‘ಸಾಲ ತಂದಾದರೂ ರೈತರಿಗೆ ಒಳ್ಳೆ ಯೋಜನೆಯನ್ನು ರೂಪಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ (ಪ್ರ.ವಾ., ಜ. 27). ಇದು ಒಂದು ಮುಖ.
ಈ ಸರ್ಕಾರದ ಇನ್ನೊಂದು ಮುಖ ಏನೆಂದರೆ: ಕೃಷಿ ಜಮೀನನ್ನು ಖಾಸಗಿ ಕಂಪನಿಗಳಿಗೆ, ಸಂಘ–ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಅವಕಾಶ ಮಾಡಿಕೊಡುವ ಕರಡು ಮಸೂದೆಯೊಂದು ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ (ಹಿಂದೆ, 2012ರಲ್ಲಿ ಸದಾನಂದ ಗೌಡರ ಅವಧಿಯಲ್ಲಿ ಬಿಜೆಪಿ ಇದೇ ಯತ್ನ ಮಾಡಿತ್ತು. ಆದರೆ, ಆ ಸರ್ಕಾರವೇ ಹೆಚ್ಚು ಕಾಲ ಉಳಿಯಲಿಲ್ಲ). ಕಾರ್ಪೊರೇಟ್ ಕಂಪನಿಗಳು ನಮ್ಮ ಹೊಲಕ್ಕಿಳಿದರೆ ಅತಿ ನೀರು, ಅತಿ ಗೊಬ್ಬರ, ಅತಿ ವಿಷ ಸುರಿದು ನಿಸರ್ಗದ ಈಗಿನ ದುಃಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿಬಿಟ್ಟಾವೆಂಬ ಶಂಕೆ ಎಲ್ಲರಲ್ಲೂ ಇದ್ದೇ ಇದೆ. ಮೇಲಾಗಿ ಅವು ಯಂತ್ರಾಧಾರಿತ ಕೃಷಿ ಆಗುವುದರಿಂದ ಹಳ್ಳಿಯ ಜನರಿಗೆ ಕೆಲಸವನ್ನೂ ಕೊಡಲಾರವು.
ನಿಜ, ಕೃಷಿಯನ್ನು ನಿಭಾಯಿಸಲಾರದೆ ಅನೇಕರು ತಮ್ಮ ಜಮೀನನ್ನು ಪಾಳು ಬಿಟ್ಟೋ ಅಥವಾ ನೀಲಗಿರಿ
ಯಂಥ ಏಕಜಾತಿಯ ನೆಡುತೋಪು ಬೆಳೆಸಿಟ್ಟೋ ನಗರ
ಗಳಿಗೆ ವಲಸೆ ಬರುತ್ತಿದ್ದಾರೆ. ಹಾಗೆ ಪಾಳು ಬಿದ್ದಿರುವ ಜಮೀನನ್ನು ಇನ್ಯಾರಿಗೋ ವಹಿಸುವ ಮೊದಲು ಸರ್ಕಾರ ಇನ್ನೂ ತುಸು ವಿವೇಚನೆ ತೋರಬೇಕಿದೆ. ಕಾರ್ಪೊರೇಟ್ ಕಂಪನಿಗಳನ್ನು ಸದ್ಯಕ್ಕೆ ದೂರವಿಟ್ಟು ಇನ್ನೈದು ವರ್ಷಗಳ ಕಾಲ ಸ್ಥಳೀಯ ಸಂಘ– ಸಂಸ್ಥೆಗಳಿಗೆ ಗುತ್ತಿಗೆ ಕೃಷಿಯ ಅವಕಾಶ ಕೊಟ್ಟು ನೋಡಬಹುದು.
