ನುಡಿ ಬೆಳಗು
ವ್ಯವಸಾಯದ ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಕುಟುಂಬವೊಂದು ನಾಲ್ಕು ಜನರಿಗೆ ದಾನ ಧರ್ಮ ಮಾಡಲು ಆಗದಿದ್ದರೂ ಮತ್ತೊಬ್ಬರಲ್ಲಿ ಕೈಚಾಚಿ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ವ್ಯವಹಾರದಲ್ಲಿ ಲಾಭಕ್ಕಾಗಿ ಸಣ್ಣ ಮಟ್ಟದ ಮೋಸ ನಡೆಯುತ್ತಿತ್ತು. ಸಂಸಾರದಲ್ಲಿ ಅದು ನಡೆಯಬಾರದು ಎಂದು ಎಚ್ಚರ ವಹಿಸಿದ ತಂದೆ ಏಳು ಜನ ಗಂಡುಮಕ್ಕಳ ನಡುವೆ ಹುಟ್ಟಿದ ಒಬ್ಬಳೇ ಒಬ್ಬ ಮಗಳಿಗೆ ಮದುವೆ ಮಾಡಿ ಒಂದೆಕರೆ ಜಮೀನನ್ನು ದಾನ ಮಾಡಿ ಸ್ವಾಧೀನಕ್ಕೆ ಕೊಟ್ಟು ಕಣ್ಮುಚ್ಚಿದ. ಹೆತ್ತ ತಾಯಿ ಗಂಡು ಮಕ್ಕಳೊಂದಿಗೆ ಸೇರಿಕೊಂಡು ತನ್ನ ಗಂಡ ಬಾಯಿಮಾತಿನಲ್ಲಿ ದಾನ ಕೊಟ್ಟ ಜಮೀನಿನ ಸ್ವಾಧೀನವನ್ನು ಮಗಳಿಂದ ಬಿಡಿಸಲು ಮಸಲತ್ತು ನಡೆಸಿದಳು. ಜಗಳ ಪೊಲೀಸು ಎಲ್ಲಾ ಮುಗಿದು ಕೇಸು ಕೋರ್ಟಿನ ಕಟಕಟೆಗೆ ಬಂದು ನಿಂತಿತು.
ವಿಚಾರಣೆಯ ಹಂತದಲ್ಲಿ ಮಗನೊಬ್ಬ ತಾಯಿಗೆ ವಿಷವುಣಿಸಿ ಕೊಂದ ಸುದ್ದಿ ಹಬ್ಬಿತು. ಏಳು ಜನ ಸಹೋದರರಲ್ಲಿ ಒಬ್ಬನು ಸಾಕ್ಷ್ಯ ಹೇಳಲು ಕೋರ್ಟಿಗೆ ಗೈರುಹಾಜರಾದ. ಉಳಿದ ಆರು ಜನರಲ್ಲಿ ಐವರು, ‘ಅವಳು ಒಡಹುಟ್ಟಿದವಳೇ ಅಲ್ಲ, ನಮ್ಮ ಮನೆಯಲ್ಲಿ ಕಸ ಮುಸುರೆ ಮಾಡಿಕೊಂಡಿದ್ದವಳು. ನಮ್ಮಪ್ಪನಿಗೆ ಪುಸಲಾಯಿಸಿ ಹೊಲ ಹೊಡೆದುಕೊಂಡಿದ್ದಾಳೆ’ ಅಂತ ಸಾಕ್ಷ್ಯ ನುಡಿದರು. ಉಳಿದ ಒಬ್ಬನು ಮಾತ್ರ ‘ಹೌದು, ಆಕೆ ನಮ್ಮೆಲ್ಲರ ಸೋದರಿ’ ಅಂತ ನಿಜ ಹೇಳಿದ. ಆಕೆಯೂ ಅಷ್ಟೇ, ಸೋದರಿ ಅಂತ ಒಪ್ಪಿಕೊಳ್ಳಿ, ಜಮೀನು ಕೊಡದಿದ್ದರೆ ಬೇಡ ಅಂತ ಗೋಗರೆಯಲಿಲ್ಲ. ಸಾಯುವವರೆಗೂ ನಿಮ್ಮನೆಗೆ ಎಡಗಾಲಿಡುವುದಿಲ್ಲ ಅಂದು ಹಾಗೇ ಬದುಕಿದಳು. ನ್ಯಾಯಾಧೀಶರು ಊರಿಗೇ ಬಂದು ಜನರ ವಿಚಾರಣೆ ನಡೆಸಿದರು. ಒಂದೆಕರೆ ಜಮೀನಿನ ಆಸೆಗಾಗಿ ಸೋದರಿಯನ್ನು ಒಡಹುಟ್ಟಿದವಳೇ ಅಲ್ಲ ಅಂತ ಸುಳ್ಳು ಹೇಳಿರುವುದು ಸಾಬೀತಾಯಿತು. ಜನರ ಸಮಕ್ಷಮದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ‘ಸುಳ್ಳು ಹೇಳಿದ ಐವರಿಗಿಂತ ನಿಜ ಹೇಳದೇ ದೂರ ಉಳಿದುಕೊಂಡವನು ಹೆಚ್ಚು ಅಪಾಯಕಾರಿ’ ಎಂದು ಹೇಳಿ ಹೋದರು.
