ADVERTISEMENT

ಶಿಕ್ಷಣ: ಹೊಸ ಗಾಳಿ ಬೀಸುವುದೆಂದು?

ಪರೀಕ್ಷೆ ಕುರಿತ ನಮ್ಮ ವಿದ್ಯಾರ್ಥಿಗಳ ಆತಂಕ ನಿವಾರಣೆಯಾಗಬೇಕಾಗಿದೆ

ಡಾ.ಪದ್ಮಿನಿ ನಾಗರಾಜು
Published 26 ಮಾರ್ಚ್ 2019, 20:30 IST
Last Updated 26 ಮಾರ್ಚ್ 2019, 20:30 IST
   

ಪರೀಕ್ಷೆಗಳು ಶಿಕ್ಷೆಯಾಗಿ ಮಕ್ಕಳನ್ನು ಕಾಡುತ್ತಿರುವುದಕ್ಕೆ ಕಾರಣವಾದರೂ ಯಾರು? ಪೋಷಕರೇ? ಶಿಕ್ಷಣ ವ್ಯವಸ್ಥೆಯೇ? ಶಿಕ್ಷಕರೇ?

ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಗೆ ಕೇವಲ ಶೇ 35ರಷ್ಟು ಅಂಕ ಬಂದರೆ ವಿದ್ಯಾರ್ಥಿ ಮುಂದಿನ ತರಗತಿಗೆ ಹೋಗಲು ಅರ್ಹ. ಇದು ಪರೀಕ್ಷಾ ಮಂಡಳಿ ನಿಗದಿಪಡಿಸಿದ ಪರ್ಸೆಂಟೇಜ್‌. ಆದರೆ ಪೋಷಕರು, ಶಾಲೆಗಳು ವಿದ್ಯಾರ್ಥಿಗಳಿಗೆ ನಿಗದಿಪಡಿಸುವ ಪರ್ಸೆಂಟೇಜೇ ಬೇರೆ. ಅದು ನೂರಕ್ಕೆ ನೂರು. ಇದರಿಂದಾಗಿ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುತ್ತಾರೆ. ಶಾಲೆಗಳು ತಮ್ಮ ಪ್ರತಿಷ್ಠೆ, ರ‍್ಯಾಂಕ್‍ಗಳನ್ನು ಇಟ್ಟುಕೊಂಡು ಮಾರ್ಕೆಟಿಂಗ್ ಮಾಡಿಕೊಳ್ಳಲು, ಸೆಂಟ್ ಪರ್ಸೆಂಟ್ ರಿಸಲ್ಟ್‌ನ ಒತ್ತಡ ಹಾಕುತ್ತವೆ. ಪೋಷಕರು-ಶಿಕ್ಷಕರ ಮಧ್ಯೆ ನಲುಗುವುದು ಮಾತ್ರ ಮಕ್ಕಳು.

ಪ್ರತಿ ಮಗುವಿನ ಯೋಚನಾಶಕ್ತಿ, ಗ್ರಹಿಕೆ ವಿಭಿನ್ನ. ಆಯಾ ಮಗುವಿನ ಕಲಿಕಾ ಮಟ್ಟವನ್ನು ಪತ್ತೆ ಹಚ್ಚಬೇಕು. ಅದನ್ನು ಉತ್ತಮಪಡಿಸುವುದು ಹೇಗೆ ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅಳವಡಿಸಬೇಕು. ಎಸ್‌ಎಸ್‌ಎಲ್‌ಸಿಹಾಗೂ ದ್ವಿತೀಯ ಪಿಯುಸಿ ಹಂತ ವಿದ್ಯಾರ್ಥಿ ಜೀವನದನಿರ್ಣಾಯಕ ಘಟ್ಟಗಳು ಎಂಬುದೇನೋ ನಿಜ. ಆದರೆ ಈ ಹಂತಗಳಲ್ಲಿ ಅನಗತ್ಯ ಆತಂಕವನ್ನು ಮಕ್ಕಳಲ್ಲಿ ತುಂಬಲಾಗುತ್ತದೆ. ಇದು ಒಳ್ಳೆಯದಲ್ಲ.

