
ರೈತರು ಎದುರಿಸುವ ಸವಾಲು, ಸಂಕಷ್ಟಗಳ ಅರಿವು ಬಹುತೇಕರಿಗೆ ಇರುವುದಿಲ್ಲ. ರೈತ ಹಾಗೂ ಸಮುದಾಯದ ಒಡನಾಟಕ್ಕೆ ‘ಕೃಷಿ ಪ್ರವಾಸ’ ಅವಕಾಶ ಕಲ್ಪಿಸುತ್ತದೆ.
ಥಾಯ್ಲೆಂಡಿನ ಮೆ ಥಾ ಹಳ್ಳಿಯ ಯುವ ರೈತ ಆನ್ ತರಕಾರಿ ಹಾಗೂ ಭತ್ತ ಬೆಳೆಯುತ್ತಾನೆ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ವಾಪಸು ಊರಿಗೆ ಬಂದಿರುವ ಆತ, ನಾಲ್ಕು ಎಕರೆ ತೋಟದಲ್ಲಿ ಸಾವಯವ ಕೃಷಿ ಮಾಡುತ್ತಾನೆ. ವಾರಾಂತ್ಯದಲ್ಲಿ ಕೃಷಿ ಆಸಕ್ತರು ಆತನ ತೋಟಕ್ಕೆ ಬಂದು, ಬೇಸಾಯದ ಬಗ್ಗೆ ತಿಳಿಯುತ್ತಾರೆ. ನಿತ್ಯದ ಕೃಷಿ ಕೆಲಸಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ಕಳೆ ನಿರ್ಮೂಲನೆ, ಔಷಧ ಸಿಂಪಡಣೆ, ತರಕಾರಿ ಕಟಾವು, ಕೊಟ್ಟಿಗೆ ಶುಚಿಗೊಳಿಸುವುದು ಇತರ ಕೆಲಸಗಳಲ್ಲಿ ಕೈಜೋಡಿಸುತ್ತಾರೆ. ಅವರ ವಾಸ್ತವ್ಯಕ್ಕೆ ಸರಳ ಕೊಠಡಿ ಹಾಗೂ ಸಾವಯವ ಪದಾರ್ಥಗಳದ್ದೇ ರುಚಿಕರ ಭೋಜನ ಇರುತ್ತದೆ. ವಾಪಸು ತೆರಳುವಾಗ, ಆ ರೈತ ಹಾಗೂ ಇತರ ಕೃಷಿಕರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸುತ್ತಾರೆ. ಇಂಥ ಹಲವು ಕೃಷಿಕರು ಮೆ ಥಾ ಹಳ್ಳಿಯಲ್ಲಿ ಇದ್ದಾರೆ. ವರ್ಷವಿಡೀ ಆಸಕ್ತರು ಅಲ್ಲಿಗೆ ಬರುತ್ತಲೇ ಇರುತ್ತಾರೆ.
ಬರೀ ಮೋಜು ಮಸ್ತಿಯಷ್ಟೇ ಇದೆ ಎಂದು ಭಾವಿಸಿರುವ ಥಾಯ್ಲೆಂಡಿನಲ್ಲಿ ಕೃಷಿ ಪ್ರವಾಸೋದ್ಯಮ ಕೂಡ ಛಾಪು ಮೂಡಿಸಿದೆ. ರೈತ ಮಾರುಕಟ್ಟೆಯ ಯಶಸ್ವೀ ಪ್ರಯೋಗದ ಜತೆಗೆ, ಕೃಷಿ ಪ್ರವಾಸೋದ್ಯಮವನ್ನು ಸಮರ್ಥವಾಗಿ ಅಳವಡಿಸಿಕೊಂಡ ಥಾಯ್ಲೆಂಡಿನ ಮಾದರಿ ಭಾರತದಂಥ ಕೃಷಿ ಪ್ರಧಾನ ದೇಶಕ್ಕೂ ಹೊಂದಿಕೊಂಡೀತು.
