ADVERTISEMENT

ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

ವಾಸುದೇವ ನಾಡಿಗ್
Published 14 ಜನವರಿ 2026, 0:28 IST
Last Updated 14 ಜನವರಿ 2026, 0:28 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸೂರ್ಯನೇ ತನ್ನ ಪಥವನ್ನು ಬದಲಾಯಿಸುತ್ತಾನೆ. ಜೀವಜಾಲವನ್ನೂ ಬಿಡದೆ ಬದಲಾಯಿಸುತ್ತಾನೆ. ಉತ್ತರಾಯಣದ ಕಡೆಗೆ ಪಯಣ; ಎಲ್ಲರ ಕೂಡ. ಸುಗ್ಗಿಯನ್ನು ಬಿಂಬಿಸುವ ಕಾಲ. ಚಳಿ ನಮ್ಮನ್ನು ಅಗಲುವ ಮುನ್ಸೂಚನೆ. ಬಾಳಿನಲಿ ಬದಲಾವಣೆಯ ಹಾಡು ಸಂಕ್ರಾಂತಿ. ಸಣ್ಣ ಎಳ್ಳುಕಾಳು ಬೆಲ್ಲದುಂಡೆಯ ಸಖ್ಯ ಬೆಳೆಸುವ ಮುಹೂರ್ತ. ಈ ಸೂರ್ಯ ಚಂದ್ರ ಗ್ರಹ ತಾರೆಗಳ ಓಡಾಟ ನಿಲ್ಲಲಾರದು. ಮರಳಿ ಮರಳಿ ಬರುವ ಅದೇ ಯುಗಾದಿ ಅದೇ ದೀಪಾವಳಿ ಅದೇ ಸುಗ್ಗಿ ಹಬ್ಬ ಅದೇ ದಸರಾ ಮರುಕಳಿಸಿ ಅದೇ ಅನುಭವ ಕೊಡುತ್ತವೆ. ಋತುಗಳ ಮೇಲೆ ಚಲಿಸುವ ಬಾಳ ಚಕ್ರ ಇದು. ಅವು ಹಾಗಾಗೇ ಇರುತ್ತವೆ.

ನಾವು ಬದಲಾಗಿರುತ್ತೇವೆ. ವಯಸ್ಸು, ರೂಪ, ಗುಣ ಸ್ವೀಕರಿಸುವ ಮನೋಭಾವ ಎಲ್ಲ ಎಲ್ಲ ಬದಲಾಗಿರುತ್ತದೆ. ಹಕ್ಕಿ, ಮರ, ಬಾನು, ನದಿ, ಎಳ್ಳು, ಬೆಲ್ಲ, ಬೇವು, ಬನ್ನಿ ಮರ ಹಾಗೇ ನಿಂತಿರುತ್ತವೆ. ಬದಲಾದ ಕಾಲವನ್ನು ಹಳಿಯುತ್ತಿರುತ್ತೇವೆ. ಏಕೆಂದರೆ ನಮಗೆ ಬಾಯಿ ಇದೆ. ಅವು ಮೌನ. ಗೋಪಾಲಕೃಷ್ಣ ಅಡಿಗರು ಹಾಡಿದ ಹಾಗೆ ಮೌನ ನೆಲವನ್ನು ತಬ್ಬಿದೆ. ಬದಲಾವಣೆ ಬಾಳಿನ ಕುರುಹು; ಒಪ್ಪಿಕೊಳ್ಳೋಣ. ಇಡೀ ಭೂಮಿ ಋತುಚಕ್ರದ ಒಲವಿಗೆ ಕೂತು ಕಂಗೊಳಿಸುವಾಗ ಅದರ ಜೊತೆಗೆ ರೈತಾಪಿ ಜನರ ಬೆವರು ಬೆಳೆಯಾಗುತ್ತದೆ. ಬೆಲ್ಲದಿಂದ ಬೇವಿನವರೆಗೂ ಇಳೆಯ ಆಳದಲ್ಲಿ ಇಳಿದ ಬೇರುಗಳ ಫಲವೆ.

