ADVERTISEMENT

ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆ

ಪ್ರೊ.ಕೆ.ಎಸ್.ಭಗವಾನ್, ಮೈಸೂರು
Published 23 ಡಿಸೆಂಬರ್ 2014, 19:30 IST
Last Updated 23 ಡಿಸೆಂಬರ್ 2014, 19:30 IST

ಕೇಂದ್ರ  ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಭಗವ­ದ್ಗೀತೆ’ ಭಾರತದ ರಾಷ್ಟ್ರೀಯ ಧರ್ಮಗ್ರಂಥ
­ವಾಗ­ಬೇಕು ಎಂದು ಹೇಳಿದ್ದರಿಂದ ಚರ್ಚೆ ಶುರು­ವಾಗಿದೆ. ಸಂಸತ್ತಿನಲ್ಲಿ ಆಡಳಿತೇತರ ಪಕ್ಷಗಳಿಗೆ ಸೇರಿದ ಕೆಲವು ಸಂಸದರು ಈ ಹೇಳಿಕೆ­ಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಗೀತೆಯಲ್ಲಿ ಏನಿದೆ? ಅದು ಇರುವುದು ಯಾರ ಪರ ಅಥವಾ ವಿರುದ್ಧ? ಎಂಬುದರ ಕಡೆ ಯಾರೂ ಗಮನ ಹರಿಸಿಲ್ಲ.

ಕ್ರಾಂತಿಕಾರಕ ಬುದ್ಧಧಮ್ಮ ಉಚ್ಛ್ರಾಯ ಸ್ಥಿತಿಗೇರಿ ಆ ಹೊತ್ತಿಗೆ ಇಳಿಮುಖವಾಗುತ್ತಿತ್ತು. ಬುದ್ಧ ಸೈದ್ಧಾಂತಿಕವಾಗಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ.  ಇದನ್ನು ಸಹಿಸದ ವೈದಿಕ ಮತಾಂಧತೆ ಸಂಘವನ್ನು ನಾಶ ಮಾಡಲು ಸನ್ನಾಹ ನಡೆಸುತ್ತಿತ್ತು. ಪ್ರತಿ ಕ್ರಾಂತಿಗೆ ಪ್ರಣಾ­ಳಿಕೆ­ಯಾಗಿ ಭಗವದ್ಗೀತೆ ಸೃಷ್ಟಿಯಾಯಿತು. ಇದಕ್ಕೆ ಪುರಾವೆಯಾಗಿ ನಿರ್ವಾಣ ಪದ ಗೀತೆಯಲ್ಲಿ ಪದೇ ಪದೇ (೨.೭೨ ಮತ್ತು ೫.೨೪–-೨೬.) ಬಳಕೆ­ಯಾ­ಗಿರುವುದನ್ನು ಕಾಣಬಹುದು. ಗೀತೆಗಿಂತ ಹಿಂದಿನ ಬ್ರಾಹ್ಮಣ ಮತ ಗ್ರಂಥಗಳಲ್ಲಿ ನಿರ್ವಾಣ ಶಬ್ದ ಪ್ರಯೋಗವಾಗಿರುವುದು ಕಾಣುವುದಿಲ್ಲ.  (ಈ ವಿಷಯವಾಗಿ ಬಲ್ಲವರು ತಿಳಿಸಿದರೆ ಕೃತಜ್ಞತೆ­ಯಿಂದ ಈ ಅಭಿಪ್ರಾಯ ತಿದ್ದಿಕೊಳ್ಳುತ್ತೇನೆ.) ಬುದ್ಧಧಮ್ಮದಲ್ಲಿ ‘ನಿರ್ವಾಣ’,  ಆಧ್ಯಾತ್ಮಿಕ ಅನು­ಭವದ ಅತ್ಯುನ್ನತ ಸ್ಥಿತಿ ಎಂಬುದು ಗೊತ್ತಿರುವ ವಿಚಾರ.

ಭಗವದ್ಗೀತೆ ಹೇಳುವವನು ಕೃಷ್ಣ, ಕೇಳುವವನು ಅರ್ಜುನ, ಬರೆಯುವವನು ವ್ಯಾಸ. - ಮೂವರೂ ಅಬ್ರಾಹ್ಮಣರು. ಕೃಷ್ಣ ಗೊಲ್ಲ (ಯಾದವ), ಅರ್ಜುನ ಕ್ಷತ್ರಿಯ, ವ್ಯಾಸ ಬೆಸ್ತ (ಮೀನು­ಗಾರ್ತಿಯ ಮಗ).

ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಏಕೆ ಪ್ರಬಲವಾಗಿ ಪ್ರತಿಪಾದಿ­ಸುತ್ತದೆ ಎಂದರೆ ಅದಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಗ­ವ­ದ್ಗೀತೆ ಪ್ರಾರಂಭ­ವಾಗುವುದೇ ಕುಲಕ್ಷಯ (೧.೩೮–-೪೦ ಜಾತಿ ನಾಶ), ವರ್ಣಸಂಕರ (೧.೪೧–-೪೪ ಜಾತಿ ಬೆರಕೆ)ಗಳನ್ನು ತಡೆಗಟ್ಟುವುದ­ಕ್ಕಾಗಿ.  ಕುಲಕ್ಷಯ ಮತ್ತು ವರ್ಣ­ಸಂಕರಗಳನ್ನು ತಡೆಯಬೇಕೆಂದು ಅರ್ಜುನ ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಕೃಷ್ಣನಿಗೆ ಹೇಳಿ ಬಿಲ್ಲು­ಬಾಣಗಳನ್ನು ರಥದಲ್ಲಿ ಹಾಕಿ ಕುಳಿತು­ಕೊಳ್ಳುತ್ತಾನೆ.

ಗೀತೆ ಬಹಳ ಪ್ರಖ್ಯಾತವಾಗಲು ಮಹಾತ್ಮ ಗಾಂಧೀಜಿ ಅವರ ಪ್ರಚಾರ ಕಾರಣ ಎನ್ನಬೇಕು. ‘ಕರ್ಮ ಮಾಡುವುದಕ್ಕೆ ನಿನಗೆ ಅಧಿಕಾರ, ಫಲಾ­ಪೇಕ್ಷೆ ಇಲ್ಲದೆ ಕೆಲಸ ಮಾಡು ’ಎಂದು ಕೃಷ್ಣ ಹೇಳು­ತ್ತಾನೆ.   ಆಳು ಜೀತ ಮಾಡುತ್ತಾನೆ, ಲಾಭವೆಲ್ಲ ಯಜ­ಮಾನನಿಗೇ ಹೋಗುತ್ತದೆ. ದುಡಿಮೆ­ಗಾರ­ನಿಗೆ ದುಡಿದದ್ದೇ ಲಾಭ! ಹೀಗಾಗಿ ಕೃಷ್ಣನದು ಜೀತ­ಗಾರಿಕೆ ಮುಂದುವರಿಸುವ ಮಾತು.  ಗೀತೆ ಶ್ರಮ­ಜೀವಿಗಳನ್ನು ತುಳಿಯುವ ಸಂದೇಶ ಸಾರುತ್ತಿದೆ.

ಲೋಕದಲ್ಲಿರುವ ಅನ್ಯಾಯ, ಅಸಮಾನತೆ, ಸುಲಿಗೆ, ಶೋಷಣೆ, ದಾಸ್ಯ, ಪಾರತಂತ್ರ್ಯ, ದಬ್ಬಾ­ಳಿಕೆ, ಬಡತನ, ಮೋಸ, ಮೇಲು ಕೀಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದವುಗಳನ್ನೆಲ್ಲ ಹೋಗ­ಲಾಡಿಸುವುದು ಹೇಗೆ? ಇದಕ್ಕೆ ಗೀತೆಯಲ್ಲಿ ಉತ್ತರವಿಲ್ಲ.

‘ಮನುಸ್ಮೃತಿ’ಗಿಂತ (ಕ್ರಿ.ಪೂ.೧೮೫) ಭಗ­ವದ್ಗೀತೆ (ಕ್ರಿ.ಶ. ಮೂರನೆಯ ಶತಮಾನ) ಹೆಚ್ಚು ಭಯಂಕರವಾದ ಗ್ರಂಥ. ಮನುಸ್ಮೃತಿ ಒರಟಾ­ಯಿತು ಎಂದೇನೋ ಮೃದು ಮಧುರವಾದ ಸಂಗೀ­ತಮಯ ಕಾವ್ಯಭಾಷೆಯಲ್ಲಿ ಭಗವದ್ಗೀತೆ­ಯನ್ನು ಬರೆಯಲಾಗಿದೆ. ಓದುಗರನ್ನು
ಆಕರ್ಷಿ­­ಸಲು ಮಾಡಿರುವ ಉಪಾಯ ಇದು. ಗೀತೆಯದು ಬಹಳ ಸುಂದರವಾದ ಭಾಷೆ. ಆದರೆ ಅದೆಲ್ಲ ಅಪಾ­ಯಕಾರಿಯಾಗಿರುವುದನ್ನು ಅರಿಯ­ಬೇಕಾ­ಗಿದೆ.

