ADVERTISEMENT

ನುಡಿ ಬೆಳಗು | ಇಂದ್ರಿಯಗಳ ಒಳಗೆ ಇರುವ ದೇವ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 14 ಮೇ 2025, 0:30 IST
Last Updated 14 ಮೇ 2025, 0:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮನುಷ್ಯನಿಗೆ ಅನಾದಿ ಕಾಲದಿಂದಲೂ ಒಂದು ಜಿಜ್ಞಾಸೆ; ದೇವನನ್ನು ಅರಿಯಬೇಕು, ಅನುಭವಿಸಬೇಕು, ಆಂದಿಸಬೇಕು, ಆರಾಧಿಸಬೇಕು ಎಂದು. ಆನಂದದ ಆರಾಧನೆಯೇ ನಿಜವಾದ ಜೀವನ. ನಿಸರ್ಗವನ್ನು ನೋಡಿ. ಎಷ್ಟು ಆನಂದಭರಿತವಾಗಿದೆ. ನಿಸರ್ಗದಲ್ಲಿ ಕಾಣುವ ಆನಂದ ಮನುಷ್ಯನಲ್ಲಿ ಯಾಕೆ ಕೊರತೆಯಾಯಿತು? ನಿಮ್ಮ ಮನೆಯಲ್ಲಿ ಇರುವ ದನಗಳಿಗೆ ನೀವು ಕಸ ಹಾಕುತ್ತೀರಿ. ನೀವು ಹಾಕಿದ ಕಸ ತಿಂದು ಸಂತೋಷ ಪಡುತ್ತವೆ ದನಗಳು. ಕಸ ತಿಂದು ಸಂತೋಷ ಪಡುವ ದನಗಳು ಒಂದು ಕಡೆಯಾದರೆ, ರಸ ತಿಂದು ದುಃಖ ಪಡುವ ಮನುಷ್ಯರು ಒಂದು ಕಡೆ. ನಾವು ಕಬ್ಬಿನ ರಸವನ್ನೇ ಕುಡಿಯುತ್ತೇವೆ. ಆದರೂ ನಮಗೆ ಸಂತೋಷ ಇಲ್ಲ. ಮಾವಿನ ಗಿಡಕ್ಕೆ ಚಿಗುರು ಬಂದಿರುತ್ತದೆ. ಕೋಗಿಲೆಗಳು ಮಾವಿನ ಹಣ್ಣು ತಿನ್ನುವುದಿಲ್ಲ. ಸುಮ್ಮನೆ ಒಂದಿಷ್ಟು ಮಾವಿನ ಚಿಗುರು ತಿಂದು ಹಾಡುತ್ತವೆ.

ಒಂದು ದಿನ ಮಾವಿನ ಗಿಡ ಸಪ್ಪಗೆ ಇತ್ತು. ಆಗ ಕೋಗಿಲೆ ಮಾವಿನ ಗಿಡಕ್ಕೆ ‘ಯಾಕೆ ಸ್ವಲ್ಪ ಸಪ್ಪಗಿದ್ದೀಯಲ್ಲ’ ಎಂದು ಕೇಳಿತು. ಅದಕ್ಕೆ ಮಾವಿನ ಗಿಡ ‘ಏನಿಲ್ಲಪ, ನಿನಗೆ ನಾನು ಬರೀ ಚಿಗುರು ಕೊಟ್ಟಿದ್ದೇನೆ. ಚಿಗುರು ತಿಂದು ಇಷ್ಟು ಹಾಡ್ತಿ. ಈ ಮನುಷ್ಯ ಬಂದಿದ್ದ. ಅವನಿಗೆ ನಿನ್ನೆ ಎರಡು ಹಣ್ಣು ಕೊಟ್ಟಿದ್ದೆ. ಇಂದು ಲಾರಿಯನ್ನೇ ತಂದು ನಿಲ್ಲಿಸಿದ್ದಾನೆ ಅವನು. ಚಿಗುರು ತಿಂದು ಹಾಡುವ ನೀವೆಲ್ಲಿ. ನಮ್ಮದೇ ಹಣ್ಣು ತಿಂದು ನಮ್ಮದೇ ಟೊಂಗೆ ಮುರಿದು ಕಾವು ಮಾಡಿಕೊಂಡು ನಮ್ಮ ಬುಡಕ್ಕೇ ಕೊಡಲಿ ಹಾಕುವ ಮನುಷ್ಯರೆಲ್ಲಿ’ ಎಂದು ಹೇಳಿತು.

