ADVERTISEMENT

ನುಡಿ ಬೆಳಗು: ಸಹಜ ಪ್ರೀತಿ

ದೀಪಾ ಹಿರೇಗುತ್ತಿ
Published 11 ಜೂನ್ 2025, 23:11 IST
Last Updated 11 ಜೂನ್ 2025, 23:11 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅಬ್ರಹಾಂ ಲಿಂಕನ್ ಸಂಸತ್ತಿನ ಅಧಿವೇಶನಕ್ಕೆ ಹೊರಟಿದ್ದರು. ಹೀಗೆ ದಾರಿಯಲ್ಲಿ ಸಾಗುವಾಗ, ಸಭೆಯಲ್ಲಿ ತಾವು ಮಾತನಾಡಬೇಕಿರುವ ವಿಷಯದ ಬಗ್ಗೆ ಆಳವಾಗಿ ಯೋಚಿಸುತ್ತಲಿದ್ದರು. ಜೊತೆಯಲ್ಲಿದ್ದ ತಮ್ಮ ಸೆಕ್ರೆಟರಿಗೆ ಪ್ರಶ್ನೆಗಳನ್ನು ಕೇಳುತ್ತಾ ತಾವು ಮಾತನಾಡಬೇಕಿರುವ ಸಂಗತಿಯ ಬಗ್ಗೆ ಚಿಂತನೆಗೆ ಒಳಪಡಿಸಿಕೊಳ್ಳುತ್ತಿದ್ದರು. ಹಾಗೆ ಯೋಚಿಸುತ್ತಾ ಹೊರಗೆ ನೋಡುವಾಗ ಒಂದು ಕೊಚ್ಚೆಯ ಗುಂಡಿಯಲ್ಲಿ ಹಂದಿಯ ಮರಿಯೊಂದು ಸಿಲುಕಿಬಿಟ್ಟಿತ್ತು. ಅದನ್ನು ನೋಡಿದ ತಕ್ಷಣ ಲಿಂಕನ್ ತಮ್ಮ ಡ್ರೈವರ್‌ಗೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದರು. ಇದ್ಯಾವುದೂ ಗೊತ್ತಿರದ ಸೆಕ್ರೆಟರಿ ‘ನಡೆಯುತ್ತಿರುವುದು ಸಂಸತ್ತಿನ ಅಧಿವೇಶನ. ನೀವು ಬಾರದೆ ಸಭೆ ಆರಂಭವಾಗದು. ಅಮೆರಿಕದ ಸಂಸತ್ತು ಯಾವತ್ತೂ ತಡವಾಗಿ ಆರಂಭಗೊಂಡಿಲ್ಲ’ ಎಂದು ಎಚ್ಚರಿಸಿದ. ‘ಅಧಿವೇಶನಕ್ಕಿಂತ ಮುಖ್ಯವಾದ ಕೆಲಸ ಇದೆ. ನೀನು ಹೋಗಿ ತಯಾರಿ ನಡೆಸು’ ಎಂದರು ಲಿಂಕನ್. ಅದಕ್ಕವನು, ‘ನೀವು ಅಮೆರಿಕದ ಅಧ್ಯಕ್ಷ, ನಿಮಗೊಂದು ಘನತೆ ಇದೆ. ನಿಮ್ಮ ಕಾರು, ರಕ್ಷಣೆ ಇವುಗಳನ್ನು ಬಿಟ್ಟು ಸಾಮಾನ್ಯರ ಹಾಗೆ ಬರಲು ಸಾಧ್ಯವೇ’ ಎಂದು ಪ್ರಶ್ನಿಸಿದ. ಲಿಂಕನ್ ತುಸು ಕಟುವಾಗಿ ‘ನೀನು ಹೊರಡು’ ಎಂದರು. ಅಸಮಾಧಾನದಿಂದಲೇ ಹೊರಟ ಸೆಕ್ರೆಟರಿ.

