ADVERTISEMENT

ಜೀವಿವೈವಿಧ್ಯದ ‘ಸೂಪರ್ ಮಾರ್ಕೆಟ್’

ಜೀವಸಂಕುಲವನ್ನು ಸಲಹುತ್ತಿರುವ ತರಿ ಭೂಮಿ ವ್ಯಾಪಕವಾಗಿ ನಾಶವಾಗುತ್ತಿದೆ. ಅದರ ಉಳಿವು ನಮ್ಮೆಲ್ಲರ ಉಳಿವಿಗೆ ಪೂರಕ

ಶ್ರೀಗುರು
Published 1 ಫೆಬ್ರುವರಿ 2021, 19:30 IST
Last Updated 1 ಫೆಬ್ರುವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇರಾನ್‍ನ ಕ್ಯಾಸ್ಪಿಯನ್ ಸಮುದ್ರ ತೀರದ ‘ರಾಮ್‍ಸರ್’ನಲ್ಲಿ 50 ವರ್ಷಗಳ ಹಿಂದೆ ಫೆಬ್ರುವರಿ 2ರಂದು ನಡೆದ 161 ದೇಶಗಳ ಸಭೆಯಲ್ಲಿ, ತರಿ ಭೂಮಿಗಳನ್ನು ಉಳಿಸಲು ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಹೀಗಾಗಿ, ತರಿ ಭೂಮಿಗಳನ್ನು ‘ರಾಮ್‍ಸರ್ ತಾಣ’ಗಳು ಎನ್ನುತ್ತೇವೆ.

ಜಗತ್ತಿನ ಜೀವಿವೈವಿಧ್ಯದ ಸೂಪರ್ ಮಾರ್ಕೆಟ್ ಮತ್ತು ನ್ಯಾಚುರಲ್ ವಾಟರ್ ಫಿಲ್ಟರ್ ಎಂದು ಕರೆಸಿಕೊಂಡು, ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಷ್ಟೇ ಪ್ರಾಮುಖ್ಯ ಹೊಂದಿರುವ ಜೌಗು ಪ್ರದೇಶಗಳ ಮಹತ್ವವನ್ನು ಸಾರುವ ಮತ್ತು ಅವುಗಳನ್ನು ಉಳಿಸಬೇಕಾದ ಅನಿವಾರ್ಯದ ಬಗ್ಗೆ ತಿಳಿಹೇಳುವ ‘ವಿಶ್ವ ತರಿ ಭೂಮಿ ದಿನ’ (ಫೆ. 2) ಮತ್ತೆ ಬಂದಿದೆ. ಒಡಿಶಾದ ಚಿಲ್ಕಾ ಲೇಕ್, ಬಂಗಾಳದ ಸುಂದರ್‌ಬನ್, ಆಂಧ್ರಪ್ರದೇಶದ ಕೊಲ್ಲೇರು ಜಲಾಶಯ, ಲಡಾಖ್‌ನ ಚಿತ್ತಗಾಂಗ್ ಭಾಗದ ಸರೋವರಗಳು, ಕೇರಳದ ಅಷ್ಟಮುಡಿ ಸರೋವರ, ಬ್ರೆಜಿಲ್‍ನ ಪಂಟನಾಲ್, ಬೋಸ್ಟ್ವಾನಾದ ಒಕವಾಂಗೊ, ಆಸ್ಟ್ರೇಲಿಯಾದ ಕಕಾಡು, ಆಫ್ರಿಕಾದ ಇಸಿಮಾಂಗಲಿಸೊ, ಇಂಡೊನೇಷ್ಯಾದ ವಸುರ್ ರಾಷ್ಟ್ರೀಯ ಉದ್ಯಾನ, ದಕ್ಷಿಣ ವಿಯೆಟ್ನಾಂನ ಮೆಕಾಂಗ್ ನದೀ ಮುಖಜ ಭೂಮಿ, ಇವೆಲ್ಲ ವಿಶ್ವಮಾನ್ಯತೆ ಹೊಂದಿರುವ ‘ರಾಮ್‍ಸರ್’ ತಾಣಗಳು.

