ADVERTISEMENT

ಸಂಗತ | ಉದ್ಯೋಗ ಗಳಿಕೆ: ಅರಿಯಿರಿ ವಾಸ್ತವ

ಎಚ್.ಕೆ.ಶರತ್
Published 14 ಅಕ್ಟೋಬರ್ 2022, 2:07 IST
Last Updated 14 ಅಕ್ಟೋಬರ್ 2022, 2:07 IST
   

ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್‌ನಲ್ಲಿ ಇದ್ದಾಗಲೇ ‘ಕ್ಯಾಂಪಸ್ ಸೆಲೆಕ್ಷನ್’ ಮೂಲಕ ಕೆಲಸ ದಕ್ಕಿಸಿಕೊಂಡಿದ್ದ ಯುವತಿ, ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ (ವರ್ಕ್‌ ಫ್ರಮ್‌ ಹೋಮ್‌) ನಿರ್ವಹಿಸುತ್ತಿದ್ದಳು. ವರ್ಷಕ್ಕೆ ₹ 12 ಲಕ್ಷ ವೇತನ ಸಿಗುವ ಈ ಕೆಲಸಕ್ಕೆ ನೇಮಿಸಿಕೊಳ್ಳುವ ಸಲುವಾಗಿ ನಡೆಸಿದ ಸಂದರ್ಶನದ ವೇಳೆ, ತನ್ನ ಕೌಟುಂಬಿಕ ಹಿನ್ನೆಲೆ ಹಾಗೂ ಪದವಿ ಓದು ಪೂರ್ಣಗೊಳಿಸಲು ತನಗೆ ಎದುರಾದ ಆರ್ಥಿಕ ಸಮಸ್ಯೆಗಳ ಕುರಿತೂ ವಿವರಿಸಿದ್ದಳು.

ಉದ್ಯೋಗಕ್ಕೆ ಸೇರಿದಾಗಿನಿಂದಲೂ ಮನೆಯಿಂದಲೇ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದ ಸಂಸ್ಥೆ, ಇನ್ನು ಮುಂದೆ ಕಚೇರಿಗೆ ಬಂದು ಕೆಲಸ ನಿರ್ವಹಿಸುವಂತೆ ಸೂಚಿಸಿತು. ಆರೋಗ್ಯದ ಸಮಸ್ಯೆ ಇರುವುದಾಗಿ ತಿಳಿಸಿ, ಮನೆಯಿಂದಲೇ ಕೆಲಸ ಮಾಡಲು ಮತ್ತಷ್ಟು ದಿನ ಅವಕಾಶ ಕಲ್ಪಿಸುವಂತೆ ತಾನು ಕಾರ್ಯನಿರ್ವಹಿಸುವ ವಿಭಾಗದ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಳು. ಏನಾಗಿದೆ ಎಂಬುದನ್ನು ವಿವರವಾಗಿ ತಿಳಿಸುವಂತೆ ಅವರು ಕೇಳಿದಾಗ, ಯುವತಿಯಿಂದ ಬಂದ ಉತ್ತರವು ವಿಭಾಗದ ಮುಖ್ಯಸ್ಥರಿಗೆ ಸಮಾಧಾನಕರವಾಗಿ ತೋರಲಿಲ್ಲವೇನೋ... ಕಚೇರಿಗೆ ಬಂದು ಕೆಲಸ ಮಾಡಲು ಇಷ್ಟವಿರದ ಕಾರಣಕ್ಕೆ ಸಲ್ಲದ ನೆಪ ಹೇಳುತ್ತಿದ್ದಾಳೆ ಎಂದು ಅವರಿಗೆ ಅನಿಸಿರಬಹುದು. ಇದೀಗ ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲದ ಹಾಗೂ ಕಚೇರಿಗೆ ಬಂದು ಕೆಲಸ ನಿರ್ವಹಿಸಲು ಸಿದ್ಧಳಿಲ್ಲದ ಯುವತಿಯನ್ನು ಕೆಲಸದಿಂದ ತೆಗೆಯುವ ಕುರಿತು ಆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದವರು ಯೋಚಿಸುತ್ತಿದ್ದಾರಂತೆ. ಹಾಗಂತ ಆ ಯುವತಿ ತನ್ನ ಮನೆಯಲ್ಲಿ ಹೇಳಿಕೊಂಡಿದ್ದಾಳೆ.

