ADVERTISEMENT

ನುಡಿ ಬೆಳಗು: ಹೆಚ್ಚುತ್ತಿರುವ ಅನಾಗರಿಕತೆ

ಡಾ.ದಾದಾಪೀರ್ ನವಿಲೇಹಾಳ್
Published 2 ನವೆಂಬರ್ 2025, 19:00 IST
Last Updated 2 ನವೆಂಬರ್ 2025, 19:00 IST
   

ದೃಶ್ಯ 1: ಸೂಟು ಬೂಟು ಹಾಕಿಕೊಂಡು ಮದುವೆ ಊಟ ಮುಗಿಸಿದ ವ್ಯಕ್ತಿಯೊಬ್ಬ ಬಾಳೆಹಣ್ಣನ್ನು ಪೂರ್ತಿ ಸುಲಿದು ಸಿಪ್ಪೆಯನ್ನು ಕಲ್ಯಾಣ ಮಂಟಪದಲ್ಲಿ ಬಿಸಾಕಿದ.

ದೃಶ್ಯ 2: ಕಚ್ಚೆ ಪಂಚೆ ಉಟ್ಟ ಎಂಬತ್ತರ ಆಸುಪಾಸಿನ ಯಜಮಾನರೊಬ್ಬರು ಅಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಕೈಯಲ್ಲಿ ಎತ್ತಿಕೊಂಡು ಸೂಟು ಬೂಟಿನ ವ್ಯಕ್ತಿಗೆ ಎದುರಾಗಿ ನಿಂತು ‘ನೀವೇನು ಓದಿದ್ದೀರಿ?’ ಎಂದು ಕೇಳಿದರು. ಆತ 'ನೆಟ್ಟು ಸ್ಲೆಟ್ಟು, ಎಂ ಎ, ಎಂ ಫಿಲ್ಲು, ಬಿಎಡ್ಡು ಮುಗಿಸಿ ಪಿಎಚ್ಡಿ ಕೂಡ ಮಾಡ್ತಿದೀನಿ ' ಅಂತ ಠೀವಿಯಿಂದ ಹೇಳಿದ. ‘ಬಾಳ ಓದಿದೀರಿ ಬಿಡಿ’ ಅಂತ ಹೇಳಿದ ಯಜಮಾನರು ಬಾಳೆಹಣ್ಣಿನ ಸಿಪ್ಪೆ ಹಾಕಲು ಡಸ್ಟ್ ಬಿನ್ ಹುಡುಕುತ್ತಾ ಹೊರಟರು.

ದೃಶ್ಯ 3: ಸಂಚಾರ ದಟ್ಟಣೆಯ ರಸ್ತೆಯಲ್ಲಿ ಕಾರು ನಿಲ್ಲಿಸಿದ ವ್ಯಕ್ತಿ ಬಲಭಾಗಕ್ಕೆ ಡೋರ್ ಓಪನ್ ಮಾಡಿಕೊಂಡು ಇನ್ನೊಬ್ಬನ ಜೊತೆ ಲೋಕಾಭಿರಾಮದ ಮಾತಾಡುತ್ತಿದ್ದ. ಹಿಂದೆ ಮುಂದೆ ಬರುತ್ತಿದ್ದ ವಾಹನಗಳ ಚಾಲಕರು ಹಾರ್ನ್ ಕೂಡ ಮಾಡದೇ, ಆ ಕಾರಿನವನಿಗೆ ಏನನ್ನೂ ಪ್ರಶ್ನಿಸದೇ ಸೈಡಿಗೆ ಸಾಗುತ್ತಿದ್ದರು.

ಮೇಲಿನ ದೃಶ್ಯಗಳಲ್ಲಿರುವ ವ್ಯಕ್ತಿಗಳ ಮಾತು ಮತ್ತು ವರ್ತನೆಗಳನ್ನು ಗಮನಿಸಿ. ಪ್ರತಿನಿತ್ಯ ಇಂತಹ ಹತ್ತಾರು ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ಇದು ಸಾರ್ವಜನಿಕವಾಗಿ ಲಜ್ಜೆ ಮರೆಯಾಗಿರುವುದರ ನಿದರ್ಶನ. ಪ್ರಜ್ಞಾವಂತರಿಗೆ ಅಸಹ್ಯ ಹುಟ್ಟಿಸುವ ಇಂತಹ ನಡವಳಿಕೆಗಳು ನಾಗರಿಕ ಸಮಾಜವೊಂದರ ಉತ್ಪನ್ನಗಳಲ್ಲ. ಬದಲಾಗಿ ಆಧುನಿಕ ಜಗತ್ತಿನ ವಾರಸುದಾರರು ಎಂದು ತಮ್ಮ ಹೆಗಲನ್ನು ತಾವೇ ತಟ್ಟಿಕೊಳ್ಳುವ ಕೆಲವು ಬುದ್ಧಿವಂತರ ವಿಕೃತ ಚೇಷ್ಟೆಗಳು, ಅನಾಗರಿಕ ಪ್ರದರ್ಶನಗಳು.