ನೈಸರ್ಗಿಕವಾಗಿ ನೀರು ಮತ್ತು ನೆಲ ಎರಡನ್ನೂ ಒಳಗೊಂಡು ಜೀವಿವೈವಿಧ್ಯದ ಆಗರವಾಗಿ ಶೇ 6.4ರಷ್ಟು ಭೂಪ್ರದೇಶದ 21 ಲಕ್ಷ ಚದರ ಕಿ.ಮೀ.ನಷ್ಟು ವ್ಯಾಪ್ತಿ ಹೊಂದಿರುವ ಜೌಗು ನೆಲ, ಬೃಹತ್ ಸಸ್ತನಿಗಳಿಂದ ಹಿಡಿದು ವಲಸೆ ಪಕ್ಷಿ, ಏಡಿ, ಮೀನು, ಸಿಗಡಿ, ಹಾವು, ಕಪ್ಪೆ, ಶಿಲೀಂಧ್ರಗಳಿಗೆ ಆವಾಸ ಕಲ್ಪಿಸಿದೆ. ವಿಶ್ವದ ಕಾಲು ಭಾಗದಷ್ಟು ಸಸ್ಯ ಹಾಗೂ ಜೀವಿ ಪ್ರಭೇದಗಳಿಗೆ ನೆಲೆ ನೀಡಿ ನಿತ್ಯಹರಿದ್ವರ್ಣ ಕಾಡುಗಳಿಗಿಂತ ಹೆಚ್ಚಿನ ಜೀವಸಂಕುಲವನ್ನು ಸಲಹುತ್ತಿದೆ. ತಾಜಾ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡುವ ತರಿ ಭೂಮಿ ದಿನಾಚರಣೆಯನ್ನು ಈ ಬಾರಿ ‘ತರಿ ಭೂಮಿ ಮತ್ತು ನೀರು- ಬೇರ್ಪಡಿಸಲಾಗದ ಜೀವಕೊಂಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ADVERTISEMENT

ಭೂಪ್ರದೇಶಗಳ ವಾಯುಗುಣ, ನೀರು- ಕಾಡಿನ ಮೂಲಗಳ ಸಂರಚನೆ, ಮಣ್ಣಿನ ವೈವಿಧ್ಯ ಮತ್ತು ನೀರಿನ ಚಕ್ರಕ್ಕನುಗುಣವಾಗಿ ರೂಪುಗೊಳ್ಳುವ ನೈಸರ್ಗಿಕ ತರಿ ಭೂಮಿಗಳು ಪ್ರವಾಹವನ್ನು ತಡೆದು, ನೀರಿಂಗಿಸಿ, ಅಂತರ್ಜಲ ಹೆಚ್ಚಿಸಿ, ಹೆಚ್ಚಿನ ನೀರನ್ನು ಶೇಖರಿಸಿ ಇಟ್ಟುಕೊಂಡು ನದಿಗೆ ನೀರು ಹರಿಸುತ್ತಾ ಮಣ್ಣು ಮತ್ತು ಪೋಷಕಾಂಶ ಸವಕಳಿಯನ್ನು ತಡೆಯುತ್ತವೆ. ಹೊಲಗದ್ದೆಗಳಿಂದ ಹರಿದು ಬರುವ ಭಾರವಾದ ಲೋಹ, ಕೆಸರು, ಸಾರಜನಕ, ರಂಜಕಗಳನ್ನು ಸೋಸಿ ತೆಗೆದು ನೀರನ್ನು ಶುದ್ಧೀಕರಿಸುತ್ತವೆ.

ಮಾನವನಿರ್ಮಿತ ಗದ್ದೆ, ಸರೋವರ, ಜಲಾಶಯ, ಅಣೆಕಟ್ಟು, ನೀರು ನಿಲ್ಲುವ ಗಣಿಗುಂಡಿ, ತೋಡುಗಳನ್ನು ಕೃತಕ ತರಿ ಭೂಮಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ನಾಲ್ಕು ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆಯುತ್ತಿದೆ. ಏಳೂವರೆ ಸಾವಿರ ಕಿ.ಮೀ. ಉದ್ದವಿರುವ ಕರಾವಳಿಯ 35 ಲಕ್ಷ ಹೆಕ್ಟೇರ್‌ನಲ್ಲಿ ವ್ಯವಸಾಯ, ಮೀನುಕೃಷಿ, ಪ್ರವಾಸೋದ್ಯಮ, ಜಲಸಾರಿಗೆ, ಮನ ರಂಜನೆಯಂತಹ ಆರ್ಥಿಕ ಚಟುವಟಿಕೆಗಳಿಂದಾಗಿ ಅರಣ್ಯಗಳಿಗಿಂತ ಹೆಚ್ಚಿನ ಸಂಕಷ್ಟ ಎದುರಿಸುತ್ತಿದೆ. ಮಾನವನಿರ್ಮಿತ ಕೃತಕ ಜೌಗು ಪ್ರದೇಶ 30 ಲಕ್ಷ ಹೆಕ್ಟೇರ್‌ನಷ್ಟಿದ್ದು, ಪ್ರವಾಸೋದ್ಯಮ, ಕೆರೆ, ಉಪ್ಪುಕಟ್ಟೆಗಳಿಗೆ ಬಳಕೆಯಾಗುತ್ತಿದೆ. ನಮ್ಮಲ್ಲಿರುವ ಅರವತ್ತೈದು ಸಾವಿರ ಕೃತಕ ಮತ್ತು 2,200 ನೈಸರ್ಗಿಕ ಜೌಗು ಪ್ರದೇಶಗಳ ಪೈಕಿ 42 ಅನ್ನು ರಾಮ್‍ಸರ್ ತಾಣಗಳೆಂದು ಗುರುತಿಸಿ, ‘ಕೇಂದ್ರೀಯ ಜೌಗು ಭೂಮಿ ನಿಯಂತ್ರಣ ಪ್ರಾಧಿಕಾರ’ ರಚಿಸಿ, ಅವುಗಳ ನಾಶ, ಒತ್ತುವರಿ ಮತ್ತು ದುರ್ಬಳಕೆ ತಡೆಯಲು ಹಲವು ಕಾನೂನುಗಳನ್ನು ರೂಪಿಸಲಾಗಿದೆ.

