ADVERTISEMENT

ನುಡಿ ಬೆಳಗು: ಮರಕ್ಕೆ ದಕ್ಕಿದ ನೀರ ಪುರಾವೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:06 IST
Last Updated 29 ಜನವರಿ 2026, 0:06 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಜ್ಞಾನದೇವನ ಬಳಿ ಬಂದ ಒಬ್ಬ, ‘ದೇವರು ಅಂತ ಇದ್ದಿದ್ದರೆ ಕೆಟ್ಟವರೆಲ್ಲಾ ಸತ್ತು ಹೋಗಬೇಕಿತ್ತು. ಇಲ್ಲ ಕೆಡುಕೇ ನಾಶವಾಗಬೇಕಿತ್ತು. ನಮ್ಮ ಭ್ರಮೆಗಳಿಗೆ ಒಂದೊಂದು ಹೆಸರನ್ನು ಕೊಡುತ್ತೇವೆ ಅಷ್ಟೇ’ ಎಂದ. ಜ್ಞಾನದೇವ ಅವನ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಂಡ. ವಾದ ಮಾಡಿದವ ಅಂದುಕೊಂಡ, ‘ಇವನಿಗೆ ಹೇಳಲಿಕ್ಕೆ ಮತ್ತೇನೂ ಉಳಿದಿಲ್ಲ ನಾನು ಗೆದ್ದೆ’ ಎಂದು. ದೀರ್ಘಶ್ವಾಸ ತೆಗೆದುಕೊಂಡು ಜ್ಞಾನದೇವ ಮಾತನಾಡಲಾರಂಭಿಸಿದ, ‘ಗೆಳೆಯ ನಿನ್ನ ಮಾತನ್ನು ಒಪ್ಪುತ್ತೇನೆ. ನನ್ನದೂ ಒಂದು ಪ್ರಶ್ನೆ ಇದೆ. ಅದಕ್ಕೆ ಉತ್ತರಿಸಬಲ್ಲೆಯಾ?’. ಗೆದ್ದ ಹುಮ್ಮಸ್ಸಿನಲ್ಲಿದ್ದ ವ್ಯಕ್ತಿ ಸಮ್ಮತಿಸಿದ.

ಜ್ಞಾನದೇವ ಒಂದು ಮರದ ಬಳಿ ಅವನನ್ನು ಕರೆದೊಯ್ದು, ‘ಈ ಮರ ನೆಲದಿಂದ ಮೇಲೆ ಮಾತ್ರ ಇದೆಯೋ? ನೆಲದ ಕೆಳಗೆಯೂ ಇದೆಯೋ? ಎಂದ. ಅದಕ್ಕವನು ಇದೆಂಥಾ ಪ್ರಶ್ನೆ ಕೇಳುತ್ತಿರುವೆ? ನೆಲದೊಳಗೆ ಇಲ್ಲದಿದ್ದರೆ ಮೇಲೆ ಗಿಡ ಹೇಗೆ ಬೆಳೆಯುತ್ತೆ? ಮರ ಹೇಗಾಗುತ್ತೆ? ಮಗುಚಿಬಿದ್ದ ಮರದ ಬೊಡ್ಡೆಯನ್ನು ನಾನು ಕಂಡಿರುವೆ’ ಎಂದ. ಜ್ಞಾನದೇವ ಕೇಳಿದ, ‘ಹಾಗಾದರೆ ಕಾಣದಿದ್ದರೂ ಇರುತ್ತದೆ ಎಂದು ನಂಬುತ್ತೀಯ ಅಲ್ಲವೇ?’ ವಾದಿ ಹೇಳಿದ, ‘ಹೌದು’. ಜ್ಞಾನದೇವ ನಕ್ಕ, ‘ಅಂದರೆ ಪುರಾವೆಗಳನ್ನು ಕಾಣದಿದ್ದರೆ ಇಲ್ಲವೆಂದು ಹೇಳುವೆ ಅಲ್ಲವೇ? ಆದರೆ ಕೆಲ ಸಂಗತಿಗಳು ಅದು ಮರದ ಬೇರಿನ ಹಾಗೆ ಇದ್ದೇ ಇರುತ್ತವೆ. ಒಳಿತು ಸುಮ್ಮನೆ ಅದರ ಪಾಡಿಗೆ ಅದು ಇರುತ್ತದೆ. ಅದು ಯಾರಿಗೂ ಏನನ್ನೂ ಮಾಡುವುದಿಲ್ಲ. ಕೆಡುಕು ಹಾಗಲ್ಲ. ಎಲ್ಲರಿಗೂ ತಾನು ಇದ್ದೇನೆಂದು ತೋರಿಸುತ್ತದೆ. ಸುಮ್ಮನೆ ಗಮನಿಸು, ಕೆಡುಕು ಒಳಿತಿನ ಕೈಯಿಂದಲೇ ನಾಶವಾಗುವುದು’. ವಾದ ಮಾಡುವವ, ‘ಕಾಣದೇ ಇದ್ದರೂ ನೀನು ಅದು ಇದೆ ಎಂದಾಕ್ಷಣ ಒಪ್ಪಿಕೊಳ್ಳಬೇಕೇ?’ ತೀಕ್ಷ್ಣವಾಗಿ ಪ್ರಶ್ನಿಸಿದ.