ADVERTISEMENT

ಅತ್ಯುನ್ನತ ಶ್ರೇಣಿ ಪಡೆದರೆ ಮಾತ್ರ ತಾಂತ್ರಿಕ ಶಿಕ್ಷಣ, ವೈದ್ಯಕೀಯಕ್ಕೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ ಎಂದು ಒತ್ತಡ ಹೇರಲಾಗುತ್ತದೆ. ಅಂಕಪಟ್ಟಿಗಳು ಮಕ್ಕಳ ಬುದ್ಧಿವಂತಿಕೆಯನ್ನು ಅಳೆಯುವ ಸಾಧನಗಳಾಗಿವೆ. ಯಾವ ಶಾಲೆ-ಕಾಲೇಜು ಮಕ್ಕಳಿಗೆ ಒತ್ತಡಮುಕ್ತ ಶಿಕ್ಷಣ ನೀಡಬೇಕಿತ್ತೋ, ನೈತಿಕ ಶಿಕ್ಷಣ, ಬದುಕಿನ ಹಾದಿಯ ಮಾರ್ಗಗಳನ್ನು ತೋರಿಸಬೇಕಿತ್ತೋ ಅಂತಹ ಶಿಕ್ಷಣ ಇಂದು ಕೇವಲ ಅಂಕಗಳ ಸುತ್ತ ಗಿರಕಿ ಹೊಡೆಯುತ್ತಿದೆ.

ಮಕ್ಕಳನ್ನು ಅನಿವಾರ್ಯವಾಗಿ ಟ್ಯೂಶನ್‌ಗೆ ಸೇರಿಸುವಂತಹ ವಾತಾವರಣ ಇದೆ. ಪ್ರತಿಷ್ಠಿತ ಟ್ಯೂಶನ್ ಸೆಂಟರ್‌ಗಳಲ್ಲಿ ಒಂದು ವರ್ಷದ ಮುಂಚೆಯೇ ಸೀಟು ಕಾಯ್ದಿರಿಸಬೇಕಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಪಾಠ ಮಾಡುವ ಶಿಕ್ಷಕರು ಖಾಸಗಿಯಾಗಿ ಟ್ಯೂಶನ್ ಮಾಡುವಂತಿಲ್ಲ ಎಂಬ ಕಾನೂನಿದ್ದರೂ ಟ್ಯೂಶನ್ ಸೆಂಟರ್‌ಗಳನ್ನು ನಡೆಸುವ ಮೂಲಕ ಶಿಕ್ಷಕರೇ ಅಂತಹ ಕಾನೂನನ್ನು ಮುರಿದಿದ್ದಾರೆ. ಇನ್ನು ಕೆಲವು ಕಾಲೇಜುಗಳು ‘ಇಂಟಿಗ್ರೇಟೆಡ್ ಕೋರ್ಸ್‌’ ಹೆಸರಿನಲ್ಲಿ ಹಣ ದೋಚುತ್ತಿವೆ.

ಇದು ಶಿಕ್ಷಣ ವ್ಯವಸ್ಥೆಯ ಒಂದು ಮುಖವಾದರೆ, ಈ ಒತ್ತಡಕ್ಕೆ ಸಿಲುಕುವ ವಿದ್ಯಾರ್ಥಿಯ ಪಾಡೇನು? ಈ ಒತ್ತಡವನ್ನು ಕಿಶೋರಾವಸ್ಥೆಯ ಮಕ್ಕಳು ತಡೆದುಕೊಳ್ಳಲು ಸಾಧ್ಯವೇ? ವಿಶ್ವ ಆರೋಗ್ಯ ಸಂಸ್ಥೆಯು 10-19 ವರ್ಷದ ಮಕ್ಕಳನ್ನು ಕಿಶೋರಾವಸ್ಥೆ ಎಂದಿದೆ. ‘ಅಡೋಲೆಸೆಂಟ್’, ‘ಟೀನ್ ಏಜ್’ ಎಂದು ಕರೆಯಲಾಗುವ ಈ ವಯಸ್ಸಿನ ಮಕ್ಕಳ ದೇಹದಲ್ಲಿ ಭಾರಿ ಬದಲಾವಣೆ ಕಾಣಿಸಿಕೊಳ್ಳು
ತ್ತದೆ. ಹದಿಹರೆಯದ ವಯಸ್ಸಿನ ಈ ಮಕ್ಕಳು ಬೇಗ ಕೋಪ, ಅಳು, ನಗು, ಜಗಳ, ಹೊಡೆದಾಟ, ಪ್ರೀತಿಯ ಮಾತಿಗೆ ಹಂಬಲಿಸುವುದನ್ನು ಕಾಣಬಹುದು.