ನಮ್ಮಲ್ಲಿ ಆಹಾರ ಪದಾರ್ಥ ಉತ್ಪಾದಿಸುವ ರೈತನಿಗೂ ಅದನ್ನು ಸೇವಿಸುವ ಗ್ರಾಹಕನಿಗೂ ಸಂಬಂಧವೇ ಇಲ್ಲ. ಮಾರುಕಟ್ಟೆಗಳು, ದಲ್ಲಾಳಿಗಳು, ಸೂಪರ್ ಮಾರ್ಕೆಟ್‌ಗಳು ಹಾಗೂ ಹೋಟೆಲ್‌ಗಳು ಈ ನಂಟನ್ನು ಯಾವತ್ತೋ ಕತ್ತರಿಸಿ ಹಾಕಿವೆ. ಹೀಗಾಗಿಯೇ, ವರ್ಷದುದ್ದಕ್ಕೂ ಹವಾಮಾನ ವೈಪರೀತ್ಯ, ಕೀಟಬಾಧೆ, ರೋಗದಂಥ ಸಮಸ್ಯೆಗಳೊಂದಿಗೆ ಮಾರುಕಟ್ಟೆ ಕುಸಿತದಂಥ ಅಧ್ವಾನವನ್ನೂ ಅನುಭವಿಸಿ ಬೆಳೆ ಬೆಳೆಯುವ ರೈತನ ಪಡಿಪಾಟಲು, ಆ ಉತ್ಪನ್ನ ಖರೀದಿಸುವ ಗ್ರಾಹಕನ ನೇರ ಅರಿವಿಗೆ ಬರುವುದೇ ಇಲ್ಲ. ಆಗಾಗ್ಗೆ ಮಾಧ್ಯಮಗಳಲ್ಲಿ ಬರುವ ವರದಿ ಬಿಟ್ಟರೆ, ರೈತನ ಕಷ್ಟ–ನಷ್ಟ ಯಾರ ಅನುಭವಕ್ಕೂ ಬಾರದು.
ಅನ್ನ ತಿನ್ನುವ ವ್ಯಕ್ತಿ ಅದನ್ನು ಬೆಳೆದವನ ಜತೆ ಸಂವಾದಿಸಬೇಡವೆ? ಆ ಅವಕಾಶವನ್ನು ‘ಕೃಷಿ ಪ್ರವಾಸೋದ್ಯಮ’ ಮಾಡಿಕೊಡುತ್ತದೆ. ಪ್ರವಾಸ ಅಂದರೆ ಬರೀ ಮೋಜು ಮಸ್ತಿ ಅಲ್ಲವಲ್ಲ? ಪಾರಂಪರಿಕ, ಐತಿಹಾಸಿಕ, ಮನರಂಜನೆ ತಾಣಕ್ಕೆ ಭೇಟಿ ಕೊಡುವಂತೆಯೇ, ರೈತನ ಹೊಲ–ತೋಟಕ್ಕೆ ತೆರಳಿ, ಆತನ ಕೆಲಸವನ್ನು ಖುದ್ದಾಗಿ ನೋಡಿದರೆ ಬೇಸಾಯದ ನೇರ ಪರಿಚಯ ಆದೀತು.
ಬಹುತೇಕ ನಗರವಾಸಿಗಳಿಗೆ ಅವರ ಆಹಾರದ ಮೂಲ ಯಾವುದು ಎಂಬುದೂ ತಿಳಿದಿರುವುದಿಲ್ಲ. ಇಂದಿನ ಕಾಲಮಾನದಲ್ಲಿ ಅದು ತೀರಾ ಅಗತ್ಯವೂ ಇಲ್ಲ. ಆದರೆ, ಆಹಾರದ ಉತ್ಪಾದನೆಯ ಪ್ರಾಥಮಿಕ ತಿಳಿವಳಿಕೆ ಇದ್ದರೆ ಒಳಿತಲ್ಲವೆ? ಕೃಷಿ ಪ್ರವಾಸೋದ್ಯಮ ಈ ಆಯಾಮಕ್ಕೆ ಹೆಚ್ಚು ಮಹತ್ವ ಕೊಡುತ್ತದೆ. ವಿಹಾರ, ವಿರಾಮಕ್ಕೆಂದು ತೋಟಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ‘ಹೋಂ ಸ್ಟೇ’ ಮಾದರಿಗಿಂತ ಇದು ತುಸು ಭಿನ್ನ. ರೈತ ಹಾಗೂ ಆತನ ಬೇಸಾಯದ ಜತೆಗಿನ ಒಡನಾಟವೇ ಇಲ್ಲಿನ ಜೀವಾಳ. ‘ಬರೀ ಮನರಂಜನೆಯೇ ಗುರಿ ಅಲ್ಲ. ಸೂರ್ಯೋದಯಕ್ಕಿಂತ ಮೊದಲೇ ಶುರುವಾಗುವ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳು ದಿನವಿಡೀ ನಡೆಯುತ್ತಲೇ ಇರುತ್ತವೆ. ಹೀಗಾಗಿ, ರೈತನ ತೋಟಕ್ಕೆ ಬರುವ ಪ್ರವಾಸಿಗರು ಯಾವುದಾದರೊಂದು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು. ಇದರಿಂದ ರೈತನ ಬದುಕು ಮತ್ತು ಬೇಸಾಯ ಕುರಿತ ಅರಿವು ಮೂಡುತ್ತದೆ. ಹಲವು ಬಗೆಯ ಆರ್ಥಿಕ ಕಷ್ಟ ಎದುರಿಸುವ ರೈತನಿಗೆ ಕೃಷಿ ಪ್ರವಾಸೋದ್ಯಮ ಚಿಕ್ಕಮಟ್ಟದ ಆದಾಯವನ್ನೂ ತಂದು ಕೊಡಬಲ್ಲದು’ ಎನ್ನುತ್ತಾರೆ, ಮಾಗಡಿ ಸಮೀಪ ತಮ್ಮ ತೋಟದಲ್ಲಿ ಕೃಷಿ ಪ್ರವಾಸೋದ್ಯಮ ಅಳವಡಿಸಿರುವ ನೈಸರ್ಗಿಕ ಕೃಷಿಕ ಶ್ರೀವತ್ಸ ಗೋವಿಂದರಾಜು ಅವರು.
