ADVERTISEMENT

ನುಡಿ ಬೆಳಗು | ನಾನು ಎಂಬುದು ನಾನಲ್ಲ

ಕಲೀಮ್ ಉಲ್ಲಾ
Published 23 ಜನವರಿ 2024, 19:30 IST
Last Updated 23 ಜನವರಿ 2024, 19:30 IST
   

ಪುನೀತ್ ರಾಜ್‌ ಕುಮಾರ್‌ ಅವರು ತಮ್ಮ ಕೊನೆಯ ಚಿತ್ರ ಗಂಧದಗುಡಿ ಚಿತ್ರೀಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಅಣಶಿ ಅಭಯಾರಣ್ಯದ ದಟ್ಟ ಶೋಲಾ ಕಾಡಿನ ನಡುವೆ ಈ ಪುಟಾಣಿ ಹಳ್ಳಿ ನೆಲೆಸಿದೆ. ಕಚ್ಚಾ ರಸ್ತೆ ಹಿಡಿದು ಇಪ್ಪತ್ತೆರಡು ಮೈಲಿ ಹೋದರೆ ಇಲ್ಲಿಗೆ ತಲುಪಬಹುದು. ಕುಣಬಿ ಬುಡಕಟ್ಟು ಜನಾಂಗದ ಹದಿಮೂರು ಮನೆಗಳು ಇಲ್ಲಿವೆ. ನಗರ ಪ್ರಪಂಚದ ಕಿಂಚಿತ್ತೂ ಒಡನಾಟ ಇಲ್ಲದ ಇಲ್ಲೊಂದು ಪುಟ್ಟ ಶಾಲೆ ಇದೆ. ಅದಕ್ಕೊಂದು ಶೀಟಿನ ಮಾಳಿಗೆ. ಪ್ರಶಾಂತ್‌ ಎಂಬ ಸ್ಥಳೀಯ ಯುವಕ ಇಲ್ಲಿನ ಮೇಷ್ಟ್ರು.

ಪುನೀತ್‌ ಈ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳಿಗೆ ನಾನು ಯಾರು ನಿಮಗೆ ಗೊತ್ತೇ? ಎಂದು ಕೇಳಿದಾಗ ಚಿಣ್ಣರು ಗೊತ್ತಿಲ್ಲ ಎಂದು ತಲೆಯಾಡಿಸಿದರು. ನಮ್ಮ ತಂದೆ ಯಾರೆಂದು ಗೊತ್ತೆ? ಎಂದಾಗ ಅದಕ್ಕೂ ಇಲ್ಲ ಎಂಬುದೇ ಉತ್ತರ. ಸಿನಿಮಾ, ಟಿವಿಗಳ ಸಂಪರ್ಕವಿಲ್ಲದ ಈ ನಿಸರ್ಗದತ್ತ ಪ್ರದೇಶದಲ್ಲಿ ಸಿಕ್ಕ ಉತ್ತರದಿಂದ ಪುನೀತ್‌ ಒಮ್ಮೆ ನಕ್ಕರಂತೆ. ‘ನಾವು ಮಹಾನ್‌ ಪ್ರಸಿದ್ಧರು’ ಎಂಬ ಭ್ರಮೆಯಲ್ಲಿ ಬದುಕುತ್ತೇವೆ. ಈ ಮಕ್ಕಳ ಉತ್ತರ ನಾನು ಎಂಬ ಸಣ್ಣ ಅಹಂಕಾರವನ್ನೂ ಕರಗಿಸಿತು ಎಂದರಂತೆ. ಮಕ್ಕಳ ಜೊತೆ ಆಡಿ ನಲಿದು ಎರಡು ದಿನ ಒಬ್ಬ ಸಾಮಾನ್ಯ ಮನುಷ್ಯನಾಗಿ ಈ ಹಾಡಿಯಲ್ಲಿ ಕಾಲಕಳೆದರು ಪುನೀತ್‌. ಅವರು ಆ ದಿನ ಪಡೆದ ದಿವ್ಯ ಜ್ಞಾನ ಎಂದರೆ ನಾನೆಂಬ ಅಹಮ್ಮಿಕೆಯ ನಾಶ.