ADVERTISEMENT

ತನ್ನದಲ್ಲದ ಕೊಡಲಿಗಳನ್ನೂ ಪಡೆಯವ ಲೋಭ, ಧುತ್ ಅಂತ ಶ್ರೀಮಂತ ಆಗಲು ಕೋಳಿಯ ಹೊಟ್ಟೆಯನ್ನೇ ಬಗೆದ ಲಾಭಕೋರತನ. ಈ ಕಾರಣ ಸುಗ್ಗಿಕಾಲವೂ ಬದಲಾಗುತ್ತದೆ. ನಿಸರ್ಗದ ಕೂಡ ವ್ಯಾಪಾರಕ್ಕೆ ಕೂತವರ ತಕ್ಕಡಿ. ಆಕಾಶಕ್ಕೂ ನೂಕು ನುಗ್ಗಲು ಈಗ. ಅಗಾಧವಾದ ಶಕ್ತಿಯೊಂದರ ಋಣದಲ್ಲೇ ಬಾಳು ಸವೆಸುವಾಗ ದಾಸಿಮಯ್ಯ ಮಾತಾಡುತ್ತಾನೆ. ‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ’ ಎಂಬ ಮಾತು ನಮ್ಮನ್ನು ಎಚ್ಚರಿಸುತ್ತದೆ. ಸುಳಿದು ಸೂಸುವ ಗಾಳಿಯೇ ವಿಷವಾಗುವ ಸನ್ನಿವೇಶಕ್ಕೆ ತಲುಪಲಾದ ಹಂತ. ಟಾಲ್‌ಸ್ಟಾಯ್ ಅವರ ಅತಿ ಸಣ್ಣಕತೆಯಲ್ಲಿ ಕಣ್ಣಿಗೆ ಕಂಡ ನೆಲವೆಲ್ಲ ತನ್ನದೇ ಆಗುತ್ತದೆ ಎಂಬ ಲಾಲಸೆಯಲ್ಲಿ ಓಡಿ ಶಾಶ್ವತವಾಗಿ ಬಿದ್ದ ಮನುಷ್ಯ ನೆನಪಾಗುತ್ತಾನೆ. ಆಸ್ತಿ ಇರಲಿ, ಒಂದು ಸೂಜಿ ಮೊನೆಗೆ ತಾಕುವ ಮಣ್ಣನ್ನೂ ಕೊಡುವುದಿಲ್ಲ ಎಂದು ಹಟ ತೊಟ್ಟ ಸುಯೋಧನ ಕಾಡುತ್ತಾನೆ.

ಕಳೆದುಕೊಂಡು ಮತ್ತೆ ತುಂಬಿಕೊಳ್ಳುವ ಪ್ರಕೃತಿಯ ಎದುರು ಬರೀ ತುಂಬಿಕೊಂಡೆ ಖಾಲಿಯಾದ ಮನುಷ್ಯನಿಗೆ ಸಂಕ್ರಾಂತಿ ನೂರು ಸಂದೇಶ ಕೊಡುತ್ತದೆ. ಅಡಿಕೆ ತೊಗಟೆ ಬಾಳೆ ಎಲೆ ಪತ್ರೆಲೆಗಳ ಜಾಗದಲ್ಲಿ ಪ್ಲಾಸ್ಟಿಕ್ ಬಂದು ಕೂತದ್ದೂ ಒಂದು ಖಾಲಿತನವೇ. ಆ ತಲೆಮಾರು ಅಂಗಳದಲ್ಲಿ ಹಿಟ್ಟಿನ ರಂಗೋಲಿ ಎಳೆದು ಅವು ಕೀಟ ಹಕ್ಕಿಗಳಿಗೂ ಆಹಾರವಾಗಲಿ ಎಂದು ಹರಸಿದವರು. ಮಾವು ಬೇವು ತೋರಣ ವಿಷವಾಯುವನ್ನು ಹಿಡಿದಿಡುವ ಮಾರ್ಗಗಳಾಗಿ ತಣಿದಿದ್ದವು. ಬೆರಳುಗಳ ಸಂಧುಗಳಿಂದ ರಂಗೋಲಿ ಬೀಳುವ ಚೆಲುವಿನ ಕತೆ ಅದು.

ಮತ್ತೆ ಸಂಕ್ರಾಂತಿ ಬಂದಿದೆ, ಯುಗಾದಿಯೂ ಬರುತ್ತದೆ, ಮೋಸ ಮಾಡುವುದಿಲ್ಲ. ಸಿದ್ದೇಶ್ವರ ಸ್ವಾಮೀಜಿ ಹೇಳುವ ಹಾಗೆ ‘ಒಳಿತಿನ ಮಾತುಗಳೆಲ್ಲವನೂ ಹೇಳಲಾಗಿದೆ, ಈಗ ಆಚರಣೆ ಮಾತ್ರ ಉಳಿದಿರುವುದು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.