ಭಗವದ್ಗೀತೆಯಲ್ಲಿರುವ ‘ವಿಶ್ವರೂಪ ದರ್ಶನ’­­­ದಲ್ಲಿ ನೀಡಿರುವ ವಿವರಗಳು ಭಾರತಕ್ಕೆ ಸೀಮಿತ­ಗೊಂಡಿವೆ. ವಿದೇಶಗಳ ಹೆಸರುಗಳು ಇಲ್ಲಿ ಬಂದಿಲ್ಲ. ಆದ್ದರಿಂದ ಇದನ್ನು ವಿಶ್ವರೂಪ ದರ್ಶನ ಎನ್ನದೆ ‘ಸಂಕ್ಷಿಪ್ತ ಭಾರತ ದರ್ಶನ’ ಎಂದು ಕರೆ­ಯುವುದು ಸೂಕ್ತ. ಗೀತಕಾರನ ಭೌಗೋಳಿಕ ಜ್ಞಾನ­ವೆಲ್ಲ ಕೇವಲ ಭರತಖಂಡಕ್ಕೆ ಸೀಮಿತ­ವಾಗಿದೆ. ಗೀತೆ ರಚನೆಯಾಗುವುದಕ್ಕಿಂತ ಮುನ್ನವೇ ಚಾಲ್ತಿ­ಯಲ್ಲಿ ಇದ್ದ ಎಲ್ಲಾ ತತ್ವ­ಶಾಖೆಗಳ ಪುನರು­ಚ್ಚಾರ ಗೀತೆಯಲ್ಲಿ ಬಂದಿದೆ. ಗೀತೆಯ ಒಂದೊಂದು ಅಧ್ಯಾಯದಲ್ಲಿ ಒಂದೊಂದು ತತ್ವ­ವನ್ನು ಹೇಳಲಾಗಿದೆ. ಒಂದು ಅಧ್ಯಾಯಕ್ಕೂ ಇನ್ನೊಂದು ಅಧ್ಯಾಯಕ್ಕೂ ಸಂಬಂಧವಿಲ್ಲ. ಭಗವ­ದ್ಗೀತೆಯಲ್ಲಿ ಹೊಸ ಬೆಳಕಿಲ್ಲ. ಅದರಲ್ಲಿ ಜಾತಿ­ವ್ಯವಸ್ಥೆಯ ಸಮರ್ಥನೆ ತುಂಬಿದೆ. ಗೀತೆ ಹಿಂದೂ ದರ್ಶನಗಳ ಒಂದು ಕೋಷ್ಟಕ ಅಥವಾ ಅಡಕ ಅಷ್ಟೆ.

