ADVERTISEMENT

ನಾನು ಭಾಸ್ಕರ: ಕಾಣಬನ್ನಿ... ‘ಕಂಕಣ ಪ್ರಾಪ್ತಿ’ಯ

ಇದೇ 26ರಂದು ಜರುಗುವ ನನ್ನ ಅಪರೂಪದ ಉತ್ಸವಕ್ಕೆ ನಿಮಗಿದೋ ಆತ್ಮೀಯ ಆಮಂತ್ರಣ...

ಗುರುರಾಜ್ ಎಸ್.ದಾವಣಗೆರೆ
Published 25 ಡಿಸೆಂಬರ್ 2019, 9:14 IST
Last Updated 25 ಡಿಸೆಂಬರ್ 2019, 9:14 IST
   

ಹಾಯ್! ನಾನು ಸೂರ್ಯ.

ಇದೇ 26ರಂದು ನನ್ನ ಅಪರೂಪದ ಉತ್ಸವವೊಂದು ನಿಮ್ಮ ಊರುಗಳಲ್ಲಿ ಜರುಗುತ್ತದೆ. ಅದನ್ನು ನಡೆಸುವವರು ನೀವೇ! ಹಿಂದೆಯೂ ಇದು ನಡೆದಿತ್ತು. ಆದರೆ ನಿಮ್ಮಲ್ಲಿ ಅನೇಕರು ಅದನ್ನು ನೋಡಿಲ್ಲ. ಮುಂಬರುವ ಉತ್ಸವಕ್ಕೆ ನಿಮಗಿದೋ ಆತ್ಮೀಯ ಆಮಂತ್ರಣ.

ಸುಮಾರು ದಶಕಗಳ ಬಳಿಕ ಚಂದ್ರನಿಗೆ ನನ್ನ ಮೇಲೆ ಪ್ರೀತಿ ಮೂಡಿದೆ. ಅಂದು ಬೆಳ್ಳಂಬೆಳಿಗ್ಗೆಯೇ ನನ್ನನ್ನು ಅಡ್ಡಗಟ್ಟಿ, ಧಗಧಗ ಹೊಳೆಯುವ ಅತ್ಯಪರೂಪದ ಕಂಕಣವೊಂದನ್ನು ಕಟ್ಟುತ್ತಾನೆ. ಆಗ ನಿಮ್ಮ ಮಂಗಳೂರು, ಗುಂಡ್ಲುಪೇಟೆ, ಬೆಂಗಳೂರಿನಲ್ಲಿ ಬೆಳಗಿನ ಒಂಬತ್ತು ದಾಟಿರುತ್ತದೆ. ಅದನ್ನು ನೋಡಿ ಕಣ್ತುಂಬಿಕೊಳ್ಳಲು ನೀವೆಲ್ಲ ಸಕಲ ತಯಾರಿ ಮಾಡಿಕೊಂಡು ಮನೆಯಿಂದ ಹೊರಬರಬೇಕು ಮತ್ತು ಅಪರೂಪದ ಘಟನೆಗೆ ಸಾಕ್ಷಿಯಾಗಬೇಕು. ನನ್ನ ಮತ್ತು ಚಂದ್ರನ ನಡುವಿನ ಚೆಲ್ಲಾಟ ಈ ಸಲ ಇಡೀ ಗೋಳದ ಶೇ 0.3ರಷ್ಟು ಭಾಗದಲ್ಲಿ ಮಾತ್ರ ನೋಡಲು ಸಿಗುತ್ತದೆ. ಅಂದರೆ ನೀವೇ ಊಹಿಸಿಕೊಳ್ಳಿ ನೀವೆಷ್ಟು ಅದೃಷ್ಟಶಾಲಿಗಳು ಎಂದು!

