ADVERTISEMENT

ನುಡಿ ಬೆಳಗು: ಸಾಯಿಸುವ ಗತವ ಮೆಟ್ಟಿ

ವಾಸುದೇವ ನಾಡಿಗ್
Published 19 ನವೆಂಬರ್ 2025, 1:17 IST
Last Updated 19 ನವೆಂಬರ್ 2025, 1:17 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಊರಿನ ಜನರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು, ಬರುವ ಪ್ರವಾಸಿಗರೆಲ್ಲರೂ ಆ ಯುವತಿಯ ಕಲಾ ಕುಸರಿಯ ಗಾಜಿನ ವಸ್ತುಗಳ ಅಂಗಡಿಗೆ ಭೇಟಿ ಕೊಟ್ಟೇ ಹೋಗುತ್ತಿದ್ದರು; ಏನಿರಬಹುದು ಅಂತಹದ್ದು ಅಂತ. ನಸುಕಿನಲ್ಲೇ ಎದ್ದು ಏಕಾಗ್ರತೆ ನಯ ನಾಜೂಕಿನಿಂದ ಆ ಸೂಕ್ಷ್ಮ ಗಾಜಿನ ಮಡಕೆ ಭರಣಿ ಕನ್ನಡಿ ಲೋಟ ಇತ್ಯಾದಿ ವಸ್ತುಗಳನ್ನು ಹೊರತೆಗೆದು ಸಂಯಮದಿಂದ ಒರೆಸಿ ಸಾಲಾಗಿ ಜೋಡಿಸಿಡುತ್ತಿದ್ದ ಬಗೆಯೇ ಆಶ್ಚರ್ಯಕರ.

ತಾನೆ ಸ್ವತಃ ತನ್ನ ಅಪ್ಪ ಅಮ್ಮ ಅಜ್ಜ ಅಜ್ಜಿಯ ಮೂಲಕ ಕಲಿತೇ ತಯಾರಿಸುತ್ತಿದ್ದ ಮತ್ತು ಹೊರದೇಶಗಳಿಂದಲೂ ತಂದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆ ಯುವತಿ ಇಡೀ ಊರಿನ ಅಚ್ಚರಿ. ಕಾಲ ಕಳೆದಂತೆ ವ್ಯಾಪಾರವೂ ಮತ್ತು ವಸ್ತುಗಳ ಸಂಗ್ರಹವೂ ಹೆಚ್ಚಾದ್ದರಿಂದ ಒಬ್ಬ ಸಹಾಯಕರ ಅಗತ್ಯವೂ ಇತ್ತು. ಹೇಗೋ ಒಬ್ಬ ವೃದ್ಧನ ಪರಿಚಯವಾಗಿ ಅವನನ್ನೇ ಸಹಾಯಕನನ್ನಾಗಿ ಇಟ್ಟುಕೊಂಡಳು. ತುಸು ನಡುಗುವ ದೇಹದ ಆ ವೃದ್ಧನಿಗೆ ಭಯ. ಈ ಎಲ್ಲ ವಸ್ತುಗಳನ್ನು ಎತ್ತಿಡುವಾಗ ಎಲ್ಲಿ ಕೈಜಾರಿ ಬಿದ್ದು ಒಡೆದು ಹೋಗುತ್ತದೆಯೋ ಅಂತ. ಮನಸು ಕೂಡಾ ಸದಾ ವಿಚಲಿತ. ನಿಧನ ಹೊಂದಿದ ಪತ್ನಿ, ಮನೆ ಬಿಟ್ಟು ಓಡಿಹೋದ ಮಗ ಹೀಗೆ ನೆನಪು ನೋವು. ಒಮ್ಮೆ ಹೀಗೇ ಆಯಿತು. ನಸುಕಿನಲ್ಲಿ ಎಲ್ಲ ವಸ್ತುಗಳನ್ನು ಜೋಡಿಸಿಡುವಾಗ ಸುಂದರವಾದ ಗಾಜಿನ ಹೂ ಕುಂಡವೊಂದು ಬಿದ್ದೇ ಹೋಯಿತು.

