ADVERTISEMENT

ತೆನೆ ಮತ್ತು ಪೊರಕೆ

ಬಿ.ಎನ್.ಮಲ್ಲೇಶ್
Published 14 ಫೆಬ್ರುವರಿ 2020, 4:45 IST
Last Updated 14 ಫೆಬ್ರುವರಿ 2020, 4:45 IST
   

ದೆಹಲಿ ಗದ್ದುಗೆ ಗೆದ್ದ ‘ಪೊರಕೆ ಸ್ಟಾರ್’ ಕೇಜ್ರಿವಾಲರನ್ನು ಕರ್ನಾಟಕದ ‘ತೆನೆ ಸ್ಟಾರ್’ ಕುಮಾರಣ್ಣ ಅಭಿನಂದಿಸಿದರು. ‘ಕಂಗ್ರ್ಯಾಜುಲೇಶನ್ಸ್ ಬ್ರದರ್, ಏನ್ ಮ್ಯಾಜಿಕ್ ಮಾಡಿಬಿಟ್ರಿ ನೀವು? ಕೈ-ಕಮಲ ಎರಡನ್ನೂ ಗುಡಿಸಿ ಹಾಕಿಬಿಟ್ರಲ್ಲ ಹೆಂಗೆ? ನಾವೂ ನಿಮ್ ತರ ಗೆಲ್ಲೋಕೆ ಏನ್ ಮಾಡಬೇಕು?’

‘ಕಡಿಮೆ ಮಾತಾಡಬೇಕು, ಜಾಸ್ತಿ ಬೈಸ್ಕೋಬೇಕು...’ ಕೇಜ್ರಿವಾಲ್ ನಕ್ಕರು.

‘ಬೈಸ್ಕೋಬೇಕಾ? ಯಾರಿಂದ?

ADVERTISEMENT

‘ಬಿಜೆಪಿ... ಐ ಮೀನ್ ವಿರೋಧ ಪಕ್ಷದೋರಿಂದ. ಅವರು ಬೈದಷ್ಟೂ ನಮಗೆ ಜಾಸ್ತಿ ವೋಟು ಬರುತ್ತೆ... ಅವರು ಎಷ್ಟೇ ಬೈದ್ರೂ ನಾವು ಕೇಳಿಸ್ಕೋಬಾರ್ದು’.

‘ಹೌದಾ? ನೀವು ಕಿವಿಗೆ ಮಫ್ಲರ್ ಕಟ್ಕೊಳ್ಕೋದು ಅದಕ್ಕೇನಾ?’

‘ಹೌದು... ಎಷ್ಟೋ ಸಲ ಕೆಲವರು ನನಗೆ ಪಬ್ಲಿಕ್ಕಲ್ಲಿ ಕಪಾಳಮೋಕ್ಷ ಮಾಡಿದಾರೆ. ನಾನು ಬೇಜಾರ್ ಮಾಡ್ಕಂಡಿಲ್ಲ, ನಿಮ್ಮ ಹಾಗೆ ಅಳಲೂ ಇಲ್ಲ...’

‘ನನಗೆ ಅದು ಕಷ್ಟ ಬ್ರದರ್, ಬೇರೆ ಏನ್ ಮಾಡಬೇಕು ಹೇಳಿ. ಅಥ್ವ ನೀವು ಏನೇನ್ ಮಾಡಿದ್ರಿ ಅದನ್ನಾದ್ರೂ ಹೇಳಿ ಪ್ಲೀಸ್...’

‘ನಾನು ಏನೇನ್ ಮಾಡಿದೆ ಅಲ್ಲ, ಏನೇನ್ ಮಾಡಲಿಲ್ಲ ಅದನ್ನ ಕೇಳಿ. ನಾನು ಗುಡಿ ಗುಂಡಾರ ಸುತ್ತಲಿಲ್ಲ. ಹೋಮ-ಹವನ ಮಾಡಿಸ್ಲಿಲ್ಲ. ನಿಂಬೆಹಣ್ಣು ಹಂಚಲಿಲ್ಲ. ಹಳ್ಳಿಗಳಿಗೆ ಹೋಗಿ ಮಲಗಲಿಲ್ಲ. ಮಾಡಿದ್ದು ಒಂದೇ... ಅಭಿವೃದ್ಧಿ, ಅಭಿವೃದ್ಧಿ’.

‘ಅಭಿವೃದ್ಧಿ... ನಾನೂ ಮಾಡಿದ್ನಲ್ಲ?’

‘ನಾನು ಹೇಳಿದ್ದು ಜನರ ಅಭಿವೃದ್ಧಿ. ಅವರಿಗೆ ಬೇಕಾದ್ದು ಕೊಟ್ಟೆ, ಗೆದ್ದೆ...’

‘ನಾನೂ ಸಾಕಷ್ಟು ಕೊಟ್ಟೆ ಬ್ರದರ್... ಹೋಗ್ಲಿ ಈಗ ನಮ್ಮ ಸಿಂಬಲ್ ಚೇಂಜ್ ಮಾಡ್ಕಂಡ್ರೆ ನಾವು ಗೆಲ್ಲಬಹುದಾ? ತಲೆ ಮೇಲೆ ತೆನೆ ಬದಲು ಪೊರಕೆ ಇಟ್ಕಂಡ್ರೆ ಹೆಂಗೆ?’

‘ನೀವೊಳ್ಳೆ, ಸಿಂಬಲ್ ಯಾವುದಾದ್ರೇನು, ಜನರ ಪ್ರೀತಿ ಇದ್ರೆ ಚಂಬಲ್ ಕಣಿವೇಲಿ ಬೇಕಾದ್ರೂ ನಿಂತು ಗೆಲ್ಲಬಹುದು...’

‘ಕರೆಕ್ಟ್, ಜನರ ಪ್ರೀತಿ ಗೆಲ್ಲೋಕೆ ಊರೂರಲ್ಲೂ ‘ಜನಪ್ರೀತಿ ಯಾಗ’ ಮಾಡಿದ್ರೆ ಹೆಂಗೆ?’ ಕುಮಾರಣ್ಣನ ಪ್ರಶ್ನೆಗೆ ಕೇಜ್ರಿ ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.