ADVERTISEMENT

ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:30 IST
Last Updated 16 ಡಿಸೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬರೀ ದ್ವೇಷ, ಅಸೂಯೆ, ಸ್ವಾರ್ಥ, ಸಮಯಸಾಧಕತನ, ಲಾಭಕೋರ ಗುಣ... ಇವುಗಳಲ್ಲೇ ಬಿದ್ದು ನರಳಾಡುವ ಮಂದಿಗೆ ಆ ಸಂತ ಪಾಠ ಕಲಿಸಿದ್ದೇ ಹೀಗೆ. ಪಾಠ ಕಲಿತರೋ ಇಲ್ಲವೋ ಎರಡನೆಯ ಮಾತು. ಆದರೆ ಈ ದೃಷ್ಟಾಂತದ ಮೂಲಕ ಅವನಿಗೆ ಲೋಕಕ್ಕೆ ಒಂದು ಸತ್ಯವನ್ನು ಹೇಳಬೇಕಿತ್ತು.

ಹತ್ತು ಹನ್ನೆರಡು ಭಕ್ತ ಜನರು ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಹೊರಡಲು ಅಣಿಯಾದರು. ಈ ಸಂತನನ್ನೂ ಜೊತೆಗೆ ಬರಲು ಪದೇ ಪದೇ ಕರೆದರು. ಆದರೆ ಈ ಸಂತ ಒಲ್ಲೆ ಅಂದ. ಇವರೆಲ್ಲರ ಪರಿಪರಿಯಾದ ಬೇಡಿಕೆಗೆ ಮಣಿಯದ ಸಂತ ಏನೋ ನೆಪ ಹೇಳಿ ಕೂತ. ಕೊನೆಗೆ ಒಂದು ದಪ್ಪ ಬೇವಿನ ಕಡ್ಡಿಯನ್ನು ತೆಗೆದುಕೊಂಡು ಬಂದು ಯಾತ್ರೆಗೆ ಹೊರಟ ಭಕ್ತ ಗಣಕ್ಕೆ ಕೊಡುತ್ತ, ‘ಈ ಬೇವಿನ ಕಡ್ಡಿಯನ್ನೇ ನಾನು ಎಂದು ತಿಳಿದುಕೊಂಡು ನೀವು ಹೋದ ಕಡೆಯೆಲ್ಲ ಇದನ್ನು ಜೊತೆಗೆ ತೆಗೆದುಕೊಂಡು ಹೋಗಿ’ ಎಂದನು. ಅವರೆಲ್ಲ ಬಹಳ ಖುಷಿ ಪಡುತ್ತಾ ಆ ಬೇವಿನ ಕಡ್ಡಿಯನ್ನೇ ಸಂತ ಎಂದು ಭಾವಿಸಿ ತಮ್ಮ ಜೊತೆಗೆ ತೀರ್ಥ ಕ್ಷೇತ್ರಕ್ಕೆ ತೆಗೆದುಕೊಂಡು ಹೊರಟರು. ಕಾಶಿ, ಗಯಾ, ಬದರಿ, ಕೇದಾರ, ಹರಿದ್ವಾರ ಎಂದೆಲ್ಲ ಸುತ್ತಾಡಿ ಹಲವು ದಿನಗಳ ನಂತರ ಹಿಂದಿರುಗಿ ಆಶ್ರಮದ ಆ ಸಂತನ ಬಳಿ ಬಂದು ಸಂತ ಕೊಟ್ಟಿದ್ದ ಬೇವಿನ ಕಡ್ಡಿಯನ್ನು ಹಿಂದಿರುಗಿಸಿದರು. ಅವರು ಜತನವಾಗಿ ಇಟ್ಟುಕೊಂಡು ವಾಪಸ್‌ ಕೊಟ್ಟ ಬೇವಿನ ಕಡ್ಡಿಯ ಬಗೆಗೆ ಸಂತನಿಗೆ ಅಚ್ಚರಿ.

