ADVERTISEMENT

ನುಡಿ ಬೆಳಗು: ಸೇವೆಯೇ ಧ್ಯಾನ

ಪಿ. ಚಂದ್ರಿಕಾ
Published 31 ಡಿಸೆಂಬರ್ 2025, 23:30 IST
Last Updated 31 ಡಿಸೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ವಿವೇಕಾನಂದರು ಸಭೆಯೊಂದನ್ನು ಮುಗಿಸಿ ಹೊರಬಂದಾಗ ಅಲ್ಲೊಬ್ಬ ಶಿಷ್ಯ ಖಿನ್ನನಾಗಿ ನಿಂತಿದ್ದನ್ನು ಕಂಡು, ‘ಯಾಕಿಷ್ಟು ವಿಚಲಿತನಾಗಿರುವೆ’ ಎಂದು ಕೇಳಿದರು. ಯುವಕ, ‘ನಾನೂ ಏನೇನೋ ಪ್ರಯತ್ನ ಪಡುತ್ತಿರುವೆ, ಆದರೂ ಧ್ಯಾನದಲ್ಲಿ ಮನಸ್ಸು ನಿಲ್ಲುತ್ತಿಲ್ಲ. ಮನಸ್ಸಿಗೆ ಶಾಂತಿ ಸಿಗುತ್ತಿಲ್ಲ. ಹೀಗೇ ಆದರೆ ಮುಕ್ತಿ ಸಿಗುವುದಾದರೂ ಹೇಗೆ’ ಎಂದ. ವಿವೇಕಾನಂದರು ಕೇಳಿದರು, ‘ಧ್ಯಾನವನ್ನು ಹೇಗೆ ಮಾಡುತ್ತಿರುವಿ?’ ಯುವಕ ಹೇಳಿದ, ‘ಕೋಣೆಯೊಳಗೆ ಹೊರಗಿನ ಒಂದು ಸಣ್ಣ ಶಬ್ದವೂ ಕೇಳಬಾರದು, ಹಾಗೆ ಬಾಗಿಲು ಕಿಟಕಿಗಳನ್ನೆಲ್ಲಾ ಮುಚ್ಚಿ, ಮನಸ್ಸನ್ನು ಕೇಂದ್ರೀಕರಿಸಿ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಕೂರುತ್ತೇನೆ. ಆದರೆ ನನ್ನ ಪ್ರಯತ್ನ ಫಲ ಕೊಡುತ್ತಿಲ್ಲ- ಸಾಧನೆ ಸಾಧ್ಯವಾಗುತ್ತಿಲ್ಲ’ ಎಂದ. ವಿವೇಕಾನಂದರು ಮತ್ತೆ ಕೇಳಿದರು, ‘ನಿಜಕ್ಕೂ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದೀಯಾ?’ ಯುವಕ ಉತ್ತರಿಸಿದ, ‘ಹೌದು ನಿಸ್ಸಂದೇಹವಾಗಿ. ಇಲ್ಲದಿದ್ದರೆ ಧ್ಯಾನ ಮಾಡಲು ಹೇಗಾದೀತು? ಇಷ್ಟೆಲ್ಲಾ ತಯಾರಿ ಮಾಡಿಕೊಂಡರೂ ಮನಸ್ಸು ಒಂದೆಡೆ ನಿಲ್ಲುತ್ತಿಲ್ಲ. ದಯವಿಟ್ಟು ದಾರಿ ತೋರಿ’ ಎಂದು ಬೇಡಿಕೊಂಡ. ಆಗ ವಿವೇಕಾನಂದರು, ‘ನಿನಗೆ ಆತ್ಮೋನ್ನತಿ ಬೇಕೆಂದರೆ ನನ್ನ ಮಾತನ್ನು ಕೇಳು, ಮೊದಲು ಮುಚ್ಚಿರುವ ಎಲ್ಲ ಕಿಟಕಿಯ ಬಾಗಿಲುಗಳನ್ನು ತೆಗೆ- ಮುಖ್ಯವಾಗಿ ನಿನ್ನ ಮನಸ್ಸಿನ ಕಿಟಕಿ ಬಾಗಿಲುಗಳನ್ನು. ನೋಡು, ನಿನ್ನ ಸುತ್ತ ಜನರ ಕಷ್ಟ, ಸುಖಗಳಿವೆ, ಅಸಹಾಯಕರಾದ ಅವರಿಗೆ ನೆರವು ನೀಡಲು ಶಕ್ತಿಮೀರಿ ಪ್ರಯತ್ನಿಸು. ಬಡವರಿಗೆ, ರೋಗಿಗಳಿಗೆ ಅನ್ನ, ಆಹಾರವನ್ನು ಒದಗಿಸು. ಅಕ್ಷರವೇ ಕಲಿಯದವರಿಗೆ ಕಲಿಸು. ಇಂಥಾ ಮಹತ್ ಕಾರ್ಯವನ್ನು ಬಿಟ್ಟು ಧ್ಯಾನವೆಂದು ಒಂಟಿಯಾಗಿ ಕುಳಿತರೆ ಏನು ಸಾಧಿಸಿದ ಹಾಗೆ ಆಯಿತು?’ ಎಂದರು.