ADVERTISEMENT

ಬಿಡಿಸಿ ಹೇಳುತ್ತೇನೆ ಕೇಳಿ. ಅಂದು ನಿಮ್ಮ ನಾಡಿನಲ್ಲಿ ಅಮಾವಾಸ್ಯೆ. ಅಂದರೆ ನನ್ನ ಮತ್ತು ಭೂಮಿಯ ಮಧ್ಯೆ ಚಂದ್ರ ಬರುತ್ತಾನೆ. ಆಗ ನಾವು ಮೂರು ಜನ ಒಂದೇ ಸರಳ ರೇಖೆಯಲ್ಲಿರುತ್ತೇವೆ. ಚಂದ್ರ ನಿಮ್ಮಿಂದ ಬಹುದೂರ ಇದ್ದು ನನ್ನ ಸಮೀಪ ಬರಲು ಪ್ರಯತ್ನಿಸುತ್ತಿರುವಾಗ ನನ್ನನ್ನು ನಿಮ್ಮಿಂದ ಶೇ 93 ಭಾಗದಷ್ಟು ಮರೆಮಾಡುತ್ತಾನೆ. ನನ್ನ ಬೆಳಕಿನಿಂದ ಉಂಟಾಗುವ ಚಂದ್ರನ ನೆರಳು ನಿಮ್ಮ ಊರುಗಳ ಮೇಲೆ ನಿಧಾನಕ್ಕೆ ಬೀಳತೊಡಗುತ್ತದೆ. ಬೆಳಿಗ್ಗೆ 8 ಗಂಟೆ ನಾಲ್ಕು ನಿಮಿಷದಿಂದ, 11 ಗಂಟೆ ಆರು ನಿಮಿಷ, ಅಂದರೆ ಬರೋಬ್ಬರಿ ಮೂರು ತಾಸುಗಳವರೆಗೆ ನೆರಳು ಬೀಳುತ್ತಾ ಹೋಗುತ್ತದೆ. ಆದರೆ ಬೆಳಿಗ್ಗೆ 9.24ರಿಂದ 9.27ರ ಅವಧಿಯಲ್ಲಿ ಚಂದ್ರ ನೇರವಾಗಿ ನನ್ನೆದುರಿಗೆ ಬಂದು ನಿಂತಾಗ ಮಂಗಳೂರು, ತಮಿಳುನಾಡಿನ ಊಟಿ, ಪುದುಕೋಟೈ, ಕೊಯಮತ್ತೂರು, ಕೇರಳದ ತಲಶೇರಿ, ಕಾಸರಗೋಡು, ಶ್ರೀಲಂಕಾದ ಜಾಫ್ನಾ, ಇಂಡೊನೇಷ್ಯಾ ಮತ್ತು ಮರೀನ ದ್ವೀಪವಾಸಿಗಳಿಗೆಚಂದ್ರ ನನಗೆ ತೊಡಿಸುವ ನಿಗಿ ನಿಗಿ ಕೆಂಡದ ಬಳೆ ಪೂರ್ತಿ ಕಾಣಿಸುತ್ತದೆ. ಇದನ್ನು ನೀವು ಮತ್ತು ನಿಮ್ಮ ವಿಜ್ಞಾನಿಗಳು ಕಂಕಣ ಗ್ರಹಣ ಎನ್ನುತ್ತೀರಿ.

ನನ್ನನ್ನು ರಾಹು-ಕೇತುಗಳು ನುಂಗುತ್ತಾರೆ, ಇದು ಅನಿಷ್ಟ ಎಂದು ನಿಮ್ಮ ಪುರೋಹಿತರು, ವಿಧವಿಧದ ಮಂತ್ರ ಹೇಳಿ, ದೋಷ ಪರಿಹಾರದ ಪೂಜೆ ಮಾಡುತ್ತಾರೆ. ನನ್ನ ಕಂಕಣ ಪ್ರಾಪ್ತಿಯ ಘಟನೆ ಅವರಿಗೆ ಅಷ್ಟಾಗಿ ರುಚಿಸುವುದಿಲ್ಲ. ಆದರೂ ಇದನ್ನು ತಡೆಯುವುದು ಯಾರಿಂದಲೂ ಆಗದು. ನಾನು ಕಂಕಣ ತೊಟ್ಟೇ ತೊಡುತ್ತೇನೆ. ಅದು ನನ್ನ ಬಳಿಯೇನೂ ಶಾಶ್ವತವಾಗಿ ಇರುವುದಿಲ್ಲ. ಅದು ಇರುವುದು ಮೂರು ನಿಮಿಷ ಮಾತ್ರ. ನಂತರ ಅದು ಭೂಮಿಯಿಂದ ನೋಡುವ ನಿಮ್ಮ ಹೃದಯ-ಮನಸ್ಸುಗಳಲ್ಲಿ, ನಿಮ್ಮ ಡಿಜಿಟಲ್ ಕ್ಯಾಮೆರಾ, ವಿಡಿಯೊಕ್ಯಾಮೆರಾಗಳಲ್ಲಿ ಶಾಶ್ವತವಾಗಿ ಇದ್ದುಬಿಡುತ್ತದೆ.