ಇನ್ನು ಮೂವತ್ತು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 900 ಕೋಟಿ ತಲುಪುವ ಅಂದಾಜಿದೆ. ಆಗ ಶೇ 70ರಷ್ಟು ಹೆಚ್ಚು ಆಹಾರ ಮತ್ತು ಶೇ 14ರಷ್ಟು ಹೆಚ್ಚು ನೀರು ಬೇಕಾಗುತ್ತದೆ. ಕಳೆದ ಮುನ್ನೂರು ವರ್ಷಗಳಲ್ಲಿ ಶುದ್ಧ ಕುಡಿಯುವ ನೀರೊದಗಿಸುವ ಜಗತ್ತಿನ ಶೇ 90ರಷ್ಟು ತರಿ ಭೂಮಿ ನಾಶಗೊಂಡಿದೆ ಮತ್ತು ಅರಣ್ಯ ನಾಶಕ್ಕೆ ಹೋಲಿಸಿದರೆ ತರಿ ಭೂಮಿ ನಾಶ ಅದಕ್ಕಿಂತ ಮೂರು ಪಟ್ಟು ಜಾಸ್ತಿ ಇದೆ.

ಬಹುಜಾತಿಯ ಮೀನು ಮತ್ತು ವಲಸೆ ಹಕ್ಕಿಗಳ ತಾಣವಾಗಿರುವ ಕರ್ನಾಟಕದ 682 ಜೌಗು ಪ್ರದೇಶಗಳ ಪೈಕಿ ರಂಗನತಿಟ್ಟು, ಕೊಕ್ಕರೆ ಬೆಳ್ಳೂರು, ಚನ್ನಗಿರಿಯ ಸೂಳೆಕೆರೆ, ಅಘನಾಶಿನಿಯ ಅಳಿವೆ, ಜಕ್ಕೂರು ಕೆರೆ, ಗದಗಿನ ಮಾಗಡಿಕೆರೆ ಸೇರಿ 11ಕ್ಕೆ ‘ರಾಮ್‍ಸರ್’ ತಾಣಗಳಾಗುವ ಅರ್ಹತೆ ಇದ್ದರೂ ಇದುವರೆಗೆ ಒಂದಕ್ಕೂ ಮಾನ್ಯತೆ ಸಿಕ್ಕಿಲ್ಲ. ಉಳಿದ ಕೆರೆ– ಕಟ್ಟೆ– ಕಾಲುವೆಗಳು ವ್ಯಾಪಕ ನಗರೀಕರಣ, ಜನಬಾಹುಳ್ಯ, ಮನೆ, ಕಾರ್ಖಾನೆ, ಆಸ್ಪತ್ರೆಗಳಿಂದ ಹೊಮ್ಮುವ ತ್ಯಾಜ್ಯ, ಹೊಲ, ಗದ್ದೆಗಳಿಂದ ಹರಿದುಬರುವ ಕೀಟನಾಶಕಗಳಿಂದ ಮಾಲಿನ್ಯಗೊಂಡು ವಾಟರ್ ಹಯಸಿಂಥ್ ಮತ್ತು ಸಿಲ್ಪಿನಿಯಂತಹ ನಿಯಂತ್ರಿಸಲಾಗದ ರಾಕ್ಷಸಕಳೆ ತಾಣಗಳಾಗಿವೆ.

ನೊರೆಯುಬ್ಬಿಸಿ ಬೆಂಗಳೂರಿನ ಮಹಾನಗರ ಪಾಲಿಕೆ ಮತ್ತು ವಿಜ್ಞಾನಿಗಳಿಗೆ ಸವಾಲಾಗಿರುವ ಬೆಳ್ಳಂದೂರು ಕೆರೆ, ಕಾಯಿಲೆ ಬಿದ್ದಿರುವ ತರಿ ಭೂಮಿಯ ತಾಜಾ ಉದಾಹರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.