‘ಹಾಗಾದರೆ ಧ್ಯಾನದಿಂದ ಏನೂ ಆಗುವುದಿಲ್ಲವೇ? ಮನಃಶಾಂತಿಯೂ ಸಿಗುವುದಿಲ್ಲ ಎಂದರೆ ಅದನ್ನು ಮುಕ್ತಿಯ ಮಾರ್ಗ ಎಂದು ಯಾಕೆ ಕರೆದಿದ್ದಾರೆ’ ಎಂದ ಯುವಕ ಅಚ್ಚರಿಯಲ್ಲಿ. ವಿವೇಕಾನಂದರು ನಕ್ಕರು, ‘ಮನಃಶಾಂತಿ ಬೇಕೆಂದರೆ ಒಂಟಿಯಾಗಬೇಡ. ಸಾಧಿಸಬೇಕೆಂದರೆ ಎಲ್ಲರೊಳಗೊಂದಾಗು. ಯಾರಿಗೋ ನಿನ್ನಿಂದ ಸಣ್ಣ ಸಹಾಯವಾದರೂ ಆಗಿ ನಿನ್ನ ಮನಸ್ಸು ತುಂಬಿ ಬರುತ್ತದೆ. ಸೇವೆಗಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಅದಕ್ಕೆ ಶಕ್ತಿ ಮೀರಿ ದುಡಿಯಬೇಕು’ ಎಂದರು. ‘ಏನು ಹೇಳುತ್ತಿದ್ದೀರಿ? ನಿಮಗೆ ಧ್ಯಾನದಲ್ಲಿ ನಂಬಿಕೆಯಿಲ್ಲವಾ’ ಯುವಕ ಕೇಳಿದ. ‘ಅಧ್ಯಾತ್ಮ, ಸಾಧನೆ ಎಲ್ಲಾ ಸರಿಯೇ. ನಾನೂ ಹಿಮಾಲಯದ ಗುಹೆಗಳಲ್ಲಿ ಎಲ್ಲವನ್ನು ಮರೆತು ಧ್ಯಾನದಲ್ಲಿ ಮುಳುಗಿದ್ದೆ. ಎಚ್ಚರವಾದಾಗ ಲೋಕದಲ್ಲೇ ಇದ್ದೆ. ಅಚ್ಚರಿಯಾಯಿತು, ಬಿಡುಗಡೆ ಎಂದರೆ ಏನು ಎಂದು ಪ್ರಶ್ನಿಸಿಕೊಂಡೆ. ಆಗ ಅರ್ಥವಾಗಿದ್ದು ನನ್ನೊಬ್ಬನಿಗೆ ಮುಕ್ತಿ ಸಿಗುವುದು ಮುಖ್ಯವಲ್ಲ. ಎಂದೋ ಸತ್ತ ಮೇಲೆ ಸಿಗುವ ಮುಕ್ತಿಗಾಗಿ ಜೀವನ ಪೂರ್ತಿ ಅದರ ಬೆನ್ನುಬೀಳುವುದಕ್ಕಿಂತ, ಇನ್ನೊಬ್ಬರಿಗೆ ಉಪಯುಕ್ತವಾಗುವಂತೆ ಬದುಕಬೇಕು. ಅಲ್ಲಿ ಆನಂದವಿದೆ, ಭಗವಂತನಿದ್ದಾನೆ. ಸಮಾಜದಲ್ಲಿ ಇದ್ದ ಮೇಲೆ ಇದು ನಮ್ಮ ಕರ್ತವ್ಯ ಕೂಡ. ನೀನು ನನ್ನ ಶಿಷ್ಯನಾದರೆ ಸೇವೆಯಲ್ಲಿ ಸಾರ್ಥಕ್ಯ ಕಾಣು. ಇನ್ನೊಬ್ಬರ ಒಳಿತನ್ನು ಬಯಸುವುದೇ ನಿಜವಾದ ಧ್ಯಾನ ಎಂದು ತಿಳಿ’ ಎಂದರು.      

ADVERTISEMENT

ಒಬ್ಬರ ಉದ್ಧಾರಕ್ಕಿಂತ ನೂರು ಜನರ ಬದುಕು ಮುಖ್ಯ ಅಲ್ಲವೇ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.