ಕೃಷ್ಣ ತಪಸ್ಸು ಮಾಡಿ ನಿಜವಾದ ಆಧ್ಯಾತ್ಮ ಜ್ಞಾನ ಗಳಿಸಿದ್ದ ಎಂಬುದಕ್ಕೆ ಗೀತೆಯಲ್ಲಿ ವಿವರ­ಗಳಿಲ್ಲ. ಬುದ್ಧ ತನ್ನ ‘ಸುತ್ತ’ಗಳಲ್ಲಿ, ಪರಮ­ಹಂಸರ ‘ಶ್ರೀರಾಮಕೃಷ್ಣ ವಚನವೇದ’ದಲ್ಲಿ, ವಿವೇಕಾ­ನಂದರು ತಮ್ಮ ಬರಹಗಳಲ್ಲಿ ಸಾಕ್ಷಾ­ತ್ಕಾರ ಪಡೆಯಲು ನಡೆಸಿದ ಶ್ರಮಗಳನ್ನು ವಿವರಿಸಿ­ದ್ದಾರೆ. ಕೃಷ್ಣನಿಗೆ ಇಂಥ ಅನುಭವ ಆಗಿಲ್ಲ. ಅವನು ಕಿರಿಯವನಾಗಿದ್ದಾಗ ಗೋಪಿಕೆಯರ ಸಂಗಡ­ದಲ್ಲಿದ್ದ. ತಾರುಣ್ಯದಲ್ಲಿ ಅಷ್ಟ ಮಹಿಷಿ­ಯರು ಮತ್ತು ಹದಿನಾರು ಸಾವಿರ ಹೆಂಡತಿಯರ ಜೊತೆಗಿದ್ದ. ಕೊನೆಗೆ ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ರಥ ನಡೆಸಿದ. ಇಂಥವನು ಹೇಗೆ ಅಧ್ಯಾತ್ಮ ಜೀವಿಯಾಗುತ್ತಾನೆ? ಅಧ್ಯಾತ್ಮ ಜೀವನಕ್ಕೆ ಪರಿ­ಶುದ್ಧತೆ, ಕಾಮನಿಗ್ರಹ ಅತ್ಯಂತ ಅವಶ್ಯಕ. ಇದಾವುದೂ ಇಲ್ಲದ ಕೃಷ್ಣ ಜ್ಞಾನಿ ಅಲ್ಲ. ದೇವ­ರಾಗಲು ಕೃಷ್ಣನಿಗೆ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ಕೃಷ್ಣನಿಗೆ ಪಾವಿತ್ರ್ಯವಿಲ್ಲ, ಇಂದ್ರಿಯ ನಿಗ್ರಹ ಇಲ್ಲ, ಪರಮ ಜ್ಞಾನವಿಲ್ಲ.

ಸ್ವಧರ್ಮವನ್ನು ವ್ಯಾಖ್ಯಾನಕಾರರು ಮನಸೋ ಇಚ್ಛೆ ವಿವರಿಸಿದ್ದಾರೆ. ಈ ಪದವನ್ನು ಗೀತೆಯ ಸಂದರ್ಭದಲ್ಲೇ ಅರ್ಥ ಮಾಡಿಕೊಳ್ಳುವುದು ಒಳ್ಳೆ­ಯದು. ಗೀತೆಯ ಚೌಕಟ್ಟಿನಲ್ಲಿ ಸ್ವಧರ್ಮ ಎಂದರೆ ಜಾತಿ ಎಂದೇ ಅರ್ಥ ನಿರ್ಣಯವಾಗುತ್ತದೆ.

‘ಯುದ್ಧವು ಕ್ಷತ್ರಿಯನಿಗೆ ಸ್ವಧರ್ಮ ಎಂದು ತಿಳಿದ ನಂತರವೂ ನೀನು ಯುದ್ಧ ಮಾಡದಿದ್ದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಹಾಳು ಮಾಡಿ­ಕೊಂಡು ಪಾಪವನ್ನು ಪಡೆಯುತ್ತೀಯೆ. ಆದ್ದ­ರಿಂದ ನೀನು ಯುದ್ಧ ಮಾಡು ’ಎಂದು ಅರ್ಜುನ­ನಿಗೆ ಕೃಷ್ಣ ಪುಸಲಾಯಿಸುತ್ತಾನೆ. ಹಾಗಾಗಿ ಸ್ವ­ಧರ್ಮ ಎಂದರೆ ಕ್ಷತ್ರಿಯ ಜಾತಿ, ಮತ್ತು ಪ್ರತಿ­ಯೊಬ್ಬನ ಜಾತಿ ಎಂದು ಅರ್ಥ ಬರುತ್ತದೆ. ಕ್ಷತ್ರಿಯ ಧರ್ಮದ ಪ್ರಕಾರ ಕೊಲ್ಲಲು ಪ್ರೇರೇಪಿ­ಸುವ ಕೃಷ್ಣನನ್ನು ದೇವರು ಮಾಡಲಾಗಿದೆ. ಅಪರಾಧ ಕಾನೂನು ಸಂಹಿತೆ ದೃಷ್ಟಿಯಲ್ಲಿ ದುಷ್ಟ ಕೃತ್ಯ ಪ್ರೇರಕ ಕೃಷ್ಣ  ತಪ್ಪಿತಸ್ಥ,  ಅಪರಾಧಿ. ಇಂಥ ‘ಭಗ­ವದ್ಗೀತೆ’ಯನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಕೇಂದ್ರ ಸರ್ಕಾರ ಘೋಷಿಸಿದರೆ ಹತ್ಯೆ ಮಾಡುವ ಮನಸ್ಸುಳ್ಳ ಪಕ್ಷ ಮತ್ತು ಸಂಘಟನೆ­ಗಳಿಗೆ ಹಾಗೂ ಜನರಿಗೆ ರಾಜ ರಹದಾರಿ ನೀಡಿ­ದಂತಾಗುತ್ತದೆ. ಯಾವ ದೃಷ್ಟಿಯಿಂದ ನೋಡಿ­ದರೂ ಭಗವ­ದ್ಗೀತೆ ರಾಷ್ಟ್ರೀಯ ಧರ್ಮ ಗ್ರಂಥ­ವಾಗಲು ಲಾಯ­ಕ್ಕಾಗಿಲ್ಲ.

