ADVERTISEMENT

ನುಡಿ ಬೆಳಗು: ಏನು ಬಂದಿರಿ ಹದುಳವಿದ್ದಿರೆ...

ರೇಣುಕಾ ನಿಡಗುಂದಿ
Published 8 ಜನವರಿ 2026, 23:30 IST
Last Updated 8 ಜನವರಿ 2026, 23:30 IST
<div class="paragraphs"><p>ನುಡಿ ಬೆಳಗು...</p></div>

ನುಡಿ ಬೆಳಗು...

   

ಇತ್ತೀಚೆಗೆ ಕೆಬಿಸಿ ಜೂನಿಯರ್‌ನಲ್ಲಿ ಭಾಗವಹಿಸಿದ್ದ ಒಬ್ಬ ಬಾಲಕ ತನ್ನ ಹೈಪರ್ ಆ್ಯಕ್ಟಿವಿಟೀಸ್‌ ಜೊತೆಗೆ ತನ್ನ ಅತೀ ಎನಿಸುವ ಆತ್ಮವಿಶ್ವಾಸದ ವರ್ತನೆಯಿಂದ ಬಹು ಚರ್ಚೆಗೆ ಒಳಗಾಗಿದ್ದು ಗೊತ್ತೇ ಇದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಡಿಎಚ್‌ಡಿ ಸಮಸ್ಯೆ, ಪೋಷಕರನ್ನು ಕುರಿತು –‘ಬಾಲಕನಿಗೆ ಸಂಸ್ಕಾರ ಕಲಿಸಿಲ್ಲ, ದೊಡ್ಡವರಿಗೆ ಹೇಗೆ ಗೌರವ ಕೊಡಬೇಕು, ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿಲ್ಲ’ ಎಂದು ಅನೇಕರು ಟೀಕಿಸಿದರು. ಈ ಘಟನೆ ಜನಪ್ರಿಯ ಟಿವಿ ಶೋ ಒಂದರಲ್ಲಿ ಘಟಿಸಿದ್ದರಿಂದ ದೇಶದಾದ್ಯಂತ ಜನರ ಗಮನ ಸೆಳೆಯಿತು. ಆದರೆ ನಿತ್ಯ ಜೀವನದಲ್ಲಿ ಅನೇಕರ ವರ್ತನೆ ಆ ಬಾಲಕನಿಗಿಂತಲೂ ಕನಿಷ್ಠವಾಗಿರುತ್ತದೆ ಎಂಬುದನ್ನು ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅನುಭವಿಸಿರುತ್ತೇವೆ. ಈಗಿನ ಪೀಳಿಗೆಯೇ ಹಾಗಿದೆ. ಯಾರ ಮಾತನ್ನೂ ಕೇಳುವುದಿಲ್ಲ. ಹಿರಿಯರ ಬಗ್ಗೆ ಗೌರವವಿಲ್ಲ. ತಂದೆ ತಾಯಿ, ಶಾಲಾ ಶಿಕ್ಷಕರು, ಆಟ ಪಾಠ ಎಲ್ಲದರ ಬಗ್ಗೆಯೂ ಒಂದು ತರಹದ ಅಸಡ್ಡೆ, ಮುಂಗೋಪ, ಅವಿವೇಕತನ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಡಿಕೊಳ್ಳುವ ಎಡವಟ್ಟುಗಳನ್ನು ನಾವು ಗುರುತಿಸಬಹುದು. ಹಾಗಾದರೆ ಈ ಸಂಸ್ಕಾರವೆಂಬುದು ಮಕ್ಕಳಿಗೆ ಮಾತ್ರ ಸೀಮಿತವೇ?

ದೊಡ್ಡವರಿಗೆ ನಮಸ್ಕರಿಸುವುದು, ವಿನಯದಿಂದ ಮಾತನಾಡುವುದು, ಮನೆಗೆ ಬಂದವರನ್ನು ಬನ್ನಿ, ಕೂತುಕೊಳ್ಳಿ ಎಂದು ಹೇಳುವುದು, ಬಿಸಿಲಲ್ಲಿ ಬಂದವರಿಗೆ ಕುಡಿಯಲು ನೀರು ಕೊಡುವುದು... ಇಂತಹ ಸಣ್ಣ ಸಣ್ಣ ಸಂಗತಿಗಳನ್ನು ಮನೆಯಿಂದಲೇ ಕಲಿಯುತ್ತಾರೆ ಮಕ್ಕಳು. ಈಗ ಬಸ್‌, ಮೆಟ್ರೊ ಎಲ್ಲಿಯೇ ನೋಡಿ ನಿಲ್ಲಲು ಸಾಧ್ಯವಾಗದ ಹಿರಿಯರಿಗೆ ಸೌಜನ್ಯಕ್ಕೂ ಕುಳಿತುಕೊಳ್ಳಿ ಎಂದು ತಮ್ಮ ಸೀಟು ಬಿಟ್ಟುಕೊಡದ ಮಕ್ಕಳಿದ್ದಾರೆ. ಮಹಾನಗರದಲ್ಲಂತೂ ನೆರೆಹೊರೆಯವರನ್ನೂ ಬಾಗಿಲ ಹೊರಗಡೆಯೇ ನಿಲ್ಲಿಸಿ ಮಾತನಾಡುವವರಿದ್ದಾರೆ. ಮನೆಗೆ ಬಂದವರನ್ನು ಕೂತುಕೊಳ್ಳಿ ಅನ್ನುವುದೂ ಇಲ್ಲ. ಚಹ ಕಾಫಿಗಳಂತೂ ದೂರದ ಮಾತು. ಬಸವಣ್ಣನವರ ವಚನ ನೆನಪಾಗುತ್ತದೆ.

ADVERTISEMENT

ಏನು ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೇ?
ಕುಳ್ಳಿರೆಂದಡೆ ನೆಲಕುಳಿ ಹೋಹುದೇ?
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ
ಕೂಡಲಸಂಗಮದೇವಯ್ಯಾ !

                              
ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾರೆ. ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ. ಅದೇ ರೀತಿ ಕುಳಿತು ಕೊಳ್ಳಲು ಆಹ್ವಾನ ನೀಡಿದರೆ, ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾರೆ. ಮೂಗ ಕೊಯ್ಯದೆ ಬಿಡುವನೆ ಎಂದರೆ ಅಂಥವರು ಶಿಕ್ಷಾರ್ಹರು ಅಂಥವರು ದೇವರ ಒಲುಮೆಗೆ ಪಾತ್ರರಾಗುವುದಿಲ್ಲ ಎಂದು ಬಸವಣ್ಣ ಹೇಳುತ್ತಾರೆ.

ಇನ್ನೊಂದರಲ್ಲಿ ‘ಇವನಾರವ ಎಂದೆನಿಸದೆ, ಇವನಮ್ಮವ ಎಂದೆನಿಸಯ್ಯಾ’ ಎಂದು ಎಲ್ಲ ವರ್ಗದ ಜನರನ್ನು ಆದರದಿಂದ ಕಾಣು  ಎಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ನೀಡಿರುವಂತೆ ಇಲ್ಲಿ ಕೂಡ ಆದರಾತಿಥ್ಯ ಶರಣರ ಗುಣ ಲಕ್ಷಣ ಎಂದು ಹೇಳುತ್ತಾರೆ. ಈ ಗುಣಗಳು ಶರಣರಿಗಷ್ಟೇ ಅಲ್ಲ, ಎಲ್ಲ ಮನುಷ್ಯರಲ್ಲಿರಬೇಕಾದ ಸದ್ಗುಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.