ADVERTISEMENT

ವೃದ್ಧ ಹೋ ಅಂತ ಅಳುತ್ತ ಕೂತ. ಅವನನ್ನು ಸಮಾಧಾನ ಮಾಡಿದ ಯುವತಿ ನೆಲದಲ್ಲಿ ಬಿದ್ದಿದ್ದ ಚೂರುಗಳನ್ನು ಆಯ್ದುಕೊಂಡಳು. ಮರುದಿನ ಅಂಗಡಿಯ ಕಟ್ಟೆಯ ಮುಂದಿನ ಸಾಲಿನಲ್ಲಿಯೇ ಆ ಒಡೆದ ಚೂರುಗಳ ಅಂಟಿಸಿ ಮತ್ತೆ ಅಣಿಗೊಳಿಸದ್ದಳು. ಚೂರುಗಳನ್ನು ಅಂಟಿಸುವಾಗ ಬಂಗಾರದ ಬಣ್ಣದ ಗೋಂದನ್ನು ಬಳಸಿ ಇನ್ನಷ್ಟು ಅಂದ ಗೊಳಿಸಿದ್ದಳು. ಬಿರುಕುಗಳನ್ನೂ ಚಂದಗೊಳಿಸುವ ಮಾರ್ಗವಿದು.

ಸದಾ ನಮ್ಮನ್ನು ಕದಡುವ ಮತ್ತು ಗಾಯಗೊಳಿಸುವ ನೆನಪು ಸಂವೇದನೆಗಳಿಂದ ದೂರವಿರಲು ಮತ್ತೊಂದು ಕೆಲಸದ ಮೇಲೆ ಧ್ಯಾನ ಇಡುವುದು ಅಗತ್ಯ ಎನಿಸುತ್ತದೆ. ಆ ಯುವತಿ ಅಪಘಾತದ ಸರಣಿಯಲ್ಲಿ ತನ್ನ ಅಜ್ಜ ಅಜ್ಜಿ ಅಪ್ಪ ಅಮ್ಮನನ್ನು ಕಳೆದುಕೊಂಡು ಖಿನ್ನತೆಗೆ ಜಾರಿದಾಗ ಅವಳಿಗೆ ಹೊಸ ಬಾಳಿನತ್ತ ಸಾಗಬೇಕಿತ್ತು. ಖಿನ್ನತೆಯಿಂದ ಬಿಡುಗಡೆ ಬೇಕಿತ್ತು. ಅಪಾರವಾದ ಸಂಯಮವನ್ನು ಬಯಸುವ ಈ ಕುಸುರಿ ಕಲೆಗಳನ್ನು ಹೊತ್ತ ಕಲಾತ್ಮಕ ವಸ್ತುಗಳ ನಿರ್ವಹಣೆಯನ್ನು ಆಯ್ದುಕೊಂಡಿದ್ದಳು. ಹಳೆ ಕೊರಗುಗಳನ್ನು, ಹಳೆ ಗಾಯಗಳನ್ನು, ಹಳೆಯ ಸೋಲುಗಳನ್ನು ಮರೆಯಲು ಈ ತರಹದ ಹೊಸ ಧ್ಯಾನಸ್ಥ ಕೆಲಸದಲ್ಲಿ ಮುಳುಗುವ ಬಗೆಯನ್ನು ವೃದ್ಧನಿಗೂ ಕಲಿಸಿಕೊಟ್ಟಿದ್ದಳು

ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಮತ್ತು ಸೃಜನಶೀಲ ಕೆಲಸವೊಂದರಲ್ಲಿ ಮುಳಗುವ ಮನುಷ್ಯರ ಆರೋಗ್ಯದ ಗುಟ್ಟು ಇದೇ. ಪರಿಸ್ಥಿತಿಗಳನ್ನು ನಿರ್ವಹಿಸುವ ಬಾಳಿನ ಕಲೆ ಇದು ಅನಿಸುತ್ತದೆ. ಎಷ್ಟೋ ಸಲ ನಮ್ಮ ದೈಹಿಕವಾದ ವ್ಯಸ್ತತೆ (ಬ್ಯುಸಿ) ನಮ್ಮ ಮಾನಸಿಕ ಸಂತುಲತೆಯನ್ನೂ ಚೊಕ್ಕವಾಗಿ ಇಡಬಲ್ಲದು. ಇಡೀ ಊರಿನ ಜನರು ಹುಬ್ಬೇರಿಸುವ ಹಾಗೆ ಮಾಡಿದ್ದ ಆ ಯುವತಿಯ ವರ್ತಮಾನದ ಇರುವಿಕೆಯ ಹಿಂದೆ ಎಂತಹ ನೋವಿನ ಇತಿಹಾಸ ಇದೆ, ನೆನಪು ಇದೆ ನೋಡಿ. ಹಿಂದಣ ಹೆಜ್ಜೆಗಳನ್ನು ಅನೇಕ ಸಲ ಮರೆಯುವುದು ಕೂಡಾ ದಿವ್ಯ ಔಷಧಿಯೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.