ಈಗಂತೂ ‘ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’, ‘ಸಾವಯವ ಕೃಷಿ’, ‘ಪರ್ಮಾಕಲ್ಚರ್’, ‘ಸಜೀವ ಕೃಷಿ’, ‘ನಿಖರ ಕೃಷಿ’ (ಪ್ರಿಸಿಶನ್ ಫಾರ್ಮಿಂಗ್) ಮುಂತಾದ ಮಾತುಗಳು ಎಲ್ಲೆಡೆ ಕೇಳಬರುತ್ತಿವೆ. ‘ಶೂನ್ಯ ಬಂಡವಾಳ ಕೃಷಿ’ಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳೇ ಪ್ರೋತ್ಸಾಹಿಸುತ್ತಿವೆ. ಈ ಮಾದರಿಯ ಕೃಷಿಯಲ್ಲಿ ತೊಡಗಿದ ತೆಲುಗಿನ ‘ರೈತು ಸ್ವರಾಜ್ಯ ವೇದಿಕಾ’ದವರು ಕಳೆದ ಎಂಟು ವರ್ಷಗಳಿಂದ ಸರ್ಕಾರದ ಸಹಭಾಗಿತ್ವ ಪಡೆದು ಸಿಹಿಕಹಿ ಅನುಭವಿಸಿದ್ದಾರೆ. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಈ ಬಗೆಯ ಕೃಷಿಯನ್ನು ಶ್ಲಾಘಿಸಿ, ಅಂಥ ‘ಹೆಜ್ಜೆ ಹಿಂದಿಡುವ’ ಪ್ರಯೋಗಕ್ಕೆ ಪ್ರೋತ್ಸಾಹ ನೀಡಬೇಕಾದ ಮಾತಾಡಿದ್ದಾರೆ. ಅದರ ಸಾಧಕ–ಬಾಧಕಗಳ ತುಲನೆ ನಡೆಸಿ, ನಮ್ಮ ಕೃಷಿಕರೊಂದಿಗೆ ಸಮಾಲೋಚಿಸಿ, ಕರ್ನಾಟಕದ ಹೆಜ್ಜೆ ಹೇಗಿರಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ.
ಕೇರಳದಲ್ಲಿ ಮಹಿಳೆಯರೇ ನಡೆಸುತ್ತಿರುವ ‘ಕುಡುಂಬಶ್ರೀ’ ಹೆಸರಿನ ರಾಜ್ಯವ್ಯಾಪಿ ಯೋಜನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರ್ಕಾರದ ನೆರವಿನೊಂದಿಗೆ ಸಹಕಾರಿ ಪದ್ಧತಿಯಲ್ಲಿ ಅವರು ನಡೆಸುತ್ತಿರುವ ಕೃಷಿ ಪ್ರಯೋಗಗಳನ್ನು ನಮ್ಮ ಮಹಿಳೆ
ಯರೂ (ಪಕ್ಷಾತೀತವಾಗಿ) ನೋಡಿ ಬರಲು ಕರ್ನಾಟಕ ಸರ್ಕಾರ ವ್ಯವಸ್ಥೆ ಮಾಡಬೇಕು. ಆರಂಭದಲ್ಲಿ ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಅದೇ ಮಾದರಿಯನ್ನು ಅಳವಡಿಸಲು ಸಾಧ್ಯವೇ ಎಂದು ಪರಿಶೀಲಿಸಬಹುದು. ಅಂದಹಾಗೆ, ಈಗಾಗಲೇ ನಮ್ಮ ರಾಜ್ಯದ ಅನೇಕ ಕಡೆ ಯುವಕ–ಯುವತಿಯರು ಸೇರಿ ನಡೆಸುತ್ತಿರುವ ‘ರೈತ ಉತ್ಪಾದಕ ಕಂಪನಿ’ಗಳು ಮಾದರಿಯ ಕೆಲಸಗಳನ್ನು ಮಾಡುತ್ತಿವೆ. ರೈತರೇ ನಡೆಸುತ್ತಿರುವ ಅಂಥ ಯಶಸ್ವಿ ಕಂಪನಿಗಳಿಗೆ ಆದ್ಯತೆಯ ಮೇರೆಗೆ ಕೃಷಿ ಭೂಮಿಯನ್ನು ಗುತ್ತಿಗೆಯ ಆಧಾರದಲ್ಲಿ ನೀಡಬಹುದು.
