ADVERTISEMENT

ನುಡಿ ಬೆಳಗು: ಕೊಟ್ಟು ಸೈ ಎನಿಸಿಕೊಳ್ಳಬಹುದೇ?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಗಲ್ಲಿಯ ತುಂಬಾ ಜನವೋ ಜನ. ಜನರೆಲ್ಲ ಗಾಬರಿಯಿಂದ ಕುತೂಹಲದಿಂದ ಗುಸುಗುಸು ಪಿಸುಪಿಸು, ಹಾಗಂತೆ ಹೀಗಂತೆ ಮಾತಾಡುತ್ತಿದ್ದರಿಂದ ಗದ್ದಲವೋ ಗದ್ದಲ. ಒಬ್ಬ ಹಟಮಾರಿ ವ್ಯಕ್ತಿ ಎತ್ತರವಾದ ಕಟ್ಟಡದ ಮೇಲೆ ನಿಂತು ಕೆಳಗೆ ಹಾರುತ್ತೇನೆಂದು ಕೂಗುತ್ತಿದ್ದ. ಹತ್ತಿರದ ಪೋಲೀಸ್‌ ಠಾಣೆಯಿಂದ ಅಧಿಕಾರಿಗಳು ಅಲ್ಲಿಗೆ ಬಂದರು. ಅಗ್ನಿ ಶಾಮಕದಳದವರೂ ಬಂದರು. ‘ದಯಮಾಡಿ ಕೆಳಗೆ ಬಾರಪ್ಪಾ’ ಎಂದು ಆ ಹಟಮಾರಿಯ ತಾಯಿ ಅಂಗಲಾಚುತ್ತಿದ್ದರೂ ಆತ ಕಿವಿಗೊಡದೆ, ತನ್ನನ್ನು ಜಿಲ್ಲಾಧಿಕಾರಿಯಾಗಿ ಮಾಡದಿದ್ದರೆ ಕೆಳಗೆ ಬಿದ್ದು ಸಾಯುವುದಾಗಿ ಕೂಗುತ್ತಿದ್ದ. ಅವನು ಬಿದ್ದರೇನು ಗತಿ ಎಂದು ಪೋಲೀಸರು ಸರಸರನೆ ಬೆವರು ಸುರಿಸುತ್ತಾ ಕಟ್ಟಡದ ನಾಲ್ಕೂ ಬದಿಗೆ ಬಲೆ ಕಟ್ಟಿದರು. ಪೊಲೀಸ್ ಅಧಿಕಾರಿ ಮೈಕಿನಲ್ಲಿ, ‘ಏ ಸುಮ್ಮನೇ ಕೆಳಗಿಳಿದು ಬಾರಯ್ಯ’ ಅಂದ. ಇವ ‘ನೀನೇ ಮೇಲೆ ಬಾರಯ್ಯ’ ಅಂದ. ಯಾರೋ ನಿಂತಿದ್ದವ,  ‘ಜಿಲ್ಲಾಧಿಕಾರಿ ಮಾಡುತ್ತೇವೆ ಅನ್ನೋಣ. ಬರಬಹುದು’ ಅಂದ. ಕೆಲವರು ‘ಛೆ ಛೆ... ಹುಚ್ಚನನ್ನು ಜಿಲ್ಲಾಧಿಕಾರಿ ಮಾಡುವುದೇ’ ಅಂದರು. ಇನ್ನೂ ಕೆಲವರು ‘ನಿಜವಾಗಿಯೂ ಏನು ಮಾಡುವುದಿಲ್ಲವಲ್ಲ, ಸುಮ್ಮನೆ ಹೇಳೋಣ ಇಳಿದರೆ ಸಾಕಲ್ವಾ’ ಎಂದು ಹೇಳಿದರು.

ಆದರೆ, ಅಲ್ಲಿ ನಿಂತಿದ್ದ ಬಿಳಿ ತಲೆಯ, ಸೊಂಟ ಬಗ್ಗಿದ ಮುದುಕನೊಬ್ಬ, ‘ಇಲ್ಲ. ಎಂದೆಂದಿಗೂ ಇಲ್ಲ. ಇಂಥ ಎಷ್ಟೋ ಜನರನ್ನು ನಾನು ನೋಡಿದ್ದೇನೆ. ಒಮ್ಮೆ ಮೇಲೇರಿದರೆಂದರೆ ಅವರು ಕೆಳಗಿಳಿಯುವ ಯೋಚನೆಯನ್ನೇ ಮಾಡುವುದಿಲ್ಲ’ ಎಂದು ಅವರ ಮಾತನ್ನು ವಿರೋಧಿಸಿದ. ಅಷ್ಟರಲ್ಲಿ ಜನಜಂಗುಳಿಯಿಂದ ಯಾರೋ ಒಬ್ಬ ‘ಆಗಲಿ, ನಾವೆಲ್ಲ ನಿನ್ನನ್ನು ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೇವೆ. ಇನ್ನಾದರೂ ಕೆಳಗೆ ಬಾ’ ಎಂದು ಕೂಗೇ ಬಿಟ್ಟ.