ಇಂತಹ ಮಕ್ಕಳಿಗೆ ಗೆಳೆಯ/ಗೆಳತಿಯರೇ ಪ್ರಪಂಚ. ಅವರು ನಡೆಯುವ ಸರಿಯಾದ ಮಾರ್ಗ, ಸರಿಯಲ್ಲದ ಮಾರ್ಗ ಇವೆರಡರ ಹಾದಿಯೂ ಅವರ ಪರಿಸರ ಮತ್ತು ಸ್ನೇಹಿತರನ್ನೇ ಅವಲಂಬಿಸುತ್ತದೆ. ಪ್ರೀತಿ-ಪ್ರೇಮ ಇಂದು ಕಾಲೇಜುಗಳಿಗಿಂತ ಶಾಲೆಗಳಲ್ಲಿಯೇ ಪ್ರಾರಂಭವಾಗುತ್ತಿದೆ. ಅವು ಓದನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತವೆ ಎಂಬುದು ಆ ಮಕ್ಕಳ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹದಿಹರೆಯದ ಮಕ್ಕಳನ್ನು ಸಂಬಾಳಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರು ಹಾಗೂ ತಂದೆ-ತಾಯಿಗಳದ್ದು. ಕ್ಷುಲ್ಲಕ ವಿಚಾರಕ್ಕೆ ನೇಣಿಗೆ ಶರಣಾಗುವ ಮಕ್ಕಳು ಒಂದು ಕಡೆಯಾದರೆ, ಓದುವ ಒತ್ತಡ ತಡೆಯದೆ ಸಾವನ್ನಪ್ಪುವ ಮಕ್ಕಳ ಪಟ್ಟಿಯೂ ದೊಡ್ಡದಿದೆ.

ಇಂದಿನ ಪೋಷಕರು ಮಕ್ಕಳು ಮನೆಗೆ ಬರುತ್ತಲೇ ಟ್ಯೂಶನ್, ಆಟೋಟ, ಸಂಗೀತ, ನೃತ್ಯ ಎಂದು ಎಲ್ಲದಕ್ಕೂ ಸೇರಿಸಿ ಬೀಗುತ್ತಾರೆ. ಮಗು ಅಪ್ಪ-ಅಮ್ಮನ ಅತೃಪ್ತ ಆಸೆಗಳನ್ನೆಲ್ಲಾ ಪೂರೈಸುವ ಸಾಧನವೆಂದು ತಿಳಿದಿರುತ್ತಾರೋ ಏನೋ! ಓದಿನ ಒತ್ತಡದ ನಡುವೆ ಕೆಲವು ಮಕ್ಕಳಷ್ಟೇ ತಮ್ಮ ಆಸಕ್ತಿಯ ಕ್ಷೇತ್ರವನ್ನೂ ಮುಂದುವರಿಸುತ್ತಾರೆ.

ಮಕ್ಕಳಲ್ಲಿನ ಪರೀಕ್ಷಾ ಆತಂಕವನ್ನು ಆತ್ಮವಿಶ್ವಾಸವಾಗಿ ಪರಿವರ್ತಿಸಬೇಕಾದ ತುರ್ತು ಅಗತ್ಯವಿದೆ. ಪರೀಕ್ಷೆಗಳನ್ನು ವರ್ಷಕ್ಕೊಮ್ಮೆ ಮಾಡಿ ಅಂಕ ನಿರ್ಧರಿಸುವ ಬದಲು, ಮಕ್ಕಳಿಗೆ ಮಾನಸಿಕ ಒತ್ತಡವಾಗದಂತೆ ಪರೀಕ್ಷೆಯೆಂಬ ಭೂತವನ್ನು ಕಳಚಿ ಅವರು ನಿರಾಳಭಾವದಲ್ಲಿ ಮುಂದಿನ ಹಂತಕ್ಕೆ ಹೋಗುವಂತೆ ಮಾಡಲು ಸಾಧ್ಯವಿಲ್ಲವೇ? ತಜ್ಞರು ಈ ಬಗ್ಗೆ ಚಿಂತಿಸಬೇಕು. ನಾವು ಬುದ್ಧಿವಂತ (ಆಧುನಿಕ ಜಗತ್ತಿನ ಪರಿಭಾಷೆಯಲ್ಲಿ) ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನಾಗಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತಿದ್ದೇವೆಯೇ?

‘ಅಪ್ಪ ಹಾಕಿದ ಆಲದ ಮರ’ವೆಂದು ನಂಬಿ ಆ ಮರಕ್ಕೆ ನೇಣು ಹಾಕಿಕೊಳ್ಳುವ ಈ ವ್ಯವಸ್ಥೆಯು ಬದಲಾವಣೆಯ ಹೊಸ ಗಾಳಿಗೆ ತೆರೆದುಕೊಳ್ಳುವುದು ಎಂದು? ನಮ್ಮ ಕಂದಮ್ಮಗಳ ಆತಂಕ ನಿವಾರಣೆಯಾಗುವುದು ಯಾವಾಗ? ಸದ್ಯ ಪರೀಕ್ಷೆ ಮುಗಿದರೆ ಸಾಕು ಎಂಬಂತಹ ಉಸಿರುಗಟ್ಟಿದ ವಾತಾವರಣ ಕೊನೆಯಾಗುವುದೆಂದು?

ಲೇಖಕಿ: ಪ್ರಾಧ್ಯಾಪಕಿ, ರಾಣಿ ಸರಳಾದೇವಿ ಪದವಿ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.