ಕೃಷಿ ಪ್ರವಾಸೋದ್ಯಮಕ್ಕೆ ಕನ್ನಡ ನಾಡಿನಲ್ಲಿ ವಿಪುಲ ಅವಕಾಶಗಳಿವೆ. ಆದರೆ, ಸರ್ಕಾರದಿಂದ ಉತ್ತೇಜನವಿಲ್ಲ. ಈ ಅಂಶ ಗಮನಿಸಿ, ಪರಿಸರಪ್ರಿಯ ಕೃಷಿಕರೇ ಒಂದಾಗಿ ‘ಕರ್ನಾಟಕ ಕೃಷಿ ಪ್ರವಾಸೋದ್ಯಮ ವೇದಿಕೆ’ (ಕೆಎಟಿಎಫ್) ರೂಪಿಸಿ, ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸರಳ ನಿಯಮಗಳು, ಪ್ರವಾಸೋದ್ಯಮ ಇಲಾಖೆಯ ಸಹಕಾರ ಹಾಗೂ ಮುಖ್ಯವಾಗಿ ಪ್ರವಾಸಿಗರಿಗೆ ಪರಿಚಯಿಸಲು ವಿಭಿನ್ನ ಬೇಸಾಯ ಚಟುವಟಿಕೆ ಇರುವ ಹೊಲ–ಗದ್ದೆ– ತೋಟಗಳನ್ನು ಮಾತ್ರ ಇದರಲ್ಲಿ ಸೇರ್ಪಡೆ ಮಾಡುವುದು ‘ಕೆಎಟಿಎಫ್’ ಅಜೆಂಡಾದಲ್ಲಿ ಸೇರಿದೆ.
ಮಾನವ ಸಮುದಾಯ ಒಂದೆಡೆ ನೆಲೆ ನಿಂತು ಶುರು ಮಾಡಿದ ಮೊದಲ ಕಸುಬೇ ಕೃಷಿ. ಸಾವಿರಾರು ವರ್ಷಗಳಿಂದ ಈ ಕಸುಬು ಕೌಶಲದೊಂದಿಗೆ ಮಿಳಿತವಾಗುತ್ತ ವ್ಯಾಪ್ತಿ ಹಿರಿದಾಗಿಸಿಕೊಂಡಿದೆ. ಆಹಾರ ಸಂಸ್ಕೃತಿಯನ್ನು ಪರಿಚಯಿಸಿ, ಉಳಿಸುವಲ್ಲಿ ಕೃಷಿ ಪ್ರವಾಸೋದ್ಯಮ ಗಮನಾರ್ಹ ಕೊಡುಗೆ ನೀಡಬಲ್ಲದು. ಶುದ್ಧ ಆಹಾರ, ಆರೋಗ್ಯ, ಸಹಬಾಳ್ವೆ, ಪರಿಸರ, ಶ್ರಮ ಸಂಸ್ಕೃತಿಯ ಕುರಿತು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ‘ಕೃಷಿ ಪ್ರವಾಸೋದ್ಯಮ’ ನಮ್ಮೆದುರು ಉಳಿದಿರುವ ಸರಳ ಹಾಗೂ ಸುಸ್ಥಿರ ದಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.