ಹೌದು. ಇಂದಿನ ಡಿಜಿಟಲ್ ಕಾಲದಲ್ಲಿ ಕುಟುಂಬದ ಬಾಂಧವ್ಯ ಮತ್ತು ಸತ್ಯದ ನಡುವಿನ ಸಂಘರ್ಷ ತಾರಕಕ್ಕೇರಿದಂತಿದೆ. ಸಮಾಜದಲ್ಲಿ ಪಿತ್ರಾರ್ಜಿತ ಸಂಪತ್ತಿಗಾಗಿ ಸೋದರ ಸಂಬಂಧವನ್ನು ತೊರೆಯುವವರೇ ತುಂಬಿಕೊಂಡಿದ್ದಾರೆ. ಕೊಟ್ಟ ಮಾತಿಗೆ ತಪ್ಪಲಾರೆನು, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬಂತಹ ವಚನ ಪ್ರಾಮಾಣಿಕತೆಯ ಸಂಕೇತವಾದ ನಾಲಗೆನಿಷ್ಠೆ ನಾಶವಾಗಿದೆ. ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ಹೊರಳಬಹುದೆಂದು ಕಾಗದಪತ್ರ, ಬರವಣಿಗೆ, ಸೀಲು ಸಹಿಗಳನ್ನು, ಎಷ್ಟೇ ಮೋಸ ನಡೆದರೂ ನಂಬುವುದು ಸಾಮಾನ್ಯವಾಗಿದೆ. ಮಾನ ಮರ್ಯಾದೆಗೂ ಸರ್ಟಿಫಿಕೇಟ್ ಬೇಕಾಗಿದೆ. ದುರಂತವೆಂದರೆ ಹೆಚ್ಚು ಜನರಿಗೆ ಹೆಚ್ಚು ವಂಚಿಸಿ ಹೆಚ್ಚು ಶ್ರೀಮಂತನಾದವನಿಗೆ ಈ ಸರ್ಟಿಫಿಕೇಟ್‌ಗಳು ಸಲೀಸಾಗಿ ಸಿಗುತ್ತವೆ. ನಿಜಕ್ಕೂ ನಮಗೆ ಬೇಕಾಗಿರುವುದು ಇಂಥ ತೋರಿಕೆಯ ಸದ್ಗುಣಗಳಲ್ಲ. ಕುಟುಂಬವನ್ನೂ ಸಮಾಜವನ್ನೂ ನಿರ್ವಂಚನೆಯಿಂದ ಆತುಕೊಳ್ಳುವ ಅಂತಃಕರಣ ನಮ್ಮ ಗುರುತಾಗಬೇಕು.
ಸತ್ಯದ ಕಡುಕಷ್ಟದ ಹಾದಿಯಲ್ಲಿ ನಡೆವವರು ವಿರಳ. ಅಂತಹವರಿಂದಲೇ ಸಮಾಜಕ್ಕೊಂದು ಬೆಳಕು, ಭರವಸೆ. ಒಂದೊಮ್ಮೆ ನೈತಿಕ ಅಪರಾಧವಾಗಿ ಕಾಣುತ್ತಿದ್ದ ಸುಳ್ಳು ಈಗ ಬಹುಜನರ ನಾಲಗೆಯ ನರ್ತನವಾಗಿದೆ. ಆದರೆ ಸುಳ್ಳು ಹೇಳುವವರಿಗಿಂತಲೂ ಸತ್ಯ ಹೇಳಲಾರದೇ ದೂರ ಉಳಿದವರಿಂದಲೇ ಮನುಷ್ಯ ಸಮಾಜಕ್ಕೆ ಹೆಚ್ಚು ಹಾನಿಯಾಗಿದೆ. ನಿಜವನ್ನು ಹೇಳಲೇಬೇಕಾದಾಗ ಸುಮ್ಮನಿರುವುದು ಆತ್ಮಘಾತುಕತನ. ಸತ್ಯದ ಸಾಕ್ಷಿಗೆ ಗೈರಾಗುವುದು ಸತ್ಯದ ವಿರುದ್ಧದ ಪಿತೂರಿಗೆ ಸಮಾನ. ಕನಿಷ್ಠ ಪಾಪಪ್ರಜ್ಞೆಯೂ ಇಲ್ಲದ ನಡವಳಿಕೆಯಿದು. ಅದರಿಂದ ಸಂಸಾರಕ್ಕೂ ಸಮಾಜಕ್ಕೂ ಕೇಡು. ವರ್ತಮಾನದ ಸಮಾಜಕ್ಕೆ ಸತ್ಯಸಂಜೀವಿನಿಯ ತುರ್ತು ಅವಶ್ಯಕತೆ ಇದೆ. ಅದು ಸಮಾಜದ ನೈತಿಕ ಜೀವಂತಿಕೆಯನ್ನು ಕಾಪಾಡುವ ಕಾಮಧೇನು. ಸತ್ಯದ ಜೊತೆಗಿನ ಸಂಬಂಧ ಮಾತ್ರ ಉಳಿಯುತ್ತದೆ. ಸಂಪತ್ತಿನೊಂದಿಗಿನ ಬಾಂಧವ್ಯ ಮನುಷ್ಯನನ್ನು ಒಂಟಿಯಾಗಿಸುತ್ತದೆ. ಸತ್ಯವೇ ಸೌಂದರ್ಯ ಸಂಬಂಧಗಳೇ ಸಂಪತ್ತು ಎಂದು ಭಾವಿಸಿ ಬದುಕಿದರೆ ಅದುವೇ ಸೊಗಸಾದ ಜೀವನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.