ADVERTISEMENT

ನುಡಿ ಬೆಳಗು: ಪ್ರಯತ್ನವಿಲ್ಲದ ಪ್ರತಿಭೆಯಿಂದ ಪ್ರಯೋಜನವಿಲ್ಲ

ದೀಪಾ ಹಿರೇಗುತ್ತಿ
Published 4 ನವೆಂಬರ್ 2025, 1:00 IST
Last Updated 4 ನವೆಂಬರ್ 2025, 1:00 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಚಂದನ್‌ ಮತ್ತು ಶ್ಯಾಮ್‌ ಎಂಬ ಸ್ನೇಹಿತರಿಗೆ ಚಿತ್ರ ಬಿಡಿಸುವ ಆಸಕ್ತಿ. ಇಬ್ಬರಿಗೂ ಚಿತ್ರ ಕಲಾವಿದರಾಗುವ ಆಸೆ. ಒಟ್ಟಿಗೆ ಓದಿ ಪಿಯುಸಿ ಮಗಿಸಿದ ನಂತರ ಕಲಾಶಾಲೆಯಲ್ಲಿ ಓದುತ್ತಿದ್ದರು. ಚಂದನ್‌ ಎನ್ನುವ ಹುಡುಗ ಬಹಳ ಪ್ರತಿಭಾವಂತ. ಅವನ ಕೈಬೆರಳುಗಳಲ್ಲಿ ಮಾಂತ್ರಿಕತೆ ಇದೆಯೆಂದು ಜನರು ಮಾತಾಡಿಕೊಳ್ಳುತ್ತಿದ್ದರು. ಜತೆಗೆ ಚಂದನ್‌ ಕಷ್ಟಪಟ್ಟು ಅಭ್ಯಾಸ ನಡೆಸುತ್ತಿದ್ದ. ಶ್ಯಾಮ್‌ ಕೂಡ ಪ್ರತಿಭಾವಂತನೇ. ಆದರೆ ಚಂದನ್‌ನಲ್ಲಿರುವ ಅದ್ಭುತ ಪ್ರತಿಭೆ ಆತನಲ್ಲಿರಲಿಲ್ಲ. ಆದರೆ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಶ್ಯಾಮ್‌ನಲ್ಲಿತ್ತು. ಆ ಗುರಿ ಸಾಧಿಸಲು ಆತ ಹಗಲಿರುಳು ಕಷ್ಟಪಡುತ್ತಿದ್ದ.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಚಂದನ್‌ ಬಿಡಿಸಿದ ಚಿತ್ರಗಳು ಎಲ್ಲರ ಮನಸೂರೆಗೊಂಡಿದ್ದವು. ತರಗತಿಯಲ್ಲಿ ಉಪಾಧ್ಯಾಯರಿಂದ ಹಿಡಿದು ಎಲ್ಲರೂ ಹೊಗಳುವವರೇ! ಮೂರನೇ ವರ್ಷದಲ್ಲಿ ಓದುತ್ತಿರುವಾಗಲೇ ಆತ ಸ್ವಂತ ಚಿತ್ರ ಪ್ರದರ್ಶನ ಕೂಡ ಏರ್ಪಡಿಸಿದ. ಅಲ್ಲಿ ಆತನ ಚಿತ್ರಗಳು ಒಳ್ಳೆಯ ಬೆಲೆಗೆ ಮಾರಾಟವಾದವು ಕೂಡ. ‘ನೋಡಿ, ಪ್ರತಿಭೆಯೊಂದಿಗೇ ಹುಟ್ಟಿದ್ದಾನೆ ಈ ಹುಡುಗ’ ಎಂದು ಜನರು ಮಾತಾಡಿಕೊಳ್ಳುವುದನ್ನು ಕೇಳಿ ಕೇಳಿ ಚಂದನ್‌ಗೆ ಕೊಂಚ ಅಹಂಕಾರ ಬಂತು. ಹೇಗಿದ್ದರೂ ತನ್ನ ಕೈಲಿ ಜಾದೂ ಇದೆ ಅಂದುಕೊಂಡ ಚಂದನ್‌ ಶ್ರಮ ಪಡುವುದನ್ನು ಕಡಿಮೆ ಮಾಡಿದ. ಮೊದಲು ಹಗಲೂ ರಾತ್ರಿ ತನ್ನ ಚಿತ್ರಕಲೆಯ ನಾಜೂಕು ಸಂಗತಿಗಳನ್ನು ಅಧ್ಯಯನ ಮಾಡುತ್ತಿದ್ದವನು ಅವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ. ಜಾಸ್ತಿ ಹೊತ್ತು ಮೊಬೈಲಿನಲ್ಲಿ ಕಳೆಯುವುದು, ನಿದ್ರಿಸುವುದನ್ನು ಶುರುಮಾಡಿದ. ಪ್ರತಿಭೆಯ ಬಲದಿಂದಲೇ ತಾನು ಎತ್ತರೆತ್ತರ ಬೆಳೆಯುತ್ತೇನೆಂಬ ಭ್ರಮೆಯಲ್ಲಿ ಬಿದ್ದ.

