ನುಡಿ ಬೆಳಗು
ಪರ್ಷಿಯಾದ ಅಮರ ಪ್ರೇಮಕವಿ ಜಲಾಲುದ್ದೀನ್ ಮೊಹಮ್ಮದ್ ರೂಮಿ ಜಗತ್ತಿಗೆ ಪ್ರೀತಿಯ ಅರ್ಥ ಕಲಿಸಲು ಹೆಣಗಾಡಿದ ವ್ಯಕ್ತಿ. ಒಂದು ಹುಡುಗ ಹುಡುಗಿಯ ಕಥೆಯೇ ಎಲ್ಲಾ ಪ್ರೀತಿಗಳಿಗೆ ಸಂಕೇತ ಎಂದು ಸುಲಭಕ್ಕೆ ಭಾವಿಸುವವರು ನಾವು. ಆದರೆ ಅದಕ್ಕೂ ಮೀರಿದ ಪ್ರೀತಿಗಳು ನಮ್ಮ ಸಮಾಜದಲ್ಲಿ ಇದ್ದೇ ಇವೆ. ಇವುಗಳ ಉಲ್ಲೇಖ ಕೆಲಕಡೆ ಇಲ್ಲದಿರಬಹುದು, ಕೆಲವು ಕಡೆ ಇರಬಹುದು. ಮನುಷ್ಯನೊಬ್ಬ ಯಾವ ಸ್ವಾರ್ಥವೂ ಇಲ್ಲದೆ ತನ್ನ ಸುತ್ತಲ ಪರಿಸರದ ಜೀವಜಾಲಕ್ಕೆ ತೋರುವ ನಿಷ್ಕಲ್ಮಶ ಮಮತೆಯೇ ಪ್ರೀತಿ. ಪ್ರೀತಿಗೆ ನಿರೀಕ್ಷೆಗಳ ಭಾರವಿರುವುದಿಲ್ಲ. ತ್ಯಾಗ ಮಾಡಲು ಹಾತೊರೆಯುವ ಮನಃಸ್ಥಿತಿಯೇ ಪ್ರೀತಿ.
ರೂಮಿ ಹೇಳುತ್ತಾನೆ. ಪ್ರೀತಿ ಎಂಬುದು ಎಂದೂ ಖಿನ್ನತೆ ತರುವುದಿಲ್ಲ. ಖಂಡಿತಾ ಅದು ಪುಸ್ತಕದಲ್ಲಿ ವರ್ಣಿಸುವಂತೆ ಇರುವುದಿಲ್ಲ. ಅಥವಾ ಹಾಳೆಯ ಮೇಲೆ ಬರೆದು ತೋರುವಂಥದ್ದೂ ಅಲ್ಲ. ಪ್ರೀತಿ ಎಂಬುದು ಮರದ ಹಾಗೆ. ಕಾಣುವ ಕೊಂಬೆಗಳು ದಿಗಂತದವರೆಗೆ ಚಾಚಿರುತ್ತವೆ. ಅದರಲ್ಲಿ ಚಿಗುರು, ಹೂವು, ಹಣ್ಣುಗಳು ಇರಬಹುದು. ಅದರ ನೋಟ, ಸವಿ, ರುಚಿಕರವೂ ಅನ್ನಿಸಬಹುದು. ಆದರೆ ಇಷ್ಟಕ್ಕೆಲ್ಲಾ ಕಾರಣವಾದ ಬೇರು ಮಾತ್ರ ಕಾಣದೆ ಅಮರತ್ವಕ್ಕೆ ಒಡ್ಡಿಕೊಂಡಿರುತ್ತದೆ. ಮೇಲಿನ ಸಕಲವನ್ನೂ ಕಾಪಾಡಲು ಬೇರು, ಮಣ್ಣಿನ ಜೊತೆ ಗುದ್ದಾಡುತ್ತಿರುತ್ತದೆ. ತನ್ನ ಮುಖವನ್ನು ಹೊರಜಗತ್ತಿಗೆ ಎಂದೂ ತೋರಿಸುವುದಿಲ್ಲ. ಒಳಗೊಳಗೇ ಜೀವಾಮೃತವ ಸೃಷ್ಟಿಸಿ ಮೇಲೆ ಕಾಯುವ ಚಿಗುರು, ಹೂವು, ಹಣ್ಣು ಎಲೆಗಳಿಗೆ ರವಾನಿಸಿ ತಾನು ಮಾತ್ರ ಇಳೆಯ ಆಳಕ್ಕೆ ಇಳಿಯುತ್ತಲೇ ಹೋಗುತ್ತದೆ. ಪ್ರತಿಫಲವನ್ನು, ಪ್ರಶಂಸೆಯನ್ನು ಅದು ಎಂದೂ ಬಯಸುವುದಿಲ್ಲ. ತಾಯ ಎದೆಹಾಲ ಬಸಿವ ನಿಷ್ಕಾಮ ರಕ್ತನಾಳಗಳಂತೆ, ಯಾವ ಶರತ್ತನ್ನೂ ಒಡ್ಡುವುದಿಲ್ಲ. ಕಾಪಾಡುವುದಷ್ಟೇ ಅದರ ಕಾಯಕ. ಬೇರಿನ ಈ ಸ್ವಭಾವವೇ ನಿಜವಾದ ಪ್ರೀತಿಯನ್ನು ಧರಿಸಿರುತ್ತದೆ.