‘ಕ್ಯಾಂಪಸ್ ಸೆಲೆಕ್ಷನ್’ ಮೂಲಕ ವರ್ಷಕ್ಕೆ ₹ 4.50 ಲಕ್ಷ ವೇತನ ಸಿಗುವ ಉದ್ಯೋಗಕ್ಕೆ ಆಯ್ಕೆಯಾಗಿದ್ದ, ಎರಡು ತಿಂಗಳ ಹಿಂದಷ್ಟೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ವಿದ್ಯಾರ್ಥಿ, ಸೇರಿದ ಒಂದು ವಾರಕ್ಕೇ ಕೆಲಸ ತ್ಯಜಿಸಿದ. ಸಿವಿಲ್ ಎಂಜಿನಿಯರಿಂಗ್ ಓದಿ ಸಾಫ್ಟ್‌ವೇರ್ ಕಂಪನಿಯ ಕೆಲಸಕ್ಕೆ ಸೇರಿದ್ದ ಅವನಿಗೆ, ಕೆಲಸದ ಒತ್ತಡ ಮತ್ತು ಕಚೇರಿ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಮೊದಲು ಸಿಕ್ಕಿದ ಕೆಲಸ ಬಿಡಬೇಡ ಎಂದು ಪೋಷಕರು ಸಲಹೆ ನೀಡಿದ್ದಕ್ಕೆ, ತನಗೆ ಸಿವಿಲ್ ಎಂಜಿನಿಯರ್ ಆಗಲು ಇಷ್ಟ ಎಂಬ ಕಾರಣ ಮುಂದೊಡ್ಡಿದ್ದ. ಇದೀಗ ಸಿವಿಲ್ ಎಂಜಿನಿಯರಿಂಗ್‌ ಕೆಲಸವನ್ನೇ ಮಾಡುತ್ತಿರುವ ಆತ, ಬೇರೆ ಬೇರೆ ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಸೂಚಿಸುತ್ತಿರುವುದರಿಂದ ಈ ಕೆಲಸವನ್ನೂ ಬಿಡುವುದಾಗಿ ಹೇಳುತ್ತಿದ್ದಾನೆ.

ADVERTISEMENT

ಎಂಜಿನಿಯರಿಂಗ್ ಕಾಲೇಜೊಂದರ ಎದುರು ಇರುವ ಕ್ಯಾಂಟೀನ್‍ನಲ್ಲಿ ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿನಿಯರಿಬ್ಬರು, ನೇಮಕಾತಿಗಾಗಿ ಕಾಲೇಜಿಗೆ ಬರುವ ಕಂಪನಿಗಳ ಕುರಿತು ಮಾತನಾಡುತ್ತಿದ್ದರು. ಅವರ ಪೈಕಿ ಒಬ್ಬಳು ಸಾಫ್ಟ್‌ವೇರ್ ಕಂಪನಿಯೊಂದರ ಹೆಸರು ಹೇಳಿ, ತನಗೆ ಈ ಕಂಪನಿಯಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ ಎಂದಳು. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಸಂಸ್ಥೆಗೆ ಸೇರಲು ಇಷ್ಟವಿಲ್ಲ ಎಂದ ತನ್ನ ಗೆಳತಿಯ ಮಾತು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಮತ್ತೊಬ್ಬಳು, ‘ನನಗೇನಾದ್ರೂ ಆ ಕಂಪನಿಯಲ್ಲಿ ಕೆಲಸ ಸಿಕ್ಕರೆ ಖಂಡಿತ ಅಲ್ಲಿಗೆ ಸೇರ್ತೀನಪ್ಪ. ನಿನಗೇಕೆ ಆ ಕಂಪನಿ ಇಷ್ಟ ಇಲ್ಲ’ ಎಂದು ಕೇಳಿದಳು. ‘ನನ್ನ ಇಬ್ಬರು ಕಸಿನ್ಸ್ ಅಲ್ಲಿ ಕೆಲ್ಸ ಮಾಡ್ತಾ ಇದ್ದಾರೆ. ಅಲ್ಲಿ ಸಿಕ್ಕಾಪಟ್ಟೆ ಕೆಲ್ಸ ಮಾಡುಸ್ಕೊತಾರಂತೆ’ ಎನ್ನುವ ಪ್ರತಿಕ್ರಿಯೆ ಬಂತು.