ವಿಜ್ಞಾನ ಚಂದ್ರಲೋಕ, ಮಂಗಳ ಲೋಕಗಳಿಗೆ ಹೋಗಿ ಬಂದಿದೆ. ಧರ್ಮ ಗ್ರಂಥಗಳು ಹೇಳುವ ಸ್ವರ್ಗ, ಕೈಲಾಸ, ವೈಕುಂಠ ಅಲ್ಲಿ ಕಂಡು ಬಂದಿಲ್ಲ.  ಮುಕ್ತಿ, ಸದ್ಗತಿ ಮುಂತಾದ ಮಾತುಗಳನ್ನು ಎಲ್ಲಾ ಮತ­ಗ್ರಂಥಗಳು ಹೇಳುತ್ತವೆ. ಗೀತೆಯೂ ಅದನ್ನೇ ಉಚ್ಚರಿಸುತ್ತದೆ. ವಾಸ್ತವವಾಗಿ ಇರುವುದು ಇದೊಂದೇ ಲೋಕ; ಇಲ್ಲಿ ನಾವೆಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ಬದುಕುವುದನ್ನು
ರೂಢಿ­ಸಿ­­ಕೊಳ್ಳಬೇಕು ಎಂದು ಭಾವಿಸುವುದು ವಿವೇಕ­ಯುತ.

ಕೃಷ್ಣ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ­ರಿಂದ ಅವನನ್ನು ದೇವರನ್ನಾಗಿ  ಮಾಡಲಾಗಿದೆ. ಇಲ್ಲದಿದ್ದರೆ ಅವನನ್ನೂ ಜಾತಿ­ಯನ್ನು ನಿರಾಕರಿಸಿದ ಬುದ್ಧನನ್ನು ತಿರಸ್ಕರಿಸಿದಂತೆ ತಿರಸ್ಕರಿಸುತ್ತಿದ್ದರು.   ಮನುಷ್ಯರೆಲ್ಲ ಒಂದೇ ಎಂದು ಬೋಧಿಸುವ ಧರ್ಮಗ್ರಂಥ ‘ಧಮ್ಮಪದ ’ ಒಂದೇ.

ಭಗವದ್ಗೀತೆ ಪರಿಪೂರ್ಣ ಗ್ರಂಥ ಅಲ್ಲ. ಭಗ­ವದ್ಗೀತೆ ಸಂಪ್ರದಾಯವನ್ನು ಸ್ಥಿರೀಕರಿಸುವ ಪ್ರಗತಿ ವಿರೋಧಿ ಗ್ರಂಥ. ಭಗವದ್ಗೀತೆ ಶೇ. ೯೮ ಮಂದಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಉಳಿದ ಶೇ. ೨ರಷ್ಟು ಜನರಿಗೆ ಮಾತ್ರ ಅನುಕೂಲ­ವಾಗಿ-­ರುವುದು. ಇವರು ಪುಣ್ಯಯೋನಿಜರಾದುದರಿಂದ ಏನು ಕೇಡು ಮಾಡಿದರೂ ಅದು ತಪ್ಪಲ್ಲ! ಪಾಪ­ಯೋನಿಜರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಏಳಿಗೆ ಇಲ್ಲ! ಎಂಥ ಭಯಂಕರ ತತ್ವಜ್ಞಾನ ಕೃಷ್ಣನದು! ಇಂಥ ಭಗವದ್ಗೀತೆ ಹೇಗೆ ಪವಿತ್ರ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.