ADVERTISEMENT

ಇದನ್ನು ಕೇಳಿದ್ದೇ ತಡ, ಆ ಹಟಮಾರಿ ಖುಷಿಯಿಂದ ಕಟ್ಟಡದ ಛಾವಣಿಯ ಮೇಲೆಯೇ ಕುಣಿಯತೊಡಗಿದ. ಸ್ವಲ್ಪ ಹೊತ್ತು ಕುಣಿದು ಮತ್ತೆ ಕೂಗಿದ: ‘ಊಹುಂ, ನಾನು ಕೆಳಗೆ ಬರುವುದಿಲ್ಲ. ನೀವು ನನ್ನನ್ನು ನಗರ ಸಭೆಯ ಸದಸ್ಯನನ್ನಾಗಿ ಮಾಡಿದರೆ ಮಾತ್ರ ಬರುತ್ತೇನೆ’.  ‘ಆತ ಎಂದಿಗೂ ಕೆಳಗೆ ಬರುವುದಿಲ್ಲ ಎಂದು ನಾನು ಹೇಳಲಿಲ್ಲವೇ? ನೀವು ಏನು ಮಾಡಿದರೂ ಆತ ಕೆಳಗೆ ಬರುವುದಿಲ್ಲ’ ಎಂದ ಮುದುಕ. ಅವನ ಮಾತನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಪೋಲೀಸ್‌ ಕೂಗಿದ: ‘ಆಗಲಿ ನಿನ್ನನ್ನು ನಗರಸಭೆಯ ಸದಸ್ಯನನ್ನಾಗಿ ಮಾಡಿದ್ದೇವೆ. ಕೆಳಗಿಳಿದು ಬಾ’ ಎಂದ. ‘ನನ್ನನ್ನು ಮೇಯರ್ ಮಾಡಿರಿ‌’ ಎಂದು ಆ ಹಟಮಾರಿ ಕುಣಿಯುತ್ತಲೇ ಕೂಗಿ ಹೇಳಿದ. ಅಗ್ನಿ ಶಾಮಕದಳದ ಅಧಿಕಾರಿಯೊಬ್ಬ, ‘ಆಗಲಿ ನೀನೀಗ ಮೇಯರ್‌’ ಎಂದ. ಅಷ್ಟರಲ್ಲಿ ಹಟಮಾರಿ ಉನ್ಮತ್ತನಾಗಿ, ‘ನೀವು ನನ್ನನ್ನು ಪ್ರಧಾನಿಯಾಗಿ ಮಾಡದಿದ್ದರೆ ನಾನು ಕೆಳಗೆ ಜಿಗಿದೇ ಬಿಡುತ್ತೇನೆ’, ಜನರಲ್ಲೀಗ ಅವನ ಬಗ್ಗೆ ಗೊಂದಲ ಮೂಡತೊಡಗಿತು. ಆದರೂ ‘ನಾವು ನಿನ್ನನ್ನು ಪ್ರಧಾನಿ ಮಾಡಿದ್ದೇವೆ’ ಎಂದಿತು ಜನಸಮೂಹ.

‘ನೀವು ನನ್ನನ್ನು ರಾಷ್ಟ್ರಪತಿಯನ್ನಾಗಿ ಮಾಡದ ಹೊರತು ನಾನು ಕೆಳಗೆ ಬರುವುದಿಲ್ಲ’ ಎಂದು ಹಟಮಾರಿ ಕೂಗಿ ಹೇಳಿದ. ಮುದುಕನ ಮಾತು ನಿಜವೆಂಬುದು ಜನರಿಗೆ ಮನವರಿಕೆಯಾಗಿ ಅವನ ಕಡೆ ನೋಡಿದರು. ‘ನೀವು ಈಗಾಗಲೇ ಹಲವು ಬಾರಿ ಅವನು ಹೇಳಿದಂತೆ ಕೇಳಿ ಆಗಿದೆ ಆದ್ದರಿಂದ ಕಾಲ ಮಿಂಚಿಹೋಯಿತು. ಹಟಮಾರಿ ಹೇಳಿದ ಮಾತಿಗೆ ತಥಾಸ್ತು ಎಂದು ಹೇಳುವುದೊಂದೇ ಈಗ ಉಳಿದಿರುವ ದಾರಿ’ ಎಂದು ಮುದುಕ ಉತ್ತರಿಸಿದ. ಅಸಹಾಯಕರಾದ ಜನ ಮುದುಕನಿಗೆ ಏನಾದರೂ ಮಾಡಲು ಕೋರಿದರು. ‘ಅವನನ್ನು ನಾನು ಇಳಿಸುತ್ತೇನೆ. ಈ ವಿಷಯವನ್ನು ನನಗೆ ಬಿಡಿ’ ಎಂದು ಮುದುಕ ಮುಂದೆ ಹೊರಟ. 