ಕೊರೊನಾ ಕಾರಣಕ್ಕೆ ಮುನ್ನೆಲೆಗೆ ಬಂದ ಆನ್‍ಲೈನ್ ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ನಿರ್ವಹಿಸುವ ಪರಿಕಲ್ಪನೆಯು ಯುವಜನರ ಮೇಲೆ ಬೀರಿರುವ ಮತ್ತು ಬೀರುತ್ತಲೇ ಇರುವ ಪರಿಣಾಮದ ಕುರಿತು ಶೈಕ್ಷಣಿಕ ವ್ಯವಸ್ಥೆ, ಉದ್ಯೋಗದಾತರು ಹಾಗೂ ಪೋಷಕರು ಗಂಭೀರವಾಗಿ ಚಿಂತಿಸಬೇಕಿರುವ ಅಗತ್ಯ ಇರುವುದನ್ನು ಈ ನಿದರ್ಶನಗಳು ಮನಗಾಣಿಸುತ್ತವೆ.

ಆರರಿಂದ ಎಂಟು ಗಂಟೆಗಳ ಕಾಲ ಕೆಲಸದಲ್ಲಿ ತೊಡಗಿಕೊಳ್ಳಲು ಬೇಕಿರುವ ಮನಃಸ್ಥಿತಿ ರೂಢಿಸಿಕೊಳ್ಳಲು, ಆಗಷ್ಟೇ ಪದವಿ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರುತ್ತಿರುವ ಯುವಸಮುದಾಯ ಪರದಾಡುತ್ತಿದೆ. ಕೆಲ ವರ್ಷಗಳಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೊಸಬರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗುತ್ತಿರುವುದರಿಂದ ಬಹುತೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಡಿಮೆ ವೇತನದ ಕೆಲಸಗಳತ್ತ ಮುಖ ಮಾಡಲು ಸಿದ್ಧರಿಲ್ಲ. ಇನ್ನು ಉತ್ತಮ ವೇತನ ದೊರಕುವಲ್ಲೂ ಕೆಲಸದ ಒತ್ತಡವಿದ್ದರೆ ಅದನ್ನು ನಿಭಾಯಿಸಲಾಗದೆ ಕೆಲಸ ತೊರೆಯುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಮಾತನ್ನು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಅದು ನಿಜವಾದರೆ, ಆಗ ಮಾನವ ಸಂಪನ್ಮೂಲದ ಬೇಡಿಕೆ- ಪೂರೈಕೆಯ ಸರಪಳಿಯಲ್ಲಿ ಉಂಟಾಗಬಹುದಾದ ಪಲ್ಲಟಗಳಿಂದಾಗಿ ಕಡಿಮೆ ಉದ್ಯೋಗಾವಕಾಶಗಳಿಗಾಗಿ ಹೆಚ್ಚು ಮಂದಿ ಸ್ಪರ್ಧಿಸಬೇಕಾದ ಒತ್ತಡ ಸಾಫ್ಟ್‌ವೇರ್ ಕ್ಷೇತ್ರದಲ್ಲೂ ನಿರ್ಮಾಣವಾಗುವ ಸಾಧ್ಯತೆ ಇದೆ. ಇವನ್ನೆಲ್ಲ ಮನಗಂಡು, ಉದ್ಯೋಗದ ಕುರಿತು ಅವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತಿಸುತ್ತಿರುವ ವಿದ್ಯಾರ್ಥಿಸಮೂಹಕ್ಕೆ ವಾಸ್ತವ ಮನಗಾಣಿಸುವ ಅಗತ್ಯ ಇದೆ. ಇಲ್ಲವಾದಲ್ಲಿ ಮುಂದೆ ಔದ್ಯೋಗಿಕ ಕ್ಷೇತ್ರದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಮೆಟ್ಟಿ ನಿಲ್ಲಲಾಗದೆ ಯುವಸಮೂಹ ಹತಾಶೆಗೆ ಒಳಗಾಗುವ ಸ್ಥಿತಿ ನಿರ್ಮಾಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.