ಓ ಪ್ರೀತಿಯೇ, ನಿನ್ನನ್ನು ಸಾವಿರ ಮಂದಿ ಸಾವಿರ ಹೆಸರಿಟ್ಟು ಕರೆಯುತ್ತಾರೆ. ನಿನಗೆ ಪ್ರತ್ಯೇಕವಾಗಿ ಒಂದು ರೂಪವೆಂಬುದು ಇಲ್ಲ ಎಂಬುದು ನನಗೆ ಗೊತ್ತು. ಸಾವಿರ ರೂಪಗಳ ಸಮೂಹಾರವು ನೀನು. ಮೋಡ ತನ್ನ ಕಣ್ಣೀರು ಸುರಿಸದೇ ಹೋದರೆ, ಹೂದೋಟದ ತುಟಿಯ ಮೇಲೆ ನಗು ಹೇಗೆ ಚಿಗುರುತ್ತದೆ? ಮಗುವಿನ ನಗುವಿನಲ್ಲಿ, ತಾಯ ನೋಟದಲ್ಲಿ, ಸಾಂತ್ವನ ಹೇಳುವ ಗೆಳೆಯನ ಮಾತಿನಲ್ಲಿ, ಹಸಿದವನಿಗೆ ಅನ್ನವಿಕ್ಕುವ ಹೃದಯದಲ್ಲಿ, ಹಕ್ಕಿಯ ರೆಕ್ಕೆ ಬಣ್ಣದಲ್ಲಿ ನೀನು ವಾಸಿಸುವೆ ಎನ್ನುತ್ತಾನೆ ರೂಮಿ.
ತನಗೂ ಹೆಚ್ಚೆಚ್ಚು ಪ್ರೀತಿ ಬೇಕೆಂಬ ಹಂಬಲಿಕೆಯಲ್ಲೇ ಪ್ರತಿಯೊಬ್ಬರೂ ಬದುಕುತ್ತಿದ್ದೇವೆ. ಆಸ್ತಿ, ಅಂತಸ್ತು, ಅಧಿಕಾರ ಎಲ್ಲ ಪಡೆದವನೂ ಪ್ರೀತಿ ಸಿಗದ ಹಸಿವಲ್ಲಿ ನರಳುತ್ತಿರುತ್ತಾನೆ. ಪ್ರೀತಿ ಎಂಬುದು ಬರೀ ಪಡೆಯಲು ಮಾತ್ರ ಇರುವ ಉಡುಗೊರೆಯಲ್ಲ. ಅದು ಹಂಚಿದಷ್ಟೂ ಮತ್ತೆ ಸಿಗುವ ಅಮೃತ. ಬೇಡಿ ಪಡೆಯುವ ಭಿಕ್ಷೆಯಲ್ಲ. ಸುತ್ತಲಿನ ಮನಸ್ಸುಗಳ ಗೆದ್ದು ಗಳಿಸುವ ಸಂಪತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.