ADVERTISEMENT

‘ಇಲ್ಲೊಂದು ಚಿನ್ನದ ಗಣಿ ಇದೆ, ವಜ್ರಗಳ ನಿಕ್ಷೇಪವಿದೆ, ಇಲ್ಲ ರಾಜ ಮಹಾರಾಜರ ಕಾಲದ ದೊಡ್ಡ ಖಜಾನೆ ಇದೆ ಎಂದರೆ ನೀನು ಏನು ಮಾಡುತ್ತೀಯ? ಅದೆಲ್ಲಾ ಹೋಗಲಿ ಸುಮ್ಮನೆ ಯಾರೋ ಒಬ್ಬ ತನ್ನ ಒಂದು ಅಮೂಲ್ಯವಾದ ವಜ್ರದ ಹರಳು ಕಳೆದಿದೆ. ಹುಡುಕುತ್ತಿರುವೆ ಎಂದರೆ ನೀನೂ ಅವನ ಜೊತೆ ಸೇರಿ ಹುಡುಕುತ್ತೀಯ ಅಲ್ಲವೇ ಅದು ಯಾಕೆ?’ ಎಂದ ಜ್ಞಾನದೇವ. ‘ಹೇಳಿದವನ ಮೇಲೆ ನಂಬಿಕೆ ಅಷ್ಟೇ’ ಎಂದ ವಾದಿ. ಆಗ ಜ್ಞಾನದೇವ, ‘ಅಕಸ್ಮಾತ್ ಇದ್ದರೆ ಅದನ್ನು ಯಾಕೆ ಕಾಣಬಾರದು? ಹೇಳಿದವನ ಮಾತು ಸತ್ಯವೋ, ಸುಳ್ಳೋ ಎಂದು ಯೋಚಿಸದೆ ಅದನ್ನು ಪಡೆಯಲು ನಿರ್ಧಾರ ಮಾಡುತ್ತೀಯ. ಅದೇನಾದರೂ ಸಿಕ್ಕಿಬಿಟ್ಟರೆ ಎಂದು ಕನಸು ಕಾಣಲು ಆರಂಭಿಸುತ್ತೀಯ’. ವಾದಿ ಅವನ ಮಾತಿಗೆ ಮೆತ್ತಗಾದ. ಮತ್ತೆ ಜ್ಞಾನದೇವ, ‘ಅಮೂಲ್ಯವಾದ ಯಾವುದೋ ವಸ್ತುವಿದೆ ಎಂದ ತಕ್ಷಣ ಅದನ್ನು ಪಡೆಯಲು ಲಾಲಸೆಯಿಂದ ಹೊರಡುವ ನಾವು ಒಂದು ದೊಡ್ಡ ಶಕ್ತಿಯನ್ನು ಕಾಣಲು ಯಾಕೆ ವಾದ ಮಾಡುತ್ತೇವೆ? ಹುಡುಕುವುದಕ್ಕಿಂತಲೂ ಮುಂಚೆಯೇ, ಅನುಮಾನಕ್ಕೆ ಬೀಳುತ್ತೇವೆ. ಮರಕ್ಕೆ ದಕ್ಕುವ ನೀರ ಪುರಾವೆಯಂತೆ ಸತ್ಶಕ್ತಿಯಂತೆ ಇದ್ದೇ ಇರುತ್ತದೆ. ಅಜ್ಞಾನ ನಿನ್ನ ಸ್ವಭಾವ ಧರ್ಮವಾಗಿದ್ದರೆ ಯಾರೇನೂ ಮಾಡಲಾರ’ ಎಂದ.

ಪ್ರಕಾಶವನ್ನು ಕೊಡುವ ಜ್ವಾಲೆಗೆ ಕತ್ತಲೆ ಎನ್ನಲಿಕ್ಕಾಗುತ್ತದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.