‘ಮಹಾರಾಜಾಧಿರಾಜರೇ, ತಮ್ಮಿಂದ ಆರನೇ ಅಂತಸ್ತಿಗೆ ದಯವಿಟ್ಟು ಬರಲು ಸಾಧ್ಯವೇ’ ಎಂದು ಏಳನೆಯ ಅಂತಸ್ತಿನ ಮೇಲಿದ್ದ ಹಟಮಾರಿಯನ್ನು ಮುದುಕ ಕೇಳಿದ. ಹಟಮಾರಿ ಗಂಭೀರನಾಗಿ, ‘ಯಾಕೆ ಸಾಧ್ಯವಿಲ್ಲ ಹಾಗೇ ಆಗಲಿ’ ಎಂದು ಹೇಳಿ ಆರನೆಯ ಅಂತಸ್ತಿಗೆ ಜಿಗಿದು ಬಂದು ಕಿಟಕಿಯ ಮೂಲಕ ಜನಜಂಗುಳಿಯನ್ನು ನೋಡತೊಡಗಿದ. ಜನ ಮುದುಕ ಹೇಳಿಕೊಟ್ಟಂತೆ ಭಲೇ ರಾಜ ಭಲೇ ಎಂದರು. ‘ಪ್ರಭುಗಳೇ, ಐದನೇ ಅಂತಸ್ತಿನ ಮೇಲೆ ಬರಬೇಕೆಂಬ ನನ್ನ ವಿನಂತಿಯನ್ನು ಮನ್ನಿಸುತ್ತೀರಾ’ ಎಂದು ಮುದುಕ ಕೇಳಿದಾಗ ಹಟಮಾರಿ ಹಾಗೇ ಮಾಡಿದ. ಮುದುಕ ಅವನನ್ನು ನಾಲ್ಕನೇ ಅಂತಸ್ತಿಗೆ ಬರಲು ಕೇಳಿಕೊಂಡ. ಆತ ಇಳಿದು ಬಂದ. ‘ಪೂಜ್ಯರೇ, ಮೊದಲನೆಯ ಅಂತಸ್ತಿನವರೆಗೆ ಬರಲು ತಮಗೆ ಒಪ್ಪಿಗೆಯಿದೆಯೇ’ ಮುದುಕ ವಿನಯದಿಂದ ಬೇಡಿದ. ಹೀಗೆ ಹಟಮಾರಿ ಒಂದನೆಯ ಅಂತಸ್ತಿನಿಂದ ಜಿಗಿದು ಕೆಳಗೆ ಬಂದು ಜನಸಮೂಹವನ್ನು ಕೂಡಿಕೊಂಡ.

ಈಗ ಅಲ್ಲಿ ಸೇರಿದ್ದ ಜನ, ಈ ಉಪಾಯ ನಿನಗೆ ಹೇಗೆ ಹೊಳೆಯಿತು ಎಂದು ಆ ಮುದುಕನನ್ನು ಕೇಳಿದರು. ಮುದುಕ ತಲೆಯಲ್ಲಾಡಿಸುತ್ತ ಹೇಳಿದ, ‘ನಲ್ವತ್ತು ವರ್ಷಗಳವರೆಗೆ ನಾನು ರಾಜಕಾರಣದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಸಲಹೆಗಾರನಾಗಿ ಕೆಲಸ ಮಾಡಿದ್ದು ಉಪಯೋಗಕ್ಕೆ ಬಂತು. ಒಬ್ಬ ಹಟಮಾರಿಯ ಜೊತೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನೀವು ಇವತ್ತು ಕಲಿತಿರಲ್ವಾ’ ಎಂದು ನಗುತ್ತಾ ಹೇಳಿದ.

ಟರ್ಕಿ ಮೂಲದ ಈ ಕತೆಯು ಅಹಂಕಾರ ನೆತ್ತಿಗೆ ಏರಿದವರು, ತಾವು ಮಾಡಿದ್ದೇ ಸರಿ ಎಂಬ ಮನೋಭಾವದವರು, ಮೂರ್ಖರು ಇತರರ ಮಾತನ್ನು ಕೇಳುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಹಂಕಾರದ ನಡವಳಿಕೆಗಳು ಯಾವತ್ತಿಗೂ ಮೂರ್ಖತನದವಾಗಿರುತ್ತವೆ ಮತ್ತು ಯಾರದ್ದಾದರೂ ಬೇಡಿಕೆಯನ್ನು ಹಿಂದೆ ಮುಂದೆ ಯೋಚಿಸದೇ ಪೂರೈಸುತ್ತಾ ಹೋದಷ್ಟೂ ಅವರ ಆಸೆಗಳು, ಬೇಡಿಕೆಗಳು ಹೆಚ್ಚುತ್ತಲೇ ಹೋಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ, ಕೊಟ್ಟು ಯಾರನ್ನೂ ತೃಪ್ತಿಪಡಿಸುವುದು ಅಸಾಧ್ಯ ಎಂಬುದನ್ನು ಬಹಳ ಮನಮುಟ್ಟುವಂತೆ ತಿಳಿಸಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.