ADVERTISEMENT

ಹತ್ತಾರು ಭಕ್ತಗಣ ತೀರ್ಥಯಾತ್ರೆ ಮುಗಿಸಿ ಬಂದ ಸಡಗರದಲ್ಲಿ ಅಂದು ಆಶ್ರಮದಲ್ಲಿ ಅಕ್ಕಿ ಬೆಲ್ಲದ ಪಾಯಸವನ್ನೂ ಮಾಡಲಾಯಿತು. ಪಾಯಸ ಕುದಿಯುವಾಗ ಯಾರಿಗೂ ಗೊತ್ತಾಗದ ಹಾಗೆ ಸಂತನು ಆ ಬೇವಿನ ಕಡ್ಡಿಯನ್ನೂ  ಅದರೊಳಗೆ ಹಾಕಿದ. ಎಲ್ಲರೂ ಊಟಕ್ಕೆ ಕುಳಿತಾಗ ಪಾಯಸವನ್ನು ಬಡಿಸಲಾಯಿತು. ಸಿಹಿಯಾಗಿರಬೇಕಿದ್ದ ಪಾಯಸದಲ್ಲಿ ಕಹಿ ಕಾಣಿಸಿ ಎಲ್ಲರಿಗೂ ದಿಗ್ಭ್ರಮೆ. ಕುದಿದ ಬೇವಿನ ಕಡ್ಡಿ ಬಿಟ್ಟುಕೊಟ್ಟ ಕಹಿ ಅದು.


ಏನೂ ಹೇಳದೆ ಸಂಜೆ ಆ ಸಂತ ಉಪನ್ಯಾಸಕ್ಕೆ ಕೂತ. ‘ಸ್ನೇಹಿತರೆ ನೀವು ಹೋದೆಡೆಯೆಲ್ಲ ನಿಮ್ಮ ಜೊತೆಗೆ ಬಂದಿದ್ದ ಬೇವಿನ ಕಡ್ಡಿಯನ್ನು ಪಾಯಸದೊಳಗೆ ಕುದಿಯಲು ಬಿಟ್ಟಿದ್ದೆ. ಅದು ಅಷ್ಟು ಪಾವನ ಕ್ಷೇತ್ರಗಳಲ್ಲಿ ಓಡಾಡಿದ್ದರೂ ತನ್ನ ಒಳಗಿನ ಕಹಿಯನ್ನು ಕಳೆದುಕೊಂಡಿರಲಿಲ್ಲ. ಸಿಹಿಯಾಗಿ ಬದಲಾಗಿರಲಿಲ್ಲ. ಹಾಗೆಯೇ ನಾವೂ’. ನಿಜವಲ್ಲವೆ? ಮನಸಿನ ತುಂಬಾ ಕಲ್ಮಷವಿಟ್ಟುಕೊಂಡು ಎಷ್ಟು ಜಪಿಸಿದರೇನು? ತಪವ ಮಾಡಿದರೇನು? ಪೂಜಿಸಿದರೇನು? ಮೂಲಗುಣವು ಬದಲಾಗದೇ ಇದ್ದರೆ ಅದು ಬೇವಿನ ಗತಿಯೇ ಸರಿ.

ತನುವ ನೀರೊಳಗದ್ದಿ ಏನು ಫಲ ಎಂದು ಪುರಂದರರು ಹಾಡಿದರೆ, ಸಪ್ತಶೀಲಗಳ ಬಗ್ಗೆ ಬಸವಣ್ಣ ಬಾರಿ ಬಾರಿ ಎಚ್ಚರಿಸುತ್ತಾರೆ. ಇನ್ನು ದೇಶ ಸುತ್ತಾಡಿ ಬಂದ ಬೇವಿನ ಕಡ್ಡಿಯ ಪಾಡೇನು? ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಅಗೆದು ಬೆಳಕಿನ ಸಸಿಗಳ ಸಲಹಲು ತಿಳಿವಳಿಕೆ ಹೇಳಿದ ಅಲ್ಲಮ ಪ್ರಭುವಿನ ಚಿಂತನೆಗಳೂ ಅಂತರಂಗದ ಹಸನು ಕುರಿತಾಗಿಯೇ ಪರಿತಪಿಸುತ್ತವೆ. ನಿರ್ಮಲವಾದ ಮನಸುಗಳಿಗೆ ಯಾವ ನದಿ ದೇಗುಲಗಳ ಹಂಗಿರದ ಹಾದಿ ಕೈ ಬೀಸಿ ಕರೆಯುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.