‘ನೈಸರ್ಗಿಕ ಕೃಷಿ’ ಎಂದರೆ ವಿಜ್ಞಾನವನ್ನು ಮತ್ತು ವಿಜ್ಞಾನಿಗಳನ್ನು ದೂರ ಇಡಬೇಕೆಂಬ ತಪ್ಪುಗ್ರಹಿಕೆ ಕೆಲವರಲ್ಲಿ ಬೇರೂರಿದೆ. ನಿಸರ್ಗ ಸಮತೋಲನಕ್ಕೆ ಧಕ್ಕೆ ತಾರದ, ದೀರ್ಘ ತಾಳಿಕೆಯ ಎಲ್ಲ ಬಗೆಯ ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ಇದೀಗ ಪ್ರಚಲಿತಕ್ಕೆ ಬರುತ್ತಿರುವ ವೈಜ್ಞಾನಿಕ ವಿಧಾನದ ‘ಪ್ರಿಸಿಶನ್ ಫಾರ್ಮಿಂಗ್’ ತಂತ್ರಗಳನ್ನೂ ಹೊಲಕ್ಕೆ ಇಳಿಸಬೇಕಿದೆ. ಮಣ್ಣುಗುಣ ಮತ್ತು ಹವಾಗುಣಕ್ಕೆ ತಕ್ಕಂತೆ ಸಸ್ಯಗಳಿಗೆ ಬೇಕಿದ್ದಷ್ಟೇ ಒಳಸುರಿಗಳನ್ನು ಒದಗಿಸಿ, ಉತ್ತಮ ಹಾಗೂ ಆರೋಗ್ಯಕರ ಇಳುವರಿ ಪಡೆಯುವ ಈ ವಿಧಾನವನ್ನು ಸಾಂಪ್ರದಾಯಿಕ ಕೃಷಿಕರೂ ರೂಢಿಸಿಕೊಳ್ಳಬೇಕಿದೆ. ಅಂಥ ಹೊಸ ಪ್ರಯೋಗಕ್ಕೆ ತೊಡಗಿಕೊಳ್ಳಬಯಸುವ ಕನಸುಗಣ್ಣಿನ ಯುವಕರೂ ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಅವರಿಗೆ ಬೇಕಿದ್ದುದು ಜಮೀನು ಮತ್ತು ಬಂಡವಾಳ.
‘ಸಾಲ ತಂದಾದರೂ’ ರೈತರಿಗೆ ಸಹಾಯ ಮಾಡಲು ಬಯಸುವ ಮುಖ್ಯಮಂತ್ರಿಯವರು, ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡುವ ಹೊಸ ಮಸೂದೆಯನ್ನು ಮಂಡಿಸಲು ಅವಸರಿಸಬಾರದು. ಹೊಸ ಪ್ರಯೋಗಕ್ಕೆ ಮನಸ್ಸು ಮಾಡಬೇಕು. ಹೇಗಿದ್ದರೂ ರಾಷ್ಟ್ರದ ಆಹಾರ ಉತ್ಪಾದನೆಯು ಅಗತ್ಯಕ್ಕಿಂತ ಹೆಚ್ಚೇ ಇದೆ. ಕೃಷಿ ಕಂಪನಿಗಳನ್ನು ಕರೆಸಿ ಇಳುವರಿ ಹೆಚ್ಚಿಸಲೇಬೇಕಾದ ತುರ್ತು ಸದ್ಯಕ್ಕಂತೂ ಇಲ್ಲ. ರೈತರಿಗೆ ಬೇಡವಾದ ಜಮೀನಿನಲ್ಲಿ ಗ್ರಾಮೀಣ ಯುವಕರನ್ನೇ, ರೈತ ಮಹಿಳೆಯರನ್ನೇ, ಕೃಷಿ ಪದವೀಧರರನ್ನೇ ತೊಡಗಿಸುವಂಥ ಹೊಸ ಯೋಜನೆಯನ್ನು ಜಾರಿಗೆ ತರಬಹುದು. ಪಾರಂಪರಿಕ ಕೃಷಿ ವಿಧಾನಗಳೊಂದಿಗೆ (ನಿಸರ್ಗಕ್ಕೆ ಧಕ್ಕೆ ತಾರದ) ಅತ್ಯಾಧುನಿಕ ತಂತ್ರಜ್ಞಾನವನ್ನೂ ಬೆಸೆಯಬಲ್ಲ ಹೊಸ ‘ಸಮನ್ವಯ ಕೃಷಿ’ ವಿಧಾನವನ್ನು ಹೊಲಕ್ಕಿಳಿಸಿ ನೋಡಬಹುದು; ನೋಡಲು ಬೇಕಾದಷ್ಟು ಸಮಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.