ADVERTISEMENT

ನುಡಿ ಬೆಳಗು: ಸಾಮಾನ್ಯನೊಬ್ಬನ ಅಸಾಮಾನ್ಯ ಸಾಧನೆ

ರೇಣುಕಾ ನಿಡಗುಂದಿ
Published 18 ಡಿಸೆಂಬರ್ 2025, 23:30 IST
Last Updated 18 ಡಿಸೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದಶರಥ್ ಮಾಂಝಿ ಹೆಸರನ್ನು ಕೇಳದವರು ಬಹುಶಃ ಇರಲಿಕ್ಕಿಲ್ಲ. ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸಿದವರು ಮಾಂಝಿ. ಬಿಹಾರದ ಗಹ್ಲೌರ್ ಗ್ರಾಮದಲ್ಲಿ ದಶರಥ್ ಮಾಂಝಿ ಎಂಬ ಕೂಲಿಯಾಳು ವಾಸಿಸುತ್ತಿದ್ದ. ಆ ಕುಗ್ರಾಮದಲ್ಲಿ ಒಂದು ಆಸ್ಪತ್ರೆಯೂ ಇದ್ದಿಲ್ಲ. ಅಲ್ಲಿಂದ ಪಕ್ಕದ ಇನ್ನೊಂದು ಗ್ರಾಮಕ್ಕೆ ಹೋಗಲು ರಸ್ತೆಯೂ ಇದ್ದಿಲ್ಲ. ಏನಾದರೂ ಆಪತ್ಕಾಲ ಸಂಭವಿಸಿದರೆ ತಮ್ಮ ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಬೇಕೆಂದರೆ ಎರಡೂ ಹಳ್ಳಿಗಳ ನಡುವಿನ ಆ ಬೃಹತ್ ಬೆಟ್ಟವನ್ನು ಹತ್ತಿ ದಾಟಿಹೋಗಬೇಕಿತ್ತು. ಒಮ್ಮೆ ಅವನ ಪತ್ನಿ ಫಲ್ಗುಣಿ ರೋಗಿಯಾಗಿ ಬೆಟ್ಟ ದಾಟಿ ಆಸ್ಪತ್ರೆಗೆ ತಲುಪಲಾಗದೆ ಮಡಿದಳು. ಆ ನೋವು, ಹತಾಶೆಯಲ್ಲಿ ದಶರಥ್ ಕೇವಲ ಸುತ್ತಿಗೆ ಮತ್ತು ಚಾಣದಿಂದ ಬೆಟ್ಟವನ್ನು ಕಡಿಯತೊಡಗಿದ.

ರಸ್ತೆ ನಿರ್ಮಾಣ ಸುಲಭದ್ದಾಗಿರಲಿಲ್ಲ. ದಿನಗಳು ತಿಂಗಳಾದವು, ತಿಂಗಳುಗಳು ವರ್ಷಗಳಾದವು. ಎಷ್ಟೋ ಬಾರಿ ಕೈಯಲ್ಲಿ ಬೊಬ್ಬೆಗಳೆದ್ದವು, ಕೈಯಲ್ಲಿ ರಕ್ತ ಒಸರಿತು. ಬೆನ್ನುಮೂಳೆ ನೋವಿನಿಂದ ನರಳಿತು. ಎಷ್ಟೋ ಬಾರಿ ಹಸಿವೆಯಿಂದ ಕಣ್ಣು ಕತ್ತಲಿಟ್ಟು ಕುಸಿದು ಬಿದ್ದ. ಆದರೂ ಬೆಟ್ಟ ಕಡಿಯುವ ಅವನ ಕೈಗಳು ನಿಲ್ಲಲಿಲ್ಲ. ಸುತ್ತಿಗೆಯ ಪೆಟ್ಟು ದುರ್ಬಲಗೊಳ್ಳಲಿಲ್ಲ. ಜನರು ಅವನನ್ನು ತಡೆದರೂ ದಶರಥ ನಿಲ್ಲಲಿಲ್ಲ. ಹತ್ತು ವರ್ಷ ಕಳೆದಾಗ ಒಂದು ಕಿರುದಾರಿ ಮಾತ್ರ ಕಾಣಿಸಿತು. ಹದಿನೈದು ವರ್ಷಗಳಲ್ಲಿ ಮನುಷ್ಯ ನಡೆದಾಡುವಷ್ಟು ಹಾದಿ ತಯಾರಾಯ್ತು. 20 ವರ್ಷಗಳ ಬಳಿಕ ಕತ್ತಲಿನಲ್ಲಿ ಬೆಳಕು ಕಾಣುವಷ್ಟು ಹಾದಿ. 22ನೇ ವರ್ಷದಲ್ಲಿ ಆ ಬೃಹತ್ ಬೆಟ್ಟ ಕರಗಿ ಜನರ ಜೀವ ರಕ್ಷಿಸುವ ದಾರಿಯಾಯ್ತು.

