ADVERTISEMENT

ನುಡಿ ಬೆಳಗು: ಯಕ್ಷಿಣಿ ಚೀಲ

ಪಿ. ಚಂದ್ರಿಕಾ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
   

ನಗರದ ಚೌಕಿಯೊಂದರಲ್ಲಿ ಯಕ್ಷಿಣಿ ಚೀಲಗಳನ್ನು ಮಾರುತ್ತಿದ್ದವನಲ್ಲಿ ಒಬ್ಬ ಬಡ ಕೂಲಿಯವ ಬಂದ. ಅವನ ದುಃಸ್ಥಿತಿಯನ್ನು ನೋಡಿದ ತಕ್ಷಣ ವ್ಯಾಪಾರಿಗೆ ಇವನ ಪರಿಸ್ಥಿತಿಯನ್ನು ತಾನು ಬಳಸಿಕೊಂಡು ಯಾಮಾರಿಸಿ ಮೋಸಮಾಡಬಹುದು ಎನ್ನಿಸಿ ಅವನಿಗೆ, ‘ಈ ಚೀಲಗಳು ಅತ್ಯಂತ ಶಕ್ತಿಶಾಲಿಯಾದವು, ಇದನ್ನು ಕೊಂಡರೆ ನಿನ್ನ ಬಡತನ ನೀಗುತ್ತದೆ’ ಎಂದು ಹೇಳಿದ. ಅದಕ್ಕಾತ ಒಂದು ನಾಣ್ಯವನ್ನು ಚೀಲದಲ್ಲಿ ಹಾಕಿ ಎರಡು ನಾಣ್ಯಗಳನ್ನು ತೆಗೆದ. ಆ ಕೂಲಿಯವನಿಗೆ ಇವನ ಕುತ್ಸಿತ ಬುದ್ಧಿ ಅರ್ಥವಾಯಿತು. ಆದರೂ ಆಶ್ಚರ್ಯದಿಂದ ‘ಹೌದೇ? ಹೀಗೆ ಒಂದಕ್ಕೆ ಎರಡಾಗುತ್ತದೆಯೇ’ ಎಂದು ಕೇಳಿದ. ವ್ಯಾಪಾರಿಗೆ ಸಂತೋಷವಾಗಿ ‘ಖಂಡಿತಾ ಇವನು ಅಮಾಯಕ, ಇವನಿಗೆ ಅತ್ಯಂತ ದುಬಾರಿ ಬೆಲೆಯಲ್ಲಿ ಚೀಲವನ್ನು ಮಾರಬಹುದು’ ಎಂದುಕೊಂಡ. ಕೂಲಿಯಾತ ಚೀಲವನ್ನು ತಿರುಗಿಸಿ ಮುರುಗಿಸಿ ನೋಡಿ, ‘ನನಗೆ ಹಸಿವಾಗಿದೆ ಇದರಲ್ಲಿ ಊಟ ಸಿಗಬಹುದೇ’ ಎಂದ. ವ್ಯಾಪಾರಿಗೆ ಇವನು ಚೀಲ ತೆಗೆದುಕೊಳ್ಳದೇ ಹೋದರೆ ಎಂದು ಯೋಚಿಸಿ, ‘ನಿನ್ನ ಕೈಲಿರೋದು ಕಲ್ಪವೃಕ್ಷ. ಹಾಗಿದ್ದು ಅಲ್ಪವನ್ನು ಯಾಕೆ ಕೇಳುತ್ತೀಯಾ? ಹಣ ಕೊಟ್ಟರೆ ಎಂಥಾ ಊಟವಾದರೂ ಸಿಗುತ್ತದೆ. ನೀನು ಬಡವನಿದ್ದೀಯ. ಹಣವೊಂದೇ ನಿನ್ನನ್ನು ಈ ಸ್ಥಿತಿಯಿಂದ ಮೇಲಕ್ಕೆ ಎತ್ತಬಲ್ಲದು’ ಎನ್ನುತ್ತಾನೆ.

