ADVERTISEMENT

ನುಡಿ ಬೆಳಗು: ನಿಜವಾದ ಸೌಂದರ್ಯವೆಂದರೆ…

ದೀಪಾ ಹಿರೇಗುತ್ತಿ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸೋನಾ ಎನ್ನುವ ಯುವತಿ ತನ್ನ ಅಪ್ರತಿಮ ಚೆಲುವಿಗೆ ಹೆಸರಾಗಿದ್ದಳು. ಶ್ರೀಮಂತ ವ್ಯಾಪಾರಿಯೊಬ್ಬನ ಪತ್ನಿಯಾಗಿದ್ದ ಆಕೆ ಎಲ್ಲ ಅನುಕೂಲಗಳಿದ್ದರೂ ಯಾವಾಗಲೂ ಅಸಮಾಧಾನದಿಂದ ಇರುತ್ತಿದ್ದಳು. ಅಯ್ಯೋ ವಯಸ್ಸಾಗುತ್ತ ಹೋದಂತೆ ತನ್ನ ಚೆಲುವು ಕುಂದುತ್ತ ಹೋಗುತ್ತದಲ್ಲ ಎಂದು ಸದಾ ಕೊರಗುತ್ತಿದ್ದಳು. ಎಲ್ಲಾ ಇದ್ದರೂ ಏನೂ ಇಲ್ಲದ ಶೂನ್ಯ, ಖಾಲಿತನದಿಂದ ಕೂಡಿತ್ತು ಅವಳ ಬದುಕು. ಒಮ್ಮೆ ತಮ್ಮೂರಲ್ಲಿ ಬುದ್ಧನ ಪ್ರವಾಸದ ಬಗ್ಗೆ ಕೇಳಿದ ಯುವತಿ ದರ್ಶನಕ್ಕೆಂದು ಬಂದಳು. ‘ಗುರುಗಳೇ, ನನ್ನ ಸೌಂದರ್ಯ ಮತ್ತು ಸಂತೋಷ ಎರಡನ್ನೂ ಸದಾಕಾಲ ಕಾಪಾಡಿಕೊಳ್ಳುವುದು ಹೇಗೆ’ ಎಂದು ಕೇಳಿದಳು.

ಹಜಾರದಲ್ಲಿದ್ದ ಅಗಲ ಪಾತ್ರೆಯೊಂದರಲ್ಲಿ ನೀರು ತುಂಬಿತ್ತು. ಅದರ ಮೇಲೆ ಹೂವಿನ ಪಕಳೆಗಳು ತೇಲುತ್ತಿದ್ದವು. ಬುದ್ಧ ಒಂದು ಕಡ್ಡಿಯನ್ನು ತೆಗೆದುಕೊಂಡು ನೀರನ್ನು ಕಲಕಲು ಹೇಳಿದ. ಕಲಕಿದಳು. ಪಕಳೆಗಳು ಚೆಲ್ಲಾಪಿಲ್ಲಿಯಾದವು. ಆಗ ಬುದ್ಧನೆಂದ, ‘ನೋಡು, ಶಾಂತವಾಗಿರುವ ನೀರಿನ ಮೇಲೆ ಪಕಳೆಗಳು ಶಾಂತವಾಗಿ ತೇಲುತ್ತಿದ್ದವು. ನೋಡಲೂ ಸುಂದರವಾಗಿ ಕಾಣುತ್ತಿದ್ದವು. ಆದರೆ ಅದೇ ಕಲಕಿದ ನೀರಲ್ಲಿ ಹೇಗಿವೆ? ಎಲ್ಲ ಪಕಳೆಗಳೂ ಚೆಲ್ಲಾಪಿಲ್ಲಿಯಾಗಿವೆ. ಪಾತ್ರೆ ಎಷ್ಟು ಸುಂದರವಾಗಿದ್ದರೇನು? ಪಾತ್ರೆಯೊಳಗಿನ ನೀರು ಹೇಗಿರುತ್ತದೆಂಬುದರ ಮೇಲೆ ಪಕಳೆಗಳ ಸೌಂದರ್ಯ ಕಾಣುವುದು. ಅದೇ ರೀತಿ ನೀನು ಯಾವಾಗಲೂ ತಳಮಳದಲ್ಲಿ, ಗೊಂದಲದಲ್ಲಿ, ಚಿಂತೆಯಲ್ಲಿ ಇದ್ದರೆ ಸುಖವಾಗಿರಲು ಸಾಧ್ಯವಿಲ್ಲ, ಸುಂದರವಾಗಿ ಕಾಣಲೂ ಸಾಧ್ಯವಿಲ್ಲ’. ಸೋನಾ ಸುಮ್ಮನೆ ಕೇಳುತ್ತಿದ್ದಳು. ಬುದ್ಧ ಮುಗುಳ್ನಕ್ಕು  ಹೇಳಿದ, ‘ಮಗೂ ದೈಹಿಕ ಸೌಂದರ್ಯ ಹೂವಿನಂತೆ, ಇಂದು ಅರಳಿ ನಾಳೆ ಮುದುಡಿ ಹೋಗುತ್ತದೆ. ಕೊನೆಯವರೆಗೂ ಉಳಿಯುವುದು ಮನಸ್ಸಿನ ಚೆಲುವು. ಸಹನೆ, ಕರುಣೆ, ಸಹಾನುಭೂತಿಯಂತಹ ಗುಣಗಳನ್ನು ಬೆಳೆಸಿಕೋ, ಅವು ಸಮಯಾತೀತ. ಸುಮ್ಮನೆ ಇಲ್ಲದ ವಿಚಾರಗಳ ಬಗ್ಗೆ ಯೋಚಿಸುತ್ತ ಕೊರಗಬೇಡ’. ಸೋನಾಳಿಗೆ ಬುದ್ಧನ ಮಾತು ಅರ್ಥವಾಗಿತ್ತು. ಅವಳ ಮುಖ ಅವಳ ಮನಸ್ಸಿನ ನೆಮ್ಮದಿಯನ್ನು ಹೊರಸೂಸುತ್ತಿತ್ತು.