ಕಂಕಣಗ್ರಹಣದಿಂದಾಗಿ ನೀವೆಲ್ಲ ಇಂಥಿಂಥ ದೇವರಿಗೆ ಇಂಥಿಂಥ ವಸ್ತು ದಾನ ಮಾಡಬೇಕು ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ. ಇದು ನನಗೆ ಬೇಸರ ಮೂಡಿಸಿದೆ. ಹಿಂದೆ ಅನೇಕ ಸಲ ನನ್ನ ‘ವಜ್ರದುಂಗರ’ (ಖಗ್ರಾಸ ಗ್ರಹಣ) ತೊಡುವ ಸಮಾರಂಭದ ಬಗ್ಗೆಯಂತೂ ಇದಕ್ಕಿಂತ ಲಕ್ಷ ಪಾಲು ದೊಡ್ಡದಾಗಿ ನನ್ನನ್ನು ಖಳನಾಯಕನಂತೆ ಚಿತ್ರಿಸಲಾಗಿತ್ತು. ನನ್ನ ಗ್ರಹಣಕ್ಕೂ, ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೂ ಯಾವ ಬಾದರಾಯಣ ಸಂಬಂಧವೂ ಇಲ್ಲ. ಆದರೂ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಕಾಲ ಬದಲಾಗಿದೆ, ತಂತ್ರಜ್ಞಾನ ಮನುಷ್ಯನಿಗೆ ಅನುಕೂಲಗಳ ಜೊತೆಗೆ ವಿವೇಕವನ್ನೂ ನೀಡಿದೆ ಎಂದುಕೊಂಡಿದ್ದೆ. ನನ್ನ ಊಹೆ ತಪ್ಪಾಗಿದೆ.

ಹ್ಞಾಂ! ನಿಮ್ಮಲ್ಲಿ ಎಲ್ಲರೂ ಹಾಗಿಲ್ಲ. ನನ್ನ ಬಗ್ಗೆ ಆಸಕ್ತಿ ಇರುವ ಕೋಟ್ಯಂತರ ಜನ ಇದ್ದಾರೆ.ಅವರೆಲ್ಲ ಹಗಲಿರುಳೂ ನನ್ನ ಬಗ್ಗೆ ಆಸಕ್ತಿ ವಹಿಸುತ್ತಾ ಬಂದಿದ್ದಾರೆ. ನನ್ನ ಇಂಚಿಂಚೂ ಅಭ್ಯಸಿಸಬೇಕೆಂಬ ಉಮೇದಿನಲ್ಲಿರುವ ವಿಜ್ಞಾನಿಗಳು, ಖಗೋಳ ಆಸಕ್ತರು ನನ್ನ ಎಲ್ಲ ಉತ್ಸವಗಳಲ್ಲೂ ಉತ್ಸಾಹದಿಂದಭಾಗವಹಿಸುತ್ತಾರೆ.

ನನ್ನನ್ನು ಹತ್ತಿರದಿಂದ ನೋಡಲು ಕೃತಕ ಉಪಗ್ರಹ ಹಾರಿಸಿದ್ದೀರಿ. ನನ್ನೊಳಗಿನ ಅನಿಲಗಳನ್ನು ಪತ್ತೆ ಮಾಡಿದ್ದೀರಿ. ನನಗೆ ದೇವಾಲಯವನ್ನೂ ಕಟ್ಟಿದ್ದೀರಿ. ಬಂಡಿಗಟ್ಟಲೆ ಪುಸ್ತಕ ಬರೆದು ಹಂಚಿದ್ದೀರಿ. ದಿನಾ ನನ್ನ ಹೆಸರಿನಲ್ಲಿ ನಮಸ್ಕಾರ ಮಾಡುತ್ತಾ ಆರೋಗ್ಯ ಪಡೆಯುತ್ತೀರಿ. ಕಂಕಣ ಗ್ರಹಣ ವೀಕ್ಷಿಸಲು ಉಡುಪಿ, ಮಂಗಳೂರು, ಮೈಸೂರು, ಬೆಂಗಳೂರಿನಲ್ಲೆಲ್ಲ ತಯಾರಿ ಜೋರಾಗಿರುವುದು ನನಗೆ ಕಾಣಿಸುತ್ತಿದೆ! ಖುಷಿ ಆಗುತ್ತಿದೆ! ನಾನು ಬರುತ್ತಿದ್ದೇನೆ! ಸ್ವಾಗತಿಸಲು ಹೊರಬನ್ನಿ.

ಆದರೆ ಒಂದು ಕಟ್ಟಾಜ್ಞೆ. ಕಂಕಣ ಗ್ರಹಣದ ಗಳಿಗೆಯಲ್ಲಿ ಬರಿಗಣ್ಣಿನಿಂದ ನನ್ನನ್ನು ನೋಡುವ ದುಸ್ಸಾಹಸ ಮಾಡಲೇಬೇಡಿ. ವಿಜ್ಞಾನ ಪರಿಷತ್ತು, ತಾರಾಲಯದವರ ಬಳಿ ದೊರೆಯುವ ವಿಶೇಷ ಸೌರ ಕನ್ನಡಕ, ದೂರದರ್ಶಕಗಳನ್ನು ಬಳಸಿ ನನ್ನನ್ನು ನೋಡಿ. ಈ ವಿಷಯದಲ್ಲಿ ಅಲಕ್ಷ್ಯ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.