ADVERTISEMENT

ಶ್ಯಾಮ್‌ ಮೊದಲಿನಿಂದಲೂ ಚಿತ್ರಕಲೆಯ ಕಡು ವ್ಯಾಮೋಹಿ. ತಾನು ಚಂದನ್‌ ರೀತಿ ಅದ್ಭುತ ಪ್ರತಿಭಾವಂತ ಅಲ್ಲವೆಂದು ಅವನಿಗೆ ಗೊತ್ತಿತ್ತು. ಹಾಗಾಗಿ ತಾನು ಯಶಸ್ವಿಯಾಗಬೇಕಾದರೆ ಬಹಳ ಕಷ್ಟಪಡಬೇಕೆಂದು ಶ್ಯಾಮ್‌ ಅರ್ಥ ಮಾಡಿಕೊಂಡಿದ್ದ. ಚಿತ್ರಗಳು ಜನರ ಗಮನ ಸೆಳೆಯದೇ ಹೋದಾಗ ತನ್ನ ಶಿಕ್ಷಕರೊಂದಿಗೆ ಚರ್ಚಿಸಿ ತಿದ್ದಿಕೊಳ್ಳಲು ಶತಃಪ್ರಯತ್ನ ಪಟ್ಟ. ಬೇರೆ ಬೇರೆ ಕಲಾಪ್ರದರ್ಶನಗಳಿಗೆ ಹೋಗಿ ಪ್ರಖ್ಯಾತ ಕಲಾವಿದರ ಚಿತ್ರಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸುತ್ತಿದ್ದ. ‘ಕತ್ತಲೆಯನ್ನು ಓಡಿಸಲು ಝಗಮಗಿಸುವ ದೊಡ್ಡ ದೀಪಗಳೇ ಬೇಕೆಂದಿಲ್ಲ, ಸಣ್ಣ ಹಣತೆಯೂ ಸಾಕು, ಆದರೆ ಅದು ಉರಿಯುತ್ತಲೇ ಇರಬೇಕಷ್ಟೇ: ಎಂಬ ತನ್ನ ಅಮ್ಮನ ಮಾತನ್ನು ಸದಾ ನೆನಪಿಟ್ಟಿದ್ದ ಶ್ಯಾಮ್‌.

ಕೊನೆಯ ವರ್ಷ ನಗರದಲ್ಲಿ ಅಂತರ ಕಾಲೇಜು ಮಟ್ಟದ ಸ್ಪರ್ಧೆ ಏರ್ಪಟ್ಟಿತು. ಅದರಲ್ಲಿ ಚಂದನ್‌ ಗೆಲ್ಲುತ್ತಾನೆಂದು ಎಲ್ಲರೂ ಅಂದುಕೊಂಡಿದ್ದರು. ಚಂದನ್‌ ಕೂಡ ವಿಶ್ವಾಸದಿಂದಿದ್ದ. ಆದರೆ ಶ್ಯಾಮ್‌ ಗೆಲ್ಲಲೇಬೇಕೆಂದು ತೀರ್ಮಾನಿಸಿದ್ದ. ಚಿತ್ರ ಬಿಡಿಸುವ ಸ್ಪರ್ಧೆಯ ದಿನ ಕೊನೆಯ ನಿಮಿಷ ಕಳೆದಾಗ ನೋಡುವುದೇನು? ಚಂದನ್‌ ಚಿತ್ರವೇನೋ ಚೆನ್ನಾಗಿತ್ತು, ಆದರೆ ಅದರ ಆತ್ಮ ಎಲ್ಲೋ ಕಳೆದುಹೋದಂತೆ ಭಾಸವಾಗುತ್ತಿತ್ತು. ಆದರೆ ಶ್ಯಾಮ್‌ನ ಚಿತ್ರ ಅತ್ಯದ್ಭುತವಾಗಿ ಮೂಡಿತ್ತು. ಮಹಾನ್‌ ಕಲಾವಿದರು ಎಂದೂ ನಿರ್ಲಕ್ಷ್ಯ ಮಾಡದ ಅತ್ಯಂತ ಸೂಕ್ಷ್ಮ ಸಂಗತಿಗಳೆಲ್ಲ ಕರಾರುವಾಕ್ಕಾಗಿ ಮೂಡಿಬಂದಿದ್ದವು. ಸತತ ಅಧ್ಯಯನ, ಅಭ್ಯಾಸ ಅವನ ಚಿತ್ರದಲ್ಲಿ ಕಾಣುತ್ತಿತ್ತು. ಅತಿಯಾದ ಆತ್ಮವಿಶ್ವಾಸ ಚಂದನ್‌ನನ್ನು ಸೋಲಿಸಿದರೆ ಸತತ ಪರಿಶ್ರಮ ಶ್ಯಾಮ್‌ನನ್ನು ಗೆಲ್ಲಿಸಿತು.

ನಿಜ, ಪರಿಶ್ರಮವಿಲ್ಲದ ಪ್ರತಿಭೆಯಿಂದ ಯಾವ ಪ್ರಯೋಜನವೂ ಇಲ್ಲ. ಅಭ್ಯಾಸದಿಂದ ಯಾರು ಬೇಕಾದರೂ ಸಾಧಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.