ADVERTISEMENT

ನಿಸರ್ಗ ಸಣ್ಣ ಸಣ್ಣ ವಿಷಯದಲ್ಲಿಯೂ ಸಂತೋಷ ಪಡತೈತಿ. ನಿಸರ್ಗ ಎಲ್ಲವನ್ನೂ ಕರುಣಿಸಿದರೂ ಮನುಷ್ಯನಿಗೆ ಯಾಕೆ ದುಃಖ ಆತು ಅಂದರೆ, ಮನುಷ್ಯನಿಗೆ ಸತ್ಯದ ವಿಸ್ಮರಣೆಯಾಗಿದೆ. ದೇವರ ವಿಸ್ಮರಣೆ ಮನುಷ್ಯನಿಗೆ ದುಃಖ ಕೊಟ್ಟಿದೆ. ಮನುಷ್ಯನ ತಲೆಯಲ್ಲಿ ನನ್ನದು ಎನ್ನುವುದು ಬಹಳ ತುಂಬಿದೆ. ಮನುಷ್ಯನೇ ಒಂದು ಕ್ಷಣ ವಿಚಾರ ಮಾಡು. ಈ ಜಗತ್ತನನ್ನು ನೋಡಿ, ಈ ಜೀವನವನ್ನು ನೋಡಿ ವಿಚಾರ ಮಾಡು. ನನ್ನ ಹೊಲ, ನನ್ನ ಸಂಪತ್ತು ಎಲ್ಲವನ್ನೂ ಕೊಟ್ಟವರಾರು? ನನ್ನ ಜೀವನವನ್ನು ನಡೆಸಿದವರು ಯಾರು? ನಾನು ನಡೆಸಿದ್ದೇನೆ ಎಂದು ತಲೆಯಲ್ಲಿ ತುಂಬಿಕೊಂಡಿದ್ದರಿಂದ ದುಃಖವಾಗುತ್ತಿದೆ.

ನಾನು ಉಣ್ಣುತ್ತೇನೆ, ನಾನು ತಿನ್ನುತ್ತೇನೆ, ನಾನು ಕೇಳುತ್ತೀನಿ ಎಂದು ಹೇಳುತ್ತೀರಿ. ಕೇಳುವ ಕಿವಿ, ನೋಡುವ ಕಣ್ಣು, ತಿನ್ನುವ ನಾಲಿಗೆ ಎಲ್ಲವೂ ಜಡ. ಕಿವಿಯಿಂದ ಕೇಳಿದ್ದೇನೆ, ಕಣ್ಣಿನಿಂದ ನೋಡಿದ್ದೇನೆ, ನಾಲಿಗೆಯಿಂದ ತಿಂದಿದ್ದೇನೆ, ಕೈಯಿಂದ ಮಾಡಿದ್ದೇನೆ ಎಂದು ನಮಗೆ ಅನ್ನಿಸುತ್ತದೆ ಅಷ್ಟೇ. ಕಿವಿಯೇ ಕೇಳುತ್ತಿದ್ದರೆ, ಕಣ್ಣು ನೋಡುತ್ತಿದ್ದರೆ, ಸತ್ತಾಗ ಹೆಣದ ಮುಂದೆ ಸಂಬಂಧಿಕರು ಅಳುವುದನ್ನು ಕಿವಿ ಕೇಳಿಸಿಕೊಳ್ಳಬೇಕಿತ್ತಲ್ಲ, ಕಣ್ಣು ನೋಡಬೇಕಿತ್ತಲ್ಲ. ಅದು ಆಗಲ್ಲ ಅಲ್ವಾ. ಅಂದರೆ ಕಣ್ಣು ನೋಡಿಲ್ಲ. ಕಿವಿ ಕೇಳಿಲ್ಲ. ಕಣ್ಣಿನ ಮುಖಾಂತರ ನೋಡಿದ್ದೇವೆ, ಕಿವಿಯ ಮುಖಾಂತರ ಕೇಳಿದ್ದೇವೆ, ನಾಲಿಗೆ ಮುಖಾಂತರ ತಿಂದಿದ್ದೇವೆ ಅಷ್ಟೇ.

ಕಣ್ಣು, ಕಿವಿ, ಮೂಗು, ನಾಲಿಗೆ ಮುಂತಾದ ಇಂದ್ರಿಯಗಳ ಮೂಲಕ ರುಚಿ ಕಾಣಲು ಅವುಗಳ ಒಳಗೆ ದೇವನಿದ್ದಾನೆ ಎಂಬ ಸತ್ಯ ನಮಗೆ ಗೊತ್ತಿಲ್ಲ. ಒಳಗಿನ ದೇವ ಹೊರಗೆ ಹೋದರೆ ದೇಹ ಬರೀ ಹೆಣ ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.