ADVERTISEMENT

ದೊಡ್ಡ ನಗರಗಳಲ್ಲಿ ಬದುಕಿದ್ದೇವೆ. ದುಬಾರಿ ಉಡುಪು ಧರಿಸುತ್ತಿದ್ದೇವೆ. ಬಂಗಲೆ, ಬಂಗಾರ, ಕಾರುಗಳ ದರಬಾರು ನಡೆಸಿದ್ದೇವೆ. ಒಂದೊಳಲೆ ಹಾಲಿಲ್ಲದ ಹಸುಳೆಯ ಮುಂದೆ ನಾಯಿಗಳನ್ನು ಮುದ್ದಾಡುತ್ತಾ ಬ್ರೆಡ್ಡು ಬಿಸ್ಕತ್ತು ಬಿಸಾಕುತ್ತಿದ್ದೇವೆ. ದೊಡ್ಡ ದೊಡ್ಡ ಪದವಿ ಅಧಿಕಾರ ಪಡೆದಿದ್ದೇವೆ. ಎಲ್ಲಾ ನಿಜ, ನಾಗರಿಕರಾಗಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳೋಣ. ಈ ಆಡಂಬರಗಳು ಇಲ್ಲದ ಸಾದಾಸೀದಾ ವ್ಯಕ್ತಿಯು ಅತ್ಯುಚ್ಚ ನಾಗರಿಕನಂತೆ ನಡೆದುಕೊಳ್ಳುತ್ತಾನೆ. ನಮಗೇಕೆ ಸಾಧ್ಯವಿಲ್ಲ? ನಾಗರಿಕತೆ ಅನ್ನುವುದು ಪಿತ್ರಾರ್ಜಿತವಾಗಿ ಬರುವ ಸಲೀಸು ಸಂಪತ್ತಲ್ಲ. ಅದು ದುಬಾರಿ ಡ್ರೆಸ್ಸಿನಿಂದ ಹುಟ್ಟುವುದಿಲ್ಲ. ವಿಲಾಸೀ ಕಾರು ಬಂಗಲೆಗಳಲ್ಲಿ ಬೆಳೆಯುವುದಿಲ್ಲ. ಕೊಂಡುಕೊಂಡ ಅಥವಾ ಹೊಡೆದುಕೊಂಡ ಪದವಿ, ಅಧಿಕಾರಗಳಲ್ಲಿಯೂ ಇರುವುದಿಲ್ಲ. ಅದು ವ್ಯಕ್ತಿಯು ತನ್ನ ಅಪರಿಮಿತ ಪರಿಶ್ರಮದಿಂದ ಸಂಪಾದಿಸಿಕೊಳ್ಳಬೇಕಾದ ಪ್ರಾಮಾಣಿಕತೆ ಮತ್ತು ನಿಯತ್ತಿನ ಉತ್ಕೃಷ್ಟ ಫಲ. ಅದು ಅತ್ಯಮೂಲ್ಯವೂ ಸುದೀರ್ಘವೂ ಆದ ಕಠಿಣ ಶ್ರದ್ಧೆ ಮತ್ತು ಸಮಯವನ್ನು ಅಪೇಕ್ಷಿಸುತ್ತದೆ. ನಾವು ಪಡೆದ ವಿದ್ಯೆಗೆ ವಿವೇಕ ತುಂಬುವುದೇ ನಾಗರಿಕತೆ. ವಿಲಾಸಕ್ಕೆ ವಿನಯವೂ ಪದವಿಗೆ ಸರಳತೆಯೂ ಅಧಿಕಾರಕ್ಕೆ ಅಂತಃಕರಣವೂ ಭೂಷಣ. ಯಾರೋ ತಿಂದು ಬಿಸಾಕಿದ ಹಣ್ಣಿನ ಸಿಪ್ಪೆಯನ್ನು ಕೈಯಲ್ಲಿ ಎತ್ತಿಕೊಂಡು ಡಸ್ಟ್ ಬಿನ್ ಹುಡುಕುತ್ತಾ ಹೊರಟ ಯಜಮಾನನ ನಡವಳಿಕೆ ಗಾಂಧೀಜಿಯವರ ಕರುಳಕಾಳಜಿಯ ಪಾಠವಾಗಿದೆ.

ನಾಗರಿಕತೆಯು ನಾವು ಕಟ್ಟಿಕೊಂಡ ಸಮಾಜದ ಅತ್ಯುತ್ತಮ ಅಭಿರುಚಿಯಾಗಿದೆ. ಬೀದಿಗಳಲ್ಲಿ ಪೊರಕೆ ಹಿಡಿದ ಫೋಟೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚುವುದು ಸ್ವಚ್ಛತೆಯ ಮಾದರಿಯಲ್ಲ. ಮನೋಮಾಲಿನ್ಯವೇ ಸಮಾಜ ಕಂಟಕವಾಗಿರುವಾಗ ನಮ್ಮ ಉದ್ದೇಶ, ಆಲೋಚನೆ, ಮತ್ತು ನಡವಳಿಕೆಗಳಲ್ಲಿ ಸ್ವಚ್ಛತೆ ತಂದುಕೊಳ್ಳುವುದು ನಾಗರಿಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.