ADVERTISEMENT

ನಮ್ಮ ಬದುಕಿನ ಕಷ್ಟಕಾಲದಲ್ಲಿ ಅಥವಾ ನೆಮ್ಮದಿಯ ಕಾಲದಲ್ಲಿ ಅಥವಾ ನಾವು ಏಕಾಂಗಿಯಾಗಿರುವಾಗ ನಮಗೆ ನೆನಪಾಗುವ ವ್ಯಕ್ತಿ ಯಾರು? ನಾವು ನೋಡಿದ ಅತ್ಯಂತ ಸುಂದರ ಮಹಿಳೆ ಅಥವಾ ಪುರುಷನೇ? ನಮಗೆ ಗೊತ್ತಿರುವ ಬಹು ಶ್ರೀಮಂತ ಅಥವಾ ಜನಪ್ರಿಯ ವ್ಯಕ್ತಿಗಳೇ? ಅಲ್ಲ, ಇವರು ಯಾರೂ ಈ ಸಂದರ್ಭಗಳಲ್ಲಿ ನಮಗೆ ನೆನಪಿಗೆ ಬರುವುದಿಲ್ಲ. ನಮಗೆ ಕಷ್ಟಸುಖದಲ್ಲಿ ನೆನಪಾಗುವವರು ನಮ್ಮ ನೈಜ ಸ್ನೇಹಿತರು ಮತ್ತು ಆಪ್ತರಾದ ಬಂಧುಗಳು. ಅವರಲ್ಲಿರುವ ಒಳ್ಳೆಯ ಗುಣಗಳಿಂದ ಅವರು ನಮಗೆ ಹತ್ತಿರವಾಗಿದ್ದಾರೆಯೇ ವಿನಾ ಸೌಂದರ್ಯದಿಂದಲ್ಲ. ವಯಸ್ಸಾದಂತೆ ದೈಹಿಕ ಚೆಲುವು ಕುಂದುತ್ತದೆ, ಆದರೆ ಅನುಭವಗಳು ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ತಾಳ್ಮೆ, ಕ್ಷಮೆ, ಸಹಿಷ್ಣುತೆಯಂತಹ ಸ್ವಭಾವಗಳನ್ನು ರೂಢಿಸಿಕೊಳ್ಳುತ್ತ ಹೋದಂತೆ ಅವು ನಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತವೆ. ಇದೇ ವಾಸ್ತವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.