‘ಆಯ್ತು, ನನ್ನ ಬಡತನದಿಂದ ಮೇಲೆತ್ತಲು ನೀನು ಇಷ್ಟು ಶ್ರಮ ಹಾಕುತ್ತಿರುವೆ. ಇದನ್ನು ನಾನು ತೆಗೆದುಕೊಳ್ಳುತ್ತೇನೆ’ ಎನ್ನುತ್ತಾನೆ ಕೂಲಿಯವ. ವ್ಯಾಪಾರಿಗೆ ಸಂತೋಷ. ಇಂಥದ್ದೇ ಇನ್ನಷ್ಟು ಬಕರಾಗಳು ಸಿಕ್ಕರೆ ಇನ್ನಷ್ಟು ಹಣ ಮಾಡಿಕೊಳ್ಳಬಹುದು ಎಂದುಕೊಂಡ. ಕೂಲಿಯವ ಚೀಲವನ್ನು ತೆಗೆದುಕೊಂಡು ಹೊರಟ. ವ್ಯಾಪಾರಿಗೆ ಅವನನ್ನು ತಡೆದು ಚೀಲಕ್ಕೆ ಹಣ ಕೊಡುವಂತೆ ಕೇಳಿದ. ಕೂಲಿಯವ ಅಚ್ಚರಿಯನ್ನು ತೋರುತ್ತಾ, ಹಣ ಯಾಕೆ ಕೊಡಬೇಕು? ನಿನ್ನ ಬಳಿ ಇನ್ನಷ್ಟು ಚೀಲಗಳಿವೆಯಲ್ಲ. ಅದರಲ್ಲಿ ಹಣ ಹಾಕಿ ತೆಗೆದುಕೋ ಎಂದ. ವ್ಯಾಪಾರಿಗೆ ರೇಗಿ ಹೋಯ್ತು. ‘ಅಲ್ಲಪ್ಪಾ, ಇಂಥಾ ಚೀಲವನ್ನು ಸುಮ್ಮನೆ ಕೊಟ್ಟುಬಿಡುತ್ತಾರೆಯೇ? ನಿನ್ನ ಸಾಹುಕಾರ ಮಾಡಲಿಕ್ಕೆ ನಾನು ಬಿಟ್ಟಿಯಾಗಿ ಕೊಡಬೇಕೇ’ ಎಂದು ಪ್ರಶ್ನಿಸಿದ.

ಕೂಲಿಯವ ನಗುತ್ತಾ ಅಲ್ಲಪ್ಪಾ, ‘ಖಜಾನೆಯನ್ನೇ ನನಗೆ ಕೊಡುವ ನೀನು ಹಣಕ್ಕಾಗಿ ಪರದಾಡಬೇಕೇ? ಒಂದು ಯಕ್ಷಿಣಿ ಚೀಲ ಇದ್ದರೆ ನೀನು ರಾಜನ ಹಾಗೆ ಇರಬಹುದಿತ್ತು. ಅದನ್ನು ಬಿಟ್ಟು ಈ ಬಿಸಿಲಿನಲ್ಲಿ ಈ ದೂಳನ್ನು ಕುಡಿಯುತ್ತಾ ಚೌಕಿಯಲ್ಲಿ ನಿಲ್ಲುವ ಅಗತ್ಯವೇ ಇರುತ್ತಿರಲಿಲ್ಲ. ಅಲ್ಲವೇ? ಇಷ್ಟೆಲ್ಲಾ ಹಣ ಸಿಗುವ ಹಾಗಿದ್ದರೆ ನೀನು ಯಾಕೆ ಹೀಗೆ ಮಾರಾಟ ಮಾಡುತ್ತೀಯ? ಅಷ್ಟೂ ಸಾಮಾನ್ಯ ಜ್ಞಾನ ಇಲ್ಲ ಎಂದು ಎದುರಿರುವವರನ್ನು ಮೋಸ ಮಾಡಲು ಹೋಗಬೇಡ. ನಾನು ಕೂಲಿಯವನೇ ಇರಬಹುದು. ನನ್ನ ಶ್ರಮದ ಮೇಲೆ ನನಗೆ ನಂಬಿಕೆ ಇದೆ. ಒಂದು ತುತ್ತು ಅನ್ನ ಮತ್ತು ಗುಟುಕು ನೀರು ಸಿಕ್ಕರೆ ಸಾಕು ದುಡಿಯುತ್ತೇನೆ. ನಿನ್ನ ಹಾಗೆ ಮೋಸ ಮಾಡುವುದಿಲ್ಲ’ ಎಂದನು. ಆ ಕ್ಷಣವೇ ವ್ಯಾಪಾರಿಯು ಅಲ್ಲಿಂದ ಹೊರಟು ಹೋಗುತ್ತಾನೆ. ಮತ್ತೆಂದೂ ಆ ಚೌಕಿಯಲ್ಲಿ ಕಾಣುವುದೇ ಇಲ್ಲ.

ADVERTISEMENT

ಮುಖ ನೋಡಿ ಮೂರ್ಖರೆಂದು ಭಾವಿಸುವುದು ತುಂಬಾ ಸುಲಭ. ಆದರೆ ತಮ್ಮ ಮೂರ್ಖತನವನ್ನು ಇನ್ನೊಬ್ಬರೂ ತೋರಿಸುತ್ತಾರೆ ಎನ್ನುವ ಸಾಮಾನ್ಯಜ್ಞಾನವೂ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.