ಲಿಂಕನ್, ಕೊಚ್ಚೆಯಲ್ಲಿ ಸಿಕ್ಕಿಕೊಂಡಿದ್ದ ಹಂದಿಮರಿಯ ಬಳಿಗೆ ಬಂದು ನಿಧಾನವಾಗಿ ಅದನ್ನು ಅಲ್ಲಿಂದ ಬಿಡಿಸಿದರು. ಅವರ ಕೈ ಕೆಸರಾಗಿತ್ತು. ಕೊಚ್ಚೆಯಲ್ಲಿ ಸಿಕ್ಕಿಬಿದ್ದು ಮೊದಲೇ ಗಾಬರಿಯಾಗಿದ್ದ ಹಂದಿಯ ಮರಿ ಬಿಡಿಸುತ್ತಿದ್ದ ಹಾಗೆ ಚಂಗನೆ ಹಾರಿತು. ಹಾರಿದ ರಭಸಕ್ಕೆ ಲಿಂಕನ್‌ರ ಬಟ್ಟೆಯ ಮೇಲೆ ಕೂಡ ಕೊಚ್ಚೆ ಹಾರಿತು.
ತುಂಬು ಸಮಾಧಾನದಿಂದ ಲಿಂಕನ್ ಸಂಸತ್ತಿಗೆ ಬಂದರು. ಕೊಚ್ಚೆಯಾಗಿದ್ದ ಅವರ ಬಟ್ಟೆಯನ್ನು ನೋಡಿ ಎಲ್ಲರಿಗೂ ಗಾಬರಿ. ಏನಾಯಿತು ಎಂದು ಪ್ರಶ್ನಿಸಿದರು. ಅದಕ್ಕವರು, ‘ಜೀವವೊಂದು ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿತ್ತು. ಅದಕ್ಕೆ ಸ್ವಲ್ಪ ತಡವಾಯಿತು. ನನ್ನ ಕ್ಷಮಿಸುತ್ತೀರಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ನಡೆದ ವಿಷಯವನ್ನು ಬೇರೆಯವರಿಂದ ತಿಳಿದ ಸೆಕ್ರೆಟರಿ ಕೇಳಿದ. ‘ಒಂದು ಹಂದಿಯನ್ನು ಕಾಪಾಡುವುದು ಸಂಸತ್ತಿಗಿಂತ ದೊಡ್ಡ ಕೆಲಸವೇ? ಅದನ್ನು ನೀವು ಬೇರೆಯವರಿಗೆ ವಹಿಸಲೂ ಬಹುದಿತ್ತಲ್ಲವೇ?’ ಎಂದು. ‘ಜೀವ ಕಾರುಣ್ಯಕ್ಕಿಂತ ದೊಡ್ಡದು ಯಾವುದಿದೆ? ಆ ಕ್ಷಣಕ್ಕೆ ಆ ಮರಿಯ ಜೀವ ದೊಡ್ಡದು ಅಂತ ನನಗನ್ನಿಸಿತು. ನಾನು ಅದನ್ನು ಇನ್ನೊಬ್ಬರಿಗೆ ವಹಿಸಿದ್ದರೆ ಅದನ್ನವರು ಮಾಡಿದರೋ ಇಲ್ಲವೋ ಎಂದು ಗೊತ್ತಾಗದೆ ಸಂಸತ್ತಿನ ಕಲಾಪದಲ್ಲೂ ಪೂರ್ಣವಾಗಿ ಭಾಗವಹಿಸಲು ಆಗದೆ ಒದ್ದಾಡುತ್ತಿದ್ದೆ. ಅದಕ್ಕೆ ನಾನೇ ಆ ಕೆಲಸವನ್ನು ಮಾಡಿದೆ. ಹಾಗಾಗಿ ಯಾವ ಆತಂಕವೂ ಇಲ್ಲದೆ ನನ್ನ ಮುಂದಿನ ಕೆಲಸಗಳನ್ನು ಸುಸೂತ್ರವಾಗಿ ಮಾಡಲು ಸಾಧ್ಯವಾಯಿತು’ ಎಂದರು ಲಿಂಕನ್.

ತಾನು ದೊಡ್ಡವನು, ತನ್ನ ಜೀವ, ತನ್ನ ಭಾವ, ತನ್ನ ಮನೆಯ ಜನ ಮಾತ್ರ ದೊಡ್ಡವರು ಎಂದುಕೊಂಡು ಇನ್ನೊಂದು ಜೀವದ ಜೊತೆ ಚೆಲ್ಲಾಟವಾಡುವ ಆಳುವ ವರ್ಗದವರ ನಡುವೆ ಲಿಂಕನ್‌ರ ಮಾನವೀಯ ಸರಳ, ಸಹಜ ಪ್ರೀತಿಯ ಈ ನಡೆ ದೊಡ್ಡದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.