದಕ್ಕೆ ಬೇಕಾದ ನಿಲವು.  ಅಭಿರುಚಿ, ಆಸಕ್ತಿ ಆಲೋಚನೆಗಳಲ್ಲಿ ವ್ಯತ್ಯಾಸಗಳಿಲ್ಲದ ಒಂದೇ ಒಂದು ಜೋಡಿ ಸಿಗುವುದು ಸಾಧ್ಯವಿಲ್ಲ. ಆದರೆ ಸಣ್ಣ ಮಟ್ಟದ ಹೊಂದಾಣಿಕೆಯಲ್ಲಿ ವ್ಯತ್ಯಾಸಗಳನ್ನು ಸಹಿಸಿಕೊಂಡು ಪರಸ್ಪರರ ತಪ್ಪುಗಳನ್ನು ನುಂಗಿಕೊಳ್ಳುತ್ತಾ ಸುದೀರ್ಘ ಬಾಳುವೆ ಸಾಗಿಸುತ್ತಿರುವ ನೂರಾರು ನಿದರ್ಶನಗಳು ಸಿಗುತ್ತವೆ. ಅಸಮಾಧಾನದ ಒಂದರೆಕ್ಷಣದಲ್ಲಿ ಕೇಳುವ ಕ್ಷಮೆಯೊಂದು ಆರಾಮದಾಯಕ ಸುಖ ಕೊಡುತ್ತದೆ. ಹಾಗಾದಾಗ ವ್ಯತ್ಯಾಸಗಳನ್ನು ಸಂಭ್ರಮಿಸುವುದು ಸಾಧ್ಯ. ಅಹಂ ತುಂಬಿದ ದಾಂಪತ್ಯ ಯಾತನಾಮಯ. ಕ್ಷಮೆ ಸಹನೆ ಅರಿತ ಸಂಸಾರವು ಅನನ್ಯ ಗೆಳೆತನದ ಯಾನ. ಒಬ್ಬರನ್ನೊಬ್ಬರು ಆಲಿಸುವ ಆತುಕೊಳ್ಳುವ ಕೂಡುಪಯಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.