ನಿರ್ಮಲ ಚಿತ್ತ ಇದ್ದವರಿಗಷ್ಟೇ ಈ ಹೊಳಹು ಸಿಗುವುದು. ಮಾನವೀಯತೆ ಖನಿಯಾಗಿದ್ದ ಪುನೀತ್‌ ಈ ಸಣ್ಣ ಘಟನೆಯಿಂದ ಒಂದು ಸತ್ಯದ ಸಾಕ್ಷಾತ್ಕಾರ ಕಂಡುಕೊಂಡರು. ‘ನಾನು ಯಾರು’ ಎಂಬ ಆತ್ಮದ ಪ್ರಶ್ನೆಗೆ ಪ್ರಕೃತಿ ಒಮ್ಮೆ ಮಾತ್ರ ಕೊಡಬಲ್ಲ ಮೌನದ ಉತ್ತರವಿದು.

ADVERTISEMENT

ಲಂಕೇಶರ ನಾಟಕದಲ್ಲಿ ದೊರೆ ನಾದಿರ್ ತಾನೇ ಸರ್ವಶ್ರೇಷ್ಠನೆಂಬ ಅಹಂಕಾರದ ತುತ್ತ ತುದಿಯಲ್ಲಿರುತ್ತಾನೆ. ಇವನ ದೇಹದ ಕಾಯಿಲೆ ವಾಸಿಮಾಡಲು ಹಕೀಮಾ ಅಲವಿ ಖಾನ್ ಬರುತ್ತಾನೆ. ದೇಹದ ಜಾಡ್ಯಕ್ಕಿಂತ ರಾಜನ ಮನಸ್ಸಿಗೆ ಅಪಾಯಕಾರಿ ಸೊಕ್ಕಿನ ಕಾಯಿಲೆ ಅಂಟಿರುವ ಸಂಗತಿ ಆತನಿಗೆ ಗೊತ್ತಾಗುತ್ತದೆ. ರಾಜ ನಿನ್ನ ಅಹಂ ಬಿಟ್ಟು, ಮಾಮೂಲಿ ಮನುಷ್ಯನಾದರಷ್ಟೇ ನೀನು ಗುಣಮುಖನಾಗಲು ಸಾಧ್ಯ ಎಂದು ವಿವರಿಸುತ್ತಾನೆ. ಮೊದಮೊದಲು ಹಟಮಾರಿಯಾಗುವ ದೊರೆ ತನ್ನ ಪ್ರಾಣ ಉಳಿಸಿಕೊಳ್ಳಲು ಕೊನೆಗೆ ಗರ್ವ ತ್ಯಜಿಸಿ ಸಾಮಾನ್ಯ ವ್ಯಕ್ತಿಯಾಗಿ ವಾಸಿಯಾಗುತ್ತಾನೆ.

ಹೆಸರು, ಹಣ, ವಿದ್ಯೆ, ಪ್ರಸಿದ್ಧಿ ಎಲ್ಲವನ್ನೂ ಪಡೆದವರು ಮತ್ತೆ ಮತ್ತೆ ಅದನ್ನೇ ಗಳಿಸಲು ಹಂಬಲಿಸುತ್ತಾರೆ. ಜಗತ್ತು ತನ್ನ ಗುರುತಿಸುವಲ್ಲಿ ಕೊಂಚ ತಡ ಮಾಡಿದರೂ ಮಾನ ಹೋಯಿತೆಂಬಂತೆ ಎಗರಾಡುತ್ತಾರೆ. ಉನ್ನತಿ ಗಳಿಸಿದಷ್ಟೂ ನಡೆ ನುಡಿಯಲ್ಲಿ ಅಹಂಕಾರ ನುಸುಳುತ್ತದೆ. ತಮ್ಮನ್ನು ತಾವೇ ವೈಭವೀಕರಿಸಿಕೊಂಡು ಬದುಕುವ ಜನ ಮಾನವೀಯ ಮೌಲ್ಯಗಳನ್ನೇ ಮರೆಯುತ್ತಾರೆ. ಹೊಗಳಿಕೆ ದುಶ್ಚಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.