ADVERTISEMENT

ಊರವರು ಹುಚ್ಚನೆಂದು ಗೇಲಿ ಮಾಡಿದರು, ಕೆಲ ಹಿತೈಷಿಗಳು ಇದು ಆಗದ ಕೆಲಸ, ಸರ್ಕಾರಕ್ಕೂ ಅಸಾಧ್ಯವಾಗಿದೆ ಎಂದು ಬುದ್ಧಿ ಹೇಳಿ ನೋಡಿದರು. ಆದರೂ ದಶರಥ್ ಧೈರ್ಯಗುಂದಲಿಲ್ಲ. ತನ್ನ ಕಾಯಕವನ್ನು ನಿಲ್ಲಿಸಲಿಲ್ಲ. ಕಡೆಗೂ ತನ್ನ ನಿರಂತರ ಪರಿಶ್ರಮದಿಂದ 360 ಅಡಿ ಉದ್ದ, 30 ಅಡಿ ಅಗಲದ ರಸ್ತೆ ನಿರ್ಮಿಸಿದರು. ಹೀಗೆ ಅಸಾಧ್ಯವೆಂದು ಹೀಗಳೆದ ಕಾರ್ಯವನ್ನು ದಶರಥ್ ಮಾಂಝಿ ಸಾಧಿಸಿ ತೋರಿಸಿದ್ದರು. ಅದು ತನಗೊಬ್ಬನಿಗಾಗಿ ಅಲ್ಲ, ಸಮಸ್ತ ಮಾನವಕುಲಕ್ಕಾಗಿ. ತಾನುಂಡ ನೋವು ಇನ್ನೊಬ್ಬರು ಉಣ್ಣದಿರಲಿ ಎಂದು. ಹೀಗಾದರೂ ತನ್ನ ಜನ್ಮ ಸಾರ್ಥಕಗೊಳ್ಳಲಿ ಎಂದು. ಇಂದು ಆ ರಸ್ತೆಯಿಂದ 60 ಗ್ರಾಮಗಳ ಜನರಿಗೆ ಆಸ್ಪತ್ರೆ, ಮಕ್ಕಳಿಗೆ ಶಾಲೆ ಸಿಗುವಂತಾಗಿದೆ. ಕುಗ್ರಾಮವಾಗಿದ್ದ ಹಳ್ಳಿಗೆ ಎಲ್ಲ ಸವಲತ್ತುಗಳೂ ಸಿಗುವಂತಾಗಿದೆ. ಇದೇ ದಶರಥ್ ಮಾಂಝಿಯ ಪ್ರೇರಣೆ ಪಡೆದ ‘ದಿ ಮೌಂಟನ್ ಮ್ಯಾನ್’ ಎಂಬ ಸಿನಿಮಾವೂ ತೆರೆಗೆ ಬಂದಿದ್ದು ನೆನೆಪಿರಬಹುದು.

ಒಬ್ಬನ ನೋವು ಧೃಡ ಸಂಕಲ್ಪ ಸಮಾಜಕ್ಕೆ ಬೆಳಕಾಗಬಹುದು, ಇಡೀ ಹಳ್ಳಿಯ ಭವಿಷ್ಯವನ್ನೇ ಬದಲಿಸಬಹುದು ಎಂಬುದಕ್ಕೆ ದಶರಥ್ ಮಾಂಝಿ ಬದುಕೇ ಸಾಕ್ಷಿ. ಆದರೆ ಸ್ವಾರ್ಥವೇ ತುಂಬಿದ ಜಗತ್ತಿನಲ್ಲಿ ಸಮಾಜಕ್ಕಾಗಿ, ಸಮುದಾಯದ ಹಿತಕ್ಕಾಗಿ ನಿಸ್ವಾರ್ಥವಾಗಿ ಶ್ರಮಿಸುವವರು ತೀರಾ ವಿರಳ.

ಗಣೇಶನ ಪೂಜೆ, ದುರ್ಗಾ ಪೂಜೆ ಇತ್ಯಾದಿಗಳಿಗೆ ಚಂದಾ ಕೊಡುವ, ದೇವಸ್ಥಾನದ ಹುಂಡಿಗಳಿಗೆ, ದೇವರುಗಳಿಗೆ ಚಿನ್ನ ಬೆಳ್ಳಿಯ ಕಾಣಿಕೆಯನ್ನು ಹಾಕುವ ಜನರು ತಮ್ಮ ಮುಂದೆಯೇ ಕಷ್ಟದಲ್ಲಿರುವಾಗ ಅನುಕಂಪ ತೋರುವುದಿಲ್ಲ. ಅಂತಃಕರಣ ಕರಗುವುದಿಲ್ಲ. ಎಲ್ಲರೂ ಮಾಂಝಿಯಾಗಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.