ADVERTISEMENT

ಸಂಗತ | ನವೋಲ್ಲಾಸಕ್ಕೆ ಕಚಗುಳಿಯೆಂಬ ಗುಳಿಗೆ

ಬಿ.ಎಸ್.ಭಗವಾನ್
Published 1 ಏಪ್ರಿಲ್ 2025, 0:52 IST
Last Updated 1 ಏಪ್ರಿಲ್ 2025, 0:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಆ ವೃತ್ತಿ ನಾಟಕದ ಕಂಪನಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತು. ರಾಜನ ಪಾತ್ರವನ್ನು ಮಾಲೀಕನೇ ಮಾಡುತ್ತಿದ್ದ. ಒಮ್ಮೆ ರಾಜನ ದರ್ಬಾರಿನ ದೃಶ್ಯ. ಸಂಭಾಷಣೆಯ ಒಂದು ಹಂತದಲ್ಲಿ ರಾಜ ಬಹಳ ಠೀವಿಯಿಂದ ‘ಯಾರಲ್ಲಿ?’ ಎಂದು ಗುಡುಗಿದ. ಸೇವಕನೊಬ್ಬ ಏನಪ್ಪಣೆ ಪ್ರಭು ಅಂತ ಕೈಜೋಡಿಸಿ ಬರುವನೆಂದು ರಾಜನ ಜೊತೆಗೆ ಪ್ರೇಕ್ಷಕರೂ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಸೇವಕನೇನೂ ಬಂದ. ಆದರೆ ‘ಯಾರೂ ಇಲ್ಲ’ ಎಂದು ಹೇಳಿ ಮರೆಯಾಗಿದ್ದ!

ನಟ–ನಟಿಯರಿಗೆ ಮೂರು ತಿಂಗಳಿಂದ ಸಂಬಳ ಪಾವತಿಯಾಗದಿರುವುದೇ ಈ ಅಸಹಕಾರದ ಮೂಲವಾಗಿತ್ತು. ನಾಟಕ ನೋಡುತ್ತಿದ್ದವರು ಪಾತ್ರನಿರ್ವಹಣೆಯಲ್ಲಿ ಹೀಗೂ ಉಂಟೆ ಅಂತ ಬೇಸರ
ಗೊಂಡರು ನಿಜ. ಆದರೆ ಆದ ಎಡವಟ್ಟನ್ನು ಒಳಗೊಳಗೆ ಅವರು ಆನಂದಿಸಿದ್ದರು. ಹಾಸ್ಯದ ಜಾಯಮಾನವೇ ಹಾಗೆ. ಎಂತಹ ಕಠಿಣ ಸಂದರ್ಭವನ್ನೂ ಅದು ಹಗುರಗೊಳಿಸುತ್ತದೆ, ತಿಳಿಯಾಗಿಸುತ್ತದೆ. ವಿನೋದವೆಂಬ ಸುರಕ್ಷಾ ಕವಾಟದ ಮೂಲಕ ನಾವು ಆಕ್ರೋಶವನ್ನು ಹೊರಹಾಕಬಹುದು. ನಾವೇನು ಈಗ ನೋಡುತ್ತಿದ್ದೇವೆ ಅದು ಬದುಕಿನ ಒಂದು ಅಧ್ಯಾಯ ಎಂಬ ಭಾವವನ್ನು ಹಾಸ್ಯ ಮೂಡಿಸುತ್ತದೆ. ವಿನೋದಪ್ರಜ್ಞೆ ಒಂದು ಸ್ವಾಭಾವಿಕ ವರ. ಉತ್ತಮ ಆರೋಗ್ಯದ ಅವಶ್ಯಕ ಭಾಗ. ನಗು ಮಾನವನ ಒಂದು ಸಾರ್ವತ್ರಿಕ ಅನುಭವ. ನಗಬಲ್ಲ ಏಕೈಕ ಪ್ರಾಣಿಯೆಂದರೆ ಮನುಷ್ಯನೇ. ಅದಕ್ಕೆ ಜಿಗುಟುತನ ಬೇಡ.

ADVERTISEMENT

ವಿನೋದವು ಸೃಜನಶೀಲ ನಾವೀನ್ಯತೆಯ ಒಂದು ಮುಖ್ಯ ಲಕ್ಷಣ. ಬ್ರಿಟನ್ನಿನ ಕಾದಂಬರಿಕಾರ ಚಾರ್ಲ್ಸ್‌ ಡಿಕನ್ಸ್‌ ಗಂಭೀರ ಹಾಸ್ಯ ಕುರಿತು ನುಡಿದಿದ್ದು ಹೀಗೆ: ‘ನಗುವಿನಷ್ಟು ತಡೆಯಲಾಗದ ಸಾಂಕ್ರಾಮಿಕ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ’. ಮನೆ, ಕಚೇರಿ, ಮಾಲ್‌, ಸಭೆ, ಕ್ರೀಡಾಂಗಣ.... ಎಲ್ಲೇ ಇದ್ದರೂ ಒತ್ತಡವನ್ನು ಶಮನಗೊಳಿಸಬಲ್ಲ ಶಕ್ತಿ ಹಾಸ್ಯಕ್ಕೆ ಇದೆ. ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಕೋರ್ಸ್‌ನ ಪಠ್ಯಕ್ರಮದಲ್ಲಿ ಕಚೇರಿಗಳಲ್ಲಿನ ದಕ್ಷತೆಗೆ ಹಾಸ್ಯಪ್ರವೃತ್ತಿ ಕುರಿತು ಅಧ್ಯಾಯಗಳಿವೆ. ನಗುವುದಕ್ಕೂ ಮೀರಿ ವಿನೋದವು ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ವೃದ್ಧಿಸುತ್ತದೆ. ಅನಗತ್ಯ ಆತಂಕಕ್ಕೆ ಕಡಿವಾಣ ಹಾಕಿ, ಸ್ವಸಾಮರ್ಥ್ಯ ವರ್ಧಿಸುವ ಹಾಸ್ಯವು ಬದುಕಿನ ಗುಣಮಟ್ಟ ಸುಧಾರಿಸುತ್ತದೆ.

ಆದರೆ ಅದು ಪರರ ಭಾವನೆಗಳನ್ನು ಗೌರವಿಸುವ ಪ್ರಸ್ತುತ ವಿನೋದವಾಗಿರಬೇಕಷ್ಟೆ. ವಿವೇಚನೆ
ಯಿಲ್ಲದ ಮತ್ತು ನಿಂದನಾತ್ಮಕ ತಮಾಷೆಗಳು ರೋಷದ ವಾತಾವರಣ ಸೃಷ್ಟಿಸುವ ಅಪಾಯ ಇದೆ. ನಾವೇನು ವೇದಿಕೆಯ ನಗೆಗಾರರಾಗಬೇಕಿಲ್ಲ. ನಗುವ, ನಗಿಸುವ ಸ್ವಭಾವವಿದ್ದರಾಯಿತು. ದಿನಕ್ಕೆ ಒಂದಾದರೂ ತಮಾಷೆಯ ಸಂಗತಿ ಗುರುತಿಸುವ ತೆರೆದ ಮನಸ್ಸು ಬೇಕು. ಅಹಮಿಕೆಯ ವ್ಯಸನ ನಗಿಸುವ ಅವಕಾಶಗಳನ್ನು ತಡೆಯುವುದು. ಸ್ವಯಂ ನವಿರಾದ ವಿಡಂಬನೆಗೆ ಒಳಪಡಿಸಿಕೊಂಡು ನಕ್ಕು ನಗಿಸುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಾಸ್ಯಪ್ರವೃತ್ತಿ ಎಂದರೆ ಪರರನ್ನು ಗೇಲಿಗೆ ಗುರಿಯಾಗಿಸುವುದಲ್ಲ. 

ವಯಸ್ಸು, ಲಿಂಗತ್ವ, ಭಾಷೆ, ಗಡಿ, ವೃತ್ತಿಯ ತಾರತಮ್ಯವಿಲ್ಲದೆ ಎಲ್ಲರೂ ವಿಡಂಬನೆಯನ್ನು ಆನಂದಿಸುತ್ತಾರೆ. ಸರಳವಾದ ಬದುಕನ್ನು ಕದಡದಿದ್ದರಾಯಿತು, ಹಾಸ್ಯ ತಂತಾನೆ ಪುಟಿಯುತ್ತದೆ. ಆಡ್ತಾ ಆಡ್ತಾ ಆಯಾಚಿತವಾಗಿ ವಿನೋದ ವಿಜೃಂಭಿಸಿರುತ್ತದೆ. ಅದೊಂದು ಕವಿಗೋಷ್ಠಿ. ಸಮಯದ ಅಭಾವದ ಕಾರಣ ಪ್ರತಿಯೊಬ್ಬರೂ ಒಂದೊಂದೇ ಕವನ ಓದಬೇಕೆಂಬ ಷರತ್ತು ಇತ್ತು. ಒಬ್ಬ ಕವಿ ಎರಡು ಕವನಗಳನ್ನು ತಂದಿರುವುದನ್ನು ಕವಿಗೋಷ್ಠಿಯ ಅಧ್ಯಕ್ಷ ಗಮನಿಸಿ ‘ನೀವು ಎರಡನೇ ಕವನ ಓದಿಬಿಡಿ’ ಎಂದರು! ಕವಿ ಚೆನ್ನವೀರ ಕಣವಿ ಅವರು ಸಮಾರಂಭಕ್ಕೆ ಅಧ್ಯಕ್ಷ ಏಕೆ ಬೇಕು ಎನ್ನುವುದಕ್ಕೆ ಕೊಟ್ಟ ಕಾರಣ ಮಾರ್ಮಿಕ.
ಸಭೆಯಲ್ಲಿ ಒಬ್ಬರಾದರೂ ಗಂಭೀರವಾಗಿ ಕುಳಿತುಕೊಳ್ಳಬೇಕೆಂದು!

ಒಂದರ ಮೇಲೆ ಇನ್ನೊಂದು ನಗೆಹನಿಗಳನ್ನುಒಪ್ಪಿಸಿದ ಮಾತ್ರಕ್ಕೆ ಹಾಸ್ಯದ ಉತ್ಸವವಾಗದು. ಅವನ್ನು ಸಂಬಂಧವೆನ್ನುವ ನಾರು ಪೋಣಿಸಿರಬೇಕಲ್ಲ. ದಶಕಗಳ ಹಿಂದಿನ ಕನ್ನಡ ಸಿನಿಮಾ
ಗಳಲ್ಲಿನ ಹಾಸ್ಯ ಈಗ ಬರೀ ಮೆಲುಕು. ತನ್ನಿಂದ ಸಾಲ ಪಡೆದವನು ವಾಪಸ್‌ ಕೊಡುತ್ತಾನ ಅಂತ ಒಬ್ಬ ವ್ಯಾಪಾರಿಯು ಊರ ಹಿರಿಯನನ್ನು ಕೇಳುತ್ತಾನೆ. ‘ಧೈರ್ಯವಾಗಿರು, ಬೇಕಾದರೆ ಎದೆ ಮೇಲೆ ಒಂದು ಕಲ್ಲು ಇಟ್ಟುಕೊ’ ಎನ್ನುವುದೇ ಅಭಯದಾತ? ಉಪಕಾರದ ನೆಪದಲ್ಲಿ ಅಪಕರಿಸುವ ಖಳನಾಯಕನನ್ನು ನಾಯಕ ವಂದಿಸುತ್ತಾನೆ. ‘ನನ್ನ ಚಿಲ್ಲರೆ ಕೆಲಸಕ್ಕೇಕೆ ಇಂಥ ಹೊಗಳಿಕೆ’ ಎನ್ನುವ ಖಳನಾಯಕನ ಪ್ರತಿಕ್ರಿಯೆ
ಯಲ್ಲಿ ಅದ್ಭುತ ವಿನೋದವಿದೆ. ತಾವು ಸಿಡಿಸಿದ ಚಟಾಕಿಗೆ ಯಾರೂ ನಗದಿದ್ದರೆ ‘ಇದು ಜೋಕು ಕಣ್ರೊ, ನಗಿ’ ಎನ್ನುತ್ತಿದ್ದರು ಕೈಲಾಸಂ. ಅಂದಹಾಗೆ ಒಂದು ತಮಾಷೆಯನ್ನು ವಿವರಿಸಿದರೆ ಅದನ್ನು ಕೊಂದಂತೆ! ಕಂಡ, ಅನುಭವಿಸಿದ ಹಾಸ್ಯವನ್ನು ವಿನಿಮಯ ಮಾಡಿಕೊಂಡರೆ ಮತ್ತಷ್ಟು ಖುಷಿ.

ತಮ್ಮ ದುಗುಡ, ಅಳಲು ಮರೆಮಾಚಲು ವಿನೋದವನ್ನು ಒಂದು ರಕ್ಷಣಾ ತಂತ್ರ ಆಗಿಸಿಕೊಳ್ಳುವುದು ಸಲ್ಲದು. ಇಂಥ ದುಸ್ಸಾಹಸ ಖಿನ್ನತೆಗೆ ಮೂಲವಾದ ನಿದರ್ಶನಗಳುಂಟು. ನಾನು ಇವೊತ್ತಿನ ದಿನಪತ್ರಿಕೆಯನ್ನು ನಿನ್ನೆಯಿಂದ ಹುಡುಕುತ್ತಿದ್ದೇನೆ ಎಂಬ ಹಸಿ ಸುಳ್ಳನ್ನು ಮುಗುಳ್ನಗೆ ಕ್ಷಮಿಸುತ್ತದೆ. ವರ್ಷದ ಪ್ರತೀ ದಿನ ನಮ್ಮನ್ನು ‘ದಡ್ಡರನ್ನಾಗಿಸಲು’ ಕಾಡುತ್ತಿರಲಿ ಕಚಗುಳಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.